ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗದ ದೀಪಗಳು: ಕತ್ತಲಕೂಪದಲ್ಲಿ ಗೌರಿಬಿದನೂರು

Published 20 ಮೇ 2024, 7:48 IST
Last Updated 20 ಮೇ 2024, 7:48 IST
ಅಕ್ಷರ ಗಾತ್ರ

ಗೌರಿಬಿದನೂರು: ನಗರದ ರಸ್ತೆಗಳಲ್ಲಿ ರಾತ್ರಿ ಸಾರ್ವಜನಿಕರು ಓಡಾಡುವುದೇ ಬಲುದೊಡ್ಡ ಸವಾಲಾಗಿದೆ. ಬೀದಿ ದೀಪಗಳು ಸರಿಯಾಗಿ ಬೆಳಗದ ಕಾರಣ ನಗರದ ಬಹುತೇಕ ರಸ್ತೆಗಳು, ಬಡಾವಣೆಗಳು ಕತ್ತಲೆಯ ಕೂಪದಲ್ಲಿ ಇರುತ್ತವೆ. ಈ ಕಾರಣದಿಂದ ಸಾರ್ವಜನಿಕರು ರಾತ್ರಿ ವೇಳೆ ಸಂಚರಿಸಲು ಪರದಾಡಬೇಕಾದ ಸನ್ನಿವೇಶವಿದೆ. 

ನಗರದ ಹೃದಯ ಭಾಗದಲ್ಲಿರುವ ನಾಗಯ್ಯ ರೆಡ್ಡಿ ವೃತ್ತದಿಂದ ಭಗೀರಥ ಮೇಲ್ಸೇತುವೆವರೆಗೆ ಕೇವಲ 2 ರಿಂದ 3 ಬೀದಿದೀಪಗಳಿವೆ. ಸಾರ್ವಜನಿಕರಿಗೆ ಅಂಗಡಿಗಳ ಮುಂದೆ ಅಳವಡಿರುವ ಬೆಳಕಳೇ ಆಸರೆ ಎನ್ನುವಂತೆ ಆಗಿದೆ. 

ಬಿ.ಎಚ್. ರಸ್ತೆಯ ಹಲವು ಕಡೆಗಳಲ್ಲಿ ಬೀದಿ ದೀಪಗಳಿವೆ. ಕಣ್ಣಿಗೂ ಕಾಣುತ್ತವೆ. ಆದರೆ ರಾತ್ರಿ ಈ ಬೀದಿ ದೀಪಗಳಲ್ಲಿ ಎಷ್ಟು ಬೆಳಗುತ್ತವೆ ಎಷ್ಟು ಬೆಳಗುವುದಿಲ್ಲ ಎಂದು ಎಣಿಕೆ ಮಾಡಿದರೆ ಬಹಳಷ್ಟು ದೀಪಗಳು ಬೆಳಗುವುದೇ ಇಲ್ಲ.

ಸಾಯಿ ಬಾಬಾ ದೇವಸ್ಥಾನದ ರಸ್ತೆಯದ್ದೂ ಇದೇ ಕಥೆ. ಬೀದಿ ದೀಪಗಳದ್ದೇ ಬಲುದೊಡ್ಡ ಸಮಸ್ಯೆಯಾಗಿ ಸಾರ್ವಜನಿಕರನ್ನು ಕಾಡತೊಡಗಿದೆ. ಇಲ್ಲಿ ಪ್ರತಿಷ್ಠಿತ ಶಾಲೆಯಿದೆ. ಸಾಯಂಕಾಲವೂ ವಿಶೇಷ ತರಗತಿಗಳು ನಡೆಯುತ್ತಿರುತ್ತವೆ. ಕಳೆದ ಕೆಲ ಸಮಯದಿಂದ ಇಲ್ಲಿ ಬೀದಿ ದೀಪಗಳು ಸರಿಯಾಗಿ ಉರಿಯುತ್ತಿಲ್ಲ. ಈ ಬಗ್ಗೆ ನಗರ ಸಭೆಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರತಿನಿತ್ಯ ಸಾವಿರಾರು ಜನ ಓಡಾಡುವ ನಗರದ ಹಲವು ಬಡಾವಣೆಗಳಲ್ಲಿ ಇದೇ ಪರಿಸ್ಥಿತಿ ಇದೆ ಎಂದು ಸಾರ್ವಜನಿಕರು ನಗರಸಭೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುವರು.

ಪ್ರಮುಖ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ಹಲವು ರಸ್ತೆಗಳಲ್ಲಿ ವಾಹನಗಳು, ಸಾರ್ವಜನಿಕರ ಓಡಾಟ ಇದ್ದೇ ಇರುತ್ತದೆ. ಅಂತಹ ರಸ್ತೆಗಳಲ್ಲಿಯೂ ಸಹ ಸರಿಯಾಗಿ ಬೀದಿ ದೀಪಗಳು ಇಲ್ಲ. ಇನ್ನೂ ಹೊಸದಾಗಿ ನಗರಸಭೆಗೆ ಸೇರ್ಪಡೆಯಾದ ವಾರ್ಡ್‌ಗಳ ಪರಿಸ್ಥಿತಿ ಹೇಳಲು ಸಾಧ್ಯವಿಲ್ಲ ಎನ್ನುವಂತಿದೆ. ಬೀದಿ ದೀಪಗಳು ಇಲ್ಲದಿರುವುದು ರಾತ್ರಿಯಲ್ಲಿ ಗೌರಿಬಿದನೂರು ನಗರದಲ್ಲಿ ಓಡಾಟಕ್ಕೆ ಬಹಳ ತೊಂದರೆಯಾಗಿದೆ ಎಂದು ಆರೋಪಿಸುವರು.

ಕೆಲ ತಿಂಗಳ ಹಿಂದೆ ನಗರಸಭೆ ಅಳವಡಿಸಿದ್ದ ಬೀದಿದೀಪಗಳು ಸರಿಯಾದ ನಿರ್ವಹಣೆಯಿಲ್ಲದೆ ಬೆಳಗುತ್ತಿಲ್ಲ. ಬೀದಿ ದೀಪಗಳ ಬಗ್ಗೆ ನಗರಸಭೆ ಮೇಲ್ವಿಚಾರಣೆ ನಡೆಸುತ್ತಿಲ್ಲ. ಕೂಡಲೇ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎನ್ನುವ ಆಗ್ರಹ ನಾಗರಿಕರಿಂದ ಕೇಳಿ ಬರುತ್ತಿದೆ. 

ಕತ್ತಲಲ್ಲಿ ಓಡಾಡಲು ಭಯ, ದೀಪವಿಲ್ಲದ ಕಾರಣ ಸಾರ್ವಜನಿಕರು ಈ ಭಾಗದಲ್ಲಿ ಓಡಾಡಲು ಭಯ ಪಡುತ್ತಾರೆ. ಇದು ಸರಗಳ್ಳತನ ಸೇರಿದಂತೆ ದುಷ್ಕೃತ್ಯಗಳಿಗೆ ಕಾರಣವಾಗುವ ಸಾಧ್ಯತೆ ಇದೆ.‌‌

ಗೌರಿಬಿದನೂರಿನ ಬಿಎಚ್‌ ರಸ್ತೆಯಲ್ಲಿ ಅಳವಡಿಸಿರುವ ಬೀದಿ ದೀಪಗಳ ಪೈಕಿ ಒಂದು ಬದಿಯ ಬೀದಿ ದೀಪ ಬೆಳಗಿದರೆ ಮತ್ತೊಂದು ಬದಿಯ ದೀಪ ಬೆಳಗುತ್ತಿಲ್ಲ
ಗೌರಿಬಿದನೂರಿನ ಬಿಎಚ್‌ ರಸ್ತೆಯಲ್ಲಿ ಅಳವಡಿಸಿರುವ ಬೀದಿ ದೀಪಗಳ ಪೈಕಿ ಒಂದು ಬದಿಯ ಬೀದಿ ದೀಪ ಬೆಳಗಿದರೆ ಮತ್ತೊಂದು ಬದಿಯ ದೀಪ ಬೆಳಗುತ್ತಿಲ್ಲ

ದೂರು ನೀಡಿದರೂ ಪರಿಹಾರವಿಲ್ಲ

ಬೀದಿದೀಪ ಸರಿಯಾಗಿ ಉರಿಯದ ಬಗ್ಗೆ ಈಗಾಗಲೇ ನಗರಸಭೆ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಆದರೆ ಬೀದಿ ದೀಪದ ಸಮಸ್ಯೆ ಪರಿಹಾರವಾಗಿಲ್ಲ. ಸಮಸ್ಯೆ ಪರಿಹರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ನಗರಸಭೆ ಮುಂದೆ ಪ್ರತಿಭಟಿಸಲಾಗುವುದು. ಬೀದಿ ದೀಪ ಸರಿಯಾಗಿ ಉರಿಯದಿರುವುದರಿಂದ ಓಡಾಟಕ್ಕೆ ತೊಂದರೆಯಾಗಿದೆ. ಹೆಣ್ಣು ಮಕ್ಕಳು ರಾತ್ರಿ ವೇಳೆ ಇಲ್ಲಿ ಓಡಾಡಲು ಭಯ ಪಡುತ್ತಾರೆ. ಕೂಡಲೇ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕಿದೆ.

- ಪರ್ವೇಜ್ ಸಾಬ್ 11ನೇ ವಾರ್ಡ್ ನಿವಾಸಿ ಗೌರಿಬಿದನೂರು

ಓಡಾಡುವುದು ಹೇಗೆ?

ಬಹಳ ದಿನಗಳಿಂದ ಬೀದಿ ದೀಪಗಳು ಸರಿಯಾಗಿ ಉರಿಯದೆ ಹೋದರೆ ಸಾರ್ವಜನಿಕರು ಹೇಗೆ ಓಡಾಡಬೇಕು? ಮಳೆಗಾಲ ಪ್ರಾರಂಭವಾಗುತ್ತಿದೆ. ಇಲ್ಲಿ ಸರಿಯಾದ ರಸ್ತೆಯೂ ಇಲ್ಲ ಬೆಳಕು ಇಲ್ಲ. ಅಧಿಕಾರಿಗಳು ಕೂಡಲೇ ಸಮಸ್ಯೆ ಪರಿಹರಿಸಲು ಮುಂದಾಗಬೇಕಿದೆ.

- ವಿಜಯ್ ಬಾಬು ಕೆ.ಎಲ್.ಎನ್ ಲೇಔಟ್ ನಿವಾಸಿ ಗೌರಿಬಿದನೂರು

ಜಡ್ಡುಗಟ್ಟಿದ ಆಡಳಿತ

ಪುರಸಭೆಯಿಂದ ನಗರಸಭೆಯಾಗಿ ಮೇಲ್ದರ್ಜೆಗೇರಿದರೂ ಇನ್ನೂ ಪುರಸಭೆ ಲೆಕ್ಕದಲ್ಲೇ ಟೆಂಡರ್ ಕರೆಯುತ್ತಿದ್ದಾರೆ. ಸಿ.ಸಿ.ಎಂ.ಎಸ್ ಅಡಿಯಲ್ಲಿ ನಗರದಾದ್ಯಂತ 5000ಕ್ಕೂ ಹೆಚ್ಚು ಎಲ್‌ಇಡಿ ದೀಪಗಳನ್ನು ಅಳವಡಿಸಲು ಮಾಜಿ ಅಧ್ಯಕ್ಷರು ಮುಂದಾಗಿದ್ದರು. ಆದರೆ ಈಗಿರುವ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಕಡತಗಳು ದೂಳು ಹಿಡಿದಿವೆ. ನಗರಸಭೆ ಅಧಿಕಾರಿಗಳ ಜಡ್ಡು ಹಿಡಿದ ಮನಸ್ಥಿತಿಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.

- ರೂಪಾ ಅನಂತರಾಜು ನಗರಸಭೆ ಸದಸ್ಯೆ

ಗಮನಕ್ಕೆ ತಂದರೂ ಪ್ರಯೋಜನವಿಲ್ಲ

ಬೀದಿದೀಪಗಳನ್ನು ತಿಂಗಳುಗಟ್ಟಲೆ ಸರಿಪಡಿಸುವುದಿಲ್ಲ. 31 ವಾರ್ಡ್ ಗಳಲ್ಲಿ ಒಬ್ಬರೇ ಗುತ್ತಿಗೆದಾರ ನಿರ್ವಹಣೆ ಮಾಡಲು ಸಾಧ್ಯವಿಲ್ಲ. ಸದ್ಯದಲ್ಲೇ ಮತ್ತೊಬ್ಬರಿಗೆ ಗುತ್ತಿಗೆ ನೀಡುತ್ತೇವೆ ಎಂದು ಪೌರಾಯುಕ್ತರು ಈ ಹಿಂದೆ ತಿಳಿಸಿದ್ದರು. ಆದರೆ ಹಲವು ತಿಂಗಳು ಕಳೆದರೂ ಈ ಬಗ್ಗೆ ಯಾವುದೇ ಕ್ರಮ ಇಲ್ಲ. ಈ ಬಗ್ಗೆ ಪೌರಾಡಳಿತ ಸಚಿವರ ಸಮ್ಮುಖದಲ್ಲಿ ನಗರಸಭೆ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

- ಶೋಭಾ ನಗರಸಭೆ ಮಾಜಿ ಸದಸ್ಯೆ ಗೌರಿಬಿದನೂರು

ಪ್ರತಿಕ್ರಿಯಿಸದ ಪೌರಾಯುಕ್ತರು
ಗೌರಿಬಿದನೂರು ನಗರದ ಬೀದಿ ದೀಪಗಳ ಅಧ್ವಾನದ ಕುರಿತು ಪ್ರತಿಕ್ರಿಯೆ ಪಡೆಯಲು ನಗರಸಭೆ ಪೌರಾಯುಕ್ತೆ ಗೀತಾ ಅವರಿಗೆ ಕರೆ ಮಾಡಲಾಯಿತು. ಅವರು ಕರೆ ಸ್ವೀಕರಿಸಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT