ಮಂಗಳವಾರ, ಜನವರಿ 21, 2020
23 °C
ಸತ್ಯಸಾಯಿ ಗ್ರಾಮದಲ್ಲಿ ಕ್ರೀಡಾಕೂಟ, ಸಾಂಸ್ಕೃತಿಕ ಮೇಳಕ್ಕೆ ಚಾಲನೆ, ಕೌತುಕದ ಹೊಸಲೋಕ ಸೃಷ್ಟಿಸಿದ 4,0೦೦ ವಿದ್ಯಾರ್ಥಿಗಳು

ಮೈನವಿರೇಳುವ ಸಾಹಸ, ಬೆರಗಿನ ಮಂದಹಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ರಮ್ಯ ಪ್ರಕೃತಿಯ ಮಡಿಲಿನಲ್ಲಿರುವ ಆ ಅಂಗಳದಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ಎಂದಿಲ್ಲದ ಸಂಭ್ರಮೋಲ್ಲಾಸ ಮನೆ ಮಾಡಿತ್ತು. ಅಲ್ಲಿ ಕ್ರೀಡೆ ಇತ್ತು. ಅದರ ಬೆನ್ನಲ್ಲೇ ಶೌರ್ಯ ತಲೆ ಎತ್ತಿ ನಿಲ್ಲುತ್ತಿತ್ತು. ಸಾಹಸ ಕೌಶಲಗಳಿಗೆ ರೆಕ್ಕೆ ಮೂಡಿತ್ತು. ಮೈದಾನದ ತುಂಬಾ ಸಂಚರಿಸಿದ ಸಂಚಿತ ಶಕ್ತಿಯ ಸಮರೋತ್ಸಾಹ ಮೈನವಿರೇಳಿಸುತ್ತಿತ್ತು.

ಲಯಬದ್ಧ ಕಾಲ್ಗಳ ಹೆಜ್ಜೆಗಳಿಂದ ಹೊರಟ ನಿನಾದ ತಂಗಾಳಿಗೆ ಜೋಗುಳ ಹಾಡಿದಂತಿತ್ತು. ನೆರೆದಿದ್ದ ಸಾವಿರಾರು ನಿಪುಣರು ಸೃಷಿಸಿದ ಕೌತುಕದ ಹೊಸಲೋಕವೊಂದು ಅನಾವರಣಗೊಂಡು ನೋಡುಗರನ್ನು ಮೂಕ ವಿಸ್ಮಿತರನ್ನಾಗಿ ಮಾಡಿತ್ತು.

ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿರುವ ಮೈದಾನದಲ್ಲಿ ಬುಧವಾರ ಸತ್ಯಸಾಯಿ ಲೋಕ ಸೇವಾ ಸಮೂಹ ಶಿಕ್ಷಣ ಸಂಸ್ಥೆ ವತಿಯಿಂದ ಆಯೋಜಿಸಿದ್ದ 45ನೇ ವಾರ್ಷಿಕ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಮೇಳಕ್ಕೆ ಚಾಲನೆ ದೊರೆತ ವೇಳೆ ಕಂಡ ದೃಶ್ಯವಿದು.

ಕ್ರೀಡಾಕೂಟಕ್ಕೆ ಶಿಕ್ಷಣ ಸಚಿವ ಎಸ್‌. ಸುರೇಶ್ ಕುಮಾರ್ ಅವರು ಚಾಲನೆ ನೀಡಿದರು. ಈ ಕ್ರೀಡಾಕೂಟ ಜ.19ರ ವರೆಗೆ ನಡೆಯಲಿದೆ.

ಕ್ರೀಡಾಕೂಟ ಆರಂಭಕ್ಕೂ ಮುನ್ನ ರಾಜ್ಯದ 17 ಜಿಲ್ಲೆಗಳ ಮತ್ತು ತೆಲಂಗಾಣದ ರಾಜ್ಯದ ಒಂದು ಜಿಲ್ಲೆಯ ವಿದ್ಯಾಸಂಸ್ಥೆ ಸೇರಿದಂತೆ ಸತ್ಯಸಾಯಿ ಲೋಕಸೇವಾ ಸಮೂಹ ಶಿಕ್ಷಣ ಸಂಸ್ಥೆಯ 30 ವಿದ್ಯಾಸಂಸ್ಥೆಗಳ 4,000 ವಿದ್ಯಾರ್ಥಿಗಳು ನಡೆಸಿದ ವರ್ಣರಂಜಿತ ಶಿಸ್ತಿನ ಪಥಸಂಚಲನ ಮನೋಹರವಾಗಿತ್ತು.

ಸತ್ಯಸಾಯಿ ಸಮಾಗಮಮ್ ಕ್ರೀಡಾಂಗಣದ ಪಶ್ಚಿಮ ದಿಕ್ಕಿನಲ್ಲಿರುವ ಸಾನರಾಯಿ ಬೆಟ್ಟದ ಮೇಲೆ ಸ್ಥಾಪಿತವಾದ ಅಗ್ನಿ ಕುಂಡದಲ್ಲಿ ಜ್ಯೋತಿರ್‍ವಾಹನ ಶ್ವೇತ ನಂದಿ ಹೊತ್ತೊಯ್ದ ಕ್ರೀಡಾ ಜ್ಯೋತಿಯಿಂದ ದೀಪ ಬೆಳಗುತ್ತಿದ್ದಂತೆ ಕ್ರೀಡಾಕೂಟಕ್ಕೆ ವಿಧ್ಯುಕ್ತವಾಗಿ ಚಾಲನೆ ದೊರೆಯಿತು. ಉದ್ಘಾಟನೆ ಕಾರ್ಯಕ್ರಮದ ಭಾಗವಾಗಿ ವಿದ್ಯಾರ್ಥಿಗಳು ಪ್ರದರ್ಶಿಸಿದ ಸಾಹಸ ಪ್ರದರ್ಶನಗಳು ಮೈದಾನದ ತುಂಬಾ ಮಿಂಚು ಹರಿಸಿದವು.

ಉದ್ಘಾಟನಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪ್ರಾದೇಶಿಕ ಸೊಗಡನ್ನು ಬಿಂಬಿಸುವ ಜಾನಪದ ಕಲೆಗಳು, ಭಾರತದ ಸುಪ್ರಸಿದ್ಧ ನೃತ್ಯ ಪ್ರಕಾರಗಳು, ಕರಾಟೆ ಪ್ರದರ್ಶನ, ನೆರೆಯ ಕೇರಳ ರಾಜ್ಯದ ವೀರಕಲೆ ಕಲರಿ ಯುದ್ಧ ಪ್ರದರ್ಶಿಸಿ ಮನಸೆಳೆದರು.

ಜಾರುಗಾಲಿ ಚಮತ್ಕಾರ ಜನರನ್ನು ತುದಿಗಾಲಲ್ಲಿ ನಿಲ್ಲಿಸಿದರೆ, 120 ಅಡಿಗಳ ಎತ್ತರದಲ್ಲಿ ಪ್ರದರ್ಶಿಸಿದ ಬಿಸಿಗಾಳಿ ಬಲೂನ್ ಕಸರತ್ತುಗಳು, 1,000 ಅಡಿ ಎತ್ತರದಲ್ಲಿ ತೋರಿದ ಪ್ಯಾರಾ ಗ್ಲೈಡಿಂಗ್ ಸಾಹಸಗಳು ನೋಡುಗರನ್ನು ಮೂಕವಿಸ್ಮಿತರನ್ನಾಗಿ ಮಾಡಿದವು.

ಸುಮಾರು 25 ಅಡಿ ಎತ್ತರದಲ್ಲಿ ಕ್ರೇನ್‌ಗೆ ಅಳವಡಿಸಿದ ರಿಂಗ್‌ನಲ್ಲಿ ನೇತು ಬಿದ್ದು ವಿದ್ಯಾರ್ಥಿಗಳು ಪ್ರದರ್ಶಿಸಿದ ಯೋಗದ ಭಂಗಿಗಳು ನೆಟ್ಟ ನೋಟವನ್ನು ಅತ್ತಿತ್ತ ಕದಲಿಸದೆ, ಉಸಿರು ಬಿಗಿ ಹಿಡಿದು ನೋಡುವಂತೆ ಮಾಡಿದವು.

ಕಣ್ಣುರೆಪ್ಪೆ ಮಿಟುಕಿಸದಂತೆ ಮಿಂಚಿನ ಸಂಚಾರದಲ್ಲಿ ಹೊಸ ಸಾಹಸ ಪ್ರಪಂಚವನ್ನು ಸೃಷ್ಟಿಸಿದ ಮೋಟಾರ್ ಸೈಕಲ್ ಸವಾರಿ, ಯಾವ ಸಾಹಸಕ್ಕೂ ಕಡಿಮೆಯಿಲ್ಲದಂತೆ ಕೌಶಲ್ಯವನ್ನು ಮೆರೆದ ಏಕ ಚಕ್ರ ಸೈಕಲ್ ಸವಾರಿ, ಬಗೆಬಗೆಯ ಯೋಗಾಂಗ ಸಾಧನೆಗಳು, ಕ್ರಿಕೆಟ್ ಆಟದ ಚಮತ್ಕಾರಿಕ ತಂತ್ರಗಳು, ಭೂಕೇಂದ್ರಿತ ಬಹುರೂಪಿ ಕಸರತ್ತುಗಳಿಗೆ ಕರತಾಡನ ಅನುರಣಿಸಿತು.

ರೋಲರ್ ಸ್ಕೇಟ್, ಸ್ಕೇಟ್ ಬೋರ್ಡ್, ವೇವ್ ಬೋರ್ಡ್ ಕ್ರೀಡೆಗಳನ್ನು ಪ್ರದರ್ಶಿಸುವ ಮೂಲಕ ಕಿರಿಯ ವಿದ್ಯಾರ್ಥಿಗಳು ಚಪ್ಪಾಳೆ ಗಿಟ್ಟಿಸಿಕೊಂಡರೆ, ಹಿರಿಯ ವಿದ್ಯಾರ್ಥಿಗಳು ತೋರಿದ ಕುದುರೆ ಸವಾರಿ, ಬೈಕ್ ಕಸರತ್ತು, ಸಮರ ಕಲೆ, ಹಗ್ಗದ ಮೇಲಿನ ನಡಿಗೆ, ಮಲ್ಲಕಂಬದಂತಹ ಸಾಹಸ ಕ್ರೀಡೆಗಳು ಮೈದಾನದಲ್ಲಿದ್ದವರನ್ನು ಮೈನವಿರೇಳುವಂತೆ ಮಾಡಿದವು.

ಸಿಂಗಾಪುರ ಮತ್ತು ಮಲೇಷಿಯಾದ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಸಿಂಹ ನೃತ್ಯ ಅತ್ಯಾಕರ್ಷಕವಾಗಿತ್ತು.

ಉತ್ತರಾಖಂಡದ ನಗರಾಭಿವೃದ್ಧಿ ಸಚಿವ ಮದನ್ ಕೌಶಿಕ್, ಶಿಕ್ಷಣ ತಜ್ಞ ಅತುಲ್ ಕೊಠಾರಿ, ವಿನಯಾನಂದ ಸ್ವಾಮೀಜಿ, ಗುಲ್ಬರ್ಗಾ ಮಾನವ ಅಭ್ಯುದಯ ವಿಶ್ವವಿದ್ಯಾನಿಲಯ ಕುಲಪತಿ ಬಿ.ಎನ್.ನರಸಿಂಹ ಮೂರ್ತಿ, ಅತಿಥಿಗಳಾದ ಆಂಟನಿ ಟ್ಯಾನಿ, ಡೇವಿಡ್ ಕಾರ್ನ್‍ಸ್ವೀಟ್, ಪ್ರೊ. ಶಶಿಧರ್ ಪ್ರಸಾದ್, ಬಿ. ನಾರಾಯಣ ರಾವ್, ಕರಾಯ ಸಂಜೀವ ಶೆಟ್ಟಿ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)