ಬುಧವಾರ, ಮಾರ್ಚ್ 3, 2021
28 °C
ಕಾಂಗ್ರೆಸ್ ಪ್ರಚಾರ ಸಭೆ

ಸುಧಾಕರ್ ಜೈಲಿಗೆ ಹೋಗುವುದು ಖಚಿತ: ಶಾಸಕ ಶಿವಶಂಕರರೆಡ್ಡಿ ವಾಗ್ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ಅನರ್ಹ ಶಾಸಕ ಡಾ.ಕೆ.ಸುಧಾಕರ್ ರಾಜಕಾರಣಿಯಲ್ಲ. ಒಬ್ಬ ವ್ಯಾಪಾರಿ, ಭ್ರಷ್ಟಾಚಾರದ ಮೂಲಕ ಸಾಕಷ್ಟು ಅಕ್ರಮ ಆಸ್ತಿ ಸಂಪಾದನೆ ಮಾಡಿರುವ ಅವರು ಒಂದಲ್ಲ ಒಂದು ದಿನ ತಿಹಾರ್ ಜೈಲಿಗೆ ಹೋಗುವುದು ಖಚಿತ’ ಎಂದು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ತಿಳಿಸಿದರು.

ನಂದಿ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಶುಕ್ರವಾರ ಕಾಂಗ್ರೆಸ್ ಪ್ರಚಾರ ಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಎತ್ತಿನಹೊಳೆ ಯೋಜನೆಯಲ್ಲಿ ಗುತ್ತಿಗೆದಾರರಿಂದ ಸುಧಾಕರ್ ಅವರು ₨50 ಕೋಟಿ ಕಮಿಷನ್ ಪಡೆದಿದ್ದಾರೆ.

ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಗೆ ಅವರೇ ಕಿಂಗ್‌ಪಿನ್‌. ಕ್ರಷರ್ ಮಾಲೀಕರಿಂದ ಪ್ರತಿ ತಿಂಗಳು ಲಕ್ಷಗಟ್ಟಲೇ ವಸೂಲಿ ಮಾಡಿಯೇ ಅವರು ನೂರಾರು ಕೋಟಿ ಸಂಪಾದಿಸಿದ್ದಾರೆ. ಅವರ ಭ್ರಷ್ಟಾಚಾರಗಳು, ಅಕ್ರಮ ಅಸ್ತಿ ಸಂಪಾದನೆ ಬಗ್ಗೆ ತನಿಖೆಯಾದರೆ ಇಂದಲ್ಲ ನಾಳೆ ಅವರು ಜೈಲಿಗೆ ಹೋಗುವುದು ಶತಸಿದ್ಧ’ ಎಂದು ಹೇಳಿದರು.

‘ವ್ಯವಸಾಯ ಮಾಡಿ ಕೋಟಿಗಟ್ಟಲೇ ಸಂಪಾದನೆ ಮಾಡಲು ಸಾಧ್ಯವಿಲ್ಲ. ರೋಲ್‌ಕಾಲ್, ಭ್ರಷ್ಟಾಚಾರ ಮಾಡಿ ಸಂಪಾದಿಸಿದ ಹಣದಲ್ಲಿ ಸುಧಾಕರ್ ಶೋಕಿ ಮಾಡುತ್ತಿದ್ದಾರೆ. ಇಂತಹ ಡೊಂಗಿ ರಾಜಕಾರಣಿಗಳನ್ನು ಜನ ತಿರಸ್ಕರಿಸಬೇಕು. ಪ್ರಾಮಾಣಿಕರು, ದಕ್ಷರಿಗೆ ಈ ಬಾರಿಯ ಉಪ ಚುನಾವಣೆಯಲ್ಲಿ ಮತ ನೀಡಬೇಕು’ ಎಂದು ಮನವಿ ಮಾಡಿದರು.

‘ಸುಧಾಕರ್ ಅವರಿಗೆ ಎರಡು ನಾಲಿಗೆಗಳು ಇವೆ. ಸಿದ್ದರಾಮಯ್ಯ ಕಟ್ಟಾ ಬೆಂಬಲಿಗ ಎಂದು ಹೇಳುವ ಅವರು ಗುರುವಿಗೆ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದರು. 17 ಶಾಸಕರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲು ಸುಧಾಕರ್ ಅವರೇ ಮುಖ್ಯ ಸೂತ್ರಧಾರ. ಅವರ ರಾಜಕೀಯ ಭವಿಷ್ಯ ಈ ಚುನಾವಣೆಯಲ್ಲಿ ಅಂತ್ಯವಾಗಲಿದೆ’ ಎಂದು ಅಭಿಪ್ರಾಯಪಟ್ಟರು.

‘ಸುಧಾಕರ್ ಈ ಬಾರಿ ಮತ ಕೇಳಲು ಮನೆ ಬಾಗಿಲಿಗೆ ಬಂದರೆ, ಒಬ್ಬ ಸಾಮಾನ್ಯ ನಿವೃತ್ತ ಶಿಕ್ಷಕನ ಮಗನಾದವನಿಗೆ ಬೆಂಗಳೂರಿನ ಬೃಹತ್ ಐಷಾರಾಮಿ ಮನೆ, ಪೆರೇಸಂದ್ರದಲ್ಲಿ ಶಾಲಾ, ಕಾಲೇಜುಗಳು, ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ನೂರಾರು ಎಕರೆ ಜಮೀನು ಎಲ್ಲಿಂದ ಬಂತು ಎಂದು ಜನ ಕೇಳಬೇಕು’ ಎಂದು ಹೇಳಿದರು.

‘ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ಪರಿಹಾರ ಒದಗಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗಿದೆ. ಬಿಜೆಪಿ ಕೈಯಲ್ಲಿ ಆಡಳಿತ ನಡೆಸಲು ಸಾಧ್ಯವಾಗದಿದ್ದರೆ ಅಧಿಕಾರ ಬಿಟ್ಟು ತೊಲಗಲಿ. ನಾವು ಅಧಿಕಾರ ನಡೆಸಲು ಸಮರ್ಥರಾಗಿದ್ದೇವೆ’ ಎಂದು ತಿಳಿಸಿದರು.

ಮಾಜಿ ಶಾಸಕರಾದ ಎಸ್.ಎಂ.ಮುನಿಯಪ್ಪ, ಎನ್.ಸಂಪಂಗಿ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೇಶವರೆಡ್ಡಿ, ಮುಖಂಡರಾದ ನಂದಿ ಅಂಜಿನಪ್ಪ, ಕೆ.ವಿ.ನವೀನ್ ಕಿರಣ್, ಯಲುವಹಳ್ಳಿ ರಮೇಶ್, ಗಂಗರೇಕಾಲುವೆ ನಾರಾಯಣಸ್ವಾಮಿ, ಅಡ್ಡಗಲ್ ಶ್ರೀಧರ್, ಕೊಡೇಸ್ ವೆಂಕಟೇಶ್, ಎಸ್.ಪಿ.ಶ್ರೀನಿವಾಸ್, ಮಂಚನಬಲೆ ಇಸ್ಮಾಯಿಲ್ ಅವರು ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು