ಶುಕ್ರವಾರ, ಆಗಸ್ಟ್ 12, 2022
21 °C
ಕೋವಿಡ್‌–19 ಕಾರಣ ಆರ್ಥಿಕ ವರ್ಷದ ಆರಂಭದಲ್ಲೇ ಲಾಕ್‌ಡೌನ್‌; ಕಚೇರಿಗೆ ಬಂದು ತೆರಿಗೆ ಪಾವತಿಸದ ಜನ

ತೆರಿಗೆ ವಸೂಲಿ; ಚಿಂತಾಮಣಿ ನಗರಸಭೆ ಬಲು ದೂರ

ಎಂ.ರಾಮಕೃಷ್ಣಪ್ಪ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ಮೂಲ ಸೌಕರ್ಯಗಳ ಅಭಿವೃದ್ಧಿಗೆ ಅಗತ್ಯವಾದ ಆರ್ಥಿಕ ಸಂಪನ್ಮೂಲ ಆಸ್ತಿ ತೆರಿಗೆ, ನೀರಿನ ತೆರಿಗೆ ಸಂಗ್ರಹಣೆಯಲ್ಲಿ ನಗರಸಭೆ ಹಿಂದೆ ಬಿದ್ದಿದೆ. ಕೋವಿಡ್-19 ಕಾರಣದಿಂದ ತೆರಿಗೆ ವಸೂಲಿಗೆ ಸಂಕಷ್ಟ ಎದುರಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಸಾಮಾನ್ಯವಾಗಿ ಪ್ರತಿ ಆರ್ಥಿಕ ವರ್ಷದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಆಸ್ತಿ ಮತ್ತು ನೀರಿನ ತೆರಿಗೆ ವಸೂಲಿ ಚುರುಕಾಗಿ ಗರಿಷ್ಠ ಪ್ರಮಾಣದ ಸಂಗ್ರಹಣೆ ಆಗುತ್ತಿತ್ತು. ಏಪ್ರಿಲ್, ಮೇನಲ್ಲಿ ತೆರಿಗೆ ಸಲ್ಲಿಸಿದರೆ ಶೇ 5ರಷ್ಟು ರಿಯಾಯಿತಿ ದೊರೆಯುತ್ತದೆ. ಹೀಗಾಗಿ, ನಾಗರಿಕರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂಪ್ರೇರಿತರಾಗಿ ತೆರಿಗೆ ಸಲ್ಲಿಸಲು ಮುಂದೆ ಬರುತ್ತಾರೆ.

ಪ್ರಸಕ್ತ ಆರ್ಥಿಕ ವರ್ಷದ ಆರಂಭದಲ್ಲೇ ಕೋವಿಡ್-19 ಕಾರಣದಿಂದ ಲಾಕ್‌ಡೌನ್ ಘೋಷಣೆಯಾಯಿತು. ಇದರಿಂದ ನಗರಸಭೆ ತೆರಿಗೆ ಸಂಗ್ರಹ ಪಾತಾಳಕ್ಕೆ ಕುಸಿದಿದೆ. ಲಾಕ್‌ಡೌನ್‌ನಿಂದ ಜನರು ಕಚೇರಿಗಳಿಗೆ ಬರಲು ಹಿಂದೇಟು ಹಾಕುತ್ತಿದ್ದರು. ಅಧಿಕಾರಿಗಳು ಸಹ ಕೊರೊನಾ ನಿಯಂತ್ರಣದ ಕೆಲಸಗಳಲ್ಲಿ ತೊಡಗಿಕೊಂಡಿದ್ದರಿಂದ ನಾಗರಿಕರ ಮನೆ ಬಾಗಿಲಿಗೆ ತೆರಳಿ ಕರ ಪಾವತಿಸುವಂತೆ ಕೇಳಲು ಸಾಧ್ಯವಾಗಲಿಲ್ಲ.

‘ಕೋವಿಡ್-19 ದೀರ್ಘ ಕಾಲ ಮುಂದುವರೆದಿದ್ದರಿಂದ ನಾಗರಿಕರು ಆರ್ಥಿಕವಾಗಿ ಜರ್ಜರಿತರಾಗಿದ್ದಾರೆ. ಈಗ ತೆರಿಗೆ ಪಾವತಿಸಲು ಅವರ ಕಿಸೆಯಲ್ಲಿ ಹಣವಿಲ್ಲ. ಸಂಕಷ್ಟ ಪರಿಸ್ಥಿತಿಯಲ್ಲಿ ತೆರಿಗೆಗಾಗಿ ಒತ್ತಡ ಹೇರುವಂತೆಯೂ ಇಲ್ಲ. ಹೊರ ಜಿಲ್ಲೆ, ತಾಲ್ಲೂಕುಗಳಲ್ಲಿರುವ ಕೆಲವು ಆಸ್ತಿ ಮಾಲೀಕರು ಬರಲು ಸಾಧ್ಯವಾಗಿಲ್ಲ. ಕೋವಿಡ್-19 ಕಾರಣದಿಂದಲೇ ತೆರಿಗೆ ವಸೂಲಾತಿ ನಿರೀಕ್ಷಿತ ಪ್ರಮಾಣದಲ್ಲಿ ನಡೆದಿಲ್ಲ’ ಎಂದು ಪೌರಾಯುಕ್ತ ಉಮಾಶಂಕರ್ ತಿಳಿಸಿದರು.

ನಗರಸಭೆಗೆ ಆಸ್ತಿ ತೆರಿಗೆ, ನೀರಿನ ಕರ, ವ್ಯಾಪಾರ ಪರವಾನಗಿ ನವೀಕರಣ ಮತ್ತಿತರ ಮೂಲಗಳಿಂದ ಆರ್ಥಿಕ ಸಂಪನ್ಮೂಲ ಸಂಗ್ರಹವಾಗಬೇಕಿದೆ. ತೆರಿಗೆ ವಸೂಲಿಯಿಂದ ಸಂಗ್ರಹವಾದ ಆದಾಯವನ್ನು ನಾಗರಿಕರಿಗೆ ಮೂಲಸೌಲಭ್ಯಗಳನ್ನು ಒದಗಿಸಲು ಬಳಸಿ ಕೊಳ್ಳಲಾಗುತ್ತದೆ. ನಗರಸಭೆ ಸ್ವಂತ ಸಂಪನ್ಮೂಲ ಸಂಗ್ರಹಣೆಯಲ್ಲಿ ಹಿಂದೆ ಬಿದ್ದಿದ್ದು ಸರ್ಕಾರಿ ಅನುದಾನ ವನ್ನೇ ನೆಚ್ಚಿ ಕೊಳ್ಳಬೇಕಾಗಿದೆ.

‘2020-21ನೇ ಸಾಲಿನಲ್ಲಿ ₹405.16 ಲಕ್ಷ ಆಸ್ತಿ ತೆರಿಗೆ ಸಂಗ್ರಹಣೆಯ ಗುರಿ ಹೊಂದಲಾಗಿದೆ. ಕಳೆದ 5 ತಿಂಗಳಲ್ಲಿ ₹140.66 ಲಕ್ಷ ಸಂಗ್ರಹವಾಗಿದೆ. ₹183 ಲಕ್ಷ ನೀರಿನ ತೆರಿಗೆ ಸಂಗ್ರಹದ ಗುರಿ ಹೊಂದಿದ್ದು, ₹18.19 ಲಕ್ಷ ವಸೂಲಿಯಾಗಿದೆ. 2019-20ನೇ ಸಾಲಿನಲ್ಲಿ ಆಗಸ್ಟ್ ಕೊನೆಯವರೆಗೆ ₹239.76 ಲಕ್ಷ ಆಸ್ತಿ ತೆರಿಗೆ ಹಾಗೂ ₹25.99 ಲಕ್ಷ ನೀರಿನ ತೆರಿಗೆ ಸಂಗ್ರಹಣೆಯಾಗಿತ್ತು’ ಎಂದು ಪೌರಾಯುಕ್ತರು ಮಾಹಿತಿ ನೀಡಿದರು.

ಪ್ರಸಕ್ತ ಆರ್ಥಿಕ ವರ್ಷದ ತೆರಿಗೆ ವಸೂಲಿಯನ್ನು ಚುರುಕುಗೊಳಿಸಲು ಅಧಿಕಾರಿಗಳ ಸಭೆ ನಡೆಸಿ ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ. ನಾಗರಿಕರ ಮನವೊಲಿಸಿ ಸಾಧ್ಯವಾದಷ್ಟು ತೆರಿಗೆ ಸಂಗ್ರಹಿಸಲು ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎನ್ನುವುದು ಅಧಿಕಾರಿಗಳ ವಾದವಾಗಿದೆ.

ಸವಾಲಾದ ತೆರಿಗೆ ವಸೂಲಿ

ಕೊರೊನಾ ಕಾರಣದಿಂದ ನಾಗರಿಕರಿಗೂ ತೊಂದರೆಯಾಗಿದೆ. ಅನೇಕರಿಗೆ ಉದ್ಯೋಗವಿಲ್ಲ, ಸಂಪಾದನೆಯೂ ಇಲ್ಲ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ತೆರಿಗೆ ವಸೂಲಿ ಒಂದು ಸವಾಲಾಗಿದೆ. ಮೂಲಸೌಕರ್ಯ ಒದಗಿಸಲು ತೆರಿಗೆ ವಸೂಲಿ ಮಾಡುವುದು ಅಗತ್ಯ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಹಂತ ಹಂತವಾಗಿ ತೆರಿಗೆ ವಸೂಲಿ ಮಾಡಲಾಗುವುದು.

– ಉಮಾಶಂಕರ್, ಪ್ರಭಾರ ಪೌರಾಯುಕ್ತ

5 ತಿಂಗಳಿನಿಂದ ಬಹುತೇಕ ನಾಗರಿಕರಿಗೆ ಉದ್ಯೋಗ ಇಲ್ಲ, ವೇತನವೂ ಇಲ್ಲ. ಆದ್ದರಿಂದ ತೆರಿಗೆ ಪಾವತಿಗೆ ಹಿನ್ನಡೆಯಾಗಿದೆ

ಮಂಜುನಾಥ್, ಪ್ರಭಾಕರ್ ಬಡಾವಣೆಯ ನಿವಾಸಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು