ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿಬಿದನೂರು: ಎಸ್.ಟಿಗೆ ಅನ್ಯರ ಸೇರ್ಪಡೆ, ಖಂಡನೆ

ನಾಯಕ ಜನಾಂಗಕ್ಕೆ ಪ್ರತ್ಯೇಕ ಒಳ ಮೀಸಲಾತಿ ಕಲ್ಪಿಸಲು ಸರ್ಕಾರಕ್ಕೆ ಒತ್ತಾಯ
Last Updated 20 ಜನವರಿ 2021, 2:30 IST
ಅಕ್ಷರ ಗಾತ್ರ

ಗೌರಿಬಿದನೂರು: ‘ಎಸ್.ಟಿ ಜನಾಂಗದ ಮೀಸಲಾತಿಗೆ ಬೇರೆ ಜಾತಿಗಳನ್ನು ಸೇರಿಸುವುದರಿಂದ ನಮ್ಮ ನಾಯಕ ಜನಾಂಗಕ್ಕೆ ಅನ್ಯಾಯವಾಗುತ್ತದೆ. ಆದ್ದರಿಂದ ನಮ್ಮ ನಾಯಕ ಜನಾಂಗಕ್ಕೆ ಪ್ರತ್ಯೇಕ ಒಳ ಮೀಸಲಾತಿಯನ್ನು ರಾಜ್ಯ ಸರ್ಕಾರ ನೀಡಬೇಕು’ ಎಂದು ವೀರ ಮದಕರಿ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ಹನುಮಂತನಾಯಕ್ ಒತ್ತಾಯಿಸಿದರು.

ನಗರದ ಹೊರವಲಯದ ಮಿನಿ ವಿಧಾನಸೌಧ ಬಳಿ ಸಂಘದ ವತಿಯಿಂದ ಎಸ್.ಟಿ ಜನಾಂಗಕ್ಕೆ ಅನ್ಯ ಜಾತಿಗಳನ್ನು ಸೇರಿಸುವುದನ್ನು ಖಂಡಿಸಿ ನಡೆಸಿದ ಪ್ರತಿಭಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಸ್ವಾತಂತ್ರ್ಯ ಬಂದ ಮೇಲೆ ನಮ್ಮ ದೇಶಕ್ಕೆ ಡಾ.ಬಿ.ಅರ್. ಅಂಬೇಡ್ಕರ್ ದಲಿತರ ಏಳಿಗೆಗೆ ಸಂವಿಧಾನ ರಚನೆ ಮಾಡಿದ್ದು ಅವರನ್ನು ಮುಖ್ಯವಾಹಿನಿಗೆ ತರಲು ಯೋಜನೆಗಳನ್ನು ತಂದರು. ಆಳುವ ಸರ್ಕಾರ ಸಂವಿಧಾನ ಕಾಯ್ದೆಗಳು ಯಥಾವತ್ತಾಗಿ ಜಾರಿಗೆ ಮಾಡದೆ ದಲಿತರಿಗೆ ಅನ್ಯಾಯವೆಸಗಿದ್ದಾರೆ. ಜನಾಂಗದ ಆಧಾರದ ಮೇಲೆ ಒಳ ಮೀಸಲಾತಿ ತರಬೇಕು ಎಂಬ ಕಾಯ್ದೆ ಇದ್ದರೂ ಅದು ಜಾರಿಗೆ ತಂದಿಲ್ಲ. ಇದೀಗ ನಮ್ಮ ಜನಾಂಗಕ್ಕೆ ಅನ್ಯ ಜಾತಿಯನ್ನು ಸೇರಿಸಲು ಹುನ್ನಾರ ಮಾಡುತ್ತಿದ್ದಾರೆ. ಇದರಿಂದ ನಮಗೆ ಸಿಗುತ್ತಿರುವ ಅಲ್ಪ ಮೀಸಲಾತಿ ಸಿಗದೆ ಇನ್ನಷ್ಟು ತುಳಿತಕ್ಕೆ ಒಳಪಡುವ ಸ್ಥಿತಿ ನಿರ್ಮಾಣವಾಗುತ್ತಿದೆ’ ಎಂದು ದೂರಿದರು.

‘ತಾಲ್ಲೂಕಿನಲ್ಲಿ ಎಸ್.ಟಿ ಜನಾಂಗ ಮೇಲೆ ದೌರ್ಜನ್ಯ ಹೆಚ್ಚಿದ್ದು ಅಧಿಕಾರಿಗಳು ವಿನಾಕಾರಣ ನಮ್ಮ ಮೇಲೆ ಇನ್ನಿಲ್ಲದ ಕಾರಣವೊಡ್ಡಿ ಕಿರುಕುಳ ನೀಡುತ್ತಿದ್ದಾರೆ. ಇದಕ್ಕೆ ಇಲ್ಲಿನ ಅಧಿಕಾರಿಗಳು ಕುಮ್ಮಕ್ಕು ನೀಡುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಅಟ್ರಾಸಿಟಿ ಸಭೆಗಳನ್ನು ಕರೆಯದೆ ಉದಾಸೀನ ಮನೋಭಾವನೆ ಮಾಡುತ್ತಿದ್ದಾರೆ ಕೇಂದ್ರ ಸರ್ಕಾರದ ಮೀಸಲಾತಿ ಪ್ರಕಾರ ಶೇ 7.5ರಷ್ಟು ಪ್ರತ್ಯೇಕ ಮೀಸಲಾತಿ ನೀಡಬೇಕು ಎಂದು ನಮ್ಮ ಸಂಘದಿಂದ ಒತ್ತಾಯ ಮಾಡುತ್ತಿದ್ದೇವೆ’ ಎಂದು ತಿಳಿಸಿದರು.

ನಾಯಕ ಜನಾಂಗದ ತಾಲ್ಲೂಕು ಅಧ್ಯಕ್ಷ ಬಾಬಣ್ಣ ಮಾತನಾಡಿ, ‘ರಾಜ್ಯದಲ್ಲಿ 2001 ಜನಗಣತಿ ಪ್ರಕಾರ 52 ಲಕ್ಷ ಜನಸಂಖ್ಯೆ ಹೊಂದಿದ್ದು ಈಗ ಸುಮಾರು 80 ಲಕ್ಷ ಜನಸಂಖ್ಯೆ ನಿರೀಕ್ಷೆ ಮಾಡಲಾಗಿದೆ. ಇಷ್ಟು ಜನಸಂಖ್ಯೆ ಇರುವುದರಿಂದ ನಮಗೆ ಪ್ರತ್ಯೇಕ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸುತ್ತೇವೆ’ ಎಂದರು.

ತಾಲ್ಲೂಕು ನಾಯಕ ಜನಾಂಗ ಇಡಗೂರು ನಾರಾಯಣಸ್ವಾಮಿ, ಗೌರವ ಅಧ್ಯಕ್ಷ ಬಿ.ಜಿ.ತಿಪ್ಪಣ್ಣನಾಯಕ್, ವಕೀಲರಾದ ಡಿ.ಎನ್.ಬಾಲಗಂಗಾಧರಯ್ಯ, ಎಂ.ಎಸ್.ಆನಂದ್, ಮುಖಂಡರಾದ ಚಿನ್ನಪ್ಪಯ್ಯ, ಬ್ರಹ್ಮರಾಜು, ಆನಂದರಾಮು, ಎಚ್.ಕೆ.ನಾಗರಾಜು, ಎನ್.ಶ್ರೀನಿವಾಸ್, ಸತೀಶ್ ಕುಮಾರ್, ಕಲ್ಪನಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT