ಚಿಕ್ಕಬಳ್ಳಾಪುರ: ತಣ್ಣಗಿದ್ದ ಚಿಕ್ಕಬಳ್ಳಾಪುರ ರಾಜಕಾರಣವನ್ನು ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ರಂಗೇರಿಸಿತ್ತು. ಇದೇ ಹೊತ್ತಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವಿನ ವಾಕ್ಸಮರದಲ್ಲಿ ಬಳಕೆಯಾದ ಅವಾಚ್ಯ ಪದಗಳು ಈಗ ಚಿಕ್ಕಬಳ್ಳಾಪುರ ರಾಜಕಾರಣವನ್ನು ತೀವ್ರವಾಗಿ ಕದಡಿದೆ.
ಚಿಕ್ಕಬಳ್ಳಾಪುರ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಈ ‘ಅವಾಚ್ಯಪದ’ಗಳ ಕುರಿತು ಕಾವೇರಿದ ಚರ್ಚೆಗಳು ನಡೆದರೆ ಪ್ರಜ್ಞಾವಂತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಸದ್ಯದ ಸನ್ನಿವೇಶವನ್ನು ಗಮನಿಸಿದರೆ ಈ ‘ಅವಾಚ್ಯದ ಪದ’ದ ರಾಜಕೀಯ ಬೆಂಕಿಗೆ ತಣ್ಣೀರು ಬೀಳುವ ಲಕ್ಷಣಗಳು ಇಲ್ಲ.
ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರ ಮಾತಿನ ಭರದಲ್ಲಿ ತಂದೆ–ತಾಯಿ, ಹುಟ್ಟು, ಡಿಎನ್‌ಎ ಪರೀಕ್ಷೆ...ಹೀಗೆ ವ್ಯಕ್ತಿಗತ ವಿಚಾರಗಳೇ ಪ್ರಮುಖವಾಗಿ ನುಸುಳಿವೆ. ಈ ಅವಾಚ್ಯ ನಿಂದನೆಯ ರಾಜಕಾರಣವು ಸದ್ಯಕ್ಕೆ ಅಭಿವೃದ್ಧಿ ರಾಜಕಾರಣದ ಚರ್ಚೆಯನ್ನೇ ಮುಸುಕು ಮಾಡಿದೆ.
ಅಷ್ಟಕ್ಕೂ ಆಗಿದ್ದೇನು: ಚಿಕ್ಕಬಳ್ಳಾಪುರ ನಗರಸಭೆಯ ಚುನಾವಣೆಯ ಕಾವು ತೀವ್ರವಾಗಿತ್ತು. ಕಾಂಗ್ರೆಸ್ ಚಿಹ್ನೆಯಡಿ ಗೆಲುವು ಸಾಧಿಸಿ ಬಿಜೆಪಿ ಪಾಳಯದಲ್ಲಿ ಗುರುತಿಸಿಕೊಂಡ ನಗರಸಭೆ ಸದಸ್ಯರನ್ನು ಶಾಸಕ ಪ್ರದೀಪ್ ಈಶ್ವರ್ ಅಯೋಗ್ಯರು ಎಂದಿದ್ದರು. ನಂತರ ಈ ವಿಚಾರ ಹಂತ ಹಂತವಾಗಿ ದೊಡ್ಡದಾಯಿತು. ಕೆಲವು ಬಿಜೆಪಿ ಮುಖಂಡರು ಶಾಸಕರ ತಂದೆ, ತಾಯಿಯ ಆತ್ಮಹತ್ಯೆಯ ಬಗ್ಗೆಯೂ ಕೆದಕಿದರು. ಇದಕ್ಕೆ ಕಾಂಗ್ರೆಸ್ ನಾಯಕರು ಅಷ್ಟೇ ತೀಕ್ಷ್ಮವಾಗಿ ಉತ್ತರಿಸಿದರು.
ಹೀಗೆ ಎರಡೂ ಪಾಳಯದಲ್ಲಿ ವಾಗ್ವಾದಗಳಿಗೆ ತಿರುವು ನೀಡಿದ್ದು ಪ್ರದೀಪ್ ಈಶ್ವರ್ ಅಭಿಮಾನಿಗಳು ನಡೆಸಿದ ಸುದ್ದಿಗೋಷ್ಠಿ. ಈ ಸುದ್ದಿಗೋಷ್ಠಿಯಲ್ಲಿ ಅವಾಚ್ಯಪದಗಳು ಮತ್ತು ನಿಂದನೆಯ ಮಾತು ಎಲ್ಲೆ ಮೀರಿತು. ಮಾತಿನ ಭರದಲ್ಲಿ ವೈಯಕ್ತಿಕ ವಿಚಾರಗಳು ತೀವ್ರವಾಗಿ ಕೆದಕಲಾಯಿತು. ಈ ಮಾತುಗಳು ಚಿಕ್ಕಬಳ್ಳಾಪುರದ ರಾಜಕಾರಣದಲ್ಲಿ ಚರ್ಚೆಗೆ ಕಾರಣವಾಗಿವೆ.
ಸದ್ಯದ ಚಿಕ್ಕಬಳ್ಳಾಪುರ ರಾಜಕೀಯವನ್ನು ಗಮನಿಸಿದರೆ ಈ ಅವಾಚ್ಯ ಪದ ವಿಚಾರವಾಗಿ ನಡೆಯುತ್ತಿರುವ ವಾಗ್ವಾದದ ರಾಜಕೀಯ ಸದ್ಯಕ್ಕೆ ನಿಲ್ಲುವ ಲಕ್ಷಣಗಳೂ ಇಲ್ಲ. ಮುಖಂಡರು ಈ ಮಾತಿನ ಸಮರಕ್ಕೆ ತಡೆ ನೀಡಬೇಕು ಎಂದು ಪ್ರತಿಪಾದಿಸಿದರೂ ತಳ ಮಟ್ಟದ ಕಾರ್ಯಕರ್ತರ ನಡುವೆ ಪದ ಬಳಕೆಯ ಕುರಿತು ಆಕ್ರೋಶ, ಸಿಟ್ಟು ಜೀವಂತವಾಗಿದೆ.
ಜಾತಿಯೂ ತಳುಕು: ಪ್ರತಿ ಚುನಾವಣೆಯ ಸಮಯದಲ್ಲಿಯೂ ಚಿಕ್ಕಬಳ್ಳಾಪುರ ರಾಜಕಾರಣದಲ್ಲಿ ಪ್ರಮುಖವಾಗಿ ಪ್ರವಹಿಸುವುದು ‘ಜಾತಿ’. ಈ ಅವಾಚ್ಯ ಪದ ಬಳಕೆ ಮತ್ತು ವ್ಯಕ್ತಿ ನಿಂದನೆಯ ವಿಚಾರಗಳು ಸಹ ಈ ‘ಜಾತಿ ರಾಜಕೀಯ’ಕ್ಕೆ ತಳುಕು ಹಾಕಿದೆ.
ಅಲ್ಲಿರುವುದು ನಮ್ಮನೆ ಇಲ್ಲಿರುವುದು ಸುಮ್ಮನೆ ಎನ್ನುವಂತೆ ಕಾಂಗ್ರೆಸ್‌ನಲ್ಲಿದ್ದವರು ಬಿಜೆಪಿ ಮತ್ತು ಬಿಜೆಪಿಯಲ್ಲಿದ್ದವರು ಕಾಂಗ್ರೆಸ್ ಬಗ್ಗೆ ಆಂತರಿಕವಾಗಿ ಒಲವು ವ್ಯಕ್ತಪಡಿಸುವುದು ಚಿಕ್ಕಬಳ್ಳಾಪುರದಲ್ಲಿ ಸಾಮಾನ್ಯ ಎನ್ನುವಂತಿದೆ. ಈ ಒಳ ರಾಜಕೀಯಕ್ಕೆ ಜಾತಿಯೇ ಪ್ರಮುಖವಾಗಿದೆ. ಈಗ ವ್ಯಕ್ತಿಗತ ನಿಂದನೆ, ಅವಾಚ್ಯ ಪದ ಬಳಕೆಯ ವಿಚಾರವಾಗಿ ಜಾತಿ ರಾಜಕಾರಣವೂ ತಳುಕು ಹಾಕಿಕೊಂಡಿದೆ.
‘ವ್ಯಕ್ತಿಗತ ತೇಜೋವಧೆ ಸರಿಯಲ್ಲ’
ರಾಜಕಾರಣದಲ್ಲಿ ಸೈದ್ಧಾಂತಿಕ ಮತ್ತು ರಚನಾತ್ಮಕ ಟೀಕೆ ಟಿಪ್ಪಣಿಗಳು ಇರಬೇಕು. ವ್ಯಕ್ತಿಗತ ನೆಲೆಯಲ್ಲಿ ತೇಜೋವಧೆಯಾಗಿ ಯಾರ ಬಗ್ಗೆಯೂ ಮಾತನಾಡುವುದು ಉತ್ತಮವಲ್ಲ. ಅಭಿವೃದ್ಧಿಯ ಬಗ್ಗೆ ರಚನಾತ್ಮಕ ಚರ್ಚೆಗಳು ನಡೆಯಲಿ ಅದು ಬಿಟ್ಟು ವೈಯಕ್ತಿಕ ವಿಚಾರಗಳ ಅಡಿಯಲ್ಲಿ ವಾಗ್ವಾದಗಳು ಉತ್ತಮ ಸಮಾಜಕ್ಕೆ ಪೂರಕವಾಗುವುದಿಲ್ಲ.
-ಗೋಪಾಲಗೌಡ ಕಲ್ವಮಂಜಲಿ ಸಾಹಿತಿ
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೆಟ್ಟ ಸಂಪ್ರದಾಯ ಇಂತಹ ಹೇಳಿಕೆಗಳು ಶಾಂತಿ ಪ್ರಿಯವಾದ ಚಿಕ್ಕಬಳ್ಳಾಪುರಕ್ಕೆ ಶೋಭೆ ತರುವ ವಿಚಾರವಲ್ಲ. ರಾಜಕೀಯವಾಗಿ ವಿಮರ್ಶೆ ಇರಲಿ. ವೈಯಕ್ತಿಕ ವಿಚಾರವನ್ನು ಯಾವ ರಾಜಕೀಯ ಪಕ್ಷಗಳ ಮುಖಂಡರು ಮಾತನಾಡುವುದು ಸರಿಯಲ್ಲ. ಇದು ನಮ್ಮ ಜಿಲ್ಲೆಗೆ ಕೆಟ್ಟ ಸಂಪ್ರದಾಯಕ್ಕೆ ಮುನ್ನುಡಿ ಬರೆದಂತಿದೆ. ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರಿಗೂ ಭಾಷೆ ಬದಲಾವಣೆಯ ಅಗತ್ಯವಿದೆ. -ಜಿ.ಸಿ.ವೆಂಕಟರಮಣಪ್ಪ ಸಮತಾ ಸೈನಿಕ ದಳದ ಮುಖಂಡ
ಚಿಕ್ಕಬಳ್ಳಾಪುರ ಹಿಂಬಾಲಕರ ಮಾತು; ನಾಯಕರಿಗೂ ಕೆಟ್ಟ ಹೆಸರು ಮುಖಂಡರು ಎನಿಸಿಕೊಂಡವರು ಆಡುತ್ತಿರುವ ಮಾತುಗಳಿಂದ ನಾಗರಿಕ ಸಮಾಜ ತಲೆತಗ್ಗಿಸಬೇಕು. ಚಿಕ್ಕಬಳ್ಳಾಪುರ ರಾಜಕೀಯದಲ್ಲಿ ಈಗ ಮಾತುಗಳು ಎಲ್ಲೆ ಮೀರಿವೆ. ಮೊದಲು ಈ ದೂಷಣೆಯನ್ನು ಬಿಟ್ಟು ಜನರ ಪರವಾಗಿ ಕೆಲಸ ಮಾಡಲಿ. ಹಿಂಬಾಲಕರ ಮಾತುಗಳು ಸಹಜವಾಗಿ ನಾಯಕನಿಗೆ ಕೆಟ್ಟ ಹೆಸರು ತರುತ್ತವೆ. ಇದನ್ನು ನಾಯಕರು ಸಹ ಅರಿತುಕೊಳ್ಳಬೇಕು.
-ಕೆ.ಎಂ.ರೆಡ್ಡಪ್ಪ ಕಸಾಪ ಗೌರವ ಕಾರ್ಯದರ್ಶಿ ಚಿಕ್ಕಬಳ್ಳಾಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.