ಬುಧವಾರ, ಜನವರಿ 20, 2021
21 °C
ಮೂಲ ಸೌಲಭ್ಯ ವಂಚಿತ ಗ್ರಾಮ; ಫ್ಲೋರೋಸಿಸ್ ರೋಗಿಗಳೇ ಹೆಚ್ಚು

ಬೆಟ್ಟಗುಡ್ಡಗಳ ದೇವಿಕುಂಟೆಯಲ್ಲಿ ನಿತ್ಯವೂ ಸಂಕಷ್ಟ

ಪಿ.ಎಸ್.ರಾಜೇಶ್ Updated:

ಅಕ್ಷರ ಗಾತ್ರ : | |

Prajavani

ಬಾಗೇಪಲ್ಲಿ: ಬೆಟ್ಟಗುಡ್ಡಗಳ ತಪ್ಪಲಿನಲ್ಲಿ ಇರುವ ಕುಗ್ರಾಮ, ಫ್ಲೋರೈಡ್‌ಯುಕ್ತ ನೀರು ಸೇವಿಸಿದ ಜನರಿಗೆ ಕೈ-ಕಾಲು ಬಾಗಿದೆ. ಶುದ್ಧ ಕುಡಿಯುವ ನೀರಿಗೆ ಹಾಹಾಕಾರ, ಓಡಾಡಲು ರಸ್ತೆ ಇಲ್ಲ. ಕೃಷಿ ಕೂಲಿ ಕಾರ್ಮಿಕರೇ ಹೆಚ್ಚು ಹೀಗೆ... ಅನೇಕಾರು ಕನಿಷ್ಠ ಮೂಲಸೌಲಭ್ಯಗಳಿಂದ ವಂಚಿತರಾಗಿರುವ ತಾಲ್ಲೂಕಿನ ಅತ್ಯಂತ ಕುಗ್ರಾಮ ದೇವಿಕುಂಟೆಯ ಜನರ ಪ್ರತಿನಿತ್ಯದ ಸಂಕಷ್ಟಗಳಿವು.

ತಾಲ್ಲೂಕಿನ ಮಾರ್ಗಾನುಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದೇವಿಕುಂಟೆ ಗ್ರಾಮ ಕಾಡು, ಬೆಟ್ಟ-ಗುಡ್ಡಗಳ ನಡುವೆ ಇದೆ. ಮಾರ್ಗಾನುಕುಂಟೆಯಿಂದ ಜೋಗಿರೆಡ್ಡಿಪಲ್ಲಿ, ಪಿಚ್ಚಲವಾರಿಪಲ್ಲಿ ಮೂಲಕ ದೇವಿಕುಂಟೆಗೆ ಸಂಚರಿಸಲು 8 ಕಿ.ಮೀನಷ್ಟು ದೂರ. ಗ್ರಾಮದಲ್ಲಿ 94 ಮನೆಗಳಿದ್ದು, 439 ಮತದಾರರು ಇದ್ದಾರೆ. ಇದರಲ್ಲಿ ಪರಿಶಿಷ್ಟ ಪಂಗಡ-52, ಪರಿಶಿಷ್ಟ ಜಾತಿ-16, ಮುಸ್ಲಿಮರು 16 ಮನೆಗಳಲ್ಲಿ ವಾಸವಾಗಿದ್ದಾರೆ.

ಅನೇಕ ದಶಕಗಳು ಕಂಡರೂ ಗ್ರಾಮಕ್ಕೆ ಕನಿಷ್ಠ ಸೌಲಭ್ಯಗಳು ಇಲ್ಲ. ಗ್ರಾಮದಲ್ಲಿ ಸರ್ಕಾರಿ ಕೊಳವೆಬಾವಿ ಇದೆ. ಇದರಲ್ಲಿ ಫ್ಲೋರೈಡ್ ತುಂಬಿದ ನೀರು ಸರಬರಾಜು ಆಗುತ್ತಿದೆ. ಶುದ್ಧ ಕುಡಿಯುವ ನೀರು ಇಲ್ಲ. ಫ್ಲೋರೋಸಿಸ್ ರೋಗ ಹೆಚ್ಚಾಗಿದೆ. ಗ್ರಾಮದ ಜನರ ಹಲ್ಲುಗಳು ಪಾಚಿ ಕಟ್ಟಿದೆ. ಕೈ-ಕಾಲುಗಳು, ಸೊಂಟ ನೋವುಗಳು ಹೆಚ್ಚಾಗಿವೆ. ಆರೋಗ್ಯ ತಪಾಸಣೆಗೆ ಮಾರ್ಗಾನುಕುಂಟೆ, ಗೂಳೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರಬೇಕು. ಬೆಟ್ಟ–ಗುಡ್ಡಗಳಲ್ಲಿ ಗ್ರಾಮ ಇರುವುದರಿಂದ ಹಾವುಗಳು ಸೇರಿದಂತೆ ವಿವಿಧ ಕಾಡಿನ ಪ್ರಾಣಿಗಳು ಸಂಚರಿಸುತ್ತವೆ. ಖಾಸಗಿ ಆಟೋ ಹಾಗೂ ದ್ವಿಚಕ್ರ ವಾಹನಗಳಲ್ಲಿ ಗ್ರಾಮದ ಜನರು ಸಂಚರಿಸುತ್ತಿದ್ದಾರೆ. ಬಾಣಂತಿಯರು, ಗರ್ಭಿಣಿಯರು, ರೋಗಿಗಳು ಆರೋಗ್ಯ ಚಿಕಿತ್ಸೆಗೆ ಹಾಗೂ ತಪಾಸಣೆಗೆ 8 ಕಿ.ಮೀ ದೂರ ನಡೆದುಕೊಂಡು ಬರಬೇಕಾಗಿದೆ.

ಮಾರ್ಗಾನುಕುಂಟೆಯಿಂದ ದೇವಿಕುಂಟೆಯವರಿಗೂ ಅನೇಕ ವರ್ಷಗಳಿಂದ ಸುಗಮವಾದ ರಸ್ತೆ ಇಲ್ಲ. ಮಣ್ಣು, ಜಲ್ಲಿ-ಕಲ್ಲುಗಳಿಂದ ಕೂಡಿದೆ. ಮೊಣಕಾಲುದ್ದಷ್ಟು ಗುಂಡಿಗಳು ನಿರ್ಮಾಣವಾಗಿವೆ. ರಸ್ತೆಯ ಇಕ್ಕೆಲಗಳಲ್ಲಿ ಕಳೆ-ಮುಳ್ಳಿನ ಗಿಡಗಳು ಆವರಿಸಿದೆ. ಸುತ್ತಲೂ ಕಾಡಿನ ಪ್ರದೇಶ ಆಗಿದೆ. ಬೆಟ್ಟ-ಗುಡ್ಡಗಳ ತಪ್ಪಲಿನಲ್ಲಿ ಗ್ರಾಮ ಇದೆ. ಗ್ರಾಮಕ್ಕೆ ಸಮರ್ಪಕವಾಗಿ ಬಸ್ ಸೌಲಭ್ಯ ಇಲ್ಲ. ಕೊರೊನಾ ಸೋಂಕು ಹರಡುವ ಮುನ್ನಾ ಬೆಳಗ್ಗೆ-ಸಂಜೆ ಬಸ್ ಸಂಚಾರ ಇತ್ತು. ಇದೀಗ ಸಾರಿಗೆ ಬಸ್ ಸೌಲಭ್ಯ ಇಲ್ಲ. ಇದರಿಂದ ಗ್ರಾಮದ ಮಹಿಳೆಯರು, ಮಕ್ಕಳು, ವೃದ್ಧರು ನಡೆದುಕೊಂಡೇ ಮಾರ್ಗಾನುಕುಂಟೆಗೆ ಬರಬೇಕು.

ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ರಸ್ತೆಗಳ ಮೇಲೆ ಹರಿಯುತ್ತಿರುವ ಚರಂಡಿ ನೀರನ್ನು ತುಳಿದುಕೊಂಡು ಹೋಗುತ್ತಿದ್ದಾರೆ. ಹಲವರು ಹಳೇ ಮನೆಗಳಲ್ಲಿ ವಾಸವಾಗಿದ್ದಾರೆ. ಬೀದಿದೀಪಗಳು ಇಲ್ಲ.ಕೃಷಿ, ತೋಟಗಾರಿಕೆ ಬೆಳೆಗಳು ಕೈ ಕೊಟ್ಟಿರುವುದರಿಂದ, ಬಹುತೇಕ ರೈತರು ಕೃಷಿ ಚಟುವಟಿಕೆಗಳಿಂದ ದೂರ ಆಗಿದ್ದಾರೆ. ಕೆಲವರು ಬೆಂಗಳೂರಿನಂತಹ ನಗರಗಳಿಗೆ ವಲಸೆ ಹೋಗಿದ್ದಾರೆ. ಉಳಿದಂತೆ ರೈತರು ಕೂಲಿ ಕಾರ್ಮಿಕರಾಗಿ ಜೀವನ ನಡೆಸುತ್ತಿದ್ದಾರೆ.‌

ಈಡೇರದ ಭರವಸೆ
2020ರ ಅಕ್ಟೋಬರ್ 23ರಂದು ಪಟ್ಟಣದ ಶಾದಿ ಮಹಲ್‌ನಲ್ಲಿ ‘ಪ್ರಜಾವಾಣಿ’ ಹಾಗೂ ‘ಡೆಕನ್ ಹೆರಾಲ್ಡ್’ ವತಿಯಿಂದ ಜನಸ್ಪಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆಗ ತಾಲ್ಲೂಕಿನ ದೇವಿಕುಂಟೆ ಗ್ರಾಮಕ್ಕೆ ಕುಡಿಯುವ ನೀರು, ರಸ್ತೆ ಸೇರಿದಂತೆ ಕನಿಷ್ಠ ಮೂಲಸೌಲಭ್ಯಗಳನ್ನು ಕಲ್ಪಿಸುವಂತೆ ಗ್ರಾಮದ ನಿವಾಸಿ ದೇವಿಕುಂಟೆ ಶ್ರೀನಿವಾಸ್ ಅವರು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹಾಗೂ ತಾಲ್ಲೂಕು ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರು.

‘ಜನಸ್ಪಂದನದಲ್ಲಿ ದೇವಿಕುಂಟೆ ಗ್ರಾಮದ ಸಮಸ್ಯೆಗಳ ಬಗ್ಗೆ ಶಾಸಕರಿಗೆ, ಅಧಿಕಾರಿಗಳಿಗೆ ಅರ್ಜಿ ಮೂಲಕ ತಿಳಿಸಿದ್ದೇನೆ. ಆದರೆ ಇದುವರೆಗೂ ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲಸೌಲಭ್ಯಗಳು ಕಲ್ಪಿಸಿಲ್ಲ’ ಎಂದು ದೇವಿಕುಂಟೆ ಶ್ರೀನಿವಾಸ್ ತಿಳಿಸಿದರು.

ಕುಡಿಯಲು ನೀರು ಇಲ್ಲ
‘ತಾಲ್ಲೂಕಿನ ದೇವಿಕುಂಟೆ ಗ್ರಾಮದಲ್ಲಿ ಮುಖ್ಯವಾಗಿ ಶುದ್ಧವಾದ ಕುಡಿಯುವ ನೀರು ಇಲ್ಲ. 8 ಕಿ.ಮೀನಷ್ಟು ನಡೆಯಬೇಕು. ಗ್ರಾಮಕ್ಕೆ ಸುಗಮ ರಸ್ತೆ ಇಲ್ಲ. ಜಲ್ಲಿ-ಕಲ್ಲುಗಳು ಹಾಗೂ ಮಣ್ಣಿನಿಂದ ರಸ್ತೆ ಕೂಡಿದೆ. ದ್ವಿಚಕ್ರ, ಆಟೊ ಸವಾರರು ಸರ್ಕಸ್ ಮಾದರಿಯಲ್ಲಿ ಸಂಚರಿಸುತ್ತಿದ್ದಾರೆ. ಪ್ರತಿನಿತ್ಯದ ರಸ್ತೆ ಪ್ರಯಾಣದಿಂದ ಕೈ-ಕಾಲುಗಳು, ಸೊಂಟ ನೋವುಗಳು ಉಂಟಾಗುತ್ತಿದೆ’ ಎಂದು ಗ್ರಾಮಸ್ಥೆ ಹಸೀನಾಬಾನು ಸಂಕಷ್ಟ ತೋಡಿಕೊಂಡರು.

ಭಯದ ವಾತಾವರಣ
‘ಗ್ರಾಮಕ್ಕೆ ಬಸ್ ಸೌಲಭ್ಯ ಇಲ್ಲ. ಮಾರ್ಗಾನುಕುಂಟೆ ಶಾಲಾ-ಕಾಲೇಜುಗಳಿಗೆ ವಿದ್ಯಾರ್ಥಿಗಳು ನಡೆಯಬೇಕು. ಬೆಟ್ಟ-ಗುಡ್ಡ ಹಾಗೂ ಕಾಡಿನ ಪ್ರದೇಶವಾಗಿರುವುದರಿಂದ ಒಬ್ಬೊಬ್ಬರೇ ನಡೆಯಲು ಭಯದ ವಾತಾವರಣ ಇದೆ. ರಸ್ತೆಯ ಇಕ್ಕೆಲಗಳಲ್ಲಿ ಕಳೆ, ಮುಳ್ಳಿನ ಗಿಡಗಳು ಬೆಳೆದಿದೆ. ಅಧಿಕಾರಿಗಳು ಕೂಡಲೇ ಕಳೆ-ಮುಳ್ಳಿನ ಗಿಡಗಳನ್ನು ತೆಗಿಸಬೇಕು. ಸುಗಮವಾದ ರಸ್ತೆ ಮಾಡಿಸಬೇಕು. ಗ್ರಾಮಕ್ಕೆ 2 ಬಸ್ ಗಳು ಸಂಚರಿಸಬೇಕು’ ಎಂದು ಗ್ರಾಮದ ವಿದ್ಯಾರ್ಥಿಗಳಾದ ಸುರೇಂದ್ರ, ಬಾಬು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.