ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ | ನರೇಗಾದತ್ತ ವಿದ್ಯಾವಂತ ಯುವಜನರ ಚಿತ್ತ

ಕೊರೊನಾ ಸೋಂಕಿನ ಕಾರಣಕ್ಕೆ ಹಳಿ ತಪ್ಪಿದ ಬದುಕು, ಸಂಕಷ್ಟದಿಂದ ಪಾರಾಗಲು ಕೂಲಿ ಕೆಲಸದ ಮೊರೆ
Last Updated 2 ಆಗಸ್ಟ್ 2020, 13:04 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯೊಂದರಲ್ಲಿ ಅಕೌಂಟೆಂಟ್‌ ಕೆಲಸ ಮಾಡುತ್ತಿದ್ದೆ. ಲಾಕ್‌ಡೌನ್‌ ಕಾರಣಕ್ಕೆ ಆ ಕೆಲಸ ಬಿಟ್ಟು ಊರು ಸೇರಿದೆ. ಇದೀಗ ನರೇಗಾ ಕೆಲಸದ ಜತೆಗೆ ಅಲ್ಲಿಇಲ್ಲಿ ಕೂಲಿ ಕೆಲಸಗಳನ್ನು ಮಾಡುತ್ತಿರುವೆ‘

ಬಾಗೇಪಲ್ಲಿ ತಾಲ್ಲೂಕಿನ ಜಲಪಿಗಾರಿಪಲ್ಲಿ ತಾಂಡಾದ ಪದವೀಧರ ಜೆ.ಎಲ್‌.ಪ್ರಶಾಂತ್ ಅವರ ಮಾತು.

‘ಪದವಿ ಮುಗಿಸಿ, ಎಂಬಿಎಗೆ ಪ್ರವೇಶ ಪರೀಕ್ಷೆ ಬರೆಯಬೇಕಿತ್ತು. ಪರೀಕ್ಷೆ ಮುಂದೂಡಿಕೆಯಾದ ಕಾರಣಕ್ಕೆ ಬೆಂಗಳೂರಿನಲ್ಲಿ ಕೆಲಸ ಸೇರಿದ್ದೆ. ಕೊನೆಗೆ ಕೋವಿಡ್‌, ಲಾಕ್‌ಡೌನ್‌ ಕಾರಣಕ್ಕೆ ಆ ಕೆಲಸ ಬಿಡಬೇಕಾಗಿ ಬಂತು. ಊರಿಗೆ ಬಂದು ಮುಂದೇನು ಎಂದು ದಿಕ್ಕು ತೋಚದೆ ಕುಳಿತವನಿಗೆ ನರೇಗಾ ಕೆಲಸ ಆಶಾಕಿರಣದಂತೆ ಕಂಡಿತು’ ಎಂದು ಹೇಳಿದರು.

ಇವತ್ತು ಜಿಲ್ಲೆಯಲ್ಲಿ ಪ್ರಶಾಂತ್ ಅವರ ರೀತಿಯಲ್ಲೇ ಸುಮಾರು 500ಕ್ಕೂ ಅಧಿಕ ಯುವ ಜನರು ಕೋವಿಡ್‌ ಸಂಕಷ್ಟದಿಂದ ಪಾರಾಗಲು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆ ಮೊರೆ ಹೋಗಿದ್ದಾರೆ ಎನ್ನಲಾಗಿದೆ.

ಪಿಯುಸಿ ಓದಿದವರು, ಪದವೀಧರರು, ಅತಿಥಿ ಉಪನ್ಯಾಸಕರು, ಎಂಜಿನಿಯರಿಂಗ್‌ ಓದಿದವರು ಕೂಡ ಕೆಲಸವಿಲ್ಲದೇ ಜಿಲ್ಲೆಯಲ್ಲಿ ಈಗ ಉದ್ಯೋಗ ಖಾತ್ರಿ ಅಡಿ ಕೂಲಿ ಮಾಡಲು ಮುಂದಾಗಿದ್ದಾರೆ. ಮಹಾನಗರಿ ಬೆಂಗಳೂರು ಸಮೀಪದಲ್ಲಿದ್ದರೂ ಕೋವಿಡ್‌ ಉಲ್ಭಣ ಕಾರಣಕ್ಕೆ ಅತ್ತ ತಲೆ ಹಾಕದೆ ಊರಲ್ಲೇ ಹೊಟ್ಟೆ ಹೊರೆಯುವ ಮಾರ್ಗ ಕಂಡುಕೊಂಡಿದ್ದಾರೆ.

ಬ್ಯಾಂಕ್‌ ಸಾಲ ಪಡೆದು ಶಿಕ್ಷಣ ಮುಗಿಸಿದವರು, ವರ್ಷದಿಂದ ಈಚೆಗೆ ವೃತ್ತಿ ಬದುಕನ್ನು ಆರಂಭಿಸಿ ಊರಿಗೆ ವಾಪಸ್‌ ಬಂದವರು, ಓದಿನಲ್ಲಿ ಅರ್ಧಕ್ಕೆ ಸಿಲುಕಿದವರು, ಕುಟುಂಬದ ಜವಾಬ್ದಾರಿ ಹೊತ್ತವರಿಗೆ ಉದ್ಯೋಗ ಖಾತ್ರಿ ಯೋಜನೆ ಸದ್ಯಕ್ಕೆ ಆಸರೆ ಒದಗಿಸಿದೆ.

ವೃತ್ತಿಪರ ಕೋರ್ಸ್‌ ಓದಿರುವ ಹಲವು ಯುವಕ– ಯುವತಿಯರು ಜಾಬ್‌ ಕಾರ್ಡ್‌ ಮಾಡಿಸಿಕೊಂಡು, ಕೀಳರಿಮೆ ಬಿಟ್ಟು ಕೆರೆಯ ಹೂಳೆತ್ತುವುದು, ಇಂಗುಗುಂಡಿ ನಿರ್ಮಾಣ ಮುಂತಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ನರೇಗಾದಲ್ಲಿ ತೊಡಗಿಸಿಕೊಂಡವರಲ್ಲಿ ಬಿ.ಎ, ಬಿ.ಕಾಂ, ಎಂ.ಕಾಂ, ಐಟಿಐ, ಡಿಪ್ಲೊಮಾ, ಬಿ.ಇಡಿ ಓದಿದವರೇ ಹೆಚ್ಚಾಗಿದ್ದಾರೆ.

ಹಿಂದುಳಿದ ಬಾಗೇಪಲ್ಲಿ ತಾಲ್ಲೂಕಿನಲ್ಲಿ ಬೇರೆ ತಾಲ್ಲೂಕುಗಳಿಗಿಂತ ಹೆಚ್ಚು ಯುವ ಜನರು ನರೇಗಾ ಕೆಲಸಗಳನ್ನು ಆಸರಿಸಿದ್ದಾರೆ. ಆ ತಾಲ್ಲೂಕಿನ ನಾರೇಮದ್ದೇಪಲ್ಲಿ ಒಂದೇ ಊರಿನಲ್ಲಿ ಸುಮಾರು 16 ಪದವೀಧರರು ನರೇಗಾದಲ್ಲಿ ಕೆಲಸ ಮಾಡಿದ್ದಾರೆ.

ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸಲು ಅನಿವಾರ್ಯವಾಗಿ ಯುವ ಜನರು ಖಾತ್ರಿ ಅಡಿ ಕೂಲಿಗೆ ಹೋಗುತ್ತಿದ್ದಾರೆ. ಹೀಗಾಗಿ, ಯೋಜನೆಯ ಪ್ರಾಮುಖ್ಯತೆಯ ಅರಿವು ಮೂಡಿದಂತಾಗಿದೆ.

ಬೆಂಗಳೂರಿನ ಖಾಸಗಿ ಕಂಪೆನಿಯ ಕೆಲಸ ತೊರೆದು ಬಂದ ಬಾಗೇಪಲ್ಲಿ ತಾಲ್ಲೂಕಿನ ಗೊಲ್ಲಪಲ್ಲಿಯ ವೆಂಕಟರವಣಪ್ಪ, ಪುಟ್ಟಪರ್ತಿಯ ವಿ.ಸತೀಶ್‌ ಅವರಂತೆ ಸಾಕಷ್ಟು ಜನರು ‘ಸದ್ಯಕ್ಕೆ ಊರು ಬಿಟ್ಟು ಎಲ್ಲಿಗೂ ಹೋಗುವುದಿಲ್ಲ. ನರೇಗಾ ಕೆಲಸ ಅನುಕೂಲವಾಗಿದೆ. ಸ್ವಲ್ಪ ಕಷ್ಟವಾದರೂ ಊರಲ್ಲೇ ಬದುಕುತ್ತೇವೆ’ ಎನ್ನುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT