ಸೋಮವಾರ, ಏಪ್ರಿಲ್ 19, 2021
31 °C
ಯೋಗಿ ಶ್ರೀನಿವಾಸ್‌ ಅರ್ಕ ಅವರ ‘ಹೊಳೆಯುವುದೆಲ್ಲಾ ಚಿನ್ನ’ ಪುಸ್ತಕ ಬಿಡುಗಡೆ

ಸಂತೋಷಕ್ಕೆ ಅಧ್ಯಾತ್ಮ ಮುಖ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ಸುಸ್ಥಿರ ಸಮಾಜ ನಿರ್ಮಾಣಕ್ಕೆ ಪೂರಕವಾದ ವ್ಯಕ್ತಿತ್ವ ವಿಕಸನವಾಗಲು ಧ್ಯಾನ, ಯೋಗ, ಪ್ರಾಣಾಯಾಮದಂತಹ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳುವುದು ಬಹುಮುಖ್ಯ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್ ಹೇಳಿದರು.

ನಗರದಲ್ಲಿ ಭಾನುವಾರ ನಡೆದ ಆರ್ಕಧಾಮ ಸಂಸ್ಥಾಪಕ ಯೋಗಿ ಶ್ರೀನಿವಾಸ್‌ ಅರ್ಕ ಅವರ ‘ಹೊಳೆಯುವುದೆಲ್ಲಾ ಚಿನ್ನ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರತಿಯೊಬ್ಬರೂ ಸಂತೋಷ ವಾಗಿರಬೇಕು ಎಂದು ಬಯಸುತ್ತಾರೆ. ಆದರೆ, ಲೌಕಿಕ ಬದುಕಿನಲ್ಲಿ ನಮಗೆ ಸಂತೋಷ ಯಾವುದರಿಂದ ಲಭಿಸುತ್ತದೆ ಎನ್ನುವುದು ಈವರೆಗೆ ಯಾರಿಗೂ ತಿಳಿದಿಲ್ಲ. ಹೊಸ ಕನಸುಗಳನ್ನು ಕಾಣುವ ಮನುಷ್ಯನಿಗೆ ಎಂದಿಗೂ ತೃಪ್ತಿ ಸಿಗುವುದಿಲ್ಲ. ಆಧ್ಯಾತ್ಮಿಕ ಬದುಕಿನಲ್ಲಾ ಧಾನ್ಯ, ಜಪತಪಗಳ ಮೂಲಕ ಸಂತೋಷ ಪಡೆಯಬಹುದು’ ಎಂದು ತಿಳಿಸಿದರು.

‘ಹಿಂದೆಲ್ಲ ಬೆಳಿಗ್ಗೆ ಎದ್ದ ತಕ್ಷಣವೇ ಜನರು ದೇವರು ಪಟ ನೋಡಿ ದಿನದ ಕಾರ್ಯ ಆರಂಭಿಸುತ್ತಿದ್ದರು. ಇವತ್ತು ಹಾಸಿಗೆಯಲ್ಲಿ ಏಳುತ್ತಲೇ ಕೈಯಲ್ಲಿ ಮೊಬೈಲ್ ಇರುತ್ತದೆ. ನಕಾರಾತ್ಮಕ ಚಿಂತನೆಗಳಿಂದಲೇ ದಿನ ಆರಂಭವಾಗುತ್ತಿರುವುದರಿಂದ ಅದು ನಮ್ಮ ಜೀವನ ಶೈಲಿಯ ಮೇಲೆ ದೊಡ್ಡ ಪರಿಣಾಮ ಬೀರಿದೆ’ ಎಂದು ಅಭಿಪ್ರಾಯಪಟ್ಟರು.

‘ಸ್ಮಾರ್ಟ್‌ ಕ್ಲಾಸ್‌ ಸಂಸ್ಕೃತಿ ಮನುಷ್ಯನ ಬೌದ್ಧಿಕ ಶಕ್ತಿಯ ಮೇಲೆ ದುಷ್ಪರಿಣಾಮ ಬೀರಿ ಬದುಕಿನ ಗತಿಯನ್ನೇ ಬದಲಿಸಿದೆ. ಬೆಳಿಗ್ಗೆ ಎದ್ದ ತಕ್ಷಣವೇ ಮೊದಲು ವಾಟ್ಸ್ಆ್ಯಪ್‌ ನೋಡುವಂತಾಗಿದೆ. ಇವತ್ತು ಸಕಾರಾತ್ಮಕವಾಗಿ, ಆತ್ಮವಿಶ್ವಾಸದಿಂದ ಬದುಕಲು ನಮಗೆಲ್ಲ ಆಧ್ಯಾತ್ಮಿಕ ಚಿಂತನೆಯ ಅಗತ್ಯವಿದೆ. 60 ವರ್ಷ ದಾಟಿದವರಿಗೆ ಮಾತ್ರವೇ ಆಧ್ಯಾತ್ಮಿಕ ಚಿಂತನೆ ಎಂಬ ತಪ್ಪು ಕಲ್ಪನೆ ತೊಡೆಯಬೇಕಿದೆ’ ಎಂದು ತಿಳಿಸಿದರು.

ಯೋಗಿ ಶ್ರೀನಿವಾಸ್‌ ಅರ್ಕ ಮಾತನಾಡಿ, ‘ಯಾರೇ ಒಬ್ಬರ ಅಧ್ಯಾತ್ಮ ನಿಜಗೊಂಡು ಅವರ ಅನುಭವಕ್ಕೆ ಬರಬೇಕಾದರೆ ಈ ಜಗತ್ತು ಮತ್ತು ಇಲ್ಲಿನ ಎಲ್ಲ ಜೀವಕೋಟಿಗಳು ಒಟ್ಟಾರೆ ಅಸ್ತಿತ್ವದಲ್ಲಿ ಒಂದೇ ಎಂದು ಅರಿಯಬೇಕು. ಈ ಏಕಾತ್ಮ ಭಾವ ತುಂಬ ಮುಖ್ಯ. ಇಂಥ ತಿಳಿವು ಮತ್ತು ಸಮಗ್ರತೆಯೇ ಸಾಕ್ಷಾತ್ಕಾರಕ್ಕೆ ನಮ್ಮ ಪ್ರಜ್ಞೆಯನ್ನು ಅಣಿಗೊಳಿಸುತ್ತದೆ’ ಎಂದು ಹೇಳಿದರು. 

‘ನಮ್ಮ ಪ್ರಜ್ಞೆ ಧ್ಯಾನಸ್ಥ ಸ್ಥಿತಿಯಲ್ಲಿ ಇಲ್ಲದೇ ಇದ್ದರೆ ಮನಸ್ಸಿನ ಸೂತ್ರಗಳು ಗ್ರಹಣ ಹಿಡಿಸುತ್ತವೆ. ಆಗ ನಮ್ಮ ಬಗ್ಗೆ ನಮಗೆ ಚಿಂತೆ, ವ್ಯಾಕುಲತೆ ಆವರಿಸುತ್ತದೆ. ಆಗ ಮೇಲೆದ್ದು ಬರುವ ಪ್ರಶ್ನೆಗಳು ಕೂಡ ನಮ್ಮ ಕುರಿತೇ ಆಗಿರುತ್ತವೆ. ಇದೇ ಮನಸ್ಸಿನ ಪರಿಣಾಮ. ಕೆಲವೇ ಕ್ಷಣಗಳ ಹಿಂದೆ ಅನುಭವಿಸಿದ್ದಕ್ಕಿಂತ ತದ್ವಿರುದ್ಧ ಭಾವವನ್ನು ಅನುಭವಿಸುತ್ತಿರುತ್ತೇವೆ. ಆಳವಾದ ಪ್ರಜ್ಞೆ ಸಾಧಿಸಲು ತುಂಬ ಸಮಾಧಾನ ಮತ್ತು ಸಹನೆ ಬೇಕಾಗುತ್ತದೆ’ ಎಂದು ಹೇಳಿದರು. 

ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷ ಕೆ.ವಿ. ನಾಗರಾಜ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್‌ ಕುಮಾರ್, ನಗರಸಭೆ ಅಧ್ಯಕ್ಷ ಬಾಬು ಆನಂದರೆಡ್ಡಿ, ಉಪ ವಿಭಾಗಾಧಿಕಾರಿ ಎ.ಎನ್. ರಘುನಂದನ್ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು