ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿಬಿದನೂರು | ಬಾಡಿಗೆ ಕಟ್ಟಡದಲ್ಲಿವೆ 55 ಅಂಗನವಾಡಿ ಕೇಂದ್ರ

Published 25 ಅಕ್ಟೋಬರ್ 2023, 5:57 IST
Last Updated 25 ಅಕ್ಟೋಬರ್ 2023, 5:57 IST
ಅಕ್ಷರ ಗಾತ್ರ

ಗೌರಿಬಿದನೂರು: ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಮತ್ತು ಅವರ ಆರೋಗ್ಯಕ್ಕೆ ಪೂರಕವಾಗಿರುವ ಸ್ಥಳೀಯ ಅಂಗನವಾಡಿ‌ ಕೇಂದ್ರಗಳಿಗೆ ಮೂಲ ಸೌಕರ್ಯಗಳ ಕೊರತೆ ಜತೆಗೆ ಸ್ವಂತ ಕಟ್ಟಡಗಳಿಲ್ಲದೆ ಬಾಡಿಗೆ ಕಟ್ಟಡಗಳಲ್ಲಿ ನಡೆಸುವ ಸ್ಥಿತಿ ಇದೆ.

ತಾಲ್ಲೂಕಿನಲ್ಲಿ ಒಟ್ಟು 363 ಅಂಗನವಾಡಿ ಕೇಂದ್ರಗಳಿದ್ದು, ಇವುಗಳಲ್ಲಿ 258 ಕೇಂದ್ರಗಳು ಮಾತ್ರ ಸ್ವಂತ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಉಳಿದಂತೆ 55 ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು 51 ಕೇಂದ್ರಗಳ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿವೆ.

ನಗರ ವ್ಯಾಪ್ತಿಯಲ್ಲಿನ ವಿವಿಧ ವಾರ್ಡ್‌ಗಳಲ್ಲಿನ ಸುಮಾರು 23 ಕೇಂದ್ರಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ತಾಲ್ಲೂಕಿನ ಶಂಬೂಕನಗರ ಅಂಗನವಾಡಿ ಕೇಂದ್ರವು ಅತಿ ಹೆಚ್ಚು ಮಕ್ಕಳ ಸಂಖ್ಯೆ ಹೊಂದಿರುವ ಕೇಂದ್ರ. ಉಳಿದಂತೆ ಸುಮಾರು 96ಕ್ಕೂ ಹೆಚ್ಚು ಕೇಂದ್ರಗಳಲ್ಲಿ 10ಕ್ಕಿಂತ ಕಡಿಮೆ ಮಕ್ಕಳಿದ್ದಾರೆ ಎಂದು ಸಿಡಿಪಿಒ ಇಲಾಖೆ ಅಧಿಕಾರಿಗಳು ಮಾಹಿತಿ‌ ನೀಡುತ್ತಾರೆ.

ಸಾಕಷ್ಟು ಕೇಂದ್ರಗಳಲ್ಲಿ ಮಕ್ಕಳ ಆರೈಕೆ ಮತ್ತು ಕಲಿಕೆಗೆ ಅಗತ್ಯ ಸೌಕರ್ಯಗಳ ಕೊರತೆ ಕಾಡುತ್ತಿದೆ. ಉಳಿದಂತೆ ಕೆಲವು ಕೇಂದ್ರಗಳ ಸುತ್ತಲೂ ಸ್ವಚ್ಛತೆ ಮರೀಚಿಕೆಯಾಗಿದೆ. ಇನ್ನು ಕೆಲವೆಡೆ ಹಳೆಯ ಪಾಳುಬಿದ್ದ ಸರ್ಕಾರಿ ಕಟ್ಟಡ, ಸಮುದಾಯ ಭವನ ಮತ್ತು ಸರ್ಕಾರಿ‌ ಶಾಲಾ ಕಟ್ಟಡಗಳಲ್ಲಿ ಕೇಂದ್ರಗಳನ್ನು ನಡೆಸಲಾಗುತ್ತಿದೆ.

ಪ್ರತೀ ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿಯರು, ಬಾಣಂತಿಯರು ಮತ್ತು 7 ತಿಂಗಳಿನಿಂದ 6 ವರ್ಷದವರೆಗಿನ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಮೂಲಕ ಅವರ ಆರೋಗ್ಯ ಕಾಪಾಡುವುದು ಪ್ರಮುಖ ಜವಾಬ್ದಾರಿಯಾಗಿದೆ. ಮಕ್ಕಳ ಪೋಷಣೆ, ಕಲಿಕೆ, ಚುಚ್ಚು ಮದ್ದುಗಳು‌ ಮತ್ತು ಲಸಿಕೆಗಳ ಬಗ್ಗೆ ಜಾಗೃತಿ, ಗ್ರಾಮ ವ್ಯಾಪ್ತಿಯಲ್ಲಿ ನಡೆಯುವ ಮೂಢನಂಬಿಕೆ, ಕಂದಾಚಾರ ಮತ್ತು ಬಾಲ್ಯ ವಿವಾಹ ‌ನಿಯಂತ್ರಿಸುವುದು ಇವರ ಪ್ರಮುಖ ಕರ್ತವ್ಯವಾಗಿದೆ.

ತಾಲ್ಲೂಕಿನಲ್ಲಿರುವ 363 ಅಂಗನವಾಡಿ‌ ಕೇಂದ್ರಗಳಲ್ಲಿ 55 ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ಮತ್ತು 51 ಕಟ್ಟಡಗಳ ಕಾಮಗಾರಿ ಪ್ರಗತಿಯಲ್ಲಿದೆ. ಉಳಿದಂತೆ ಸ್ಥಳೀಯವಾಗಿ ಲಭ್ಯವಿರುವ ಸರ್ಕಾರಿ ಕಟ್ಟಡಗಳಲ್ಲಿ ನಡೆಸುತ್ತಿದ್ದೇವೆ. ಪ್ರಗತಿ ಹಂತದಲ್ಲಿರುವ ಕೇಂದ್ರಗಳು ಶೀಘ್ರದಲ್ಲೇ ಕಾರ್ಯಾರಂಭಗೊಳ್ಳಲಿವೆ ಎಂದು ಸಿಡಿಪಿಒ ಕೆ.ರವಿ ತಿಳಿಸಿದರು.

ತಾಲ್ಲೂಕಿನಲ್ಲಿ ಸುಮಾರು 72 ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು ಮಳೆ ಬಂದರೆ ಸೋರುತ್ತವೆ. ಈಚೆಗೆ ಇಲಾಖೆ ನೀಡಿದ ಮನವಿ ಮೇರೆಗೆ ಸರ್ಕಾರ 72 ಕೇಂದ್ರಗಳ ದುರಸ್ತಿಗೆ ಅನುದಾನ ಬಿಡುಗಡೆ ಮಾಡಿದೆ ಎಂದು ಇಲಾಖೆಯ ಮೇಲ್ವಿಚಾರಕರೊಬ್ಬರು ಹೇಳಿದರು.

ಅಂಗನವಾಡಿ ‌ಕೇಂದ್ರ ಸುತ್ತ ಅನೈರ್ಮಲ್ಯ: ತಾಲ್ಲೂಕಿನಲ್ಲಿನ 363 ಅಂಗನವಾಡಿ ಕೇಂದ್ರಗಳಲ್ಲಿ ಬಹುತೇಕ ಕೇಂದ್ರಗಳ ಸಮೀಪದಲ್ಲಿನ ಚರಂಡಿಗಳು ತ್ಯಾಜ್ಯಗಳಿಂದ ತುಂಬಿ ದುರ್ನಾತ ಬೀರುತ್ತಿವೆ.

ಗೌರಿಬಿದನೂರು ನಗರದ ಹೊಸಪೇಟೆ ಅಂಗನವಾಡಿ‌ ಕೇಂದ್ರದ ಸಮೀಪದಲ್ಲಿನ ತ್ಯಾಜ್ಯ
ಗೌರಿಬಿದನೂರು ನಗರದ ಹೊಸಪೇಟೆ ಅಂಗನವಾಡಿ‌ ಕೇಂದ್ರದ ಸಮೀಪದಲ್ಲಿನ ತ್ಯಾಜ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT