ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಉದ್ಯೋಗಾಧಾರಿತ ತರಬೇತಿ ಕೇಂದ್ರ ತೆರೆಯಲು ಚಿಂತನೆ

ಜವಳಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ಪ್ರಗತಿ ಪರಿಶೀಲಿಸಿದ ಸಚಿವ ಶ್ರೀಮಂತ ಬಾಳಸಾಹೇಬ ಪಾಟೀಲ
Last Updated 5 ಆಗಸ್ಟ್ 2020, 13:51 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಮುಂದಿನ ದಿನಗಳಲ್ಲಿ ಪ್ರತಿ ಜಿಲ್ಲೆಯಲ್ಲಿ ಉದ್ಯೋಗ ಆಧಾರಿತ ಶಿಕ್ಷಣ ತರಬೇತಿ ಕೇಂದ್ರ ತೆರೆಯಲು ಚಿಂತನೆ ನಡೆಸಲಾಗುತ್ತಿದೆ’ ಎಂದು ಜವಳಿ ಮತ್ತು ಕೈಮಗ್ಗ ಹಾಗೂ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಶ್ರೀಮಂತ ಬಾಳಸಾಹೇಬ ಪಾಟೀಲ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜವಳಿ ಹಾಗೂ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಪ್ರಗತಿ ಪರಿಶಿಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ನೇಕಾರ ಸಮ್ಮಾನ್ ಯೋಜನೆ ಅಡಿ ನೇಕಾರರಿಗೆ ಕೋವಿಡ್‌ ಸಂಕಷ್ಟ ಪರಿಹಾರವಾಗಿ ₹2,000 ಆರ್ಥಿಕ ನೆರವು ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ರಾಜ್ಯಾದ್ಯಂತ 54 ಸಾವಿರ ಕೈ ಮಗ್ಗ ನೇಕಾರರಿದ್ದಾರೆ. ಈ ಪೈಕಿ 41 ಸಾವಿರ ಅರ್ಜಿಗಳು ಬಂದಿವೆ. ಅವುಗಳಲ್ಲಿ 39 ಸಾವಿರ ನೇಕಾರರ ಖಾತೆಗಳಿಗೆ ಈಗಾಗಲೇ ರಾಜ್ಯ ಸರ್ಕಾರ ₹7.80 ಕೋಟಿ ಜಮೆ ಮಾಡಿದೆ’ ಎಂದು ಹೇಳಿದರು.

‘ರಾಜ್ಯದಲ್ಲಿ 1.25 ಲಕ್ಷ ವಿದ್ಯುತ್ ಆಧಾರಿತ ಕೈಮಗ್ಗ ನೇಕಾರಿದ್ದಾರೆ. ಅವರಲ್ಲಿ ಕೇವಲ 47 ಸಾವಿರ ಜನರು ಮಾತ್ರ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಆ ಪೈಕಿ 42 ಸಾವಿರ ಜನರ ಖಾತೆಗಳಿಗೆ ₹6.44 ಕೋಟಿ ಆರ್ಥಿಕ ನೆರವು ಜಮೆ ಮಾಡಲಾಗಿದೆ’ ಎಂದು ತಿಳಿಸಿದರು.

ಜವಳಿ ಮತ್ತು ಕೈಮಗ್ಗ ಇಲಾಖೆಯ ಉಪ ನಿರ್ದೇಶಕ ಶಿವಕುಮಾರ್ ಮಾತನಾಡಿ, ‘ಜಿಲ್ಲೆಯಲ್ಲಿ 790 ಕೈಮಗ್ಗಗಳು, 1,342 ವಿದ್ಯುತ್ ಕೈ ಮಗ್ಗಗಳು, 11 ಜವಳಿ ಘಟಕಗಳು, 12 ಕೈಮಗ್ಗ ಸಹಕಾರಿ ಸಂಘಗಳು, ಜವಳಿ ನೀತಿ ಅಡಿ 6 ತರಬೇತಿ ಕೇಂದ್ರಗಳಿವೆ’ ಎಂದು ಹೇಳಿದರು.

‘ಜಿಲ್ಲೆಯ ವ್ಯಾಪ್ತಿಯಲ್ಲಿ 1,000 ರೇಷ್ಮೆ ನೂಲು ಬಿಚ್ಚಾಣಿಕೆ ಘಟಕಗಳಿವೆ. ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಪ್ರತಿ ದಿನ 45 ರಿಂದ 50 ಟನ್ ರೇಷ್ಮೆಗೂಡು, ನಿತ್ಯ 5,000 ಕೆ.ಜಿ ರೇಷ್ಮೆ ನೂಲು ಉತ್ಪಾದನೆಯಾಗುತ್ತಿದೆ. ಜಿಲ್ಲೆಯಲ್ಲಿ ಈವರೆಗೆ 882 ನೇಕಾರರು ಆರ್ಥಿಕ ನೆರವಿಗೆ ಅರ್ಜಿ ಸಲ್ಲಿಸಿದ್ದು, ಆ ಪೈಕಿ 507 ಜನರಿಗೆ ಆರ್ಥಿಕ ನೆರವು ತಲುಪಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ, ಜಿಲ್ಲಾಧಿಕಾರಿ ಆರ್.ಲತಾ, ಕೈ ಮಗ್ಗ ಜವಳಿ ಇಲಾಖೆ ಆಯುಕ್ತ ಉಪೇಂದ್ರ ಪ್ರತಾಪ್ ಸಿಂಗ್, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ನಿರ್ದೇಶಕ ಪಾಷಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಫೌಜಿಯಾ ತರನ್ನುಮ್, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸಿ.ರಾಜಾಕಾಂತ್, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಮುನಿಯಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ ಮಿಥುನ್ ಕುಮಾರ್, ಜಿಲ್ಲಾ ಅಲ್ಪ ಸಂಖ್ಯಾತರ ಇಲಾಖಾಧಿಕಾರಿ ಶರೀಫ್ ಸಭೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT