ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿಕ್ರಮಣ ಆರೋಪ: ಶಿಲುಬೆ ತೆರವಿಗೆ ಆಗ್ರಹ

ಚಿಕ್ಕಬಳ್ಳಾಪುರ ತಾಲ್ಲೂಕಿನ ಸೋಸೆಪಾಳ್ಯ ಮತ್ತು ಗೌರಿಬಿದನೂರು ತಾಲ್ಲೂಕಿನ ಕಲ್ಲಿನಾಯಕನಹಳ್ಳಿಯಲ್ಲಿ ಗೋಮಾಳ ಕಬಳಿಕೆ ಆರೋಪ
Last Updated 16 ಜೂನ್ 2020, 13:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಚಿಕ್ಕಬಳ್ಳಾಪುರ ತಾಲ್ಲೂಕಿನ ಅರಿಕೆರೆ ಮತ್ತು ಗೌರಿಬಿದನೂರು ತಾಲ್ಲೂಕಿನ ಕಲ್ಲಿನಾಯಕನಹಳ್ಳಿಯಲ್ಲಿ ಕ್ರೈಸ್ತ ಮಿಷನರಿಗಳು ಕಬಳಿಕೆ ಮಾಡಿರುವ ಸರ್ಕಾರಿ ಗೋಮಾಳ ಜಾಗಗಳ ಒತ್ತುವರಿ ತೆರವಿಗೆ ಜಿಲ್ಲಾಡಳಿತ ಕೂಡಲೇ ಕ್ರಮಕೈಗೊಳ್ಳಬೇಕು’ ಎಂದು ಹಿಂದೂ ಜಾಗರಣ ವೇದಿಕೆ ತುಮಕೂರು ವಿಭಾಗದ ಪ್ರಧಾನ ಕಾರ್ಯದರ್ಶಿ ಜಿ.ಮುನೀಂದ್ರ ಒತ್ತಾಯಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅರಿಕೆರೆ ಗ್ರಾಮದ ಮಜರೆ ಗ್ರಾಮಸೂಸೇಪಾಳ್ಯದ ಸರ್ವೇ ನಂಬರ್ 10 ರಲ್ಲಿರುವ 173 ಗೋಮಾಳದ ಬೆಟ್ಟದಲ್ಲಿ ಕ್ರೈಸ್ತ ಮಿಷನರಿ ಸುಮಾರು 170 ಎಕರೆಯಲ್ಲಿ ಅಕ್ರಮವಾಗಿ ಪ್ರವೇಶ ಮಾಡಿ ಅಲ್ಲಲ್ಲಿ ಶಿಲುಬೆ ನೆಟ್ಟು, ಬೆಟ್ಟದ ಮೇಲೆ ದೊಡ್ಡ ಶಿಬುಲು ನೆಟ್ಟು ಗೋಮಾಳ ಕಬಳಿಕೆ ಹುನ್ನಾರ ನಡೆಸಿದೆ’ ಎಂದು ಆರೋಪಿಸಿದರು.

‘ಕಲ್ಲಿನಾಯಕನಹಳ್ಳಿಯ ಸರ್ವೇ ನಂಬರ್ 106 ರಲ್ಲಿರುವ 42 ಎಕರೆ 8 ಗುಂಟೆ ಗೋಮಾಳ ಪ್ರದೇಶದಲ್ಲಿ ಕೂಡಕ್ರೈಸ್ತ ಮಿಷನರಿ ಅತಿಕ್ರಮಣ ಮಾಡಿದೆ. ಈ ಎರಡು ಪ್ರದೇಶಗಳಲ್ಲಿ ಬೃಹತ್ ಗಾತ್ರದ ಶಿಲುಬೆಗಳನ್ನು ಸ್ಥಾಪಿಸಿ, ಅಲ್ಲಿ ಪ್ರಾರ್ಥನಾ ಕೂಟಗಳನ್ನು ಏರ್ಪಡಿಸುವ ಮೂಲಕ ಅನ್ಯ ಧರ್ಮಗಳ ಮುಗ್ಧ ಜನರನ್ನು ಮತಾಂತರಿಸುವ ಹುನ್ನಾರ ನಡೆದಿದೆ’ ಎಂದು ಆಪಾದಿಸಿದರು.

‘ಅರಿಕೆರೆ ಮತ್ತು ಕಲ್ಲಿನಾಯಕನಹಳ್ಳಿಯಲ್ಲಿ ನಡೆದ ಅತಿಕ್ರಮಣದ ಬಗ್ಗೆ ವೇದಿಕೆ ಕಾರ್ಯಕರ್ತರಾದ ರಾಘವೇಂದ್ರ ಜೆಟ್ಟಿ, ಆರ್‌.ಡಿ ಸ್ವಾಗತ್, ಕೆ.ಎ.ಲೋಕೇಶ್‌ ಎಂಬುವರು ಸಂಬಂಧಿಸಿದ ತಹಶೀಲ್ದಾರ್, ಜತೆಗೆ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರಿಗೆ ಈಗಾಗಲೇ ಲಿಖಿತ ದೂರು ನೀಡಿದ್ದಾರೆ’ ಎಂದು ತಿಳಿಸಿದರು.

‘ಮುಗ್ಧ ಜನರನ್ನು ಮತಾಂತರಿಸುವುದು ಮಾತ್ರವಲ್ಲದೆ ಸರ್ಕಾರಿ ಜಾಗದಲ್ಲಿ ಸಿಕ್ಕ ಸಿಕ್ಕಲ್ಲಿ ಸಿಲುಬೆಗಳನ್ನು ನೆಟ್ಟು ಅತಿಕ್ರಮಣ ಮಾಡಿಕೊಳ್ಳಲಾಗುತ್ತಿದೆ. ಸೂಸೇಪಾಳ್ಯ ಬೆಟ್ಟದ ಬಳಿ ಇರುವ ಪುರಾತನ ಆಂಜನೇಯ ಸ್ವಾಮಿ ದೇವಾಲಯದ ಬಳಿ ಉದ್ದೇಶಪೂರ್ವಕವಾಗಿಯೇ ಗಲೀಜು ಮಾಡಲಾಗುತ್ತಿದೆ’ ಎಂದು ಹೇಳಿದರು.

‘ಕ್ರೈಸ್ತ ಮಿಷನರಿಗಳು ಕಬಳಿಕೆ ಮಾಡಿರುವ ಎರಡು ಗೋಮಾಳಗಳಲ್ಲಿ ಸ್ಥಾಪಿಸಿರುವ ಶಿಲುಬೆಗಳನ್ನು ಜಿಲ್ಲಾಡಳಿತ ಕೂಡಲೇ ತೆರವುಗೊಳಿಸಿ ಆ ಜಾಗಗಳನ್ನು ಗೋಮಾಳವನ್ನಾಗಿ ಉಳಿಸಿಕೊಳ್ಳಲು ಕ್ರಮಕೈಗೊಳ್ಳಬೇಕು. ತೆರವು ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ಬೆರಸಬಾರದು. ತೆರವು ಕಾರ್ಯ ನಡೆಯದಿದ್ದರೆ ಮುಂದಾಗುವ ಅನಾಹುತಗಳಿಗೆ ಜಿಲ್ಲಾಡಳಿತವೇ ಹೊಣೆಯಾಗುತ್ತದೆ’ ಎಂದರು.

‘ಕನಕಪುರ ತಾಲ್ಲೂಕಿನ ಹಾರೋಬೆಲೆ ಬಳಿಯ ಮುನೇಶ್ವರ ಸ್ವಾಮಿ ಬೆಟ್ಟದ ಮಾದರಿಯಲ್ಲಿಯೇ ಇಲ್ಲೂ ಕ್ರೈಸ್ತ ಮಿಷನರಿಯ ಭೂಕಬಳಿಕೆ ಸಂಚು ಸ್ಪಷ್ಟವಾಗಿ ಗೋಚರಿಸುತ್ತಿದೆ. ಬೆಟ್ಟದಲ್ಲಿ ಧಾರ್ಮಿಕ ಆಚರಣೆಗೆ ಜಿಲ್ಲಾಡಳಿತ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು. ಕೂಡಲೇ ಒತ್ತುವರಿ ತೆರವುಗೊಳಿಸಬೇಕು. ಈ ವಿಚಾರದಲ್ಲಿ ಹಿಂದೂ ಪರ ಸಂಘಟನೆಗಳ ಸಹಯೋಗದಲ್ಲಿ ಹೋರಾಟ ರೂಪಿಸಲಾಗುತ್ತಿದೆ’ ಎಂದರು.

ಹಿಂದೂ ಜಾಗರಣ ವೇದಿಕೆಯ ಗೌರಿಬಿದನೂರು ತಾಲ್ಲೂಕು ಘಟಕದ ಅಧ್ಯಕ್ಷ ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಸುಧಾಕರ್, ಕಾರ್ಯಕರ್ತರಾದ ರಾಘವೇಂದ್ರ ಜೆಟ್ಟಿ, ಮಂಜುನಾಥ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT