ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯಾಣಿಕರಿಗೆ ಕಂಟಕ ಅವೈಜ್ಞಾನಿಕ ಫುಟ್‌ಪಾತ್ ಕಾಮಗಾರಿ

Published 3 ನವೆಂಬರ್ 2023, 5:00 IST
Last Updated 3 ನವೆಂಬರ್ 2023, 5:00 IST
ಅಕ್ಷರ ಗಾತ್ರ

ಗೌರಿಬಿದನೂರು: ನಗರ ವ್ಯಾಪ್ತಿಯಲ್ಲಿನ ಮುಖ್ಯ ರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆಯ ರಸ್ತೆಗೆ ಎರಡೂ ಬದಿಯಲ್ಲಿ ನಗರಸಭೆ ಮತ್ತು ಲೋಕೋಪಯೋಗಿ ಇಲಾಖೆಯ ಅನುದಾನದಡಿ ನಿರ್ಮಾಣವಾಗಿರುವ ಫುಟ್‌ಪಾತ್ ಕಾಮಗಾರಿಗಳು ಪ್ರಯಾಣಿಕರಿಗೆ ಕಂಟಕವಾಗಿವೆ.

ನಗರದ ಬಿ.ಎಚ್. ರಸ್ತೆಯು ತಾಯಿ‌ ಮತ್ತು ಮಕ್ಕಳ ಆಸ್ಪತ್ರೆಯಿಂದ ಅಯ್ಯಪ್ಪಸ್ವಾಮಿ ದೇವಾಲಯದ ವರೆಗೆ ದಶಕದ ಹಿಂದೆ ರಸ್ತೆ ಅಗಲೀಕರಣ ಮಾಡಿ ಹಂತಹಂತವಾಗಿ ವಿವಿಧ ಅನುದಾನದಡಿಯಲ್ಲಿ ರಸ್ತೆ ಮತ್ತು ಅದರ ಎರಡು ಬದಿಯಲ್ಲಿನ ಫುಟ್‌ಪಾತ್ ಅಭಿವೃದ್ಧಿ ಪಡಿಸಲಾಗುತ್ತಿದೆ. ಆದರೆ ನಾಗರೀಕರು ಮತ್ತು ಪ್ರಯಾಣಿಕರಿಗೆ ಅನುಕೂಲವಾಗಬೇಕಾಗಿರುವ ಈ ರಸ್ತೆಯ ಎರಡೂ‌ ಬದಿಯಲ್ಲಿನ ಫುಟ್‌ಪಾತ್ ದಾರಿಯು ಸಾರ್ವಜನಿಕರಿಗೆ ತೀವ್ರ ಸಂಕಷ್ಟ ನೀಡುತ್ತಿದೆ.

ಸುಮಾರು 2 ಕಿ.ಮೀ ಗೂ ಅಧಿಕ ವ್ಯಾಪ್ತಿ ಇರುವ ಈ ಮುಖ್ಯ ರಸ್ತೆಯ ಅಗಲೀಕರಣದಲ್ಲಿ ಲೋಕೋಪಯೋಗಿ ಇಲಾಖೆ ಸಾಕಷ್ಟು ಲೋಪ ಮಾಡಿದೆ. ಅದರ ಪರಿಣಾಮ ಫುಟ್‌ಪಾತ್ ಕಾಮಗಾರಿಗೆ ಎದುರಾಗಿದೆ. ಆದರೂ ಕೂಡ ಗುತ್ತಿಗೆದಾರರು ಪ್ರಯಾಣಿಕರ ಮತ್ತು ನಾಗರೀಕರ ಹಿತವನ್ನು ಚಿಂತಿಸದ ಅವೈಜ್ಞಾನಿಕವಾಗಿ ಫುಟ್‌ಪಾತ್ ರಸ್ತೆಯನ್ನು ನಿರ್ಮಾಣ ಮಾಡುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.

ಕಳೆದ ನಾಲ್ಕೈದು ವರ್ಷಗಳಿಂದಲೂ ಕೂಡ ರಸ್ತೆಯ ಎರಡೂ ಬದಿಯಲ್ಲಿ ಫುಟ್‌ಪಾತ್ ಕಾಮಗಾರಿಗಳು ನಡೆಯುತ್ತಲೇ ಇವೆ. ಆದರೂ ಕೂಡ ಈ ಹಿಂದೆ ನಡೆದ ಕಾಮಗಾರಿಗಳು ಈಗಾಗಲೇ ಅಲ್ಲಲ್ಲಿ ಕಿತ್ತು ಗುಂಡಿಬಿದ್ದಿವೆ. ಅದರ ನಡುವೆ ಕೇಬಲ್ ಅಳವಡಿಸಿರುವ ಜಾಗಗಳು ಕುಸಿದಿದ್ದು ಅಪಾಯದ ಅಂಚಿನಲ್ಲಿಯೇ ನಾಗರೀಕರು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಯ ಎರಡೂ ಕಡೆಗಳಲ್ಲಿನ ಫುಟ್‌ಪಾತ್ ಮಾರ್ಗವನ್ನು ಅವಲೋಕಿಸಿ ನೋಡಿದರೆ ಕೆಲವೆಡೆ 5-6 ಅಡಿಗಳಷ್ಟಿದ್ದು, ಕೆಲವೆಡೆ 8-10 ಇಂಚಿನಷ್ಟು ಸ್ಥಳಾವಕಾಶವಿದೆ. ಇದರಿಂದಾಗಿ ನಾಗರೀಕರ ನೆಮ್ಮದಿಯ ಓಡಾಟಕ್ಕೆ ಸಾಧ್ಯವಾಗುತ್ತಿಲ್ಲ.

ಇದರ ಜತೆಗೆ ಫುಟ್‌ಪಾತ್ ಮಾರ್ಗಕ್ಕೆ ರಕ್ಷಣೆ ನೀಡುವ ಸಲುವಾಗಿ ಅಳವಡಿಸಿರುವ ಬಹುತೇಕ ಗ್ರಿಲ್‌ಗಳು ಗುಜರಿ ಸೇರಿವೆ. ಅಂಗಡಿ ಮಾಲೀಕರು ನಿರ್ಭೀತಿಯಿಂದ ಗ್ರಿಲ್  ಕತ್ತರಿಸಿದ್ದಾರೆ. ರಸ್ತೆಯ ಎರಡೂ ಬದಿಯಲ್ಲಿನ ಫುಟ್‌ಪಾತ್ ರಸ್ತೆಯ ಮೇಲೆಯೇ ಅಂಗಡಿ ಮಾಲೀಕರು ತಮ್ಮ ವ್ಯಾಪಾರದ ವಸ್ತುಗಳನ್ನು ಅಳವಡಿಸಿರುವುದು ನಾಗರೀಕರು, ಮಹಿಳೆಯರು, ಮಕ್ಕಳು ಮತ್ತು ವಯೋವೃದ್ಧರ ಓಡಾಟಕ್ಕೆ ತೀವ್ರ ತೊಂದರೆಯಾಗುತ್ತಿವೆ.

ಕೆಲವೆಡೆ ಲೋಕೋಪಯೋಗಿ ಮತ್ತು‌ ನಗರಸಭೆಯ ವಿಶೇಷ ಅನುದಾನದಡಿಯಲ್ಲಿ ನಿರ್ಮಾಣ ಮಾಡಿರುವ ರಸ್ತೆ ಮತ್ತು ಫುಟ್‌ಪಾತ್ ಮಾರ್ಗಕ್ಕೆ ಅಂಗಡಿ ಮತ್ತು ವಾಣಿಜ್ಯ ನಿವೇಶನಗಳ ಮಾಲೀಕರು ಹೊಸದಾಗಿ ಟೈಲ್ಸ್‌ಗಳನ್ನು ಅಳವಡಿಸುವ ಮೂಲಕ ಸರ್ಕಾರದ ಆಸ್ತಿಗಳಿಗೆ ಹಾನಿ ಮಾಡಿದ್ದಾರೆ ಎನ್ನುವ ಆರೋಪಗಳು ಸಾರ್ವಜನಿಕ ವಲಯದಲ್ಲಿ ದಟ್ಟವಾಗಿ ಕೇಳಿಬರುತ್ತಿವೆ.

ಮುರಿದಿರುವ ಕಬ್ಬಿಣದ ‌ಗ್ರಿಲ್
ಮುರಿದಿರುವ ಕಬ್ಬಿಣದ ‌ಗ್ರಿಲ್

ಸ್ಥಳೀಯರಿಗೆ ತೊಂದರೆ

ನಗರದ ಬಿ.ಎಚ್. ರಸ್ತೆಯ ಎರಡೂ ಬದಿಯಲ್ಲಿನ ಫುಟ್‌ಪಾತ್ ಮಾರ್ಗವು ಅವೈಜ್ಞಾನಿಕವಾಗಿದ್ದು ಸ್ಥಳೀಯರಿಗೆ ತೀವ್ರ ತೊಂದರೆಯಾಗುತ್ತಿದೆ. ಇದರ ಬಗ್ಗೆ ಅನೇಕ ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದೇವೆ. ವ್ಯವಸ್ಥೆ ಇದೇ ರೀತಿ ಮುಂದುವರಿದರೆ ನಗರದ ರಸ್ತೆಗಳು ಪ್ರಯಾಣಿಕರು‌ ಮತ್ತು ನಾಗರೀಕರಿಗೆ ಕಂಟಕವಾಗಲಿವೆ ನಾಗೇಶ್ ನಗರ ನಿವಾಸಿ ಓಡಾಡುವುದೇ ಸಮಸ್ಯೆ ನಗರದ ಮುಖ್ಯ ರಸ್ತೆಯ ಎರಡೂ ಬದಿಗಳಲ್ಲಿ ಓಡಾಡುವುದೇ ಒಂದು ದೊಡ್ಡ ಸಮಸ್ಯೆ. ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಫುಟ್‌ಪಾತ್ ಮಾರ್ಗದಲ್ಲೆ ವಿದ್ಯುತ್ ‌ಕೇಬಲ್ ಕಳಚಿದ ಗ್ರಿಲ್ ಕಬ್ಬಿಣದ ಕಂಬಿಗಳು ಅಂಗಡಿ ವಸ್ತುಗಳು ನಿರುಪಯುಕ್ತ ತ್ಯಾಜ್ಯ ಎಲ್ಲವೂ ಸಾರ್ವಜನಿಕರ ನೆಮ್ಮದಿಯ ಓಡಾಟಕ್ಕೆ ಕಂಟಕವಾಗಿವೆ. ಕಲ್ಪನಾ ಸ್ಥಳೀಯ ‌ನಿವಾಸಿ ನಗರಸಭೆಗೆ ಹಸ್ತಾಂತರ ನಗರದ ಮುಖ್ಯ ರಸ್ತೆಯಲ್ಲಿ ಪ್ರಸ್ತುತ ನಡೆಯುತ್ತಿರುವ ಫುಟ್‌ಪಾತ್ ಮಾರ್ಗದ ಕಾಮಗಾರಿ ನಗರಸಭೆಯ ಅನುದಾನದಡಿ ನಿರ್ಮಾಣವಾಗುತ್ತಿದೆ. ಲೋಕೋಪಯೋಗಿ ಇಲಾಖೆಯಿಂದ ಮಾಡಿರುವ ಕಾಮಗಾರಿಗಳು ವೈಜ್ಞಾನಿಕವಾಗಿ ಮಾಡಿ ನಗರಸಭೆಗೆ ಹಸ್ತಾಂತರ ಮಾಡಲಾಗಿದೆ ಪ್ರಕಾಶ್ ಎಇಇ ಲೋಕೋಪಯೋಗಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT