ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿಬಿದನೂರು: ಬಳಕೆಯಾಗದ ಭವನಗಳು

ಮತ ಬ್ಯಾಂಕ್‌ಗಾಗಿ ರಾಜಕೀಯ ನಾಯಕರಿಂದ ಸಮುದಾಯ‌ ಭವನ ನಿರ್ಮಾಣ
Last Updated 4 ಫೆಬ್ರುವರಿ 2023, 6:11 IST
ಅಕ್ಷರ ಗಾತ್ರ

ಗೌರಿಬಿದನೂರು: ನಗರದ ಸಮೀಪವಿರುವ ಮಾದನಹಳ್ಳಿ ಕೆರೆಯಂಗಳದಲ್ಲಿ ದಶಕಗಳಿಂದಲೂ ಸರ್ಕಾರದ‌ ಅನುದಾನದಲ್ಲಿ ಸಾಕಷ್ಟು ಸರ್ಕಾರಿ ಕಟ್ಟಡಗಳು ಮತ್ತು‌ ವಿವಿಧ ಸಮುದಾಯಗಳ ಭವನಗಳು ನಿರ್ಮಾಣವಾಗುತ್ತಿದ್ದರೂ, ಅವುಗಳ‌ ಬಳಕೆ ಮಾತ್ರ ಸಮರ್ಪಕವಾಗಿ ಜನತೆಗೆ ಸಿಗುತ್ತಿಲ್ಲ. ಆದರೆ ಸಮುದಾಯಗಳ ಓಲೈಕೆ ಮತ್ತು ಮತಬ್ಯಾಂಕ್ ಭದ್ರಗೊಳಿಸಲು ಮತ್ತೆ ಭವನಗಳ ನಿರ್ಮಾಣಕ್ಕೆ ಶಾಸಕರು ಕೋಟ್ಯಂತರ ರೂಪಾಯಿ ಅನುದಾನ ನೀಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಮಾದನಹಳ್ಳಿ‌ ಕೆರೆಯಂಗಳದಲ್ಲಿ ದಶಕಗಳಿಂದಲೂ ‌ಒಂದಲ್ಲಾ ಒಂದು ಸರ್ಕಾರಿ ಕಟ್ಟಡಗಳು ತಲೆ ಎತ್ತುತ್ತಿವೆ. ಇದರಿಂದಾಗಿ ಸರ್ಕಾರದ ಕೋಟ್ಯಂತರ ‌ರೂಪಾಯಿ ಅನುದಾನವು ಬಳಕೆಯಾಗುತ್ತಿದೆ. ಆದರೆ ನಿರ್ಮಾಣವಾದ ಸರ್ಕಾರಿ ಕಟ್ಟಡಗಳು‌ ಮಾತ್ರ ನಿರೀಕ್ಷಿತ ‌ಮಟ್ಟದಲ್ಲಿ‌ ಬಳಕೆಯಾಗುತ್ತಿಲ್ಲ ಎಂಬುದು ನಾಗರಿಕರ ಆರೋಪ.

ಪ್ರಸ್ತುತ ಕೆರೆಯಂಗಳದಲ್ಲಿ ಹಿಂದುಳಿದ ವರ್ಗಗಳ ಇಲಾಖೆ ಅಡಿಯಲ್ಲಿ ಸುಮಾರು ನಾಲ್ಕು ಪ್ರತ್ಯೇಕ ವಸತಿ ನಿಲಯಗಳಿವೆ. ಸಿಪಿಐ ಮತ್ತು ಗ್ರಾಮಾಂತರ ಠಾಣೆಯ ಕಚೇರಿಗಳು ಹಾಗೂ ಪೊಲೀಸರ ವಸತಿ ಗೃಹಗಳಿವೆ. ಗೃಹ ರಕ್ಷಕ ಸಿಬ್ಬಂದಿಯ‌ ಕಚೇರಿಯಿದೆ. ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬಾಲಕ ಮತ್ತು‌ ಬಾಲಕಿಯರ ವಸತಿ‌ ನಿಲಯಗಳು ಕಾರ್ಯ ನಿರ್ವಹಿಸುತ್ತಿವೆ. ಮೀನುಗಾರಿಕೆ ಇಲಾಖೆಯಿದೆ. ಗುರುಭವನ‌ ನಿರ್ಮಾಣ ಹಂತದಲ್ಲಿದೆ.

ಸ್ಥಳೀಯ ಶಾಸಕರು ಹಾಗೂ ಜನಪ್ರತಿನಿಧಿಗಳು ಸಮುದಾಯಗಳ ಮತ ಓಲೈಕೆಗಾಗಿ ಕೆರೆಯಂಗಳದಲ್ಲಿನ ಭೂಮಿಯನ್ನು ಸಂಬಂಧಪಟ್ಟ ಇಲಾಖೆಯ ವತಿಯಿಂದ ಮಂಜೂರು ಮಾಡಿಸಿ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನವನ್ನು ನೀಡುವ ಮೂಲಕ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡುತ್ತಿದ್ದಾರೆ. ಆದರೆ ಅಧಿಕಾರಿಗಳ ಮತ್ತು ಸಮುದಾಯದ ಮುಖಂಡರುಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಅವುಗಳು ಅನುಷ್ಟಾನಗೊಳ್ಳದೆ ಹಳ್ಳ ಹಿಡಿಯುತ್ತಿವೆ.

ಪ್ರಸ್ತುತ ‌ಕೆರೆಯಂಗಳದಲ್ಲಿ ವಾಲ್ಮೀಕಿ ‌ಭವನ, ಕನಕ ಭವನಗಳು ನಿರ್ಮಾಣವಾಗಿದ್ದು, ವರ್ಷದಲ್ಲಿ ಒಂದೆರಡು ದಿನಗಳು‌ ಮಾತ್ರ ಬಳಕೆಯಾಗುತ್ತಿವೆ. ಉಳಿದಂತೆ ಭೋವಿ‌ ಸಮುದಾಯ, ಸವಿತಾ‌ ಸಮುದಾಯ, ಯಾದವ ಸಮುದಾಯ ಸೇರಿದಂತೆ ‌ಇತರ ಸಮುದಾಯಗಳ ಭವನ ನಿರ್ಮಾಣಕ್ಕೆ ವರ್ಷದ ಹಿಂದೆಯೇ ಭೂಮಿ‌ಪೂಜೆ ಮಾಡಲಾಗಿದ್ದು, ಕಟ್ಟಡ ಕಾಮಗಾರಿಗಳು ಇನ್ನೂ ಆರಂಭವಾಗಿಲ್ಲ.

ಈ ನಡುವೆ ಮರಾಠ, ವಿಶ್ವಕರ್ಮ, ಸವಿತಾ, ಕುಂಬಾರ, ಯಾದವ, ಮಡಿವಾಳ, ಕನಕ ಭವನಗಳ ನಿರ್ಮಾಣಕ್ಕೆ ಸುಮಾರು ₹1.35 ಕೋಟಿ ಅನುದಾನ ಬಿಡುಗಡೆ ಮಾಡಿ ಭೂಮಿ ಪೂಜೆ ಮಾಡಲು ಸಿದ್ಧತೆ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ಇದು ಶಾಸಕರು ಚುನಾವಣಾ ಪೂರ್ವದಲ್ಲಿ ಆಯಾ ಸಮುದಾಯಗಳ ಮತ ಓಲೈಕೆಯ ಕಸರತ್ತು ಎನ್ನುವ ಚರ್ಚೆಗಳು ಎಲ್ಲೆಡೆ ಕೇಳಿ ಬರುತ್ತಿವೆ.

‘ತಾಲ್ಲೂಕಿನಲ್ಲಿ ಸುಮಾರು 20 ಸಾವಿರಕ್ಕೂ ‌ಹೆಚ್ಚು‌ ನಮ್ಮ ಸಮುದಾಯದವರಿದ್ದು, ಅನೇಕ ಬಾರಿ‌ ಸ್ಥಳೀಯ ಶಾಸಕರಿಗೆ ನಿವೇಶನ, ಭವನ ನಿರ್ಮಾಣಕ್ಕೆ ‌ಅನುದಾನ ನೀಡುವಂತೆ ಮನವಿ ನೀಡಿದ್ದೇವೆ. ಆದರೆ ಇದುವರೆಗೆ ಅದು ಸಾಕಾರಗೊಳ್ಳದಿರುವುದು ದುರ್ದೈವ. ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯೇ ಇದಕ್ಕೆ ಕಾರಣ’ ಎನ್ನುತ್ತಾರೆ ಹಿಂದೂ ‌ಸಾದರ ಸಮುದಾಯದ ಅಧ್ಯಕ್ಷ ಸಿ.ಎಚ್.ದೇವರಾಜಯ್ಯ.

ವರ್ಷಕ್ಕೆ ಒಂದೆರಡು ಬಾರಿ ಮಾತ್ರ ಬಳಕೆ

ಹಿಂದುಳಿದ ವರ್ಗಗಳ ‌ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ ವಿವಿಧ ಸಮುದಾಯಗಳಿಗೆ ಪ್ರತ್ಯೇಕ ನಿವೇಶನಗಳನ್ನು ನೀಡಲಾಗಿದ್ದು, ಈ ಜಾಗಗಳಲ್ಲಿ ಸುಸಜ್ಜಿತವಾದ ಸಮುದಾಯಗಳನ್ನು ನಿರ್ಮಿಸಲಾಗಿದೆ. ಆದರೆ ಅವುಗಳು ವರ್ಷದಲ್ಲಿ ಒಂದೆರಡು ಬಾರಿ‌ ಮಾತ್ರ ಬಳಕೆಯಾಗುತ್ತಿದ್ದು, ಉಳಿದಂತೆ ಆ ಬಳಿಕ ಯಾವುದೇ ಬಳಕೆಗೆ ಬಾರದೆ, ನಿಷ್ಕ್ರಿಯವಾಗಿರುತ್ತವೆ. ಸರ್ಕಾರವು ಆಯಾ ಸಮುದಾಯಗಳಿಗೆ ನಿರಂತರವಾಗಿ ಬಳಕೆಯಾಗಲಿ ಎಂಬ ದೃಷ್ಟಿಯಿಂದ ನಿವೇಶನದ ಜತೆಗೆ ಲಕ್ಷಾಂತರ ರೂಪಾಯಿ ಅನುದಾನ ನೀಡುತ್ತಿದ್ದರೂ, ಅವುಗಳು ಸಮರ್ಪಕವಾಗಿ ಬಳಕೆಯಾಗದಿರುವುದು ಯಕ್ಷ ಪ್ರಶ್ನೆಯಾಗಿದೆ.

ಆಮೆ ವೇಗದಲ್ಲಿ ಕಾಮಗಾರಿ

ಸಮುದಾಯ ಭವನಗಳ ನಿರ್ಮಾಣ ಹಾಗೂ‌ ಹಿಂದುಳಿದ ವರ್ಗಗಳ ವಸತಿ ನಿಲಯಗಳ ಕಟ್ಟಡ ಕಾಮಗಾರಿಗಳ ನಿರ್ಮಾಣದ ಜವಾಬ್ದಾರಿಯನ್ನು ಜಿಲ್ಲಾ ನಿರ್ಮಿತಿ‌ ಕೇಂದ್ರ ಹೊತ್ತಿದೆ. ಆದರೆ ಕಾಮಗಾರಿಗಳಲ್ಲಿ‌ ಗುಣಮಟ್ಟ ಕಡಿಮೆಯಾಗಿರುವುದಲ್ಲದೆ, ಪ್ರತಿ ಕಾಮಗಾರಿಗಳು ಆಮೆ ವೇಗದಲ್ಲಿ ನಡೆಯುತ್ತಿರುವುದು ಅಸಮಾಧಾನ ತರಿಸಿದೆ ಎನ್ನುತ್ತಾರೆ ಸಮುದಾಯದ ಮುಖಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT