ಶುಕ್ರವಾರ, ಆಗಸ್ಟ್ 6, 2021
21 °C
ಜಿಲ್ಲೆಯ 232 ಕೇಂದ್ರಗಳಲ್ಲಿ ಲಸಿಕಾ ಮೇಳ

ಇಂದು 30 ಸಾವಿರ ಜನರಿಗೆ ಲಸಿಕೆ ಗುರಿ; ಜಿಲ್ಲಾಧಿಕಾರಿ ಆರ್.ಲತಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಒಟ್ಟು 232 ಲಸಿಕಾ ಕೇಂದ್ರಗಳಲ್ಲಿ ಜೂ.21 ರಂದು ಕೋವಿಡ್-19 ಲಸಿಕಾ ಮೇಳ ಆಯೋಜಿಸಲಾಗಿದೆ. ಮೇಳದಲ್ಲಿ 30 ಸಾವಿರ ಜನರಿಗೆ ಕೋವಿಡ್ ಲಸಿಕೆ ಹಾಕುವ ಗುರಿ ಇದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದ್ದಾರೆ.

ಜಿಲ್ಲಾ ಸರ್ಕಾರಿ ಆಸ್ಪತ್ರೆ, ಎಲ್ಲ ತಾಲ್ಲೂಕು ಸರ್ಕಾರಿ ಆಸ್ಪತ್ರೆಗಳು, ನಾಲ್ಕು ನಗರ ಆರೋಗ್ಯ ಕೇಂದ್ರಗಳು, ಎರಡು ಸಮುದಾಯ ಆರೋಗ್ಯ ಕೇಂದ್ರಗಳು, 57 ಪ್ರಾಥಮಿಕ ಆರೋಗ್ಯ ಕೇಂದ್ರಗಳು, ನಗರಸಭೆ, ಪುರಸಭೆಗಳು, 157 ಗ್ರಾಮ ಪಂಚಾಯಿತಿಗಳಲ್ಲಿ ಲಸಿಕಾ ಮೇಳ ನಡೆಯಲಿದೆ ಎಂದಿದ್ದಾರೆ.

ಕೊರೊನಾ ಸೋಂಕನ್ನು ಪೂರ್ಣವಾಗಿ ತೊಲಗಿಸಬೇಕಾದರೆ ಲಸಿಕೆ ಹಾಕುವುದೇ ಅಂತಿಮ ಅಸ್ತ್ರವಾಗಿದೆ. ಇದನ್ನು ಸರ್ಕಾರ ಮನಗಂಡು ಲಸಿಕೆ ಹಾಕುವುದನ್ನು ಮತ್ತಷ್ಟು ವೇಗಗೊಳಿಸಿದೆ. ಕೋವಿಡ್-19 ಲಸಿಕಾ ಮೇಳ ಆಯೊಜಿಸುವಂತೆ ಆದೇಶಿಸಿದೆ. ವಿವಿಧ ಆದ್ಯತಾ ಗುಂಪಿನವರಿಗೆ ಮೇಳ ಹಮ್ಮಿಕೊಳ್ಳಲಾಗಿದೆ.

ಆರೋಗ್ಯ ಇಲಾಖೆ ಸೇರಿದಂತೆ ಜಿಲ್ಲಾಡಳಿತದ ಎಲ್ಲ ಅಧಿಕಾರಿ, ಸಿಬ್ಬಂದಿ ಉತ್ತಮ ಕೆಲಸ ಮಾಡಿ 30,000 ಲಸಿಕೆ ಹಾಕುವ ಗುರಿ ತಲುಪಬೇಕು. ಜನರು ಸಹ ಮೇಳವನ್ನು ಯಶಸ್ವಿಗೊಳಿಸುವ ಮೂಲಕ 7ನೇ ಅಂತರರಾಷ್ಟ್ರೀಯ ಯೋಗಾ ದಿನಾಚರಣೆ ಆಚರಿಸಬೇಕು ಎಂದು ಮನವಿ ಮಾಡಿದ್ದಾರೆ.

ಭಾರತದಲ್ಲಿ ಕೊರೊನಾ ಮೂರನೇ ಅಲೆ ಬರುತ್ತದೆ ಎಂದು ವಿಶ್ವಸಂಸ್ಥೆಯು ಅಭಿಪ್ರಾಯಪಟ್ಟಿದೆ. ಮಕ್ಕಳ ಮೇಲೆ ದುಷ್ಪರಿಣಾಮ ಬೀರುವುದರ ಬಗ್ಗೆ ಖಾತರಿ ಪಡಿಸಿಲ್ಲ. ಆದರೂ 3 ಅಲೆ ಬಂದರೆ ಎದುರಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಈ ಹಿಂದಿನಂತೆ ಜಿಲ್ಲೆಯ ಜನರು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವುದರ ಜೊತೆಗೆ ಲಸಿಕೆ ಹಾಕಿಸಿಕೊಳ್ಳುವ ಮೂಲಕ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. 

ಜೂ.21 ರಿಂದ ಸರ್ಕಾರ ಕೆಲವು ಕೋವಿಡ್ ನಿಬಂಧನೆಗಳನ್ನು ಜಿಲ್ಲೆಯಲ್ಲಿ ಸಡಿಲಿಸಿದೆ. ಆದರೆ ಜನರು ನಿರ್ಲಕ್ಷ್ಯ ವಹಿಸಿದರೆ ಆಪತ್ತಿಗೆ ಒಳಗಾಗುವ ಸಂಭವ ಇದೆ. ಇಂತಹ ಅವಘಡಕ್ಕೆ ಜನರು ಅವಕಾಶ ಮಾಡಿಕೊಡಬೇಡಿ ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು