ಶನಿವಾರ, ಜನವರಿ 23, 2021
21 °C
ವರದನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

ಬಿಸಿಯೂಟ ನಿಂತರೂ ತರಕಾರಿ ಬೆಳೆ ನಿಂತಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿಡ್ಲಘಟ್ಟ: ಕೊರೊನಾದಿಂದಾಗಿ ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ ನಿಂತಿದೆ. ಆದರೂ ಬಿಸಿಯೂಟಕ್ಕೆಂದು ತಮ್ಮಲ್ಲೇ ತರಕಾರಿಗಳನ್ನು ಬೆಳೆದುಕೊಳ್ಳುತ್ತಿದ್ದ ಕೆಲವಾರು ಸರ್ಕಾರಿ ಶಾಲೆಗಳು ತಮ್ಮ ಕೃಷಿ ಕಾಯಕವನ್ನು ಮರೆತಿಲ್ಲ. ತಾಲ್ಲೂಕಿನ ವರದನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಈಗಲೂ ಹಲವಾರು ತರಕಾರಿಗಳನ್ನು ಬೆಳೆಯುತ್ತಲೇ ಇದ್ದಾರೆ.

ಹಿಂದಿನಿಂದಲೂ ಬಗೆ ಬಗೆಯ ತರಕಾರಿಗಳನ್ನು ಶಾಲಾ ಆವರಣದಲ್ಲಿ ಬೆಳೆಸಿ ಅದನ್ನು ಮಕ್ಕಳಿಗಾಗಿ ಬಳಸುವ ಪರಿಪಾಠವನ್ನು ಇಟ್ಟುಕೊಂಡಿರುವ ವರದನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇತರರಿಗೆ ಮಾದರಿಯಾಗಿದ್ದಾರೆ. ವರದನಾಯಕನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣ ಎರಡು ಎಕರೆ ಪ್ರದೇಶವನ್ನು ಹೊಂದಿದೆ. ಸರ್ಕಾರದ ಅನುದಾನ ಮತ್ತು ಗ್ರಾಮಸ್ಥರ ನೆರವಿನಿಂದ ಕಾಂಪೌಂಡ್‌ ನಿರ್ಮಿಸಲಾಗಿದೆ.

‘ವಿಷನ್‌ ಗ್ರೀನ್‌’ ಎಂಬ ಸಂಘ ರಚಿಸಿಕೊಂಡು, ಜಿಲ್ಲೆಯಲ್ಲಿ ಹಸಿರು ಬೆಳೆಸುವ ಉದ್ದೇಶ ಹೊಂದಿರುವ ಒಂದು ತಂಡ ಶಾಲೆಯೊಂದಿಗೆ ಸೇರಿ ಕೆಲವು ವರ್ಷಗಳ ಹಿಂದೆ ನೇರಳೆ, ಬೇವು, ಮತ್ತಿ, ಸಂಪಿಗೆ, ಹೂವರಸಿ, ಹೊಂಗೆ, ಬೀಟೆ. ಮಹಾಗನಿ, ಬಸವನ ಪಾದ, ಮಾವು, ಗಸಗಸೆ, ಅರಳಿ, ಕಾಡು ಬಾದಾಮಿ, ಅತ್ತಿ, ನುಗ್ಗೆ ಮುಂತಾದ ನೂರು ಗಿಡಗಳನ್ನು ನೆಟ್ಟು ಹನಿ ನೀರಾವರಿ ಪೈಪ್‌ಗಳನ್ನು ಅಳವಡಿಸಿದ್ದರು. ಈಗವು ಎತ್ತರಕ್ಕೆ ಬೆಳೆದು ನಿಂತಿವೆ.

ಈ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತಮಗೆ ಬೇಕಾದ ತರಕಾರಿಗಳನ್ನು ಹಲವು ವರ್ಷಗಳಿಂದ ಬೆಳೆದುಕೊಳ್ಳುತ್ತಿದ್ದಾರೆ. ತೊಗರಿಕಾಯಿ, ಅಲಸಂದಿ, ಕುಂಬಳಕಾಯಿ, ಬಸಲೆಸೊಪ್ಪು, ಅರಿವೆಸೊಪ್ಪು, ನುಗ್ಗೆಕಾಯಿ, ಕರಿಬೇವು, ಅಮೃತಬಳ್ಳಿ, ಬೆಟ್ಟದ ನೆಲ್ಲಿಕಾಯಿ, ಗೊಂಗೂರ ಸೊಪ್ಪು, ಮೆಣಸಿನಕಾಯಿ, ಪುದೀನ, ಕೊತ್ತಂಬರಿ ಮುಂತಾದವುಗಳನ್ನು ಬೆಳೆಯುತ್ತಾ ಬಿಸಿಯೂಟದ ರುಚಿಯನ್ನು ಹೆಚ್ಚಿಸಿಕೊಂಡಿದ್ದರು. ಸುಮಾರು ಒಂದು ವರ್ಷಗಳಿಂದ ಕೊರೊನಾ ಕಾರಣದಿಂದ ಶಾಲೆಯ ಆವರಣದ ತರಕಾರಿ ತೋಟ ಬಸವಳಿದಿದ್ದರೂ, ಆಹಾರ ಉತ್ಪನ್ನಗಳಿಗೇನೂ ಕೊರತೆಯಾಗಿಲ್ಲ. ಕುಂಬಳಕಾಯಿಗಳು, ಸೋರೇಕಾಯಿ, ಅವರೇಕಾಯಿ ಸಾಕಷ್ಟು ಬಿಟ್ಟಿವೆ.

‘ಕೊರೊನಾದಿಂದಾಗಿ ಈ ಬಾರಿ ತೋಟವನ್ನು ನಾವು ಶಿಕ್ಷಕರೇ ನೋಡಿಕೊಂಡೆವು. ನಮ್ಮ ಉದ್ದೇಶ ಕೈತೋಟದ ಮೂಲಕ ಮಕ್ಕಳಿಗೆ ಸ್ವಾವಲಂಬನೆ, ಕೃಷಿ, ಪರಿಸರದ ಪಾಠ ಕಲಿಸುವುದು ಮತ್ತು ಶಾಲೆಗೆ ಬೇಕಾದಷ್ಟು ತರಕಾರಿಯನ್ನು ಈ ತೋಟದಲ್ಲಿ ಬೆಳೆಸುವುದಾಗಿದೆ. ಯಾವುದೇ ರಾಸಾಯನಿಕ ಗೊಬ್ಬರವನ್ನು ತೋಟಕ್ಕೆ ಬಳಸುವುದಿಲ್ಲ. ತರಗೆಲೆ ಸೊಪ್ಪುಗಳು, ಸೆಗಣಿ ಹಾಗೂ ತೊಳೆದ ನೀರು ಗೊಬ್ಬರವಾಗಿ ಬಳಕೆಯಾಗುತ್ತದೆ. ಅವರೇಕಾಯಿಯನ್ನು ಒಣಗಿಸುತ್ತಿದ್ದೇವೆ. ಕುಂಬಳ ಸಹ ಹಾಳಾಗದಂತೆ ಶೇಖರಿಸಿಟ್ಟಿದ್ದೇವೆ. ಬಿಸಿಯೂಟ ಪ್ರಾರಂಭವಾದೊಡನೆ ಬಳಕೆ ಮಾಡುತ್ತೇವೆ’ ಎಂದು ಶಿಕ್ಷಕ ಎಂ.ಎ.ರಾಮಕೃಷ್ಣ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.