ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಸಂಭ್ರಮದ ವಿಜಯ ದಶಮಿ ಸಂಪನ್ನ

ಎಲ್ಲೆಡೆ ಕಳೆಗಟ್ಟಿದ ದಸರಾ ಹಬ್ಬ, ಶ್ರದ್ಧಾಭಕ್ತಿಯಿಂದ ಆಯುಧಗಳು, ವಾಹನಗಳಿಗೆ ಪೂಜೆ ಸಲ್ಲಿಸಿದ ಜನರು
Last Updated 26 ಅಕ್ಟೋಬರ್ 2020, 14:11 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯಾದ್ಯಂತ ಭಾನುವಾರ ಆಯುಧ ಪೂಜೆ, ಸೋಮವಾರ ವಿಜಯ ದಶಮಿ ಹಬ್ಬವನ್ನು ಜನರು ಶ್ರದ್ಧಾಭಕ್ತಿ, ಸಡಗರದಿಂದ ಆಚರಿಸಿದರು.

ದೇವಾಲಯಗಳನ್ನು ಹಬ್ಬದ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿಸಲಾಯಿತು. ಭಕ್ತರು ದೇಗುಲಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಭಾನುವಾರ ನಸುಕಿನಿಂದಲೇ ಮನೆ ಆವರಣವನ್ನು ಶುಚಿಗೊಳಿಸಿದ ಗೃಹಿಣಿಯರು ನಂತರ ಸಗಣಿ ಸಾರಿಸಿ, ಬಣ್ಣಬಣ್ಣದ ರಂಗೋಲಿ ಬಿಡಿಸಿದರು. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಜನರು ಕೃಷಿ ಉಪಕರಣ, ಕತ್ತಿ, ಗುರಾಣಿ, ಅಸ್ತ್ರಗಳು, ವಾಹನಗಳನ್ನು ಸ್ವಚ್ಛಗೊಳಿಸಿ ಬಾಳೆಕಂಬ ಕಟ್ಟಿ, ಹೂವಿನಿಂದ ಸಿಂಗರಿಸಿ ಪೂಜೆ ಸಲ್ಲಿಸಿದರು.

ಸೋಮವಾರ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಮಕ್ಕಳು ಮತ್ತು ಮಹಿಳೆಯರು ಹಬ್ಬದ ಹೊಸ ಬಟ್ಟೆ ತೊಟ್ಟು ಮಿಂಚುತ್ತಿದ್ದರು. ಹಬ್ಬದ ಊಟದ ಸಿಹಿ ಘಮಲು ಎಲ್ಲೆಡೆ ಮನೆ ಮಾಡಿತ್ತು.

ಜಿಲ್ಲಾ ಕೇಂದ್ರವಾದ ನಗರದಲ್ಲಿ ಕೂಡ ಹಬ್ಬದ ಸಡಗರ ಜೋರಾಗಿಯೇ ಕಂಡುಬಂತು. ಅನೇಕ ದೇವಾಲಯಗಳಲ್ಲಿ ಹಬ್ಬದ ಪ್ರಯುಕ್ತ ವಿಶೇಷ ಅಲಂಕಾರ ಮಾಡಲಾಗಿತ್ತು. ಕಾರ್ಖಾನೆಗಳು, ಸರ್ಕಾರಿ ಕಚೇರಿ, ಆಸ್ಪತ್ರೆಗಳು, ವಿವಿಧ ಸಂಘ ಸಂಸ್ಥೆಗಳ ಕಚೇರಿಯಲ್ಲಿ ದಸರಾ ಹಬ್ಬದ ಸಂಭ್ರಮ ಕಳೆಗಟ್ಟಿತ್ತು.

ನಡೆಯದ ಸದ್ಭಾವನಾ ಯಾತ್ರೆ: ಸಾಮೂಹಿಕ ಸದ್ಭಾವನಾ ವಿಜಯ ದಶಮಿ ಉತ್ಸವ ಸಮಿತಿ ವತಿಯಿಂದ ಪ್ರತಿ ವರ್ಷ ವಿಜಯ ದಶಮಿಯಂದು ನಗರದ ಜೂನಿಯರ್‌ ಕಾಲೇಜಿನಿಂದ ವಾಪಸಂದ್ರದ ರಂಗನಾಥ ಸ್ವಾಮಿ ದೇವಾಲಯದ ವರೆಗೆ ‘ವಿಜಯ ದಶಮಿ ಉತ್ಸವ’ದ ಮೆರವಣಿಗೆ ಆಯೋಜಿಸಲಾಗುತ್ತಿತ್ತು.

ಸುಮಾರು 20ಕ್ಕೂ ಅಧಿಕ ಅಲಂಕೃತ ಪಲ್ಲಕ್ಕಿಗಳ ಮೆರವಣಿಗೆ ವಿಜಯ ದಶಮಿಗೆ ಕಳೆ ತುಂಬುತ್ತಿತ್ತು. ಆದರೆ, ಈ ಬಾರಿ ಜಿಲ್ಲಾಡಳಿತ ಕೋವಿಡ್‌ ಕಾರಣಕ್ಕೆ ಮೆರವಣಿಗೆಗೆ ಅನುಮತಿ ನೀಡಲಿಲ್ಲ. ಸಂಜೆ ರಂಗನಾಥಸ್ವಾಮಿ ದೇವಾಲಯ ಆವರಣದಲ್ಲಿರುವ ಬನ್ನಿ ವೃಕ್ಷಕ್ಕೆ ತಹಶೀಲ್ದಾರ್ ನಾಗಪ್ರಶಾಂತ್ ಅವರು ಪೂಜೆ ಸಲ್ಲಿಸಿ, ಬನ್ನಿ ಗಿಡಕ್ಕೆ ಬಾಣ ಪ್ರಯೋಗಿಸಿದರು. ಬಳಿಕ ಜನರು ಬನ್ನಿ ಸೊಪ್ಪನ್ನು ಪಡೆದುಕೊಂಡು ಮನೆಗೆ ತೆಗೆದುಕೊಂಡು ಹೋಗಿ ಪೂಜಿಸಿ, ನೆರೆಹೊರೆಯವರೊಂದಿಗೆ ವಿನಿಮಯ ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT