ಮಂಗಳವಾರ, ಫೆಬ್ರವರಿ 25, 2020
19 °C
ನಗರಸಭೆ ಚುನಾವಣೆ: ವಿವಿಧ ವಾರ್ಡ್‌ಗಳಲ್ಲಿ ಅಭ್ಯರ್ಥಿಗಳ ಪರ ಶಾಸಕ ಪ್ರಚಾರ

ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡಿ: ಡಾ.ಕೆ.ಸುಧಾಕರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ಕಳೆದ ಆರು ವರ್ಷಗಳಲ್ಲಿ ನಗರದ ಅಭಿವೃದ್ಧಿಗೆ ವೇಗ ಸಿಕ್ಕಿದೆ. ಆ ವೇಗ, ಅಭಿವೃದ್ಧಿ ಮುಂದುವರಿಯಬೇಕು. ಚಿಕ್ಕಬಳ್ಳಾಪುರವನ್ನು ಬೆಂಗಳೂರಿನ ಉಪಗ್ರಹ ನಗರ ಮಾಡುವ ಕನಸು ನನ್ನದು. ಆ ಕನಸು ನನಸಾಗಬೇಕಾದರೆ ನಗರಸಭೆ ಚುನಾವಣೆಯಲ್ಲಿ ಬಿಜೆಪಿಯ ಎಲ್ಲ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು’ ಎಂದು ಶಾಸಕ ಡಾ.ಕೆ.ಸುಧಾಕರ್ ಹೇಳಿದರು.

ನಗರದ ವಿವಿಧ ವಾರ್ಡ್‌ಗಳಲ್ಲಿ ಮಂಗಳವಾರ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ ಅವರು, ‘ನಮಗೆ ನಮ್ಮ ಪ್ರಣಾಳಿಕೆ ಧರ್ಮ ಗ್ರಂಥ ಇದ್ದಂತೆ. ಪ್ರಣಾಳಿಕೆ ಈಡೇರಿಸದಿದ್ದರೆ ಕೇಳುವ ಹಕ್ಕು ಮತದಾರರಿಗೆ ಇದೆ. ಮತದಾರರು ನನ್ನ ಕನಸಿಗೆ ಬಲ ತುಂಬುವ ಕೆಲಸ ಮಾಡಬೇಕು. ಕಾಂಗ್ರೆಸ್ ಮತ್ತು ಜೆಡಿಎಸ್‌ನವರು ಈ ಚುನಾವಣೆಯಲ್ಲಿ ಒಳಒಪ್ಪಂದ ಮಾಡಿಕೊಂಡಿದ್ದಾರೆ. ಅವರಿಗೆ ಅಭಿವೃದ್ಧಿ ಬಗ್ಗೆ ಗೊತ್ತಿಲ್ಲ. ಅವರು ಚುನಾವಣೆಗೆ ಸ್ಪರ್ಧಿಸುವುದು ಬರೀ ಅಧಿಕಾರದ ಆಸೆಗೆ’ ಎಂದು ತಿಳಿಸಿದರು.

‘ಕಾಂಗ್ರೆಸ್‌ನ ಕೆಲವರು ನಿವೇಶನ ಕೊಡುತ್ತೇವೆ ಎಂದು ಹೇಳುತ್ತಿದ್ದಾರಂತೆ. ರಾಜ್ಯ, ಕೇಂದ್ರಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಶಾಸಕರು, ಸಂಸದರು ಬಿಜೆಪಿಯವರು ಇದ್ದಾರೆ. ಹೀಗಿರುವಾಗ ಕಾಂಗ್ರೆಸ್‌ನವರು ನಿವೇಶನ ಕೊಡಲು ಹೇಗೆ ಸಾಧ್ಯ? ಸುಳ್ಳನ್ನು ನಂಬಿದರೆ ನಿಮಗೆ ನೀವೇ ಅನ್ಯಾಯ ಮಾಡಿಕೊಳ್ಳುತ್ತೀರಿ. ನಾವು ವಿಶೇಷವಾಗಿ ಅಲ್ಪಸಂಖ್ಯಾತರಿಗೆ ನಿವೇಶನ ಮಾತ್ರವಲ್ಲ, ಮನೆಗಳನ್ನು ಕೂಡ ನಿರ್ಮಿಸಿ ಕೊಡುತ್ತೇವೆ. ಸುಳ್ಳಿಗೆ ಬಲಿಯಾದರೆ ನಿಮಗೆ ನೀವೇ ಮೋಸ ಮಾಡಿಕೊಂಡಂತೆ. ಅದಕ್ಕಾಗಿ ನನ್ನನ್ನು ಹೊಣೆಗಾರರನ್ನಾಗಿ ಮಾಡಬಾರದು’ ಎಂದರು.

‘ಅಭಿವೃದ್ಧಿ ಎಂದರೆ ಬಿಜೆಪಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಾಬೀತುಪಡಿಸಿದ್ದಾರೆ. ಕಾಂಗ್ರೆಸ್‌ನವರು ಸೋತು ಸುಣ್ಣವಾಗಿರುವುದಕ್ಕೆ ಸುಳ್ಳು ಹೇಳಿ ಜನರ ಮನಸ್ಸು ಒಡೆಯಲು ಮುಂದಾಗಿದ್ದಾರೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್‌ಗೆ ಮತ ಕೊಡಬಾರದು. ನಿವೇಶನ, ಮನೆ, ಉದ್ಯೋಗ ಬೇಕು ಎನ್ನುವವರು ಬಿಜೆಪಿಗೆ ಮತ ಕೊಡಬೇಕು. ಪ್ರತಿ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಬಿಜೆಪಿಗೆ ಮತ ಕೊಟ್ಟು ಭವಿಷ್ಯ ಜೋಪಾನವಾಗಿಟ್ಟುಕೊಳ್ಳಬೇಕು. ಬಿಜೆಪಿ ಗೆದ್ದರೆ ಭವಿಷ್ಯ ಉಜ್ವಲವಾಗುತ್ತದೆ’ ಎಂದು ಹೇಳಿದರು.

‘ದಲಿತರು, ಅಲ್ಪಸಂಖ್ಯಾತರು, ಶೋಷಿತರಿಗೆ ಕಾಂಗ್ರೆಸ್‌ 70 ವರ್ಷಗಳಿಂದ ಸುಳ್ಳು ಹೇಳುತ್ತಲೇ ಮತ ಬ್ಯಾಂಕ್‌ಗಾಗಿ ಬಳಸಿಕೊಂಡರೆ ವಿನಾ ಅಭಿವೃದ್ಧಿ ಮಾಡಲಿಲ್ಲ. ಇಲ್ಲಿಯೂ ಕಾಂಗ್ರೆಸ್‌ನವರಿಗೆ ಗೊತ್ತು ಗುರಿ ಇಲ್ಲ. ಹಿಂದೆ ಕಾಂಗ್ರೆಸ್‌ನವರಿಂದ ಎಷ್ಟೆಲ್ಲ ಭ್ರಷ್ಟಾಚಾರ ಮಾಡಿದ್ದಾರೆ ಎಂಬುದರ ಬಗ್ಗೆ ನನ್ನ ಬಳಿ ದಾಖಲೆ ಇವೆ. ಮನೆ ಕೊಡಲು, ಖಾತೆ ಮಾಡಿಸಲು, ನಕಲಿ ಖಾತೆ ಹಣ ಪಡೆದಿದ್ದಾರೆ. ಅಂತಹವರನ್ನು ನಗರಸಭೆಗೆ ಕಳುಹಿಸಿದರೆ ನಿಮಗೆ ನೀವೇ ಮಣ್ಣು ಹಾಕಿಕೊಂಡಂತೆ’ ಎಂದು ತಿಳಿಸಿದರು.

‘ಶೀಘ್ರದಲ್ಲಿಯೇ ಸಚಿವನಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದೇನೆ. ಸಚಿವನಾದ ಬಳಿಕ ಇನ್ನೂ ಹೆಚ್ಚಿನ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತದೆ. ನಗರಸಭೆ ಆಡಳಿತದಲ್ಲಿ ನಮ್ಮ ಅಭ್ಯರ್ಥಿಗಳಿದ್ದರೆ ನಾನು ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತದೆ. ನಗರಸಭೆಯನ್ನು ಜನಸ್ನೇಹಿ, ಶುದ್ಧವಾದ ಆಡಳಿತ ಕೇಂದ್ರವನ್ನಾಗಿ ಮಾಡಿ, ಪಾರದರ್ಶಕ ಆಡಳಿತ ನೀಡಲು ಹೊಸ ತಂಡ ಆಯ್ಕೆ ಮಾಡಲು ಮತದಾರರು ನನಗೆ ಸಹಕಾರ ನೀಡಬೇಕು. ಆಗ ನೀವೇ ಸರ್ವಾಂಗೀಣ ಅಭಿವೃದ್ಧಿಗೆ ಸಾಕ್ಷಿಭೂತರಾಗುತ್ತಿರಿ’ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಕೆ.ವಿ.ನಾಗರಾಜ್, ಕೇಶವಕುಮಾರ್, ಎಂ.ಸಿ.ಶ್ರೀನಿವಾಸುಲು, ಶಶಿಕುಮಾರ್, ಗರಿಗರೆಡ್ಡಿ, ಪ್ರಸಾದ್, ನಾರಾಯಣಸ್ವಾಮಿ, ಗೋಪಿನಾಥ್, ಸುರೇಶ್‌, ಮಧುಚಂದ್ರ, ಮುನಿವೆಂಕಟಸ್ವಾಮಿ, ಚಲಪತಿ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು