ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ | ಹೆಸರಿಗಷ್ಟೇ ಸ್ವಚ್ಛತಾ ಅಭಿಯಾನ; ಗಬ್ಬೆದಿದೆ ನಗರ

Published 23 ನವೆಂಬರ್ 2023, 6:26 IST
Last Updated 23 ನವೆಂಬರ್ 2023, 6:26 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಸ್ವಚ್ಛತಾ ಅಭಿಯಾನ’ ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರ ಆಸಕ್ತಿಯ ಫಲವಾಗಿ ರೂಪುಗೊಂಡ ಕಾರ್ಯಕ್ರಮ. ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ ಸೇರಿದಂತೆ ಜಿಲ್ಲೆಯ ತಾಲ್ಲೂಕು ಕೇಂದ್ರಗಳಲ್ಲಿಯೂ ಈ ಅಭಿಯಾನವನ್ನು ಜಾರಿಗೊಳಿಸಲಾಗಿದೆ. 

ಆದರೆ ಇಂತಹ ಮಹತ್ವದ ಕಾರ್ಯಕ್ರಮ ಸ್ವಲ್ಪ ಮಟ್ಟಿಗಾದರೂ ಸಫಲವಾಗಿದೆಯೇ ಎಂದು ಚಿಕ್ಕಬಳ್ಳಾಪುರದಲ್ಲಿ ‘ಪ್ರಜಾವಾಣಿ’ಯು ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ‘ಹೆಸರಿಗಷ್ಟೇ ಸ್ವಚ್ಛತಾ ಅಭಿಯಾನ, ನಗರ ಗಬ್ಬೆದ್ದು ನಾರುತ್ತಿದೆ’ ಎನ್ನುವ ವಿಚಾರವೇ ಎದ್ದು ಕಂಡಿತು. 

ಸ್ವಚ್ಛತೆ ವಿಚಾರವಾಗಿ ಚಿಕ್ಕಬಳ್ಳಾಪುರ ನಾಗರಿಕರು ತೋರುತ್ತಿರುವ ತೀವ್ರ ನಿರ್ಲಕ್ಷ್ಯ ಮತ್ತು ನಗರಸಭೆಯು ಕಠಿಣ ಕ್ರಮಕೈಗೊಳ್ಳದಿರುವುದೇ ಸ್ವಚ್ಛತಾ ಅಭಿಯಾನದ ಹಿನ್ನಡೆಗೆ ಕಾರಣ ಎನ್ನುವ ಮಾತುಗಳು ಸಹ ಪ್ರಜ್ಞಾವಂತರಿಂದ ಕೇಳಿ ಬಂದವು.

‘ಪ್ರಜಾವಾಣಿ’ ರಿಯಾಲಿಟಿ ಚೆಕ್‌ ವೇಳೆ, ತಮ್ಮ ಮನೆ, ರಸ್ತೆಯ ಬದಿಯಲ್ಲಿದ್ದ ಕಸದ ಚಿತ್ರ ತೆಗೆಯುತ್ತಿದ್ದಂತೆ, ಕೆಲವು ನಾಗರಿಕರು ‘ಏಕೆ ತೆಗೆಯುತ್ತಿದ್ದೀರಿ. ಡಿಲಿಟ್ ಮಾಡಿ’ ಎಂದು ಏರುಧ್ವನಿಯಲ್ಲಿ ಅಬ್ಬರಿಸಿದರು. 

ಚಿಕ್ಕಬಳ್ಳಾಪುರದ ಪ್ರಮುಖ ಭಾಗಗಳಲ್ಲಿಯೇ ಕಸದ ದುರ್ವಾಸನೆ ಮೂಗಿಗೆ ಬಡಿಯುತ್ತದೆ. ಸ್ವಲ್ಪ ಮಳೆ ಬಂದರೆ ಈ ಕಸದ ರಸ್ತೆಯಲ್ಲಿ ತೇಲಾಡುತ್ತದೆ. ಬಿಯರ್ ಬಾಟಲಿಗಳು, ಮನೆಯಲ್ಲಿ ಉಳಿದ ಅನ್ನಸಾರು, ಮುಸುರೆ, ಅರೆ ಬರೆಯಾಗಿ ತಿಂದು ಎಸೆದ ಹೋಟೆಲ್ ಪಾರ್ಸೆಲ್ ಡಬ್ಬಿಗಳು, ರಾಶಿ ರಾಶಿ ಪ್ಲಾಸ್ಟಿಕ್, ಬಳಸಿದ ಹಾಸಿಗೆಗಳು...ಹೀಗೆ ನಾನಾ ನಮೂನೆಯ ಕಸವು ನಗರದ ಒಳಗೆ ಹೇರಳವಾಗಿದೆ. 

ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ‘ಹಸಿರು ಚಿಕ್ಕಬಳ್ಳಾಪುರ’ ಘೋಷಣೆಯಡಿ ಚಿಕ್ಕಬಳ್ಳಾಪುರದ ಬೈಪಾಸ್ ರಸ್ತೆಗಳು ಸೇರಿದಂತೆ ತಾಲ್ಲೂಕು ಕೇಂದ್ರಗಳಿಗೂ ಭೇಟಿ ನೀಡಿ ಸ್ವಚ್ಛತಾ ಕಾರ್ಯಗಳನ್ನು ಖುದ್ದಾಗಿ ನಡೆಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ಸ್ವಚ್ಛತೆಗೆ ಒತ್ತು ನೀಡಬೇಕಾಗಿದೆ. ಆದ್ದರಿಂದ ಕಸವನ್ನು ಎಲ್ಲೆಂದರಲ್ಲಿ ಎಸೆಯಬಾರದು. ನಗರಸಭೆಯ ಕಸದ ವಾಹನಗಳಿಗೆ ನೀಡಬೇಕು ಎಂದು ಮನವಿ ಸಹ ಮಾಡಿದ್ದರು. 

ಆದರೆ ಈ ಮನವಿ, ಕೋರಿಕೆ, ಜಾಗೃತಿಯ ಅಭಿಯಾನ ಯಾವುದೂ ಸಹ ನಾಗರಿಕರಿಗೆ ತಟ್ಟಿದಂತೆ ಕಾಣುತ್ತಿಲ್ಲ. ನೈರ್ಮಲ್ಯದ ವಿಚಾರವಾಗಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾದ ನಗರಸಭೆಯೂ ಮೃಧುವಾಗಿದೆಯೇ ಎನ್ನುವ ಭಾವನೆ ಮೂಡುತ್ತದೆ.

ಸ್ಪಂದಿಸದ ನಾಗರಿಕರು

ಸ್ವಚ್ಛತೆ, ನೈರ್ಮಲ್ಯದಂತಹ ಯೋಜನೆ ಜಾರಿಯಲ್ಲಿ ನಾಗರಿಕರ ಸಹಕಾರ ಪ್ರಮುಖವಾಗಿದೆ. ಆದರೆ ಚಿಕ್ಕಬಳ್ಳಾಪುರ ನಗರವನ್ನು ಒಮ್ಮೆ ಸುತ್ತಿದರೆ ನಾಗರಿಕರು ಸ್ವಚ್ಛತಾ ಅಭಿಯಾನಕ್ಕೆ ಸ್ಪಂದಿಸದಿರುವುದು ಎದ್ದು ಕಾಣುತ್ತದೆ. ತಮ್ಮ ಮನೆಗಳ ಮುಂಭಾಗದಲ್ಲಿ ಅಥವಾ ಪಕ್ಕದ ರಸ್ತೆಯಲ್ಲಿಯೇ ಕಸವನ್ನು ಎಸೆಯುತ್ತಿದ್ದಾರೆ. ನಿತ್ಯವೂ ಒಂದೇ ಕಡೆ ಕಸ ಸೇರಿ ಸೇರಿ ರಾಶಿಯಾಗಿದೆ.

‘ನಿಮ್ಮ ರಸ್ತೆಯಲ್ಲಿ ಇಷ್ಟೊಂದು ಕಸ ಇದೆ’ ಎಂದು ನಗರದ ಟಿ.ಜಿ ಟ್ಯಾಂಕ್ ರಸ್ತೆಯ ನಿವಾಸಿಯೊಬ್ಬರನ್ನು ಕೇಳಿದರೆ ಅವರು ಮಾತನಾಡುವುದಿಲ್ಲ ಎನ್ನುವಂತೆ ಕೈ ಸನ್ನೆ ಮಾಡಿ ಮುಂದೆ ಸಾಗಿದರು. 

ಅಗತ್ಯವಿದೆ ಕಠಿಣ ಕ್ರಮ

ನಗರದ ಬಡಾವಣೆಗಳಲ್ಲಿನ ಖಾಲಿ ನಿವೇಶಗಳಲ್ಲಿಯೂ ದೊಡ್ಡ ಪ್ರಮಾಣದಲ್ಲಿ ಕಸ ಸಂಗ್ರಹವಾಗಿದೆ. ಬಡಾವಣೆಗಳ ಮುಖ್ಯ ರಸ್ತೆಗಳಲ್ಲಿನ ಖಾಲಿ ನಿವೇಶಗಳಲ್ಲಿ ಬಿಯರ್ ಬಾಟಲಿಗಳು, ಪ್ಲಾಸ್ಟಿಕ್‌ಗಳು ಸೇರಿದಂತೆ ಕಸದ ಪ್ರಮಾಣ ದೊಡ್ಡದಾಗಿಯೇ ಕಾಣ ಸಿಗುತ್ತದೆ. ಹೀಗೆ ಖಾಲಿ ನಿವೇಶನಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ನಗರಸಭೆಯು ಮಾಲೀಕರಿಗೆ ಕಟ್ಟುನಿಟ್ಟಾಗಿ ಸೂಚಿಸುವ ಮತ್ತು ಕಸವನ್ನು ಮಾಲೀಕರಿಂದಲೇ ತೆರವುಗೊಳಿಸುವ ಅಥವಾ ದಂಡ ವಿಧಿಸುವ ಕ್ರಮವನ್ನು ಕೈಗೊಳ್ಳಬಹುದು. ಆದರೆ ಇಲ್ಲಿಯವರೆಗೂ ನಗರದಲ್ಲಿ ಕಸ ಎಸೆಯುವವರ ಮೇಲೆ ಪ್ರಹಾರಗಳು ನಡೆದಿಲ್ಲ. 

ನಗರಸಭೆಯು ಕಠಿಣ ಕ್ರಮಗಳನ್ನು ಕೈಗೊಳ್ಳದಿರುವುದು ಸಹ ರಸ್ತೆಯಲ್ಲಿ ಕಸ ಬೀಳಲು ಮುಖ್ಯ ಕಾರಣವಾಗಿದೆ. ನಗರಸಭೆಯ ಚುರುಕು ಮುಟ್ಟಿದರೆ ಕಸ ರಸ್ತೆಗೆ ಬೀಳುವುದು ಕಡಿಮೆ ಆಗುವ ಸಾಧ್ಯತೆ ಇದೆ.

35ರಿಂದ 40 ಬ್ಲಾಕ್ ಸ್ಪಾಟ್‌ಗಳು

ನಗರದಲ್ಲಿ 35ರಿಂದ 40 ಕಡೆಗಳಲ್ಲಿ ಕಸ ಎಸೆಯುವ ಬ್ಲಾಕ್ ಸ್ಪಾಟ್‌ಗಳನ್ನು ಗುರುತಿಸಿ ಅಲ್ಲಿ ಫಲಕಗಳನ್ನು ಅಳವಡಿಸಲಾಗಿದೆ. ಎಲ್ಲೆಂದರಲ್ಲಿ ಕಸ ಎಸೆಯಬಾರದು ಎನ್ನುವುದನ್ನು ಜನರು ಅರ್ಥಮಾಡಿಕೊಳ್ಳಬೇಕು. ನಾವು ನಮ್ಮ ಮಿತಿಯಲ್ಲಿ ಸಾಧ್ಯವಾದಷ್ಟು ಕೆಲಸ ನಿರ್ವಹಿಸುತ್ತಿದ್ದೇವೆ. ಇಂತಹ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ನಾಗರಿಕರ ಸಹಭಾಗಿತ್ವ ಅತ್ಯಂತ ಮಹತ್ವದ್ದಾಗುತ್ತದೆ. ಎಲ್ಲ ಕಡೆಯೂ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲು ಸಾಧ್ಯವಾಗುವುದಿಲ್ಲ. ಈಗ ಕೈಗೊಂಡಿರುವ ಕ್ರಮಗಳಿಂದ ಎಲ್ಲೆಂದರಲ್ಲಿ ಕಸ ಎಸೆಯುವುದು ಕಡಿಮೆ ಆಗುತ್ತಿದೆ ಮಂಜುನಾಥ್ ನಗರಸಭೆ ಪೌರಾಯುಕ್ತರು ಚಿಕ್ಕಬಳ್ಳಾಪುರ *** ಬೆಳಗಿನ ಜಾವವೇ ಕಸ ಎಸೆಯುವರು ಎಚ್‌.ಎಸ್.ಗಾರ್ಡನ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಒಂದೇ ಕಡೆ ಇಲ್ಲಿಯವರೆಗೆ ಯಾರೂ ಕಸವನ್ನು ಎಸೆಯುತ್ತಿಲ್ಲ. ಆದರೆ ನಗರದ ಒಳಗೆ ಅಪಾರ ಪ್ರಮಾಣದಲ್ಲಿ ಕಸ ಎದ್ದು ಕಾಣುತ್ತದೆ. ಬೆಳಗಿನ ಜಾವ ನಾಲ್ಕೈದು ಗಂಟೆಗೆ ರಸ್ತೆ ಬದಿಗೆ ಕಸ ಎಸೆಯುವವರ ಸಂಖ್ಯೆ ದೊಡ್ಡದೇ ಇದೆ. ನಾಗರಿಕರು ಸಹ ತಮ್ಮ ಜವಾಬ್ದಾರಿಗಳನ್ನು ಅರಿತುಕೊಳ್ಳಬೇಕು. ಅನೈರ್ಮಲ್ಯದ ಪರಿಣಾಮಗಳು ನಾಗರಿಕರ ಮೇಲೆಯೇ ಉಂಟಾಗುತ್ತವೆ. ಎಸ್‌.ಎಂ.ಬಿ ಮಂಜುನಾಥ್ ಎಚ್‌.ಎಸ್.ಗಾರ್ಡನ್ ಚಿಕ್ಕಬಳ್ಳಾಪುರ 

ಕಸ ಎಸೆಯುವವರ ಮಾಹಿತಿ ನೀಡಿದರೆ ಬಹುಮಾನ

ನಿತ್ಯ ರಾಶಿ ರಾಶಿ ಕಸ ಬೀಳುತ್ತಿದ್ದ ಸುಮಾರು 35ರಿಂದ 40 ಸ್ಥಳಗಳನ್ನು ನಗರಸಭೆಯು ಗುರುತಿಸಿದೆ. ಇವುಗಳನ್ನು ಬ್ಲಾಕ್ ಸ್ಪಾಟ್ ಎಂದು ಹೆಸರಿಸಿದೆ. ಇಲ್ಲಿ ಕಸ ಎಸೆಯಬಾರದು ಎಂದು ಫಲಕ ಸಹ ಅಳವಡಿಸಲಾಗಿದೆ. ಈ ಸ್ಥಳಗಳಲ್ಲಿ ಕಸ ಬೀಳುವುದು ಈಗ ನಿಂತಿದೆ.  ‘ಈ ಸ್ಥಳವು ಸಿಸಿ ಟಿವಿ ಸರ್ವೆಲೆನ್ಸ್‌ ವ್ಯಾಪ್ತಿಗೆ ಒಳಪಟ್ಟಿದೆ. ಇಲ್ಲಿ ಕಸ ಹಾಕುವುದು ನಿಷೇಧಿಸಿದೆ. ಕಸವನ್ನು ನಗರಸಭೆಯ ವಾಹನಗಳಿಗೆ ನೀಡತಕ್ಕದ್ದು. ಕಸ ಹಾಕಿದಲ್ಲಿ ದಂಡ ವಿಧಿಸಲಾಗುವುದು. ಸದರಿ ಸ್ಥಳದಲ್ಲಿ ಕಸ ಹಾಕುವವರ ಮಾಹಿತಿಯನ್ನು ನಗರಸಭೆಗೆ ನೀಡಿದಲ್ಲಿ ಬಹುಮಾನ ನೀಡಲಾಗುವುದು’ ಎಂದು ಫಲಕದಲ್ಲಿ ಪ್ರಕಟಿಸಲಾಗಿದೆ.

ಟಿ.ಜಿ ಟ್ಯಾಂಕ್ ರಸ್ತೆ
ಟಿ.ಜಿ ಟ್ಯಾಂಕ್ ರಸ್ತೆ
ಎಂಜಿ ರಸ್ತೆಯಿಂದ ಟಿ.ಜಿ ಟ್ಯಾಂಕ್ ರಸ್ತೆ ತಿರುವಿನಲ್ಲಿ
ಎಂಜಿ ರಸ್ತೆಯಿಂದ ಟಿ.ಜಿ ಟ್ಯಾಂಕ್ ರಸ್ತೆ ತಿರುವಿನಲ್ಲಿ
ಗಂಗಮ್ಮ ಗುಡಿ ರಸ್ತೆ 
ಗಂಗಮ್ಮ ಗುಡಿ ರಸ್ತೆ 
ನಗರಸಭೆಯು ಬ್ಲಾಕ್ ಸ್ಪಾಟ್‌ಗಳಲ್ಲಿ ಅಳವಡಿಸಿರುವ ಫಲಕ
ನಗರಸಭೆಯು ಬ್ಲಾಕ್ ಸ್ಪಾಟ್‌ಗಳಲ್ಲಿ ಅಳವಡಿಸಿರುವ ಫಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT