ಶನಿವಾರ, ಸೆಪ್ಟೆಂಬರ್ 25, 2021
22 °C
ಚಿಂತಾಮಣಿ; 20 ವರ್ಷಗಳ ಹಿಂದೆ ರಚನೆಯಾದ ಬಡಾವಣೆ, 1200 ಕುಟುಂಬಗಳು ವಾಸ

ಅಂದವಾಗಲೇ ಇಲ್ಲ ಆಶ್ರಯ ಬಡಾವಣೆ

ಎಂ.ರಾಮಕೃಷ್ಣಪ್ಪ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ನಗರದ ಆಶ್ರಯ ಬಡಾವಣೆಯಲ್ಲಿ ರಸ್ತೆ, ಚರಂಡಿ, ಶುದ್ಧ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ, ಬೀದಿ ದೀಪ ಸಮಸ್ಯೆ ಸೇರಿದಂತೆ ‌ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣುತ್ತದೆ. ಬಡವರ ಆಶ್ರಯಕ್ಕೆ ನಿರ್ಮಾಣವಾಗಿರುವ ಈ ಬಡಾವಣೆಯಲ್ಲಿ ಅಂದವೇ ಇಲ್ಲ.

ನಗರದ ಕಾಡುಮಲ್ಲೇಶ್ವರ ಬೆಟ್ಟದ ತಪ್ಪಲಿನಲ್ಲಿರುವ ಆಶ್ರಯ ಬಡಾವಣೆಯು ವೆಂಕಟಗಿರಿಕೋಟೆ ದಕ್ಷಿಣ ಮತ್ತು ಟ್ಯಾಂಕ್ ಬಂಡ್ ರಸ್ತೆಯಿಂದ ಸುತ್ತುವರಿದಿದೆ. ವಾರ್ಡ್ ನಂ 2ರ ಭಾಗವಾಗಿದೆ. ಮಳೆಗಾಲದಲ್ಲಿ ಬೆಟ್ಟದಿಂದ ಹರಿದುಬರುವ ನೀರು ತಗ್ಗು ಪ್ರದೇಶಗಳ ಮನೆಗಳಿಗೆ ನುಗ್ಗುತ್ತದೆ. ಸಮಸ್ಯೆಗಳನ್ನು ಬಗೆಹರಿಸಬೇಕಾದ ಅಧಿಕಾರಿಗಳು, ಜನಪ್ರತಿನಿಧಿಗಳು ತಮಗೂ‌ ಇದಕ್ಕೂ ಸಂಬಂಧವೇ ಇಲ್ಲ ಎನ್ನುವಂತೆ ಜಾಣ ಮೌನವಹಿಸಿದ್ದಾರೆ.

ಹತ್ತಾರೂ ಸಮಸ್ಯೆಗಳು ತಾಂಡವಾಡುತ್ತಿದ್ದರೂ ಪರಿಹಾರಕ್ಕೆ ಮುಂದಾಗದ ಅಧಿಕಾರಿಗಳು ಮತ್ತು ಜನ‍ಪ್ರತಿನಿಧಿಗಳ ನಡೆಗೆ ಬಡಾವಣೆಯ ನಾಗರಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸುವರು.

20 ವರ್ಷಗಳ ಚಿಂತಾಮಣಿ ಶಾಸಕರು ಹಾಗೂ ಗೃಹ ಸಚಿವರೂ ಆಗಿದ್ದ ಚೌಡರೆಡ್ಡಿ ಅವರ ಕಾಲದಲ್ಲಿ ಆಶ್ರಯ ಬಡಾವಣೆಯ ಯೋಜನೆ ರೂಪಿಸಲಾಯಿತು. ಬಡಾವಣೆ ಸ್ಥಾಪನೆಯ ಪ್ರಕ್ರಿಯೆಗಳು ಪೂರ್ಣವಾಗಿ ನಿವೇಶನ ವಿತರಣೆಯ ಹಕ್ಕು ಪತ್ರಗಳನ್ನು ವಿತರಿಸುವ ಕೆಲಸ ಬಾಕಿ ಇತ್ತು. ಚೌಡರೆಡ್ಡಿ ಅವರು ಚುನಾವಣೆಯಲ್ಲಿ ಸೋತರು. ಕೆ.ಎಂ.ಕೃಷ್ಣಾರೆಡ್ಡಿ ಗೆಲುವು ಸಾಧಿಸಿದರು. ಕೃಷ್ಣಾರೆಡ್ಡಿ ಸಮಾಜ ಕಲ್ಯಾಣ ಸಚಿವರೂ ಆದರು. ಕೃಷ್ಣಾರೆಡ್ಡಿ ಅವರ ‌ಕಾಲದಲ್ಲಿ ಹಕ್ಕುಪತ್ರಗಳ ವಿತರಣೆ ಮಾಡಲಾಯಿತು ಎಂದು ಬಡಾವಣೆ ನಿವಾಸಿ ಮುನಿಯಪ್ಪ ಸ್ಮರಿಸುತ್ತಾರೆ.

ಆಶ್ರಯ ಬಡಾವಣೆಯಲ್ಲಿ 1,200 ಕುಟುಂಬಗಳು ವಾಸವಾಗಿವೆ. ಇಂದಿಗೂ ಈ ಬಡಾವಣೆ ಕೊಳೆಗೇರಿಯಂತೆ ಇದೆ. ಇಲ್ಲಿಯೇ ಜನರು ಜೀವನ ಸಾಗಿಸುತ್ತಿದ್ದಾರೆ. ಬಡವರು, ಕೂಲಿಕಾರ್ಮಿಕರು, ವಿವಿಧ ಕುಶಲ ವೃತ್ತಿಗಾರರು, ಸಣ್ಣಪುಟ್ಟ ವ್ಯಾಪಾರಿಗಳು, ತಳ್ಳುವ ಗಾಡಿ ವ್ಯಾಪಾರಿಗಳು, ಊರೂರು ಸುತ್ತಿ ವ್ಯಾಪಾರ ಮಾಡುವವರು, ಪ್ರತಿನಿತ್ಯ ದುಡಿದು ತಿನ್ನುವವರೇ ಬಡಾವಣೆಯ ನಿವಾಸಿಗಳಾಗಿದ್ದಾರೆ. ಜನಪ್ರತಿನಿಧಿಗಳು ಚುನಾವಣೆಯ ಸಮಯದಲ್ಲಿ ಇನ್ನಿಲ್ಲದ ಭರವಸೆಗಳನ್ನು ನೀಡುತ್ತಾರೆ. ನಂತರ ಈ ಕಡೆ ತಲೆಹಾಕುವುದಿಲ್ಲ.

ಬಡಾವಣೆಯಲ್ಲಿ ಇಂದಿಗೂ ಸಮರ್ಪಕ ಡಾಂಬರು ರಸ್ತೆಗಳಿಲ್ಲ. ಬೆಟ್ಟದ ಕಡೆಯಿಂದ ಹರಿದು ಬರುವ ನೀರಿನಿಂದ ಗುಂಡಿಗಳು ನಿರ್ಮಾಣವಾಗುತ್ತಿವೆ. ಅದರಲ್ಲಿಯೇ ವಾಹನಗಳು ಸಂಚರಿಸುತ್ತವೆ. ಮಳೆಗಾಲದಲ್ಲಿ ಸವಾರರು, ಮಕ್ಕಳು, ಮಹಿಳೆಯರು ರಸ್ತೆಗಳಲ್ಲಿ ಸಂಚರಿಸುವುದೇ ಕಷ್ಟವಾಗುತ್ತದೆ.

ಸ್ವಲ್ಪ ಭಾಗದಲ್ಲಿ ಮಾತ್ರ 60 ಅಡಿ ರಸ್ತೆ ನಿರ್ಮಾಣವಾಗಿದೆ. ಅದು ಶಿಡ್ಲಘಟ್ಟ ರಸ್ತೆಗೆ ಸಂಪರ್ಕ ಕಲ್ಪಿಸಬೇಕಾಗಿತ್ತು. ಸುಮಾರು ವರ್ಷಗಳಿಂದ ಅದೂ ಸಹ ನನೆಗುದಿಗೆ ಬಿದ್ದಿದೆ. ವಿಧಾನಸಭಾ ಚುನಾವಣೆ ಸಮಯದಲ್ಲಿ ಎರಡು ರಸ್ತೆಗಳಿಗೆ 2 ಬಾರಿ ಶಾಸಕರು ಭೂಮಿ ಪೂಜೆ ಮಾಡಿದ್ದರು. 3 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದ್ದರು. ವರ್ಷಗಳೇ ಕಳೆದರೂ ಕಾಮಗಾರಿ ಆರಂಭವಾಗಲೇ ಇಲ್ಲ. ಇಂದಿಗೂ ಗುಂಡಿಗಳ ರಸ್ತೆಯಲ್ಲೇ ಜನರು ಓಡಾಡಬೇಕಾಗಿದೆ.

ಬಡಾವಣೆಯಲ್ಲಿ ನೀರಿನ ಸಮಸ್ಯೆ ಹೇಳತೀರದಾಗಿದೆ. ಕನಿಷ್ಠ ಶುದ್ಧ ನೀರಿನ ಘಟಕವನ್ನು ಸ್ಥಾಪನೆ ಮಾಡಿಲ್ಲ. 15-20 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡುತ್ತಾರೆ. 15-20 ಬಿಂದಿಗೆ ಮಾತ್ರ ಬರುತ್ತವೆ. ಪ್ರತಿನಿತ್ಯ ನೀರಿನ ಸಮಸ್ಯೆ ಎದುರಿಸಬೇಕಾಗಿದೆ. ನೀರಿಗಾಗಿ ಹಲವಾರು ಬಾರಿ ನಗರಸಭೆಯ ಅಧಿಕಾರಿಗಳಿಗೆ ಮನವಿ, ಪ್ರತಿಭಟನೆ, ಹೋರಾಟ ಮಾಡಿದ್ದರೂ ಪ್ರತಿಫಲ ಮಾತ್ರ ಇಲ್ಲ. ಎಂದಿನಂತೆ ಮಾಮೂಲಿ ಭರವಸೆ ನೀಡುತ್ತಾರೆ.

ನೀರು ಬಿಡುವ ವಾಟರ್‌ಮೆನ್‌ಗಳು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಕೆಲವು ಕಡೆ ಕನಿಷ್ಠ ಮಟ್ಟದಲ್ಲಿ ಪೂರೈಸುತ್ತಾರೆ. ಕೆಲವು ಕಡೆ ಬಿಡುವುದೇ ಇಲ್ಲ. ಪ್ರಶ್ನಿಸಿದರೆ ಮೋಟರ್ ಸುಟ್ಟಿದೆ. ಕೆಟ್ಟು ಹೋಗಿದೆ. ವಿದ್ಯುತ್ ಇಲ್ಲ ಎಂಬ ನೆಪಗಳನ್ನು ಹೇಳುತ್ತಾರೆ ಎಂದು ನಾಗರಿಕರು ಆರೋಪಿಸುತ್ತಾರೆ.

ರಸ್ತೆ, ಚರಂಡಿಗಳ ಸ್ವಚ್ಛತೆ ಮರೀಚಿಕೆ ಆಗಿದೆ. ಇರುವ ಕೆಲವೇ ಕೆಲವು ಚರಂಡಿಗಳಲ್ಲಿ ಕಸಕಡ್ಡಿಗಳು ತುಂಬಿದೆ. ಕೊಳಚೆ ನೀರು ರಸ್ತೆಗಳ ಮೇಲೆ ಹರಿಯುತ್ತದೆ. ತಿಂಗಳುಗಟ್ಟಲೇ ಚರಂಡಿಗಳು ಸ್ವಚ್ಛವಾಗದ ಕಾರಣ ವಾತಾವರಣ ದುರ್ನಾತ ಬೀರುತ್ತಿದೆ. ಈ ಚರಂಡಿಗಳು ಸೊಳ್ಳೆಗಳ ಆವಾಸಸ್ಥಾನಗಳಾಗಿವೆ. ಸೊಳ್ಳೆಗಳ ಉತ್ಪತ್ತಿಯಿಂದ ಬಡಾವಣೆಯಲ್ಲಿ ಸದಾ ಕಾಲವೂ ಒಬ್ಬರಲ್ಲ ಒಬ್ಬರು ಡೆಂಗಿ, ಚಿಕನ್‍ಗುನ್ಯಾ ಮತ್ತಿತರ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿ ಆಸ್ಪತ್ರೆಗಳಿಗೆ ಅಲೆದಾಡುವುದು ಸಾಮಾನ್ಯವಾಗಿದೆ.

ಬಡಾವಣೆಯು ಕೊಳಚೆಯ ಕೊಂಪೆಯಾಗಿದೆ. ಬೀದಿ ದೀಪಗಳ ನಿರ್ವಹಣೆಯೂ ಇಲ್ಲ. ಮುಖ್ಯ ರಸ್ತೆಗಳಲ್ಲಿ ಮಾತ್ರ ದೀಪಗಳನ್ನು ಅಳವಡಿಸಲಾಗಿದೆ. ಅವುಗಳು ಹಾಳಾದರೆ ಬದಲಾಯಿಸಲು ತಿಂಗಳುಗಟ್ಟಲೇ ಕಾಯಬೇಕಾಗಿದೆ. ಇತರ ರಸ್ತೆಗಳಲ್ಲಿ ದೀಪಗಳು ಇಲ್ಲದೆ ಕತ್ತಲೆ ಅಡರುತ್ತದೆ.  ಮಳೆಯ ನೀರು ನಿಂತು ಕೊಚ್ಚೆ ಗುಂಡಿಗಳಲ್ಲಿ ಹಂದಿಗಳು ರಾಡಿ ಎರಚಾಡುತ್ತವೆ. ಬಡಾವಣೆಯ ಸಮಯದಲ್ಲಿ ಪೊಲೀಸ್ ಠಾಣೆ, ಸಮುದಾಯಭವನ, ಪಾರ್ಕ್, ದೇವಾಲಯ ಸ್ಥಾಪನೆಗಾಗಿ ಮೀಸಲಿಟ್ಟಿರುವ ಸ್ಥಳಗಳು ಕೊಳಚೆ ಗುಂಡಿಗಳಾಗಿವೆ. ಸಮುದಾಯ ಭವನ ಹೊರತುಪಡಿಸಿ ಇತರೆ ಯಾವುದು ಸ್ಥಾಪನೆಯಾಗಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.