ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬತ್ತಿದ ಕೆರೆ: ಕುಸಿದಿದೆ ಅಂತರ್ಜಲ ಮಟ್ಟ

ದಿನೇದಿನೇ ಹೆಚ್ಚಾಗುತ್ತಿದೆ ನೀರಿನ ಸಮಸ್ಯೆ
Published 17 ಮಾರ್ಚ್ 2024, 6:30 IST
Last Updated 17 ಮಾರ್ಚ್ 2024, 6:30 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ನಗರ ಹಾಗೂ ತಾಲ್ಲೂಕಿನ ಬಹುತೇಕ ಕಡೆ ಈಗಾಗಲೆ ಕುಡಿಯುವ ಮತ್ತು ದಿನ ನಿತ್ಯದ ಬಳಕೆಯ ನೀರಿಗೆ ಸಮಸ್ಯೆ ಶುರುವಾಗಿದೆ. ಕೃಷಿ ಬಳಕೆಯ ನೀರಿನ ಕೊರತೆ ರೈತರನ್ನು ಕಂಗೆಡಿಸಿದೆ. ಬೇಸಿಗೆ ಆರಂಭದ ದಿನಗಳಲ್ಲೆ ಬಿಸಿಲ ಬೇಗೆಗಿಂತಲೂ ನೀರಿನ ಬವಣೆಯ ಬಿಸಿಯೆ ಹೆಚ್ಚು ಎಲ್ಲರನ್ನೂ ಕಾಡುತ್ತಿದೆ.

ಈ ವರ್ಷ ಜನವರಿಯಿಂದಲೆ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ಫೆಬ್ರುವರಿ ಮಾರ್ಚ್‌ನಲ್ಲಿ ಇನ್ನಷ್ಟು ಬಿಗಡಾಯಿಸಿದೆ. ಕುಡಿಯುವ ನೀರಿಗಾಗಲಿ, ಕೃಷಿ ಬಳಕೆಯ ನೀರಿಗಾಗಲಿ ಕೊಳವೆಬಾವಿಗಳನ್ನು ನೆಚ್ಚಿಕೊಂಡಿರುವ ಇಲ್ಲಿ ಕೆರೆಗಳಲ್ಲಿ ತುಂಬಿರುವ ಮಳೆ ನೀರೆ ಆಸರೆ. ಆದರೆ ಕಳೆದ ವರ್ಷ ವಾಡಿಕೆಯಷ್ಟು ಮಳೆ ಬೀಳದ ಕಾರಣ ನವೆಂಬರ್, ಡಿಸೆಂಬರ್ ವೇಳೆಗಾಗಲೆ ಕೆರೆಗಳು ಬತ್ತಿವೆ. ಅಂತರ್ಜಲ ಮಟ್ಟ ಕುಸಿದಿದೆ. ಕೊಳವೆಬಾವಿಗಳಲ್ಲೂ ದಿನ ಕಳೆದಂತೆ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿಯತೊಡಗಿದೆ. ನೀರಿಗೆ ಹಾಹಾಕಾರ ಶುರುವಾಗಿದೆ.

ನಗರದಲ್ಲಿ ನೀರಿನ ಸಮಸ್ಯೆ: ಶಿಡ್ಲಘಟ್ಟದಲ್ಲಿ 55 ಸಾವಿರದಷ್ಟು ಜನಸಂಖ್ಯೆ ಇದೆ. ಒಳಚರಂಡಿ(ಯುಜಿಡಿ) ವ್ಯವಸ್ಥೆ ಇರುವ ನಗರಗಳಲ್ಲಿ ನಿಯಮದಂತೆ ಪ್ರತಿ ವ್ಯಕ್ತಿಗೂ ಪ್ರತಿ ದಿನ 135 ಲೀಟರ್‌ ಕುಡಿಯುವ ಮತ್ತು ಇತರೆ ಬಳಕೆಯ ನೀರನ್ನು ಪೂರೈಕೆ ಮಾಡಬೇಕಾಗುತ್ತದೆ.

ಆದರೆ ಶಿಡ್ಲಘಟ್ಟದಲ್ಲಿ ಕೇವಲ 50 ಲೀಟರ್‌ನಷ್ಟು ನೀರನ್ನು ಮಾತ್ರವೇ ಪೂರೈಸಲಾಗುತ್ತಿದೆ. ನಿಯಮದಂತೆ ಹಾಗೂ ಅಗತ್ಯದಂತೆ ನೀರು ಪೂರೈಕೆಯಾಗುತ್ತಿಲ್ಲ. ಶೇ 30ರಷ್ಟು ಮಾತ್ರ ಪೂರೈಸುತ್ತಿದ್ದು ಶೇ 70ರಷ್ಟು ಕೊರತೆ ಕಾಡುತ್ತಿದೆ.

ಶಿಡ್ಲಘಟ್ಟ ನಗರಕ್ಕೆ ಕುಡಿಯುವ ನೀರಿಗಾಗಿ ನಗರದಲ್ಲಿ ಹಾಗೂ ನಗರದ ಸುತ್ತಲಿನ ಕೆರೆಗಳ ಅಂಗಳದಲ್ಲಿ 127 ಕೊಳವೆಬಾವಿ ಕೊರೆಸಿದ್ದು ಸಧ್ಯಕ್ಕೆ 105 ಕೊಳವೆ ಬಾವಿಗಳಿಂದ ನೀರು ಪೂರೈಸಲಾಗುತ್ತಿದೆ. ಖಾಸಗಿಯ 10 ಕೊಳವೆಬಾವಿಗಳನ್ನು ವಶಕ್ಕೆ ಪಡೆದಿದ್ದು ಅವುಗಳ ಪೈಕಿ 5 ಕೊಳವೆಬಾವಿಗಳಿಂದ ನೀರು ಪೂರೈಸಲಾಗುತ್ತಿದೆ.

ವಾರಕ್ಕೊಮ್ಮೆ ಕುಡಿಯುವ ನೀರು ಪೂರೈಸಲಾಗುತ್ತಿತ್ತಾದರೂ ಇದೀಗ ಬೇಸಿಗೆ ಆರಂಭವಾಗುತ್ತಿದ್ದಂತೆ 10-12 ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇಷ್ಟು ಪ್ರಮಾಣದ ನೀರನ್ನು ಪೂರೈಸುವುದು ಕೂಡ ಕಷ್ಟವಾಗಲಿದೆ.

ಸಾರ್ವಜನಿಕ ಕೊಳವೆಬಾವಿಗಳಲ್ಲಿ ನೀರಿಲ್ಲದಾದಾಗ ಖಾಸಗಿ ಕೊಳವೆಬಾವಿಗಳನ್ನು ವಶಕ್ಕೆ ಪಡೆಯಬೇಕಾಗುತ್ತದೆ. ಆದರೆ ತಿಂಗಳಿಗೆ ಇಂತಿಷ್ಟು ಹಣ ಕೊಡಲು ಸರ್ಕಾರ ಸಿದ್ದವಿದ್ದರೂ ಖಾಸಗಿ ಕೊಳವೆಬಾವಿಯ ಮಾಲೀಕರು ನೀರು ಬಿಡಲು ತಯಾರಿಲ್ಲ. ಕಾರಣ ಅವರ ಕೊಳವೆಬಾವಿಗಳಲ್ಲೂ ನೀರಿನ ಕೊರತೆ ಕಾರಣ.

ಜತೆಗೆ ನಾನಾ ಕಾರಣಗಳನ್ನು ಮುಂದಿಟ್ಟು ಬಿಲ್ ಹಣ ನೀಡುವುದು ಬಹಳ ತಡವಾಗುವುದರಿಂದ ಸಾಕಷ್ಟು ರೈತರು ತಮ್ಮ ಕೊಳವೆಬಾವಿಗಳಲ್ಲಿ ನೀರಿದ್ದರೂ ಸರ್ಕಾರಕ್ಕೆ ಬಿಟ್ಟುಕೊಡಲು ಹಿಂದು ಮುಂದು ನೋಡುವಂತಾಗಿದ್ದು ಕುಡಿಯುವ ನೀರಿನ ಸಮಸ್ಯೆಗೆ ಇದೊಂದು ಕಾರಣವೂ ಆಗಿದೆ.

ಬತ್ತಿದ ಕೆರೆಗಳು: ಬಯಲುಸೀಮೆ ಭಾಗದ ಶಿಡ್ಲಘಟ್ಟದಲ್ಲಿ ಮಳೆನೀರು, ಕೆರೆ ನೀರೆ ಆಧಾರ. ಕೊಳವೆಬಾವಿ ಕೊರೆಸಬೇಕು ನೀರು ಹೊರತೆಗೆದು ಬಳಸಬೇಕಾದ ಸ್ಥಿತಿ. ಆದರೆ ಶಿಡ್ಲಘಟ್ಟ ತಾಲ್ಲೂಕಿನ ಯಾವ ಕೆರೆಯಲ್ಲೂ ಸಧ್ಯಕ್ಕೆ ನೀರಿಲ್ಲ. ಹಾಗಾಗಿ ಕೊಳವೆಬಾವಿಗಳಲ್ಲೂ ಅಂತರ್ಜಲದ ಮಟ್ಟ ಗಣನೀಯ ಮಟ್ಟಕ್ಕೆ ಕುಸಿದಿದೆ.

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸುಮಾರು 11.3 ಮೀಟರ್‌ನಷ್ಟು ಅಂತರ್ಜಲ ಕುಸಿದಿದೆ. ಕಳೆದ ವರ್ಷ ಫೆಬ್ರುವರಿಯಲ್ಲಿ 24.08 ಮೀಟರ್‌ನ ಹಂತದಲ್ಲಿದ್ದ ಅಂತರ್ಜಲ ಮಟ್ಟ ಈ ವರ್ಷ ಫೆಬ್ರುವರಿ ವೇಳೆಗೆ 35.13 ಮೀಟರ್‌ನಷ್ಟು ಆಳಕ್ಕೆ ಕುಸಿದಿದೆ.

ರೇಷ್ಮೆ ತಯಾರಿಕೆಗೆ ಬೇಕು ನೀರು: ಶಿಡ್ಲಘಟ್ಟ ನಗರದಲ್ಲಿ 4,600ಕ್ಕೂ ಹೆಚ್ಚು ರೇಷ್ಮೆ ನೂಲು ಬಿಚ್ಚಾಣಿಕೆ ಘಟಕಗಳಿದ್ದು ನೂಲು ಬಿಚ್ಚಾಣಿಕೆಗೆ ಹೆಚ್ಚಿನ ನೀರಿನ ಅಗತ್ಯವಿದೆ. ನಗರಸಭೆಯಿಂದ ಪೂರೈಕೆಯಾಗುವ ನೀರು ಸಾಕಾಗದೆ ಬಹುತೇಕ ಎಲ್ಲ ರೀಲರುಗಳೂ ಹಣ ಕೊಟ್ಟು ನೀರನ್ನು ಖರೀದಿಸುತ್ತಾರೆ.

ವರ್ಷದ ಎಲ್ಲ ದಿನಗಳಲ್ಲೂ ರೀಲರುಗಳು ನೀರನ್ನು ಖರೀದಿಸುವುದು ವಾಡಿಕೆ. ಬೇಸಿಗೆಯಲ್ಲಿ ಅದರ ಪ್ರಮಾಣ ದುಪ್ಪಟ್ಟಾಗಲಿದೆ. ರೀಲರುಗಳು ಟ್ಯಾಂಕರ್ ನೀರಿಗಾಗಿಯೆ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಬೇಕಿದೆ.

ಜಲ ಜೀವನ್‌ನಿಂದಲೂ ಬರುತ್ತಿಲ್ಲ ನೀರು: ಕೇಂದ್ರ ಸರ್ಕಾರದ ಜಲ ಜೀವನ್ ಮನೆ ಮನೆಗೂ ಜಲ ಯೋಜನೆ ಸಾಕಷ್ಟು ಗ್ರಾಮಗಳಲ್ಲಿ ಇನ್ನೂ ಕಾಮಗಾರಿ ನಡೆಯುತ್ತಿದೆ. ಬಹುತೇಕ ಗ್ರಾಮಗಳಲ್ಲಿ ಟೆಂಡರ್ ಪ್ರಕ್ರಿಯೆ ಮುಗಿದಿಲ್ಲ. ಸರ್ಕಾರ ರೂಪಿಸಿರುವ ನೀತಿ ನಿಯಮಗಳಿಂದ ಕಾಮಗಾರಿ ಸಾಕಷ್ಟು ನಿಧಾನಗತಿಯಿಂದ ಸಾಗುತ್ತಿದೆ. ಬೇಸಿಗೆಯ ಕಾಲಕ್ಕೆ ಜಲ ಜೀವನ್ ಯೋಜನೆಯ ನೀರು ಸಿಗಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ಬೇಸಿಗೆಯಲ್ಲಿ ನೀರಿನ ಬವಣೆ ಮಿತಿ ಮೀರುತ್ತಿದೆ.

ಕೊಳವೆ ಬಾವಿಯೊಳಗೆ ಕ್ಯಾಮೆರಾ ಬಿಟ್ಟು ನೀರು ಎಷ್ಟಿದೆ ಎಲ್ಲೆಲ್ಲಿ ಗ್ಯಾಪ್ ಇದೆ ಎಂಬುದನ್ನು ಪರೀಕ್ಷಿಸುತ್ತಿರುವುದು
ಕೊಳವೆ ಬಾವಿಯೊಳಗೆ ಕ್ಯಾಮೆರಾ ಬಿಟ್ಟು ನೀರು ಎಷ್ಟಿದೆ ಎಲ್ಲೆಲ್ಲಿ ಗ್ಯಾಪ್ ಇದೆ ಎಂಬುದನ್ನು ಪರೀಕ್ಷಿಸುತ್ತಿರುವುದು

ಗ್ರಾಮೀಣ ಭಾಗದ ನೀರಿನ ಸಮಸ್ಯೆ

ಮಿತ್ತನಹಳ್ಳಿ ತಾದೂರು ಜಂಗಮಕೋಟೆ ಎಲ್.ಎನ್.ಹೊಸೂರು ಕಲ್ಯಾಪುರ ಗ್ರಾಮಗಳಲ್ಲಿ ಈಗಾಗಲೆ ಖಾಸಗಿ ಕೊಳವೆಬಾವಿಗಳಿಂದ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ. ಕೆಂಪನಹಳ್ಳಿ ಭಕ್ತರಹಳ್ಳಿ ಚೀಮಂಗಲ ವಲ್ಲಪನಹಳ್ಳಿ ಸೀತಹಳ್ಳಿ ಮದ್ದೇಗಾರಹಳ್ಳಿ ತಲದುಮ್ಮನಹಳ್ಳಿ ಹನುಮಂತಪುರ ಸೇರಿದಂತೆ 40 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡುವ ಲಕ್ಷಣಗಳಿವೆ.

ಹಳ್ಳಿಗಳಲ್ಲೂ ಟ್ಯಾಂಕರ್ ನೀರು

ನಗರ ಪ್ರದೇಶದಲ್ಲಿ ರೂಢಿಯಲ್ಲಿದ್ದ ಟ್ಯಾಂಕರ್ ನೀರಿನ ಬಳಕೆ ಇತ್ತೀಚಿನ ವರ್ಷಗಳಲ್ಲಿ ಗ್ರಾಮೀಣ ಭಾಗದಲ್ಲೂ ಹೆಚ್ಚುತ್ತಿದೆ. ನಗರಕ್ಕೆ ಹೋಲಿಸಿಕೊಂಡರೆ ನೂರು ನೂರೈವತ್ತು ರೂಪಾಯಿ ಕಡಿಮೆಗೆ ಹಳ್ಳಿಗಳಲ್ಲೂ ಟ್ಯಾಂಕರ್ ನೀರನ್ನು ಪೂರೈಸುವ ಪರಿಪಾಠ ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿದೆ. ಸಂಪ್‌ ನಿರ್ಮಾಣ ಮಾಡಿಕೊಂಡ ಮನೆಯವರು ಪೂರ್ತಿ ಟ್ಯಾಂಕರ್ ಹಾಕಿಸಿಕೊಂಡರೆ ಸಂಪ್‌ ಇಲ್ಲದವರು ಅರ್ಧ ಟ್ಯಾಂಕರ್ ಅಥವಾ ಮಿನಿ ಟ್ಯಾಂಕರ್ ನೀರನ್ನು ಹಾಕಿಸಿಕೊಳ್ಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT