ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುದುರೆ ವ್ಯಾಪಾರಕ್ಕೆ ನಾವು ಜಗ್ಗುವುದಿಲ್ಲ: ಕೆ.ಎನ್.ಕೇಶವರೆಡ್ಡಿ

ಪತ್ರಿಕಾಗೋಷ್ಠಿ ಮೂಲಕ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ ಕಾಂಗ್ರೆಸ್‌ ಮುಖಂಡರು
Last Updated 12 ಫೆಬ್ರುವರಿ 2020, 14:25 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ನಗರಸಭೆಯ ಚುನಾವಣೆಯಲ್ಲಿ ಆಡಳಿತಾರೂಢ ಪಕ್ಷದವರು ಆಡಳಿತ ಯಂತ್ರ ದುರುಪಯೋಗಪಡಿಸಿಕೊಂಡು, ಹಣ ಹೊಳೆ ಹರಿಸಿದರೂ ಕಾಂಗ್ರೆಸ್‌ ಅಭ್ಯರ್ಥಿಗಳ ಮೇಲೆ ವಿಶ್ವಾಸವಿಟ್ಟು ಮತ ಹಾಕಿದ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇವೆ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಚುನಾವಣೆಯಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲ್ಲಬೇಕಿತ್ತು. ಆದರೆ ಈ ಚುನಾವಣೆಯಲ್ಲಿ ಸಚಿವ ಸುಧಾಕರ್ ಅವರ ರಾಜಕೀಯ ಒತ್ತಡದಿಂದಾಗಿ ಅಧಿಕಾರಿಗಳು ಕಾಂಗ್ರೆಸ್‌ ಅಭ್ಯರ್ಥಿಗಳು, ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಕಿರುಕುಳ ನೀಡಿ, ತೊಂದರೆ ಉಂಟು ಮಾಡಿದರು’ ಎಂದು ತಿಳಿಸಿದರು.

‘ಆದರೂ ಮತದಾರರು ಆಸೆ, ಆಮಿಷಗಳಿಗೆ ಬಲಿಯಾಗದೆ ಕಾಂಗ್ರೆಸ್‌ಗೆ ಮತ ನೀಡಿದ್ದಾರೆ. ಹಿರಿಯ ಸದಸ್ಯ ರಫೀಕ್ ಅವರ ನೇತೃತ್ವದಲ್ಲಿ ನಗರದ ಅಭಿವೃದ್ಧಿಗೆ ಜವಾಬ್ದಾರಿಯುತವಾಗಿ ಶ್ರಮಿಸುತ್ತೇವೆ’ ಎಂದರು.

ಮುಖಂಡ ನಂದಿ ಆಂಜನಪ್ಪ ಮಾತನಾಡಿ, ‘ನಮ್ಮ ಅಭ್ಯರ್ಥಿಗಳು ಸುಧಾಕರ್ ಅವರ ರೀತಿ ದ್ರೋಹ ಬಗೆಯುವವರಲ್ಲ. ಬೆಳೆಸಿದ ಪಕ್ಷಕ್ಕೆ ದ್ರೋಹ ಬಗೆಯುವಂತಹ ಅಯೋಗ್ಯರಲ್ಲ. ಪ್ರಾಮಾಣಿಕರು. ಯಾರೇ ಆಸೆ, ಆಮಿಷ ಒಡ್ಡಿದರೂ ನಮ್ಮ ಜತೆಯಲ್ಲಿಯೇ ಇರುತ್ತಾರೆ. ಪಕ್ಷ ಬದಲಿಸುವುದಿಲ್ಲ. ಕುದುರೆ ವ್ಯಾಪಾರಕ್ಕೆ ನಾವು ಜಗ್ಗುವುದಿಲ್ಲ’ ಎಂದು ಹೇಳಿದರು.

ಮುಖಂಡ ಕೆ.ವಿ.ನವೀನ್ ಕಿರಣ್ ಮಾತನಾಡಿ, ‘ಕಳೆದ ಉಪಚುನಾವಣೆಯಲ್ಲೂ ನಗರದ 18 ವಾರ್ಡ್‌ಗಳಲ್ಲಿ ಮತದಾರರು ಕಾಂಗ್ರೆಸ್‌ಗೆ ಬಹುಮತ ನೀಡಿದ್ದರು. ನಗರ ಕಾಂಗ್ರೆಸ್ ಭದ್ರಕೋಟೆಯಾಗಿದೆ, ಇಲ್ಲಿ ಯಾವತ್ತೂ ಕಾಂಗ್ರೆಸ್‌ ಮುಕ್ತ ಮಾಡಲು ಸಾಧ್ಯವಿಲ್ಲ. ಹಾಗೇ ಹೇಳುವವರೇ ಮುಕ್ತವಾಗಿ ಹೋಗುತ್ತಾರೆ’ ಎಂದು ತಿಳಿಸಿದರು.

ನಗರಸಭೆ ಹಿರಿಯ ಸದಸ್ಯ ಎಸ್‌.ಎಂ.ರಫೀಕ್ ಮಾತನಾಡಿ, ‘ವಿಶೇಷ ಅನುದಾನ ಮತ್ತು 14ನೇ ಹಣಕಾಸು ಯೋಜನೆ ಅಡಿ ಸರಿಯಾಗಿ ಕಾಮಗಾರಿಗಳು ನಡೆಯುತ್ತಿಲ್ಲ ಎಂಬ ಆರೋಪಗಳು ಬಂದಿವೆ. ಈ ಬಗ್ಗೆ ತನಿಖೆ ನಡೆಸಿ ಮುಲಾಜಿಲ್ಲದೆ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುತ್ತೇವೆ. ಭ್ರಷ್ಟಾಚಾರದಲ್ಲಿ ತೊಡಗಿರುವ ನಗರಸಭೆ ಸಿಬ್ಬಂದಿಯನ್ನು ಪತ್ತೆ ಹಚ್ಚಿ ಬದಲಾಯಿಸುತ್ತೇವೆ. ಸಾರ್ವಜನಿಕರ ಆಶಯದಂತೆ ಪಕ್ಷಬೇಧ ಮರೆತು ಅಭಿವೃದ್ಧಿಗೆ ಶ್ರಮಿಸುತ್ತೇವೆ’ ಎಂದರು.

ಮುಖಂಡ ಶ್ಯಾಮ್ ಮಾತನಾಡಿ, ‘ಈ ಹಿಂದೆ ನಗರಸಭೆ ಆಡಳಿತ ಒಬ್ಬರ ಹಿಡಿತದಲ್ಲಿ ಇತ್ತು. ಹೀಗಾಗಿ, ಜನಪರ ಕಾರ್ಯಕ್ರಮಗಳು ನಡೆಯದೆ ಭ್ರಷ್ಟಾಚಾರದ ಕೂಪವಾಗಿತ್ತು. ಮುಂಬರುವ ದಿನಗಳಲ್ಲಿ ನಾವು ಸಾಮೂಹಿಕ ನಾಯಕತ್ವದಲ್ಲಿ ನಗರಸಭೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತೇವೆ’ ಎಂದು ಹೇಳಿದರು.

ಮಾಜಿ ಶಾಸಕ ಎಸ್‌.ಎಂ.ಮುನಿಯಪ್ಪ, ಮುಖಂಡ ಯಲುವಹಳ್ಳಿ ರಮೇಶ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT