ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ನೀತಿಗೆ ಆಪರೇಟರ್‌ಗಳ ವಿರೋಧ

ಭಾರತೀಯ ದೂರಸಂಪರ್ಕ ಪ್ರಾಧಿಕಾರದ ನಿರ್ಧಾರ ಖಂಡಿಸಿ ಜಿಲ್ಲಾ ಡಿಜಿಟಲ್‌ ಕೇಬಲ್‌ ಆಪರೇಟರ್ಸ್‌ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳಿಂದ ಪ್ರತಿಭಟನೆ
Last Updated 27 ಡಿಸೆಂಬರ್ 2018, 10:34 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಭಾರತೀಯ ದೂರಸಂಪರ್ಕ ಪ್ರಾಧಿಕಾರದ (ಟ್ರಾಯ್‌) ಹೊಸ ನೀತಿಯನ್ನು ಮರುಪರಿಶೀಲನೆ ಮಾಡಿ, ಸಾಧಕ ಬಾಧಕಗಳ ಕುರಿತು ಚರ್ಚೆ ನಡೆಸಬೇಕು ಎಂದು ಆಗ್ರಹಿಸಿ ಚಿಕ್ಕಬಳ್ಳಾಪುರ ಜಿಲ್ಲಾ ಕೇಬಲ್ ಆಪರೇಟರ್‌ಗಳ ಸಂಘದ ಪದಾಧಿಕಾರಿಗಳು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ನಗರದಿಂದ ಜಿಲ್ಲಾಡಳಿತ ಭವನದ ವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಟ್ರಾಯ್ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಚಿಕ್ಕಬಳ್ಳಾಪುರ ಗಣೇಶ್‌ ಟೆಲಿ ಎಂಟರ್‌ಟೈನ್‌ಮೆಂಟ್‌ ವ್ಯವಸ್ಥಾಪಕ ಟಿ.ಆನಂದ್‌ಕುಮಾರ್, ‘ಟ್ರಾಯ್‌ ಹೊಸದಾಗಿ ಕೇಬಲ್‌ ಸಂಪರ್ಕ ಶುಲ್ಕ ನಿಗದಿ ಮಾಡಿದೆ. ಅದರ ಪ್ರಕಾರ, ಕೇಬಲ್ ಅಪರೇಟರ್‌ಗಳು 100 ಉಚಿತ ಚಾನೆಲ್‌ಗಳನ್ನು ತಮ್ಮ ಜಾಲದಲ್ಲಿ ಪ್ರಸಾರ ಮಾಡಿ ಗ್ರಾಹಕರಿಂದ ₹130 ಮತ್ತು ಶೇ 18 ಜಿಎಸ್‌ಟಿ ಸೇರಿಸಿ ₹ 154 ಪಡೆಯಬೇಕು’ ಎಂದು ಹೇಳಿದರು.

‘100 ಉಚಿತ ಚಾನೆಲ್‌ಗಳ ಹೊರತಾಗಿ ಗ್ರಾಹಕರು ತಮಗೆ ಇಷ್ಟವಾದ ಪೇ ಚಾನಲ್‌ಗಳನ್ನು, ಆ ಚಾನೆಲ್‌ಗಳು ನಿಗದಿಪಡಿಸುವ ಎಂಆರ್‌ಪಿ ದರ ಹಾಗೂ ಜಿಎಸ್‌ಟಿ ನೀಡಿ ಪಡೆಯಬಹುದು. ಕೇಬಲ್ ಅಪರೇಟರುಗಳು ಇದೇ ದರದಂತೆ ತಮ್ಮ ಗ್ರಾಹಕರಿಂದ ಹಣ ಪಡೆಯಬೇಕು’ ಎಂದರು.

‘ಟ್ರಾಯ್ ಹೊಸ ನೀತಿಯಿಂದ ಕೇಬಲ್ ಆಪರೇಟರ್‌ ಮತ್ತು ಜನರು ಇಬ್ಬರಿಗೂ ತೊಂದರೆಯಾಗುತ್ತದೆ. ನಾವೀಗ ₹250 ಸುಮಾರು 400 ಚಾನೆಲ್‌ಗಳನ್ನು ನೀಡುತ್ತಿದ್ದೇವೆ. ಆದರೆ ಹೊಸ ನೀತಿಯಲ್ಲಿ ಗ್ರಾಹಕರು ಪ್ರತಿಯೊಂದು ಚಾನೆಲ್‌ಗೂ ಹಣ ಪಾವತಿಸಿದರೆ ₹1,000 ದಾಟುತ್ತದೆ. ಜನಸಾಮಾನ್ಯರಿಗೆ ಈ ಹೊರೆ ಭರಿಸಲು ಸಾಧ್ಯವೆ? ಇದೊಂದು ಅವೈಜ್ಞಾನಿಕ ನೀತಿ. ಇದನ್ನು ಕೈಬಿಡಬೇಕು’ ಎಂದು ಆಗ್ರಹಿಸಿದರು.

ಗಣೇಶ್‌ ಟೆಲಿ ಎಂಟರ್‌ಟೈನ್‌ಮೆಂಟ್‌ ಪಾಲುದಾರ ಗಂಗಾರೆಡ್ಡಿ ಮಾತನಾಡಿ, ‘ಟ್ರಾಯ್‌ನ ಹೊಸ ನೀತಿಯಿಂದ ಚಾನೆಲ್‌ಗಳ ಮೇಲೆ ಹಾಗೂ ಇದನ್ನೆ ನಂಬಿ ಬದುಕುತ್ತಿರುವ ಕೇಬಲ್ ಆಪರೇಟರ್‌ಗಳ ಮೇಲೆ ದೊಡ್ಡ ಪ್ರಮಾಣದ ತೊಂದರೆಯಾಗಲಿದೆ, ನಾವು ಪ್ರತಿ ವರ್ಷ ಲಕ್ಷಗಟ್ಟಲೆ ಹಣ ಹೂಡಿ, ತಂತಿಗಳು, ಸೆಟಪ್ ಬಾಕ್ಸ್‌ಗಳನ್ನು ತಂದು ಜನರಿಗೆ ಉತ್ತಮ ಸೇವೆಯನ್ನು ನೀಡಲು 24 ಘಂಟೆ ಶ್ರಮಿಸುತ್ತಿದ್ದೇವೆ ಆದರೆ ಟ್ರಾಯ್ ಕೇಬಲ್ ಆಪರೇಟರ್‌ಗಳನ್ನು ಗಮನಕ್ಕೆ ತೆಗೆದುಕೊಳ್ಳದೆ ಕಾರ್ಪೊರೇಟ್ ಕಂಪೆನಿ ಮಾಲೀಕರುಗಳ ಹಿತ ಕಾಲು ಮುಂದಾಗಿದೆ’ ಎಂದು ಆರೋಪಿಸಿದರು.

‘ಕೇಬಲ್ ಟಿವಿ ಉದ್ಯೋಗವನ್ನು 25–30 ವರ್ಷಗಳಿಂದ ಮಾಡುತ್ತಿರುವ ನಿರ್ವಾಹಕರು ಬೀದಿ ಪಾಲಾಗುವ ಭೀತಿ ಎದುರಾಗುತ್ತಿದೆ. ಹೊಸ ದರ ನೀತಿಯಿಂದ ಗ್ರಾಹಕರಿಗೆ ಯಾವುದೇ ಉಪಯೋಗವಿಲ್ಲ. ಇದು ಕೇವಲ ಚಾನಲ್‌ಗಳಿಗೆ ಅನುಕೂಲವಾಗಿದೆ. ಹಳೇ ನೀತಿಯನ್ನೇ ಮುಂದುವರೆಬೇಕು’ ಎಂದು ಒತ್ತಾಯಿಸಿದರು.

ಕೇಬಲ್ ಆಪರೇಟರ್‌ ಚಿಮಂಗಲ ಪ್ರಶಾಂತ್ ಮಾತನಾಡಿ, ‘ಈ ವರೆಗೆ ಗ್ರಾಹಕರಿಂದ ತಿಂಗಳಿಗೆ ₹250 ಪಡೆದುಕೊಳ್ಳುತ್ತಿದ್ದೆವು. ಈಗಾಗಲೇ ಗ್ರಾಹಕರು ಕರೆ ಮಾಡಿ ನನಗೆ ₹30, ₹40 ಪ್ಯಾಕೇಜ್ ಕೊಡಿ ಎಂದು ಕೇಳುತ್ತಿದ್ದಾರೆ. ಹೀಗಾದರೆ ನಾವು ಹಾಕಿದ ಬಂಡವಾಳಕ್ಕೆ ಬಡ್ಡಿ ಕೂಡ ವಾಪಸ್ ಬರುವುದಿಲ್ಲ. ಒಂದು ಸಂಪರ್ಕದಿಂದ ನಮಗೆ ತಿಂಗಳಿಗೆ ಕನಿಷ್ಠ ₹200 ಸಿಕ್ಕರೆ ನಾವು ಬದುಕಬಹುದು. ಇಲ್ಲದಿದ್ದರೆ ಹೊಸ ನೀತಿಯಿಂದ ನಮಗೆ ತುಂಬಾ ನಷ್ಟವಾಗುತ್ತದೆ’ ಎಂದು ತಿಳಿಸಿದರು.

‘ಕೇಬಲ್ ದರ 150 ಶುಲ್ಕ ಎನ್ನುವುದನ್ನು ಪ್ರಚಾರ ಮಾಡಿ ಜನರಿಗೆ ತಪ್ಪು ಸಂದೇಶ ನೀಡಲಾಗುತ್ತಿದೆ. ಕೆಲವು ವಾಹಿನಿಯವರು ಹೆಚ್ಚು ದರ ಇಟ್ಟುಕೊಂಡಿದ್ದಾರೆ. ಅಂಬಾನಿಯಂತಹ ಬಲಾಡ್ಯರನ್ನು ಬದುಕಿಸಲು ಕೇಬಲ್ ಆಪರೇಟರ್‌ಗಳನ್ನು ಗಣನೆಗೆ ತೆಗೆದುಕೊಳ್ಳದೇ ದ್ರೋಹ ಮಾಡಲಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿವಿಧ ತಾಲ್ಲೂಕುಗಳ ಕೇಬಲ್ ಆಪರೇಟರ್‌ಗಳಾದ ಕುಮಾರಸ್ವಾಮಿ, ಗಂಗಾಧರ್, ರಾಜೇಂದ್ರ ಪ್ರಸಾದ್, ಜಗನ್ನಾಥ್, ನಾಗೇಂದ್ರ, ದಿನೇಶ್, ಸುರೇಶ್‌, ಶ್ರೀನಿವಾಸ್‌ರೆಡ್ಡಿ, ಹಫೀಜುಲ್ಲಾ, ಶ್ರಿನಾಥ್, ರವಿಚಂದ್ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT