ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಕೃಷಿ ಕಾಯ್ದೆ ರೈತರಿಗೆ ಮರಣಶಾಸನ

ಪ್ರತಿಭಟನೆಯಲ್ಲಿ ಮಾಜಿ ಶಾಸಕ ವೈ.ಎಸ್.ವಿ. ದತ್ತ ಆತಂಕ
Last Updated 9 ಡಿಸೆಂಬರ್ 2020, 5:26 IST
ಅಕ್ಷರ ಗಾತ್ರ

ಕಡೂರು: ‘ರೈತರು ಗುಡುಗಿದರೆ ಸರ್ಕಾರ ನಡುಗುವ ಕಾಲ ಈಗಿಲ್ಲ. ರೈತರ ಪರ ಯಾರಿಗೂ ಅನುಕಂಪ- ಅಭಿಮಾನವಿಲ್ಲವಾಗಿದೆ’ ಎಂದು ಮಾಜಿ ಶಾಸಕ ವೈ.ಎಸ್.ವಿ.ದತ್ತ ವಿಷಾದಿಸಿದರು.

ರೈತ ವಿರೋಧಿ ಕಾಯ್ದೆ ವಿರೋಧಿಸಿ ತಾಲ್ಲೂಕಿನ 9 ಮೈಲಿಕಲ್ಲಿನಲ್ಲಿ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ರೈತರನ್ನು ಅಸ್ಥಿಪಂಜರವನ್ನಾಗಿಸಿ ಕಾರ್ಪೊರೇಟ್ ಸಂಸ್ಕೃತಿಗೆ ಎಲ್ಲವನ್ನೂ ನೀಡುವುದೇ ಈ ಕಾಯ್ದೆಗಳ ಸಾಧನೆ. ಎಪಿಎಂಸಿ ಕಣ್ಮುಚ್ಚುತ್ತದೆ. ಮುಂದೆ ರೈತರಿಗೆ ಬೆಂಬಲ ಬೆಲೆ ತಪ್ಪಿಹೋಗುತ್ತದೆ. ಸರ್ಕಾರಿ ನ್ಯಾಯಬೆಲೆ ಅಂಗಡಿಗಳು ಮುಚ್ಚಿಹೋಗುತ್ತದೆ. ಬಂಡವಾಳಶಾಹಿಗಳ ಕಪಿಮುಷ್ಟಿಗೆ ರೈತರು ಸಿಲುಕುತ್ತಾರೆ. ನೂರಾರು ಎಕರೆ ಇದ್ದ ರೈತರು ಕೂಲಿ ಕಾರ್ಮಿಕರಾಗು ತ್ತಾರೆ. ಭೂ ರಹಿತರ ಪಾಡೇನೆಂಬುದು ಊಹಿಸಲೂ ಆಗದು’ ಎಂದರು.

‘ಇನ್ನು ಭೂ ಸುಧಾರಣಾ ಕಾಯ್ದೆಯ ಉದ್ದೇಶ ರೈತರನ್ನು ಉದ್ದರಿಸುವುದಕ್ಕಲ್ಲ. ನಿಧಾನಗತಿಯಲ್ಲಿ ರೈತರನ್ನು ಬಂಡವಾಳಶಾಹಿಗಳ ಗುಲಾಮರನ್ನಾಗಿಸುವ ಉದ್ದೇಶ ಈ ಕಾಯ್ದೆಯದು. ರೈತರ ಪಾಲಿನ ಈ ಮರಣಶಾಸನ ರದ್ದಾಗಲೇಬೇಕು’ ಎಂದು ಆಶಿಸಿದರು.

ಎಪಿಎಂಸಿ ಸದಸ್ಯ ಬಿದರೆ ಜಗದೀಶ್ ಮಾತನಾಡಿ, ‘ಎಪಿಎಂಸಿ ತಿದ್ದುಪಡಿ ಕಾಯ್ದೆಯಿಂದ ಸಿಬ್ಬಂದಿಗೆ ಸಂಬಳ ಕೊಡುವುದಕ್ಕೂ ಆಗದಂತಹ ಪರಿಸ್ಥಿತಿ ತಂದಿಟ್ಟಿರುವುದೇ ಸರ್ಕಾರದ ಸಾಧನೆಯಾಗಿದೆ. ರೈತ ವಿರೋಧಿ ಕಾಯ್ದೆಗಳಿಂದ ನಮ್ಮನ್ನು ಎಲ್ಲಿಗೆ ಕೊಂಡೊಯ್ಯುವರೋ ತಿಳಿಯದು. ಇಂದಿನ ಬೆಳವಣಿಗೆಗಳನ್ನು ಕಂಡರೆ ಕೇಂದ್ರ ಸರ್ಕಾರದ ಕುರುಡು ನೀತಿಗೆ ರಾಜ್ಯ ಸರ್ಕಾರದ ‘ಜೀ ಹುಜೂರ್ ಸಂಸ್ಕೃತಿ’ ಎದ್ದು ಕಾಣುತ್ತದೆ’ ಎಂದರು.

ರೈತ ಪ್ರತಿನಿಧಿ ನಂಜೇಗೌಡ ಮಾತನಾಡಿ, ‘ರೈತ ವಿರೋಧಿಗಳಿಗೆ ಅಸ್ತ್ರಕೊಟ್ಟು ಮೈ ಗುದ್ದಿಸಿಕೊಂಡಂಥ ಪರಿಸ್ಥಿತಿ ರೈತರದ್ದಾಗಿದೆ. ನಮ್ಮ ಗೋಳನ್ನು ಕೇಳುವವರು ಯಾರೂ ಇಲ್ಲ. ಆಳುವವರಿಗೆ ರೈತರ ನೋವು ಗೊತ್ತಿಲ್ಲ’ ಎಂದು ವಿಷಾದಿಸಿದರು.

ಈ ಕುರಿತು ಮನವಿಯನ್ನು ತಹಶೀಲ್ದಾರ್ ಉಮೇಶ್ ಅವರಿಗೆ ಸಲ್ಲಿಸಲಾಯಿತು. ನಂತರ ರೈತರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೊಷಣೆ ಕೂಗಿ ಎಪಿಎಂಸಿ ಕಾಯ್ದೆಯ ಗೆಜೆಟ್ ನೋಟಿಫಿಕೇಷನ್ ಪ್ರತಿಗೆ ಬೆಂಕಿಹಚ್ಚಿ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಸ್ಥಳೀಯ ಘಟಕದ ಅಧ್ಯಕ್ಷ ವೈ.ಎಸ್.ರವಿಪ್ರಕಾಶ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಕೋಡಿಹಳ್ಳಿಮಹೇಶ್ವರಪ್ಪ, ಪಾತೇನಹಳ್ಳಿ ಚೌಡಪ್ಪ, ಪ್ರೇಂ ಕುಮಾರ್, ಯರದಕೆರೆ ರಾಜಪ್ಪ, ಬೀರೂರು ಪುರಸಭೆ ಸದಸ್ಯ ಮುಬಾರಕ್, ಭಾವಿಮನೆ ಮಧು, ದಲಿತ ಮುಖಂಡ ಶೂದ್ರ ಶ್ರೀನಿವಾಸ್ ಮತ್ತು ಸುತ್ತಮುತ್ತಲಿನ ರೈತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT