ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀರೂರು: ನಾಗರಾಜ್ ಕೈಹಿಡಿದ ಮಿಶ್ರಬೆಳೆ

ಸೌರಕೃಷಿ ಪಂಪಿಂಗ್ ಮೂಲಕ ವಿದ್ಯುತ್ ಕೊರತೆ ನೀಗಿಸಿಕೊಂಡ ಕೃಷಿಕ
Last Updated 6 ಅಕ್ಟೋಬರ್ 2021, 4:34 IST
ಅಕ್ಷರ ಗಾತ್ರ

ಬೀರೂರು: ‘ಅನಂತ ಅವಕಾಶಗಳ ಆಗರವಾಗಿರುವ ಕೃಷಿ ಎನ್ನುವುದು ಮಣ್ಣಿನ ಜತೆಗಿನ ನಮ್ಮ ಪ್ರೀತಿಯ ಕುರುಹು ಮತ್ತು ಬದ್ಧತೆಯನ್ನು ಬೇಡುವ ಸಂಸ್ಕೃತಿಯಾಗಿದೆ’ ಎನ್ನುತ್ತಾರೆ ಚಿಕ್ಕಬಳ್ಳೇಕೆರೆಯ ಪ್ರಗತಿಪ‍ರ ಕೃಷಿಕ ಎಲ್.ನಾಗರಾಜ್.

ಬೀರೂರಿನಲ್ಲಿ ವಾಸವಿದ್ದು, ಸುಮಾರು 25 ಕಿ.ಮೀ ದೂರದಲ್ಲಿರುವ ಚಿಕ್ಕಬಳ್ಳೇಕೆರೆಗೆ 15 ವರ್ಷಗಳಿಂದ ನಿತ್ಯವೂ ಪ್ರಯಾಣಿಸಿ 5 ಎಕರೆ ಜಮೀನಿನಲ್ಲಿ ತೆಂಗು, ಅಡಿಕೆ, ರಾಗಿ, ಆಲೂಗೆಡ್ಡೆ, ನಾನಾ ಹಣ್ಣಿನ ಮರಗಳಿಗೆ, ಪ್ರಾಕೃತಿಕ ಗಿಡಗಳಿಗೆ ಆಸರೆ ಕಲ್ಪಿಸಿದ್ದಾರೆ. ಕಷ್ಟ-ನಷ್ಟಗಳಿಗೆ ಎದೆಗುಂದದೆ ಕೃಷಿ ಪ್ರೀತಿಯನ್ನು ಉಳಿಸಿಕೊಂಡ ಫಲವಾಗಿ ಇಂದು ತೆಂಗು ಫಸಲು ನೀಡುವ ಹಂತ ತಲುಪಿದ್ದರೆ, ಹಣ್ಣಿನ ಮರಗಳು ಹಕ್ಕಿ, ಪಕ್ಷಿಗಳಿಗೆ ನೆರಳು, ಆಹಾರ ಒದಗಿಸುತ್ತಿವೆ.

ಮನೆಯ ಕಣಜ ತುಂಬಿಸಿ ಹೆಚ್ಚುವರಿಯಾದ ರಾಗಿ ಮಾರುಕಟ್ಟೆ ತಲುಪಿ ಕೃಷಿ ವೆಚ್ಚಗಳಿಗೆ ನೆರವು ನೀಡುತ್ತಿದೆ. ಅಡಿಕೆ ಇನ್ನೂ ಪ್ರಾಥಮಿಕ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ಕುಟುಂಬ ನಿರ್ವಹಣೆಗೆ ದಾರಿ ತೋರುತ್ತದೆ ಎನ್ನುವ ನಂಬಿಕೆ ಅವರದ್ದು.

‘ನಮ್ಮದು ಕೃಷಿ ಕಾರ್ಮಿಕರ ಕುಟುಂಬ. ತಂದೆಯವರ ಶ್ರಮದ ಫಲವಾಗಿ ತಾಯಿಯ ತವರು ಚಿಕ್ಕಬಳ್ಳೇಕೆರೆಯಲ್ಲಿ ಜಮೀನು ಉಳುಮೆ ಮಾಡುವ ಅವಕಾಶ ದೊರಕಿತ್ತು. ಸರ್ಕಾರದ ವಿವಿಧ ಯೋಜನೆಗಳ ನೆರವು ಪಡೆದು ಕೃಷಿಕಾಯಕ ಮುಂದುವರಿಸಿದೆವು. ಮೊದಲೆಲ್ಲ ರಾಗಿ ಬೆಳೆದರೆ ಮಳೆ ಕೊರತೆಯಿಂದ ಬೆಳೆ ಒಣಗಿದರೆ, ನೀರಿನ ಕೊರತೆಯಿಂದ ಈರುಳ್ಳಿ, ಆಲೂಗೆಡ್ಡೆ ಗೋಲಿ ಗಾತ್ರಕ್ಕೆ ಬೆಳೆದು ಅಣಕಿಸುತ್ತಿತ್ತು. ಇಂತಹ ಸನ್ನಿವೇಶದಲ್ಲಿ ಧೈರ್ಯಗೆಡಬಾರದು ಎಂದು ಮುಂದುವರಿದು ನಿರಂತರ ಶ್ರಮದ ಮೂಲಕ ಕೃಷಿ ಮುಂದುವರಿಸಿದೆವು’ ಎಂದು ತನ್ನ ಕೃಷಿ ಪಯಣವನ್ನು ತೆರೆದಿಡುತ್ತಾರೆ ನಾಗರಾಜ್.

‘ಎಷ್ಟೋ ಬಾರಿ ನಾವು ಮಾಡಿದ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿಲ್ಲ ಎನ್ನುವ ನೋವು ಕಾಡುತ್ತಿತ್ತು. ಆದರೆ, ಕೃಷಿ ಎನ್ನುವುದು ರೈತನ ಸ್ವಾಭಿಮಾನದ ಪ್ರತೀಕ, ಸ್ವಾವಲಂಬನೆಯ ದ್ಯೋತಕ ಎನ್ನುವ ಕೆಚ್ಚು ಹುರಿದುಂಬಿಸುತ್ತಿತ್ತು. ಮನೋಸ್ಥೈರ್ಯದ ಫಲವಾಗಿ ಕೊಳವೆಬಾವಿ ನೆರವಿನಿಂದ ತೆಂಗಿನ ಸಸಿಗಳನ್ನು ಕೂರಿಸಿ, ಅಂತರಬೆಳೆ ಪದ್ಧತಿಯಲ್ಲಿ ಮತ್ತೆ ರಾಗಿ, ಶೇಂಗಾ, ಎಳ್ಳು ಬೆಳೆಯುತ್ತಿದ್ದೆವು. ಈಗ ತೆಂಗು ಕಲ್ಪವೃಕ್ಷವಾಗಿ ನಿಂತು ಧೈರ್ಯ ತುಂಬುತ್ತಿದೆ’ ಎನ್ನುತ್ತಾರೆ ಅವರು.

ಹನಿ ನೀರಾವರಿ ಅಳವಡಿಕೆ: ‘ಸುತ್ತಮುತ್ತ ಎಲ್ಲೂ ಇರದ ಸೋಲಾರ್ ಫಲಕ ಅಳವಡಿಸಿ ಸೌರಕೃಷಿ ಪಂಪಿಂಗ್ ವ್ಯವಸ್ಥೆ ಜಾರಿ ಮಾಡಿ ಹನಿ ನೀರಾವರಿ ಅನುಸರಿಸಿದೆವು. ಗ್ರಾಮೀಣ ಪ್ರದೇಶದಲ್ಲಿ ಸಿಗುವ ಕೇವಲ ಮೂರು ಗಂಟೆ ಕಾಲದ ತ್ರೀಫೇಸ್ ವಿದ್ಯುತ್ ಉಂಟು ಮಾಡುತ್ತಿದ್ದ ಕೊರತೆಯನ್ನು ಈ ಸೌರವ್ಯವಸ್ಥೆ ತುಂಬಿಕೊಟ್ಟು, ಮೋಡರಹಿತ ವಾತಾವರಣದಲ್ಲಿ 10 ಗಂಟೆಗಳ ಕಾಲ ಪಂಪ್‍ಸೆಟ್ ಚಾಲನೆಯಲ್ಲಿರಲು ನೆರವಾಗಿದೆ. ನಮ್ಮ ಜಮೀನಿನಲ್ಲಿ ಮಿಶ್ರಬೆಳೆ ಪದ್ಧತಿ ಅನುಸರಿಸಲೂ ಅನುಕೂಲವಾಯಿತು’ ಎನ್ನುತ್ತಾರೆ ನಾಗರಾಜ್‌.

ಮುಂದಿನ ದಿನಗಳಲ್ಲಿ ಇದೇ ಜಮೀನಿನಲ್ಲಿ ಮನೆ ನಿರ್ಮಿಸಿ ಹಸು, ಕುರಿಗಳ ಸಾಕಣೆ ಮೂಲಕ ಪಶು ಸಂಗೋಪನೆ ಮಾಡುವ ಕನಸನ್ನು ನಾಗರಾಜ್‌ ಹೊಂದಿದ್ದಾರೆ. ಅವರ ಸಂಪರ್ಕ ಸಂಖ್ಯೆ- 9972992925.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT