ಭಾನುವಾರ, ಮೇ 16, 2021
22 °C

ಮದ್ಯಕ್ಕೆ ಪರ್ಯಾಯ ಹುಡುಕಿಕೊಂಡ ವ್ಯಸನಿಗಳು: ಮತ್ತೇರಿಸಿಕೊಳ್ಳಲು ನಾನಾ ಕರಾಮತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನರಸಿಂಹರಾಜಪುರ(ಚಿಕ್ಕಮಗಳೂರು): ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಸರ್ಕಾರ ಲಾಕ್‌ಡೌನ್ ಘೋಷಿಸಿರುವುದರಿಂದ ಹಲವು ದಿನಗಳಿಂದ ಮದ್ಯದಂಗಡಿಗಳನ್ನು ಮುಚ್ಚಿದೆ. ಹೀಗಾಗಿ ಮದ್ಯವ್ಯಸನಿಗಳು ಮತ್ತೇರಿಸಿಕೊಳ್ಳಲು ನಾನಾ ಕರಾಮತ್ತು ನಡೆಸುತ್ತಿದ್ದಾರೆ ಎಂಬ ದೂರು ಸಾರ್ವಜನಿಕರಿಂದ ಕೇಳಿ ಬಂದಿದೆ.

‘ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿರುವ ಸ್ಪೀರಿಟ್ ಅಂಶವನ್ನು ಒಳಗೊಂಡಿರುವ ತಂಪು ಪಾನೀಯಗಳನ್ನು ಮತ್ತೇರಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ. ವಿವಿಧ ತಂಪು ಪಾನಿಯಗಳು, ಸೋಡಾ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಈ ಪಾನೀಯಕ್ಕೆ ಮೆಡಿಕಲ್‌ಗಳಲ್ಲಿ ಲಭ್ಯವಾಗುವ ತಲೆನೋವಿಗೆ ಬಳಸುವ ಮಾತ್ರೆಯನ್ನು ಪುಡಿ ಮಾಡಿ ಮಿಶ್ರಣ ಮಾಡಿ ಬಳಸುತ್ತಿದ್ದಾರೆ. ಇದರ ಎರಡು ಮಾತ್ರೆಗಳು ನೈಂಟಿಯಷ್ಟು ಕಿಕ್ ನೀಡಿದರೆ, ನಾಲ್ಕು ಮಾತ್ರೆಗಳನ್ನ ಮಿಶ್ರ ಮಾಡಿದರೆ ಒಂದು ಕ್ವಾಟರ್‌ನಷ್ಟು ಕಿಕ್ ನೀಡುತ್ತವೆ’ ಎಂದು ಹೆಸರು ಹೇಳಲಿಚ್ಛಿಸದ ವ್ಯಕ್ತಿಯೊಬ್ಬರು ಮಾಹಿತಿ ನೀಡಿದರು.

ಈ ರೀತಿ ಜನಪ್ರಿಯವಾಗಿರುವ ತಲೆನೋವಿನ ಮಾತ್ರೆಯೊಂದನ್ನು ಬಳಸಿ ಮದ್ಯಪ್ರಿಯರು ಅಮಲು ಬರಸಿಕೊಳ್ಳಲು ಬಳಸುತ್ತಿರುವ ಬಗ್ಗೆ ‘ಪ್ರಜಾವಾಣಿ’ಯು ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ.ಎಲ್ದೋಸ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ‘ಪ್ರತಿಯೊಂದು ತಂಪು ಪಾನೀಯದಲ್ಲೂ ಕಾರ್ಬೋನಿಕ್ ಆ್ಯಸಿಡ್ ಇರುತ್ತದೆ. ಇದಕ್ಕೆ ಮಾತ್ರೆ ಮಿಶ್ರಣ ಮಾಡಿ ಕುಡಿದಾಗ ಮತ್ತೇರುತ್ತದೆ. ಈ ರೀತಿ ಮಾತ್ರೆಗಳನ್ನು ಮಿಶ್ರ ಮಾಡಿ ತಂಪು ಪಾನೀಯ ಕುಡಿಯುವುದು ಜೀವಕ್ಕೆ ಹಾನಿಕಾರಕವಾಗಿದ್ದೂ, ಮಿದುಳಿಗೆ, ಹೃದಯ ಹಾಗೂ ಕಿಡ್ನಿಗೂ ಹಾನಿಯನ್ನುಂಟು ಮಾಡುತ್ತದೆ’ ಎಂದು ತಿಳಿಸಿದರು.

ಲಾಕ್‌ಡೌನ್‌ನಿಂದ ಸರ್ಕಾರ ಮದ್ಯ ಮಾರಾಟ ನಿಲ್ಲಿಸಿರುವುದರಿಂದ ಸಾಕಷ್ಟು ಕುಟುಂಬಗಳು ನೆಮ್ಮದಿಯ ಬದುಕನ್ನು ಕಂಡುಕೊಂಡಿವೆ. ನಮಗೆ ಕೂಲಿ ಇಲ್ಲದಿದ್ದರೂ ಪರವಾಗಿಲ್ಲ. ಸರ್ಕಾರ ಲಾಭ, ನಷ್ಟದ ಲೆಕ್ಕಿಸದೆ ಆದಾಯಕ್ಕೆ ಪರ್ಯಾಯ ಮಾರ್ಗ ಕಂಡುಕೊಂಡು ಮದ್ಯವನ್ನು ಶಾಶ್ವತವಾಗಿ ನಿಲ್ಲಿಸಬೇಕೆಂದು ಬಹುತೇಕ ಮಹಿಳೆಯ ಅಭಿಪ್ರಾಯವಾಗಿದೆ.

ಮತ್ತೇರಿಸಿಕೊಳ್ಳಲು ಮದ್ಯವ್ಯಸನಿಗಳು ಕಂಡುಕೊಂಡಿರುವ ಅನ್ಯ ಮಾರ್ಗವನ್ನು ತಡೆ ಹಿಡಿಯುವ ಕಾರ್ಯ ಸರ್ಕಾರ ಮಾಡಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.

‘ಹೃದಯ, ಮಿದುಳು, ಕಿಡ್ನಿಗೆ ಹಾನಿ’

‘ತಂಪು ಪಾನೀಯದಲ್ಲಿ ಕಾರ್ಬೋನಿಕ್ ಆ್ಯಸಿಡ್ ಇರುತ್ತದೆ. ಇದಕ್ಕೆ ಮಾತ್ರೆ ಮಿಶ್ರಣ ಮಾಡಿ ಕುಡಿದಾಗ ಮತ್ತೇರುತ್ತದೆ. ಈ ರೀತಿ ಮಾತ್ರೆಗಳನ್ನು ಮಿಶ್ರ ಮಾಡಿ ತಂಪು ಪಾನೀಯ ಕುಡಿಯುವುದು ಜೀವಕ್ಕೆ ಹಾನಿಕಾರಕವಾಗಿದೆ. ಮಿದುಳಿಗೆ, ಹೃದಯ ಹಾಗೂ ಕಿಡ್ನಿಗೂ ಹಾನಿಯನ್ನುಂಟು ಮಾಡುತ್ತದೆ’ ಎಂದು ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ.ಎಲ್ದೋಸ್ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು