ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2 ಗಂಟೆಯಲ್ಲಿ ಮೂಡಿಗೆರೆಯಿಂದ ಮಂಗಳೂರು: ಆಂಬುಲೆನ್ಸ್‌ ಚಾಲಕನ ಕಾರ್ಯಕ್ಕೆ ಶ್ಲಾಘನೆ

Last Updated 2 ನವೆಂಬರ್ 2020, 19:45 IST
ಅಕ್ಷರ ಗಾತ್ರ

ಮೂಡಿಗೆರೆ: ಬೆಂಕಿ ಅವಘಡದಲ್ಲಿ ಗಾಯಗೊಂಡಿದ್ದ ಬಾಲಕಿಯನ್ನು ಆಂಬುಲೆನ್ಸ್‌ನಲ್ಲಿ ಸೈರನ್ ಇಲ್ಲದಿದ್ದರೂ ಕೇವಲ ಎರಡು ತಾಸಿನಲ್ಲಿ ಮಂಗಳೂರು ತಲುಪಿಸಿದ ಮೂಡಿಗೆರೆಯ ಚಾಲಕಮಂಜುನಾಥ್ ಅವರ ಸಾಹಸ ಪ್ರಶಂಸೆಗೆ ಪಾತ್ರವಾಗಿದೆ.

ಪಟ್ಟಣದ ಮಹಾತ್ಮಗಾಂಧಿ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯ ಆಂಬುಲೆನ್ಸ್ ಚಾಲಕನಾಗಿರುವ ಮಂಜುನಾಥ್ (ಚೇತನ್) ಅವರ ಸಾಹಸಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.

ಸೋಮವಾರ ಬೆಳಿಗ್ಗೆ ಗೋಣಿಬೀಡು ಹೋಬಳಿಯ ಜಿ. ಹೊಸಳ್ಳಿ ಗ್ರಾಮದ ಬಾಲಕಿಯೊಬ್ಬಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಎಂಜಿಎಂ ಆಸ್ಪತ್ರೆಗೆ ಕರೆ ತರಲಾಗಿತ್ತು. ಶೇ 90ರಷ್ಟು ಸುಟ್ಟ ಗಾಯವಾಗಿದ್ದರಿಂದ ಕೂಡಲೇ ಮಂಗಳೂರಿಗೆ ಕಳುಹಿಸಲು ಸಿದ್ಧತೆ ಮಾಡಿ, ಮಂಜುನಾಥ್ ಅವರ ಆಂಬುಲೆನ್ಸ್ ಮೂಲಕ ಕಳುಹಿಸಿಕೊಡಲಾಗಿತ್ತು. ಆದರೆ, ಚಾರ್ಮಾಡಿ ಘಾಟಿಗೆ ತಲುಪುತ್ತಿದ್ದಂತೆ ಆಂಬುಲೆನ್ಸ್ ನ ಸೈರನ್ ಕೈಕೊಟ್ಟಿದ್ದು, ವಾಹನ ಸಾಗಾಟಕ್ಕೆ ಅಡ್ಡಿಯಾಗಿತ್ತು. ಕೂಡಲೇ ಜಾಗೃತರಾದ ಮಂಜುನಾಥ್, ಕರ್ನಾಟಕ ಆಂಬುಲೆನ್ಸ್ ಆರ್ಗನೈಜೆಷನ್ ವಾಟ್ಸ್‌ಆ್ಯಪ್‌ ಗ್ರೂಪಿಗೆ ಮಾಹಿತಿ ರವಾನಿಸಿದ್ದು, ಉಜಿರೆಯಿಂದ ಮಂಗಳೂರಿನವರೆಗೂ ಬೇರೆ ಬೇರೆ ಆಂಬ್ಯುಲೆನ್ಸ್‌ಗಳು ಬೆಂಗಾವಲಾಗಿ ತೆರಳಿ, ಗಾಯಾಳುವನ್ನು ಎರಡು ಗಂಟೆಗಳೊಳಗೆ ಮಂಗಳೂರು ತಲುಪಲು ನೆರವಾಗಿದ್ದಾರೆ.

‘ಚಾರ್ಮಾಡಿ ಘಾಟಿಯಲ್ಲಿಯೇ ಸೈರನ್ ಕೆಟ್ಟು ಹೋಯಿತು. ನೆಟ್‌ವರ್ಕ್ ಗೆ ಬರುತ್ತಿದ್ದಂತೆ ಸಂದೇಶ ರವಾನಿಸಿದೆ. ಉಜಿರೆ ಬಳಿಯಿಂದ ಜಲೀಲ್ ಎಂಬುವವರು, ಗುರುವಾಯನಕೆರೆಯಿಂದ ಬಿ.ಸಿ.ರೋಡ್ ವರೆಗೂ ಎಸ್‌ಕೆಎಸ್ಎಸ್‌ಎಫ್ ಸಂಸ್ಥೆಯವರು ಹಾಗೂ ಬಿ.ಸಿ.ರೋಡ್‌ನಿಂದ ಮಂಗಳೂರಿನವರೆಗೂ ಗಣೇಶ್ ಅವರು ಬೆಂಗಾವಲಾಗಿ ಬಂದು ದಾರಿ ಮಾಡಿಕೊಟ್ಟರು. ಇದರಿಂದ ಗಾಯಾಳುವನ್ನು ಸುರಕ್ಷಿತವಾಗಿ ನಿಗದಿತ ಅವಧಿಯೊಳಗೆ ಸಾಧಿಸಲು ಸಾಧ್ಯವಾಯಿತು’ ಎಂದು ಮಂಜುನಾಥ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಏಳು ವರ್ಷಗಳಿಂದ ಗುತ್ತಿಗೆ ನೌಕರರಾಗಿ ದುಡಿಯುತ್ತಿರುವ ಮಂಜುನಾಥ್ ಹಲವು ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡು ಚಿರಪರಿತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT