ಭಾನುವಾರ, ಜೂಲೈ 12, 2020
28 °C

ದುಗ್ಗಾಣಿ ಬೆಲೆ; ಅನಾನಸು ಬೆಳೆಗಾರ ಅತಂತ್ರ

ಬಿ.ಜೆ.ಧನ್ಯಪ್ರಸಾದ್‌ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ಅನಾನಸು ಹಣ್ಣಿಗೆ ಮಾರುಕಟ್ಟೆ ಸಮಸ್ಯೆ, ದುಗ್ಗಾಣಿ ಬೆಲೆ, ಹೊಲದಿಂದ ಸಾಗಣೆ ತಾಪತ್ರಯದಿಂದಾಗಿ ಬೆಳೆಗಾರ ನಷ್ಟದ ಶೂಲಕ್ಕೆ ಸಿಲುಕುವಂತಾಗಿದೆ.

ತರೀಕೆರೆ ತಾಲ್ಲೂಕಿನ ಗೋಪಾಲ ಕಾಲೊನಿಯ ರೈತ ಜಯಣ್ಣ ಅವರು ಒಂದು ಎಕರೆ ಜಮೀನಿನಲ್ಲಿ ಅನಾನಸು ಬೆಳೆದಿದ್ದಾರೆ. ಫಸಲು ಚೆನ್ನಾಗಿದ್ದು, ಕಾಯಿ ಕೊಯ್ಲಿನ ಹಂತದಲ್ಲಿದೆ.

ಪುಡಿ ವರ್ತಕರ ದುಗ್ಗಾಣಿ ಬೆಲೆ ತಂತ್ರ, ಮಾರುಕಟ್ಟೆ ಸಮಸ್ಯೆಯಿಂದಾಗಿ ಕಂಗಾಲಾಗಿದ್ದಾರೆ. ಐದು ಕ್ವಿಂಟಲ್‌ನಷ್ಟು ಅನಾನಸನ್ನು ಕೆ.ಜಿ.ಗೆ ₹ 4 ದರದಲ್ಲಿ ಸ್ಥಳೀಯ ಸಣ್ಣಪುಟ್ಟ ವ್ಯಾಪಾರಿಗಳಿಗೆ ಮಾರಾಟ ಮಾಡಿದ್ದಾರೆ.

ಬೆಳೆಗಾರ ಜಯಣ್ಣ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಈ ಭಾಗದಲ್ಲಿ ಪ್ರಾಯೋಗಿಕವಾಗಿ ಅನಾನಸು ಬೆಳೆದಿದ್ದೇನೆ. ಫಸಲು ಚೆನ್ನಾಗಿದೆ, ಮಾರಾಟ ಮಾಡಲು ಬೆಲೆ ಇಲ್ಲ. ಕೆ.ಜಿ.ಗೆ ₹ 4 ದರಕ್ಕೆ ಕೇಳುತ್ತಾರೆ. ಕನಿಷ್ಠ ₹ 20ರಿಂದ 25 ದರ ಸಿಕ್ಕಿದರೆ ಗಿಟ್ಟುತ್ತದೆ. ಇಲ್ಲದಿದ್ದರೆ ಬೆಳೆಯಲು ತಗುಲಿದ ಖರ್ಚು ಸಿಗಲ್ಲ’ ಎಂದು ಸಂಕಷ್ಟ ತೋಡಿಕೊಂಡರು.

‘ಇನ್ನು 80 ಕ್ವಿಂಟಲ್‌ಗೂ ಹೆಚ್ಚು ಕಾಯಿ ಹೊಲದಲ್ಲಿ ಇದೆ. ಹೊಲದಿಂದ ಸಾಗಣೆ ಮಾಡುವುದು ಬಹಳ ತಾಪತ್ರಯವಾಗಿದೆ. ಸರ್ಕಾರ ಖರೀದಿಗೆ ಮುಂದಾಗಿ, ಬೆಳೆಗಾರರ ಕೈಹಿಡಿಯಬೇಕು’ ಎಂದು ಕೋರಿದರು.

‘ಈ ಭಾಗದವರು ಅನಾನಸು ಅನ್ನು ಸಾಮಾನ್ಯವಾಗಿ ಹಾಸನ ಮಾರುಕಟ್ಟೆಗೆ ಒಯ್ಯುತ್ತಾರೆ. ಹಾಸನದಿಂದ ರಾಜಸ್ತಾನ, ದೆಹಲಿ, ಪಂಜಾಬ್‌, ಹರಿಯಾಣ ಮೊದಲಾದ ಕಡೆಗಳಿಗೆ ರವಾನೆಯಾಗುತ್ತದೆ. ಹೊಲದಿಂದ ಸ್ಥಳೀಯ ಮಾರುಕಟ್ಟೆ ಸಾಗಿಸುವುದೂ ಕಷ್ಟವಾಗಿದೆ’ ಎಂಬುದು ರೈತರ ಅಳಲು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು