ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡಿಗೆರೆಯ ತಳವಾರದಲ್ಲಿ ಮತ್ತೊಂದು ಕಾಡಾನೆ ಸೆರೆ

ಬೆಳಗೋಡು ಗ್ರಾಮದ ಬಳಿ ಕಂಡುಬಂದ ಕಾಡಾನೆ: ಕಾರ್ಯಾಚರಣೆ ಯಶಸ್ವಿ
Last Updated 4 ಡಿಸೆಂಬರ್ 2022, 5:45 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಮೂಡಿಗೆರೆ: ತಾಲ್ಲೂಕಿನ ಕುಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಡಾನೆಗಳ ಸೆರೆ ಕಾರ್ಯಾಚರಣೆಯು ಶನಿವಾರ ಮುಂದುವರಿದಿದ್ದು, ಮಧ್ಯಾಹ್ನದ ವೇಳೆಗೆ ಎರಡನೇ ಕಾಡಾನೆಯನ್ನು ಸೆರೆ ಹಿಡಿಯಲಾಯಿತು.

ಶನಿವಾರ ಬೆಳಿಗ್ಗೆ 6 ರಿಂದಲೇ ಕಾಡಾನೆಗಳ ಹೆಜ್ಜೆ ಜಾಡು ಹಿಡಿದು ಸಂಚಾರವನ್ನು ಪತ್ತೆ ಹಚ್ಚುವ ಪರಿಣಿತರ ತಂಡಗಳು ಮಂಡಗುಳಿಹರ, ಕುಂಡ್ರ, ಕೆಂಜಿಗೆ, ಬೆಳಗೋಡು, ಬೈರಿಗದ್ದೆ ಗ್ರಾಮಗಳ ಅರಣ್ಯ ಪ್ರದೇಶದಲ್ಲಿ ಹುಡುಕಾಟ ನಡೆಸಿದವು. ಮಧ್ಯಾಹ್ನ 12 ರ ಸುಮಾರಿಗೆ ಬೆಳಗೋಡು ಗ್ರಾಮದ ಬಳಿ ಕಾಡಾನೆ ಇರುವುದು ಪತ್ತೆಯಾಯಿತು. ಕಾರ್ಯಾಚರಣೆಗಾಗಿ ಬಂದಿರುವ ದಸರಾ ಸಾಕಾನೆಗಳನ್ನು ದೊಡ್ಡಳ್ಳ ಗ್ರಾಮದ ಶಿಬಿರದಿಂದ ಲಾರಿಗಳ ಮೂಲಕ ಬೈರಿಗದ್ದೆ ಗ್ರಾಮಕ್ಕೆ ಕೊಂಡೊಯ್ಯಲಾಯಿತು. ಕಾಡಾನೆ ಇರುವ ಸುಳಿವು ತಿಳಿದ ವೈದ್ಯರು, ಅರಣ್ಯ ಸಿಬ್ಬಂದಿ ಬೆಳಗೋಡು ಗ್ರಾಮಕ್ಕೆ ದೌಡಾಯಿಸಿದರು. ದಟ್ಟಾರಣ್ಯದ ನಡುವೆಯಿದ್ದ ಕಾಡಾನೆಗೆ ಯಶಸ್ವಿಯಾಗಿ ಅರಿವಳಿಕೆ ಚುಚ್ಚುಮದ್ದನ್ನು ಹಾಕಲಾಯಿತು. ಚುಚ್ಚುಮದ್ದನ್ನು ಹಾಕುತ್ತಿದ್ದಂತೆ ಕಾಡಾನೆಯು ಸುಮಾರು 2 ಕಿ.ಮೀ ಯಷ್ಟು ಓಡಿ ತಳವಾರ ಸಮೀಪದ ಅರಣ್ಯವನ್ನು ತಲುಪಿ ಮಲಗಿಕೊಂಡಿತು. ಕಾಡಾನೆಯನ್ನು ಹಿಂಬಾಲಿಸಿಕೊಂಡು ಬಂದ ಸಿಬ್ಬಂದಿಯು ತಕ್ಷಣವೇ ಹಗ್ಗವನ್ನು ಬಿಗಿದರು. ಕಾಡಾನೆಯು ಎಚ್ಚರಗೊಳ್ಳುವಷ್ಟರಲ್ಲಿ ಸಾಕಾನೆಗಳನ್ನು ಬೈರಿಗದ್ದೆಯಿಂದ ತಂದು ಕಾಡಾನೆಗೆ ನಾಕಾಬಂದಿಯನ್ನು ಹಾಕಿ, ಬೆಳಗೋಡು ಗ್ರಾಮಕ್ಕೆ ತಂದು ಅಲ್ಲಿಂದ ಲಾರಿಯ ಮೂಲಕ ರಾತ್ರಿ ಎರಡು ಸಾಕಾನೆಗಳ ಸುಪರ್ದಿಯಲ್ಲಿ ದುಬಾರೆ ಆನೆ ಶಿಬಿರಕ್ಕೆ ಕಳುಹಿಸಿಕೊಡಲಾಯಿತು. ಸ್ಥಳಕ್ಕೆ ಡಿಎಫ್ಒ ಕ್ರಾಂತಿ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದರು.

ಜನಸಾಗರ:

ಕಾಡಾನೆ ಸೆರೆ ಹಿಡಿದ ಮಾಹಿತಿ ಹರಡುತ್ತಿದ್ದಂತೆ ಕುಂದೂರು ಸುತ್ತತಲ ಗ್ರಾಮಸ್ಥರು ಬೆಳಗೋಡು ಗ್ರಾಮದಲ್ಲಿ ಜಮಾಹಿಸಿದ್ದರು. ಬೈಕ್, ಕಾರುಗಳಲ್ಲಿ ಬಂದ ಜನರು, ವಾಹನ ನಿಲ್ಲಿಸಲು ಸ್ಥಳವಿಲ್ಲದೇ ಪರದಾಡುವಂತಾಯಿತು. ಆನೆಗಳನ್ನು ಸಾಗಿಸುವ ಲಾರಿಗಳು ಸಹ ಮುಖ್ಯರಸ್ತೆಗೆ ಬರಲು ಚಾಲಕರು ಹರಸಾಹಸ ಪಟ್ಟರು.

ಸಿಬ್ಬಂದಿ ಶ್ರಮ ಶ್ಲಾಘನೀಯ: ಕಾಡಾನೆ ಸೆರೆ ಕಾರ್ಯಾಚರಣೆಗಾಗಿ ಸುಮಾರು 40 ಮಂದಿ ಅರಣ್ಯ ಇಲಾಖೆ ಸಿಬ್ಬಂದಿ, 20 ಮಂದಿ ಸಾಕಾನೆ ಸಿಬ್ಬಂದಿ ನಿರಂತರವಾಗಿ ಕಾಡಾನೆ ಸೆರೆಗಾಗಿ ಕಾರ್ಯನಿರ್ವಹಿಸುತ್ತಿದ್ದು, ಸುತ್ತಮುತ್ತಲ ಗ್ರಾಮದವರಿಗೆ ಕರೆ ಮಾಡಿ, ಕಾಡಾನೆ ಬಂದ ಮಾಹಿತಿ ಪಡೆದು, ಕಾಡಾನೆ ಸಾಗಿರುವ ಜಾಡು ಹಿಡಿದು ಬೆಳಿಗ್ಗೆಯಿಂದಲೇ ಕಾರ್ಯಾಚರಣೆ ನಡೆಸುತ್ತಾರೆ. ಕಾಡಾನೆಗಳು ಸಾಗಿದ ದುರ್ಗಮ ಹಾದಿಯಲ್ಲಿ ಹೋಗಿ ಪತ್ತೆ ಮಾಡುವುದು ಸವಾಲಿನ ಕೆಲಸವಾಗಿದ್ದು, ಸಿಬ್ಬಂದಿಯ ಶ್ರಮವು ಶ್ಲಾಘನೀಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT