ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡೂರು ತಾಲ್ಲೂಕಿನ ಅಯ್ಯನಕೆರೆ ಚಟುವಟಿಕೆ ತಾಣವಾಗಿ ಅಭಿವೃದ್ಧಿಗೆ ಸಮೀಕ್ಷೆ

Last Updated 20 ಜೂನ್ 2020, 15:07 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಜಿಲ್ಲೆಯ ಕಡೂರು ತಾಲ್ಲೂಕಿನ ಅಯ್ಯನಕೆರೆ ಪರಿಸರದಲ್ಲಿ ಜಲಯಾನ, ಜಿಪ್‌ಲೈನ್‌, ಸೈಕಲ್‌ ಪಥ, ಜಲಸಾಹಸ ತರಬೇತಿ, ಶುಕುನ ಗಿರಿಗೆ ಚಾರಣದಂಥ ವೈವಿಧ್ಯಮಯ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸುವ ಉದ್ದೇಶ ಇದೆ. ಈ ನಿಟ್ಟಿನಲ್ಲಿ ಜನರಲ್‌ ತಿಮ್ಮಯ್ಯ ಸಾಹಸ ಅಕಾಡೆಮಿಯ ತಂಡ ಪರಿಶೀಲನಾ ಸಮೀಕ್ಷೆ ನಡೆಸಿದೆ’ ಎಂದು ಪ್ರವಾಸೋದ್ಯಮ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ತಿಳಿಸಿದರು.

ಶನಿವಾರ ಅಯ್ಯನಕೆರೆ ಪರಿಸರ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕೆರೆ ಪರಿಸರದ ನಿಸರ್ಗ ಸೊಬಗನ್ನು ಹೀಗಿರುವಂತೆಯೇ ಉಳಿಸಿಕೊಂಡು ಈ ಚಟುವಟಿಕೆಗಳನ್ನು ಕೈಗೊಳ್ಳಲು ಅವಕಾಶ ಇದೆ ಎಂಬ ಸಲಹೆಗಳು ವ್ಯಕ್ತವಾಗಿವೆ. ಇದೊಂದು ಅತ್ಯುತ್ತಮ ತಾಣ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಬಗ್ಗೆ ಸಭೆಯಲ್ಲಿ ಚರ್ಚಿಸಿ ವಿಸ್ತೃತ ಯೋಜನೆ ಸಿದ್ಧಪಡಿಸಲು ಕ್ರಮವಹಿಸಲಾಗುವುದು’ ಎಂದರು.

‘ಇಲ್ಲಿ ಯಾವುದೇ ಶಾಶ್ವತ ನಿರ್ಮಾಣಕ್ಕೆ (ಕಟ್ಟಡ...) ಕೈಹಾಕಲ್ಲ. ಪ್ರವಾಸೋದ್ಯಮ ಇಲಾಖೆಯಿಂದ ಒದಗಿಸಿರುವ ₹ 2.5 ಕೊಟಿ ಅನುದಾನ ಲಭ್ಯ ಇದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಎಷ್ಟು ಬೇಕಾಗುತ್ತದೆ ಎಂಬುದನ್ನು ಲೆಕ್ಕ ಹಾಕಿ ಯೋಜನೆ ಸಿದ್ಧಪಡಿಸಲಾಗುವುದು. ಯೋಜನೆ ಕಾರ್ಯಗತವಾದರೆ ದೇಶ, ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸಲು ಸಾಧ್ಯವಾಗುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಜನರಲ್‌ ತಿಮ್ಮಯ್ಯ ಸಾಹಸ ಅಕಾಡೆಮಿಯ ಜೆತ್ನಾ ತಂಡವು ಮೂರು ದಿನ ಸಮೀಕ್ಷೆ, ಅಧ್ಯಯನ ನಡೆಸಿದೆ. ಕೈಗೊಳ್ಳಬಹುದಾದ ಚಟುವಟಿಕೆಗಳ ಬಗ್ಗೆ ಸಲಹೆಗಳನ್ನು ತಂಡದವರು ನೀಡಿದ್ದಾರೆ. ಈ ಬಗ್ಗೆ ವಿವರವಾಗಿ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ. ಈ ಜಾಗವು ಚಟುವಟಿಕೆ, ಪ್ರವಾಸಿಗರ ಆಕರ್ಷಣೆಯ ತಾಣವಾದರೆ ವಾಹನ ಸೌಲಭ್ಯ ವ್ಯವಸ್ಥೆಯಾಗುತ್ತದೆ’ ಎಂದು ಉತ್ತರಿಸಿದರು.

ಟ್ರಕ್ಕಿಂಗ್‌, ಸಾಹಸ ಕ್ರೀಡಾ ಚಟುವಟಿಕೆಗಳಿಗೆ ಸಾಕಷ್ಟು ಅವಕಾಶ ಇದೆ. ಪರಿಸರವನ್ನು ಸಂರಕ್ಷಿಸಿಕೊಂಡು ಬದುಕುವುದನ್ನು ತಿಳಿಸಲು ಅವಕಾಶ ಇದೆ. ಮರಗಳನ್ನು ತಿಳಿದುಕೊಳ್ಳಬಹುದು ಎಂದು ಸಮೀಕ್ಷಾ ತಂಡದ ಸದಸ್ಯ ಉಮಾಶಂಕರ್‌ ತಿಳಿಸಿದರು.

ರೋವಿಂಗ್‌ ಮತ್ತು ಕಾಯ್ಕಿಂಗ್‌ ತರಬೇತಿ ನೀಡಲು ಉತ್ತಮ ಪರಿಸರ ಇದೆ. ಈ ಕೆರೆ ತರಬೇತಿಗೆ ಹೇಳಿ ಮಾಡಿಸಿದಂತಿದೆ. ತರಬೇತಿ ವ್ಯವಸ್ಥೆ ಮಾಡಿದರೆ ಸ್ಥಳೀಯ ಪ್ರತಿಭೆಗಳಿಗೂ ಅವಕಾಶವಾಗುತ್ತದೆ ಎಂದು ತಂಡದ ಸದಸ್ಯೆ ರೇಖಾ ಹೇಳಿದರು.

ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರೀಶ್‌ ಪಾಂಡೆ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಸ್‌.ಎನ್‌.ಶ್ರುತಿ, ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ದಯಾಶಂಕರ್‌, ಯುವ ಸಬಲೀಕರಣ ಮತ್ತು ಕೀಡ್ರಾ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ ಹುಲ್ಲಳ್ಳಿ, ಉಪ ಅರಣ್ಯಸಂರಕ್ಷಣಾಧಿಕಾರಿ ಎನ್‌.ಎಚ್‌.ಜಗನ್ನಾಥ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT