ಶುಕ್ರವಾರ, ಜನವರಿ 27, 2023
27 °C
ಬಗರ್‌ ಹುಕುಂ ಸಮಿತಿ ಸಭೆಯಲ್ಲಿ ಎಂ.ಕೆ.ಪ್ರಾಣೇಶ್ ಆರೋಪ

8 ಕಡತಕ್ಕೆ ಮಾತ್ರ ಸಾಗುವಳಿ ಚೀಟಿ: ಬಗರ್‌ಹುಕುಂ ಸಮಿತಿ ಸಭೆಯಲ್ಲಿ .ಪ್ರಾಣೇಶ್ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪ: ‘ಒಂದು ವರ್ಷದ ಹಿಂದೆ ಸ್ಥಿರೀಕರಣ ಮಾಡಲಾಗಿದ್ದ 45 ಕಡತಗಳ ಪೈಕಿ ಎಂಟಕ್ಕೆ ಮಾತ್ರ ಸಾಗುವಳಿ ಚೀಟಿ ಸಿದ್ಧಪಡಿಸಿದ್ದೀರಿ, ಜನರಿಗೆ ನಾವು ಏನೆಂದು ಉತ್ತರಿಸುವುದು’ ಎಂದು ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಅವರು ತಹಶೀಲ್ದಾರ್ ವಿಮಲ ಸುಪ್ರಿಯಾ ಅವರನ್ನು ಪ್ರಶ್ನಿಸಿದರು.

ತಾಲ್ಲೂಕು ಕಚೇರಿಯಲ್ಲಿ ಸೋಮವಾರ ನಡೆದ ಕಸಬಾ ಹಾಗೂ ಹರಿಹರಪುರ ಹೋಬಳಿ ವ್ಯಾಪ್ತಿಯ ಬಗರ್‌ ಹುಕುಂ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ‘ಡಿಸೆಂಬರ್ 8ಕ್ಕೆ ಕರೆಯುವ ಮುಂದಿನ ಸಭೆಯ ಒಳಗಾಗಿ ಸ್ಥಿರೀಕರಣಗೊಂಡ ಕಡತಗಳಿಗೆ ಸಾಗುವಳಿ ಚೀಟಿ ಸಿದ್ಧಪಡಿಸಿರಬೇಕು’ ಎಂದು ತಾಕೀತು ಮಾಡಿದರು.

‘ಅರಣ್ಯ ಇಲಾಖೆಗೆ ಕಳುಹಿಸಿದ ಕಡತಗಳಿಗೆ 15 ದಿನಗಳೊಳಗೆ ಅಭಿಪ್ರಾಯ ಸಿಗದೆ ಇದ್ದಲ್ಲಿ, ಅಂತಹ ಕಡತಗಳಿಗೆ ಸಾಗುವಳಿ ಚೀಟಿ ವಿತರಿಸಲು ಕ್ರಮ ಕೈಗೊಳ್ಳುವ ಬಗ್ಗೆ ಸಮಿತಿ ನಿರ್ಧರಿಸಿದೆ. ಕಂದಾಯ ಭೂಮಿ ಎಂದು ಸ್ಪಷ್ಟವಾಗಿ ಗೊತ್ತಿದ್ದರೂ ಅರಣ್ಯ ಇಲಾಖೆ ಅಭಿಪ್ರಾಯಕ್ಕೆ ಏಕೆ ಕಳುಹಿಸುತ್ತೀರಿ, ಅವರು(ಅರಣ್ಯ ಇಲಾಖೆ) ಅದನ್ನೂ ಅಲ್ಲಿಯೇ ಇರಿಸಿಕೊಂಡಿರುತ್ತಾರೆ’ ಎಂದು ಹೇಳಿದರು.

ವಿಮಲ ಸುಪ್ರಿಯಾ ಮಾತನಾಡಿ, ‘ಕೆಲವು ಪ್ರದೇಶಗಳು ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಬರುತ್ತಿದ್ದು, ಪರಿಶೀಲಿಸಬೇಕಾಗಿದೆ. ಆದ್ದರಿಂದ ಸಾಗುವಳಿ ಚೀಟಿ ಸಿದ್ಧಪಡಿಸಲ್ಲ’ ಎಂದರು. ಇದಕ್ಕೆ ಪ್ರಾಣೇಶ್ ಅವರು, ‘ಸ್ಥಿರೀಕರಣ ಮಾಡುವಾಗ ಅರಣ್ಯ ಇಲಾಖೆ ಅಧಿಕಾರಿಗಳೂ ಸಭೆಯಲ್ಲಿ ಇರುತ್ತಾರೆ, ಅವರ ಒಪ್ಪಿಗೆಯೊಂದಿಗೆ ಸ್ಥೀರಿಕರಣ ಮಾಡಿರುತ್ತೇವೆ’ ಎಂದರು.

ಕೊನೆಯಲ್ಲಿ ಸಭೆಗೆ ಬಂದ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್.ರಾಮಸ್ವಾಮಿ ಅವರು, ‘94ಸಿ ಅಡಿಯಲ್ಲಿ ಹಕ್ಕುಪತ್ರಕ್ಕೆ ಅರ್ಜಿ ಸಲ್ಲಿಸಿ, ಹಣವನ್ನೂ ಕಟ್ಟಿಸಿಕೊಂಡಿದ್ದಾರೆ. ಆದರೆ, ವರ್ಷ ಸಮೀಪಿಸುತ್ತ ಬಂದರೂ ಹಕ್ಕುಪತ್ರ ನೀಡುತ್ತಿಲ್ಲ’ ಎಂದು ದೂರಿದರು.

ಸಾಗುವಳಿ ಚೀಟಿ ವಿತರಣೆ: ಸಭೆಯಲ್ಲಿ 8 ಫಲಾನುಭವಿಗಳಿಗೆ ಸಾಗುವಳಿ ಚೀಟಿ ವಿತರಿಸಲಾಯಿತು. 4 ಕಡತಗಳನ್ನು ಸ್ಥಿರೀಕರಣಗೊಳಿಸಲಾಯಿತು. 5 ಹೊಸ ಕಡತಗಳನ್ನು ಸಭೆಯಲ್ಲಿ ಮಂಡಿಸಲಾಯಿತು.

ಬಗರ್ ಹುಕುಂ ಸಮಿತಿ ಸದಸ್ಯರಾದ ಮಂಜುನಾಥ್ ಹೊಸೂರು, ಗಂಗಾಧರ್, ಸುಜಾತಾ, ಮಮತಾ, ಶಿರಸ್ತೇದಾರ್ ರಶ್ಮಿ, ಹರಿಹರಪುರ ತಹಶೀಲ್ದಾರ್ ನಾಗರಾಜ್, ಕಸಬಾ ಕಂದಾಯ ನಿರೀಕ್ಷಕ ರತ್ನಾಕರ್, ಹರಿಹರಪುರ ಕಂದಾಯ ನಿರೀಕ್ಷಕ ವಿನಯ್, ತಾಲ್ಲೂಕು ಕಚೇರಿಯ ರಮೇಶ್, ಧರ್ಮರಾಜ್, ಗ್ರಾಮ ಲೆಕ್ಕಾಧಿಕಾರಿಗಳಾದ ವಿಘ್ನೇಶ್, ಪ್ರೀತಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು