ಜೋಸೆಫ್ .ಎಂ.ಆಲ್ದೂರು
ಆಲ್ದೂರು: ಸಮೀಪದ ಕೆಳಗೂರು ಪಂಚಾಯಿತಿ ವ್ಯಾಪ್ತಿಯ ಬಾಳೆಹಳ್ಳಿ ಕೃಷ್ಣಪ್ಪ ಬಡಾವಣೆಯ ಜನರಿಗೆ ಶುದ್ಧ ಕುಡಿಯುವ ನೀರು ಇನ್ನೂ ಮರೀಚಿಕೆಯಾಗಿದೆ.
ಬಡಾವಣೆಯಲ್ಲಿ 65ಕ್ಕೂ ಹೆಚ್ಚು ಕುಟುಂಬಗಳು ವಾಸವಿದೆ. ನೀರಿನ ಮೂಲವಾಗಿದ್ದ ಬಾವಿಯ ಸಮೀಪದಿಂದಲೇ ಚರಂಡಿ ಸಂಪರ್ಕ ಕಲ್ಪಿಸಲಾಗಿದೆ. ಇದರಿಂದ ಕುಡಿಯುವ ನೀರಿನೊಂದಿಗೆ ಚರಂಡಿ ನೀರು ಮಿಶ್ರಣಗೊಂಡು ಕೆಸರು ನೀರು ಪೂರೈಕೆಯಾಗುತ್ತಿದೆ. ಕಳೆದ ಆರು ತಿಂಗಳಿಂದ ಈ ಸಮಸ್ಯೆ ಇದೆ. ಇದಕ್ಕೆ ಪರ್ಯಾಯವಾಗಿ ಪಂಚಾಯಿತಿಯಿಂದ ವಾರಕ್ಕೆ ಒಂದು ಬಾರಿ ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಆದರೆ, ಬಡಾವಣೆಯಲ್ಲಿ ಜನಸಂಖ್ಯೆ ಹೆಚ್ಚಿರುವುದರಿಂದ ನೀರಿನ ಕೊರತೆ ಉಂಟಾಗುತ್ತಿದೆ. ನೀರಿನ ವ್ಯವಸ್ಥೆಗಾಗಿ ಬೋರ್‌ವೆಲ್ ಕೊರೆಯಲು ಸೂಚಿಸಲಾಗಿದ್ದರೂ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎನ್ನುವುದು ಬಡಾವಣೆ ನಿವಾಸಿಗಳ ದೂರು.
‘ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಶುದ್ಧ ಕುಡಿಯುವ ನೀರಿಗೆ ತ್ವರಿತವಾಗಿ ವ್ಯವಸ್ಥೆ ಮಾಡಬೇಕೆಂದು ಗ್ರಾಮದ ಹೇಮಾ, ಬೇಬಿ, ಮೀನಾಕ್ಷಿ, ಮಂಜುನಾಥ್, ಲಕ್ಷ್ಮಣ್, ರಮೇಶ್ ಒತ್ತಾಯಿಸಿದರು. ಕಾಂಗ್ರೆಸ್ ಹೋಬಳಿ ಅಧ್ಯಕ್ಷ ಪೂರ್ಣೇಶ್ ಮಾತನಾಡಿ, ‘ಈಗಾಗಲೇ ಕುಡಿಯುವ ನೀರಿನ ಸಮಸ್ಯೆಯನ್ನು ಶಾಸಕರ ಗಮನಕ್ಕೆ ತಂದಿದ್ದು ಅವರ ಸಲಹೆಯ ಮೇರೆಗೆ ಸ್ಥಳ ಪರಿಶೀಲನೆ ನಡೆಸಿ ಗ್ರಾಮಸ್ಥರಿಂದ ಮಾಹಿತಿ ಪಡೆದಿದ್ದು, ಬಾವಿಯ ಸಮೀಪದಲ್ಲಿ ಪರ್ಯಾಯವಾಗಿ ಬೋರ್‌ವೆಲ್ ವ್ಯವಸ್ಥೆ ಕಲ್ಪಿಸಲು ಸಂಬಂಧಪಟ್ಟ ಇಲಾಖೆಗೆ ಸೂಚಿಸಲಾಗಿದೆ’ ಎಂದರು.
ಜಿಲ್ಲಾ ಪಂಚಾಯಿತಿಯಿಂದ ಯೋಜನಾ ಅಂದಾಜು ಬಂದು ಕೂಡಲೇ ಬೋರ್‌ವೆಲ್ ಕೊರೆಯಿಸಲಾಗುವುದು. ಅಲ್ಲಿಯವರೆಗೂ ವಾರದಲ್ಲಿ ಎರಡು ಬಾರಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲಾಗುವುದು ಸುಲೋಚನಾ ನಾಯಕ್ ಕೆಳಗೂರು ಪಂಚಾಯಿತಿ ಪಿಡಿಒ
ಶೀಘ್ರದಲ್ಲೇ ಯೋಜನಾ ಅಂದಾಜು
‘ಬೋರ್‌ವೆಲ್ ಕೊರೆಯಲು ಸ್ಥಳ ಪರಿಶೀಲನೆಗೆ ತೆರಳುವ ಸಂದರ್ಭ ಅಪಘಾತ ಆಗಿದ್ದು ಬೇರೆ ಎಂಜಿನಿಯರ್‌ಗೆ ಯೋಜನಾ ಅಂದಾಜು ಸಿದ್ಧಪಡಿಸಲು ಸೂಚಿಸಲಾಗಿದೆ. ಯೋಜನಾ ಅಂದಾಜನ್ನು ಮಾತ್ರ ಇಲಾಖೆಯಿಂದ ಸಿದ್ಧಪಡಿಸಲಾಗುತ್ತದೆ ಬೋರ್‌ವೆಲ್ ಕೊರೆಯಿಸುವ ಜವಾಬ್ದಾರಿ ಪಂಚಾಯಿತಿಯದ್ದಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಸಹಾಯಕ ಎಂಜಿನಿಯರ್ ವಿನೋದ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.