ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಜ್ಜಂಪುರ: ಬೀರಲಿಂಗೇಶ್ವರ ಸ್ವಾಮಿ ದೇಗುಲ ಲೋಕಾರ್ಪಣೆಗೆ ಸಜ್ಜು

ಜೆ.ಒ. ಉಮೇಶ್ ಕುಮಾರ್
Published 13 ಫೆಬ್ರುವರಿ 2024, 6:46 IST
Last Updated 13 ಫೆಬ್ರುವರಿ 2024, 6:46 IST
ಅಕ್ಷರ ಗಾತ್ರ

ಅಜ್ಜಂಪುರ: ಅಣ್ಣಯ್ಯ, ಬೀರಪ್ಪ, ಬೀರಲಿಂಗೇಶ್ವರ, ದಂಡಿನ ದಳಪತಿ, ಹುಚ್ಚೀರದಿಮ್ಮಣ್ಣ…. ಹೀಗೆ ಹಲವಾರು ಹೆಸರುಗಳಿಂದ ಕರೆಸಿಕೊಳ್ಳುವ ಭಕ್ತರ ಆರಾಧ್ಯ ದೈವ ಶ್ರೀ ಬೀರಲಿಂಗೇಶ್ವರ ಸ್ವಾಮಿ ನೂತನ ದೇವಾಲಯ ನಾಳೆ(ಬುಧವಾರ) ಲೋಕಾರ್ಪಣೆಗೊಳ್ಳಲಿದೆ.

ಮುರುಡೇಶ್ವರದ ಶಿಲ್ಪಿ ರವಿಚಂದ್ರನ್ ಮತ್ತು ತಂಡದವರ ಕೈಚಳಕದಲ್ಲಿ, ದೊಡ್ಡಬಳ್ಳಾಪುರದ ಬಲ್ಕ ನುಣುಪು ಕಲ್ಲುಗಳಿಂದ ನಿರ್ಮಾಣಗೊಂಡಿರುವ ದೇವಾಲಯದಲ್ಲಿ, ಉಡುಪಿ-ಕಾರ್ಕಳದ ಕೃಷ್ಣ ಶಿಲೆಯಲ್ಲಿ ರೂಪು ಪಡೆದಿರುವ ಶಿಲ್ಪಗಳು ನೋಡುಗರನ್ನು ಆಕರ್ಷಿಸುತ್ತಿವೆ.

ಆರಂಭದಲ್ಲಿ, ಸಿಂಹಗಳ ಮಧ್ಯೆ ಶಂಖ, ಚಕ್ರ, ನಾಮದ ಕೆತ್ತನೆಯುಳ್ಳ ದ್ವಾರಪಾಲಕರನ್ನು ಒಳಗೊಂಡ ಕಲ್ಲಿನಿಂದಲೇ ನಿರ್ಮಾಣಗೊಂಡಿರುವ ದ್ವಾರ ಬಾಗಿಲು ಭಕ್ತರನ್ನು ಸ್ವಾಗತಿಸುತ್ತಿದೆ. ನಂತರದಲ್ಲಿ, ಹತ್ತಾರು ಮೀಟರ್ ವಿಸ್ತೀರ್ಣದಲ್ಲಿನ ಕಲ್ಲಿನ ನೆಲಹಾಸು ಹೊದ್ದಿರುವ ಆವರಣವನ್ನು, ಭಕ್ತರಿಗೆ ಕುಳಿತುಕೊಳ್ಳಲು ಸಿದ್ಧಗೊಳಿಸಲಾಗಿದೆ.

9 ಅಡಿ ಆಳದಲ್ಲಿ 8X4 ಅಡಿಯ ದಿಮ್ಮಿಗಲ್ಲುಗಳ ಗಟ್ಟಿ ತಳಪಾಯದ ಮೇಲೆ, 4 ಒಳ ಮತ್ತು ಹೊರ ಕಲ್ಲುಕಂಭಗಳ ಆಧಾರದ ಮೇಲೆ ಇಡೀ ದೇವಾಲಯ ನಿರ್ಮಾಣಗೊಂಡಿದೆ. ಹೊರ ಕಂಬಗಳು ಕುದುರೆ ಮತ್ತು ಒಳಕಂಬಗಳು ಬಳ್ಳಿ, ಎಲೆಗಳ ಕೆತ್ತನೆಯಲ್ಲಿ ಮೂಡಿಬಂದಿವೆ.

ಜಗುಲಿ, ಹಜಾರ, ಗರ್ಭಗುಡಿಯ ಚಾವಣಿಯ ಕಲ್ಲಿನಲ್ಲಿ ಹೆಚ್ಚಾಗಿ ಬಳ್ಳಿ, ಎಲೆ, ಹೂವು ಚಿತ್ರಣ ಹಾಗೂ ದೇವಾಲಯದ ಗೋಡೆಯ ಕೆಳಭಾಗದಲ್ಲಿ ಕೆತ್ತನೆಗೊಂಡಿರುವ ನೂರಾರು ಕುದುರೆಗಳ ಸಾಲು ದೇವಾಲಯದ ರೂಪವನ್ನು ಮತ್ತಷ್ಟು ಶೃಂಗಾರಗೊಳಿಸಿದೆ.

ದೇವಾಲಯದ ಹೊರಗೋಡೆಯಲ್ಲಿ ಗಣಪ, ಸುಬ್ರಹ್ಮಣ್ಯ, ವೀರಭದ್ರೇಶ್ವರ, ಶಿವ, ಗುರುಸಿದ್ದರಾಮೇಶ್ವರ, ಚಂದ್ರಮೌಳೇಶ್ವರ, ಬ್ರಹ್ಮ ವಿಷ್ಣು ಮಹೇಶ್ವರರ 4 ಅಡಿ ಎತ್ತರದ ಮೂರ್ತಿಗಳನ್ನು ಕೆತ್ತಲಾಗಿದೆ. ಗರ್ಭಗುಡಿಯ ಮೇಲೆ 34.5 ಅಡಿ ಎತ್ತರ ತಲೆಎತ್ತಿರುವ ಗೋಪುರದಲ್ಲಿ ಲಕ್ಷ್ಮಿ, ಸರಸ್ವತಿ, ಪಾರ್ವತಿ, ಆಂಜನೇಯ ಸ್ವಾಮಿ ವಿಗ್ರಹಗಳು ಇವೆ.

‘ಶ್ರೀ ಬೀರಲಿಂಗೇಶ್ವರ ಸ್ವಾಮಿ ಅಪ್ಪಣೆಯಂತೆ, ವಾಸ್ತು ಪ್ರಕಾರವಾಗಿ ದೇವಾಲಯ ನಿರ್ಮಿಸಲಾಗಿದೆ. ಪ್ರತೀ ಹಂತದಲ್ಲೂ ಸ್ವಾಮಿಯ ಸಲಹೆ-ಸೂಚನೆ ಪಾಲಿಸಲಾಗಿದೆ. ಇದರಿಂದ ದೇವಾಲಯ ಅಚ್ಚುಕಟ್ಟಾಗಿ ರೂಪ ತಳೆದಿದೆ’ ಎಂದು ದೇವಾಲಯ ನಿರ್ಮಿಸಿದ ಮುರುಡೇಶ್ವರದ ಶಿಲ್ಪಿ ರವಿಚಂದ್ರನ್ ತಿಳಿಸಿದ್ದಾರೆ.

‘ಮಂದಿರ ನಿರ್ಮಾಣಕ್ಕೆ, ದೇವಾಲಯ ನಿರ್ಮಾಣ ಸಮಿತಿ ಶ್ರಮಿಸಿದೆ. ಇದಕ್ಕೆ ದೇವರ ಬುಡಕಟ್ಟು, ಹರಿವಾಣ, ಎಲ್ಲಾ ಸಮಾಜ ಬಾಂಧವರು, ಸುತ್ತಮುತ್ತಲ ಗ್ರಾಮಸ್ಥರು ಸಹಕಾರ ನೀಡಿದ್ದಾರೆ. ಇದರಿಂದಾಗಿ ಸುಮಾರು ₹3 ಕೋಟಿ ವೆಚ್ಚದಲ್ಲಿ ‌ದೇವಾಲಯ ನೆಲೆಗೊಂಡಿದೆ’ ಎಂದು ಮುಖಂಡ ಎಂ.ಕೃಷ್ಣಮೂರ್ತಿ ಹೇಳಿದರು.

ದೇವಾಲಯ ನಿರ್ಮಾಣ ಪೂರ್ಣಗೊಂಡಿದ್ದು, ನಾಳೆ ಉದ್ಘಾಟನೆಗೊಳ್ಳಲಿದೆ. ಕಾರ್ಯಕ್ರಮಕ್ಕೆ ಸಾವಿರಾರು ಭಕ್ತರು ಸೇರುವ ನಿರೀಕ್ಷೆ ಇದೆ ಎಂದು ದೇವಾಲಯ ನಿರ್ಮಾಣ ಸಮಿತಿಯ ಜಿ. ನಟರಾಜ್ ತಿಳಿಸಿದ್ದಾರೆ.

‘ಇಡೀ ದೇವಾಲಯ ಕಲ್ಪಿನಿಂದಲೇ ನಿರ್ಮಾಣಗೊಂಡಿದೆ. ದೇವಾಲಯದಲ್ಲಿನ ಸೂಕ್ಷ್ಮ ಕೆತ್ತನೆಗಳು ಹಿಂದಿನ ವಾಸ್ತು ಶಿಲ್ಪವನ್ನು ನೆನಪಿಸುವಂತಿವೆ. ಶಿಲ್ಪಿಯ ಕಲಾ ಕುಸುರಿ ಭವ್ಯ ಮಂದಿರಕ್ಕೆ ಮೆರಗು ತಂದಿದೆ’ ಎಂದು ತರೀಕೆರೆಯ ಟಿ.ಜಿ. ಶಶಾಂಕ್ ಹರ್ಷ ವ್ಯಕ್ತಪಡಿಸಿದ್ದಾರೆ.

ಕುದುರೆ ಕಂಬ
ಕುದುರೆ ಕಂಬ
ಗೋಪುರ
ಗೋಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT