ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ಬಲದಿಂದ ಗೆಲ್ಲಲು ಕಾಂಗ್ರೆಸ್‌ ಯತ್ನ: ಬಿ.ಎಸ್.ಯಡಿಯೂರಪ್ಪ ಆರೋಪ

ವಿಧಾನ ಪರಿಷತ್ ಚುನಾವಣೆ: ಪ್ರಾಣೇಶ್‌ ಪರ ಬಿ.ಎಸ್.ಯಡಿಯೂರಪ್ಪ ಪ್ರಚಾರ
Last Updated 3 ಡಿಸೆಂಬರ್ 2021, 13:03 IST
ಅಕ್ಷರ ಗಾತ್ರ

ತರೀಕೆರೆ: ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಹಣ ಬಲ, ಜಾತಿ ಬಲ, ತೋಳ್ಬಲಗಳಿಂದ ಗೆಲ್ಲಲು ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ಮುಖಂಡ ಬಿ.ಎಸ್.ಯಡಿಯೂರಪ್ಪ ಆರೋಪಿಸಿದರು.

ವಿಧಾನ ಪರಿಷತ್‌ ಚುನಾವಣೆಯ ಬಿಜೆಪಿ ಅಭ್ಯರ್ಥಿ ಎಂ.ಕೆ. ಪ್ರಾಣೇಶ್‌ ಪರವಾಗಿ ಇಲ್ಲಿನ ಬಿ.ಎಚ್.ರಸ್ತೆಯ ಸಭಾಭವನದಲ್ಲಿ ಅವರು ಪ್ರಚಾರ ನಡೆಸಿದರು.

‘ನಮ್ಮ ಪ್ರಜ್ಞಾವಂತ ಮತದಾರರು ಯಾವುದೇ ಆಮಿಷಕ್ಕೆ ಬಲಿಯಾಗದೆ ರಾಜ್ಯದಾದ್ಯಂತ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಲಿದ್ದಾರೆ. ಚಿಕ್ಕಮಗಳೂರಿನಲ್ಲೂ ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

‘ಪ್ರಧಾನಿ ಮೋದಿಯವರ ಗ್ರಾಮ ರಾಜ್ಯ, ರಾಮರಾಜ್ಯದ ಕನಸು ನನಸಾಗಿಸುವತ್ತ ಬಿಜೆಪಿ ದಾಪುಗಾಲಿಟ್ಟಿದೆ. ದೇಶದಲ್ಲಿ ಈಗಾಗಲೇ ಸುಮಾರು 25 ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ. ಮುಂದಿನ ಕೆಲವೇ ವರ್ಷಗಳಲ್ಲಿ ದೇಶದಲ್ಲೇ ಕಾಂಗ್ರೆಸ್ ಹೇಳ ಹೆಸರಿಲ್ಲದಂತೆ ಆಗುವುದು ನಿಶ್ಚಿತ’ ಎಂದು ಹೇಳಿದರು.

‘18 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಉಬ್ರಾಣಿ- ಅಮೃತಾಪುರ ಏತ ನೀರಾವರಿ ಯೋಜನೆಗೆ 2009ರಲ್ಲಿ ₹ 100 ಕೋಟಿ ಬಿಡುಗಡೆ ಮಾಡಿ, ತಾಲ್ಲೂಕಿನ 55 ಕೆರೆಗಳನ್ನು ತುಂಬಿಸುವ ಕೆಲಸ ಮಾಡಿದ್ದೆ’ ಎಂದು ನೆನಪಿಸಿಕೊಂಡರು.

‘ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಬಲಪಡಿಸುವುದಲ್ಲದೇ, ವಿಧಾನಸಭಾ ಚುನಾವಣೆಯಲ್ಲಿ 140ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲಯ ಪ್ರಯತ್ನಿಸುತ್ತೇನೆ’ ಎಂದು ಹೇಳಿದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ‘ಎಂ.ಕೆ.ಪ್ರಾಣೇಶ್ ಸರಳ ಸಜ್ಜನರಾಗಿದ್ದು, ಈ ಹಿಂದೆ ತಮ್ಮ ಅಧಿಕಾರಾವಧಿಯಲ್ಲಿ ಯಾವುದೇ ದಬ್ಬಾಳಿಕೆ ಮಾಡದೆ, ಅಧಿಕಾರಿಗಳನ್ನು ಸ್ವತಂತ್ರವಾಗಿ ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಟ್ಟಿದ್ದರು’ ಎಂದು ಹೇಳಿದರು.

ಬಿಜೆಪಿ ಅಭ್ಯರ್ಥಿ ಎಂ.ಕೆ.ಪ್ರಾಣೇಶ್ ಮಾತನಾಡಿ, ‘ಅಭಿವೃದ್ಧಿಯನ್ನೇ ಬಿಜೆಪಿ ಮೂಲ ಮಂತ್ರವನ್ನಾಗಿಸಿಕೊಂಡು ಪ್ರಚಾರ ನಡೆಸುತ್ತಿದೆ. ಇದಕ್ಕೆ ಬೆಂಬಲ ಸಿಗುವ ವಿಶ್ವಾಸ ಇದೆ’ ಎಂದರು.

ತರೀಕೆರೆ ಶಾಸಕ ಡಿ.ಎಸ್.ಸುರೇಶ್ ಮಾತನಾಡಿ, ‘ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಶೇ 50ರಷ್ಟು ಮೀಸಲಾತಿಯನ್ನು ನೀಡಿದ್ದು ಬಿಜೆಪಿಯ ಸಾಧನೆ’ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕಲ್ಮರುಡಪ್ಪ, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಜೀವರಾಜ್, ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ, ಬಿಜೆಪಿ ಮಹಿಳಾ ಘಟಕದ ಉಪಾಧ್ಯಕ್ಷೆ ಸುನಿತಾ ಜಗದೀಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT