ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಮುಖಂಡ ಅನ್ವರ್‌ ಬರ್ಬರ ಹತ್ಯೆ

Last Updated 23 ಜೂನ್ 2018, 12:54 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಬಿಜೆಪಿ ನಗರ ಘಟಕದ ಪ್ರಧಾನ ಕಾರ್ಯದರ್ಶಿ ಉಪ್ಪಳ್ಳಿಯ ಮಹಮ್ಮದ್‌ ಅನ್ವರ್‌ (47) ಅವರನ್ನು ದುಷ್ಕರ್ಮಿಗಳು ಶುಕ್ರವಾರ ರಾತ್ರಿ ಗೌರಿಕಾಲುವೆ ಬಡಾವಣೆಯ ಗುಡ್‌ಮಾರ್ನಿಂಗ್‌ ಶಾಪ್‌ ಹಿಂಭಾಗದ ರಸ್ತೆಯಲ್ಲಿ ಡ್ರಾಗನ್‌ನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಹಳೆಯ ಸೇಡಿಗೆ ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

ಗೌರಿ ಕಾಲುವೆಯಲ್ಲಿ ಗೆಳೆಯ ರಘು ಮನೆಗೆ ಹೋಗಿ ವಾಪಸ್ಸಾಗುವಾಗ ರಸ್ತೆಯಲ್ಲಿ ಹೆಲ್ಮೆಟ್‌ಧಾರಿ ದುಷ್ಕರ್ಮಿಗಳು ಅನ್ವರ್‌ ಕುತ್ತಿಗೆ, ಎದೆ, ಹೊಟ್ಟೆ, ಪಕ್ಕೆಗೆ ಇರಿದಿದ್ದಾರೆ. ಅರಚಾಟದ ಶಬ್ದ ಕೇಳಿ ಹೊರಬಂದ ರಘು ಅವರ ಪತ್ನಿ, ಪುತ್ರಿ, ಪುತ್ರ ರಕ್ತದ ಮಡುವಿನಲ್ಲಿದ್ದ ಅನ್ವರ್‌ ಅವರನ್ನು ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಸ್ಪತ್ರೆ ತಲುಪಿದ ಹೊತ್ತಿಗೆ ಅನ್ವರ್‌ ಮೃತಪಟ್ಟಿದ್ದಾರೆ.

ಅನ್ವರ್‌ ಅವರ ದೇಹಕ್ಕೆ 13 ಕಡೆಗಳಲ್ಲಿ ಹಂತಕರು ಇರಿದಿದ್ದಾರೆ. ಇರಿತದ ರಭಸಕ್ಕೆ ಕೆಲವು ಕಡೆ ಮಾಂಸ ಹೊರಬಂದಿದೆ. ರಕ್ತದ ಹನಿಗಳ ಕಲೆಗಳು ರಸ್ತೆಯಲ್ಲಿ ಇವೆ. ಕೃತ್ಯ ಎಸಗಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಕೃತ್ಯ ನಡೆದ ರಸ್ತೆ, ಆಸುಪಾಸಿನ ಮನೆಗಳಲ್ಲಿಯೂ ಸಿ.ಸಿ ಟಿವಿ ಕ್ಯಾಮೆರಾ ಇಲ್ಲ. ಪೊಲೀಸರು ಸ್ಥಳ ಪರಿಶೀಲಿನೆ ಮಾಡಿದ್ದಾರೆ.

ಪಿಸ್ತೂಲ್‌ ಇಟ್ಟುಕೊಂಡಿದ್ದ ಅನ್ವರ್‌: ‘ಕೆಲವರು ದುಷ್ಮನ್‌ಗಳು ಇದ್ದಾರೆ, ರಕ್ಷಣೆಗಾಗಿ ಪಿಸ್ತೂಲು ಇಟ್ಟುಕೊಂಡಿದ್ದೇನೆ ಎಂದು ಅನ್ವರ್‌ ಹೇಳಿಕೊಂಡಿದ್ದರು’ ಎಂದು ಗೆಳೆಯರೊಬ್ಬರು ತಿಳಿಸಿದರು.

ಅನ್ವರ್‌ ಸಹೋದರ ಕಬೀರ್‌ ಅವರು ಉಪ್ಪಳ್ಳಿಯ ಯೂಸುಫ್‌ ಹಾಜಿ, ಮನ್ಸೂರ್‌, ತಯ್ಯೂಬ್‌(ಸೌದಿ ಅರೇಬಿಯಾದಲ್ಲಿ ಇದ್ದಾರೆ), ನೂರ್‌ ಮಹಮ್ಮದ್‌ ಅಲಿಯಾಸ್‌ ಬದ್ರು, ಫಾರೂಕ್‌ ವಿರುದ್ಧ ಬಸವನಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

‘ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಯಾರನ್ನೂ ಬಂಧಿಸಿಲ್ಲ. ದುಷ್ಕರ್ಮಿಗಳ ಶೋಧ ನಿಟ್ಟಿನಲ್ಲಿ 7 ತಂಡ ರಚಿಸಲಾಗಿದೆ. ಈ ತಂಡಗಳು ಕಾರ್ಯಾಚರಣೆಯಲ್ಲಿ ತೊಡಗಿವೆ’ ಎಂದು ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಗೀತಾ ‘ಪ್ರಜಾವಾಣಿ’ಗೆ ತಿಳಿಸಿದರು.

ಅನ್ವರ್‌ ಯಾರು?

ಉಪ್ಪಳ್ಳಿಯ ಅನ್ವರ್‌ ಅವರು ಕೇಬಲ್‌ ಉದ್ಯಮಿ. ಎಸ್ಸೆಸ್ಸೆಲ್ಸಿವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ಗಲ್ಫ್‌ನಲ್ಲಿ ಕೆಲ ವರ್ಷ ಬಟ್ಟೆ ವ್ಯಾಪಾರದಲ್ಲಿ ತೊಡಗಿದ್ದರು. ಉಪ್ಪಳ್ಳಿಯಲ್ಲಿ ಈಗ ಕೇಬಲ್‌ ಉದ್ಯಮ ನಡೆಸುತ್ತಿದ್ದರು. ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು. ನಗರ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಪತ್ನಿ ಖತೀಜಾ, ಅವಳಿ ಮಕ್ಕಳಿದ್ದಾರೆ. ಪುತ್ರ ಮೊಹಜ್‌ ಮತ್ತು ಪುತ್ರಿ ಮಿನಾಜ್‌ 10ನೇ ತರಗತಿ ಓದುತ್ತಿದ್ದಾರೆ.


ಹಳೆಯ ದ್ವೇಷಕ್ಕೆ ಕೊಲೆ: ಆರೋಪ

ಅನ್ವರ್‌ ಸಹೋದರ ಕಬೀರ್‌ ಸುದ್ದಿಗಾರರೊಂದಿಗೆ ಮಾತನಾಡಿ, ‘10 ವರ್ಷಗಳ ಹಿಂದೆ ಅನ್ವರ್‌ ಕೊಲೆ ಯತ್ನ ನಡೆದಿತ್ತು. ಆಗ ಅನ್ವರ್‌ ಕಾಲು ಮುರಿದಿದ್ದರು. ಕೊಲೆ ಯತ್ನ ಪ್ರಕರಣದಲ್ಲಿ ಕೋರ್ಟ್‌ ಐವರಿಗೆ ಶಿಕ್ಷೆ ವಿಧಿಸಿತ್ತು. ಹಳೆಯ ವೈಷ್ಯಮ್ಯದಿಂದ ಅನ್ವರ್‌ನನ್ನು ಈಗ ಹತ್ಯೆ ಮಾಡಿದ್ದಾರೆ’ ಎಂದು ಆರೋಪಿಸಿದರು.

‘ಕೊಲೆ ಯತ್ನ ಪ್ರಕರಣದಲ್ಲಿ ಮನ್ಸೂರ್‌ (ಯೂಸುಫ್‌ ಹಾಜಿ ಪುತ್ರ) ಮತ್ತು ಹುಸೇನ್‌ಗೆ ಜೈಲು ಶಿಕ್ಷೆಯಾಗಿತ್ತು. ಈ ಪೈಕಿ ಹುಸೇನ್‌ ಮೃತಪಟ್ಟಿದ್ದಾನೆ. ಮನ್ಸೂರ್‌ ಜೈಲಿನಲ್ಲಿದ್ದಾನೆ. ನೂರ್‌ ಮಹಮ್ಮದ್‌, ಫಾರೂಕ್‌ (ನೂರ್‌ ಮಹಮ್ಮದ್‌ ಪುತ್ರ), ರಫೀಕ್‌ ದಂಡ ಪಾವತಿಸಿ ಹೊರಗಡೆ ಬಂದಿದ್ದಾರೆ. ಈ ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆದಿತ್ತು. ಜಿಲ್ಲಾ ಕೋರ್ಟ್‌ ಆದೇಶವನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿತ್ತು’ ಎಂದರು.

‘ತಯ್ಯೂಬ್‌ (ಯೂಸ್‌ಫ್‌ ಹಾಜಿ ಮತ್ತೊಬ್ಬ ಪುತ್ರ) ಸೌದಿ ಅರೇಬಿಯಾದಲ್ಲಿ ಇದ್ದಾನೆ. ತಿಂಗಳ ಹಿಂದೆ ಚಿಕ್ಕಮಗಳೂರಿಗೆ ಬಂದಿದ್ದ. ತಿಂಗಳಲ್ಲಿ ಕೊಲೆ ಮಾಡಿಸುವುದಾಗಿ ಅನ್ವರ್‌ಗೆ ಬೆದರಿಕೆ ಹಾಕಿದ್ದ. ಬೈಕು ಗುದ್ದಿಸುವುದಾಗಿ ನನಗೂ ಬೆದರಿಕೆ ಹಾಕಿ, ಸೌದಿ ಅರೇಬಿಯಾಕ್ಕೆ ವಾಪಸ್‌ ಹೋಗಿದ್ದ. ಹಂತಕರಿಗೆ ‘ಸುಫಾರಿ’ ಕೊಟ್ಟು ಅನ್ವರ್‌ನನ್ನು ಕೊಲೆ ಮಾಡಿಸಿದ್ದಾರೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT