ಮುತ್ತಿನಕೊಪ್ಪ(ಎನ್.ಆರ್.ಪುರ): ತಾಲ್ಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ.ಕಣಬೂರು ಕಾಲೊನಿ ಸೇತುವೆ ಶಿಥಿಲಾವಸ್ಥೆಗೆ ತಲುಪಿದ್ದು ಯಾವುದೇ ಸಂದರ್ಭದಲ್ಲಿ ಕುಸಿಯುವ ಭೀತಿ ಎದುರಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಗ್ರಾಮದ ವ್ಯಾಪ್ತಿಯಲ್ಲಿ 1960ರ ದಶಕದಲ್ಲಿ ಭದ್ರಾ ಅಣೆಕಟ್ಟೆ ನಿರ್ಮಾಣವಾದ ಮೇಲೆ ಹಿನ್ನೀರಿನಿಂದ ನಿರಾಶ್ರಿತರಾದ ಜನರು ಇಲ್ಲಿಗೆ ಬಂದಾಗ ಗ್ರಾಮದ ಮಧ್ಯೆ ಹರಿಯುವ ಕರಿಬಸವನಹಳ್ಳಕ್ಕೆ ಕಿರಿದಾದ ಸೇತುವೆ ನಿರ್ಮಿಸಲಾಗಿತ್ತು. ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿ ಕೈಗೊಳ್ಳುವಾಗ ಭಾರಿ ವಾಹನಗಳು ಇಲ್ಲಿ ಸಂಚರಿಸಿ ಸೇತುವೆ ಶಿಥಿಲಾವಸ್ಥೆಗೆ ತಲುಪಿದೆ. ಸೇತುವೆಯನ್ನು ನಾಲ್ಕು ಪಿಲ್ಲರ್ ಬಳಸಿ ನಿರ್ಮಿಸಲಾಗಿದ್ದು. ಎರಡು ಪಿಲ್ಲರ್ ಶಿಥಿಲವಾಗಿದ್ದು ಕಲ್ಲುಗಳು ಉರುಳಿ ಬಿದ್ದಿವೆ. ಮುತ್ತಿನಕೊಪ್ಪ ಗ್ರಾಮದ ಕೆ.ಕಣಬೂರು, ಕಣಬೂರು ಕಾಲೊನಿ, ಕುಸುಬೂರು, ದೊಡ್ಡಿನತಲೆ, ಸಾತ್ಕೋಳಿಗೆ ಹೋಗುವ ಗ್ರಾಮಸ್ಥರು ಕೆ.ಕಣಬೂರು ಕಾಲೊನಿಯ ಕರಿಬಸವನ ಹಳ್ಳಕ್ಕೆ ನಿರ್ಮಿಸಿರುವ ಸೇತುವೆ ಮೇಲೆ ಸಂಚರಿಸಬೇಕಾಗಿದೆ. ಸೇತುವೆ ಕಿರಿದಾಗಿದ್ದು, ಎರಡು ಬದಿಯಲ್ಲೂ ಕೈಪಿಡಿ ಇಲ್ಲ. ವಾಹನ ಸವಾರರು ಸ್ವಲ್ಪ ಆಯಾ ತಪ್ಪಿದರೂ ಹಳ್ಳಕ್ಕೆ ಬೀಳುವ ಸಂಭವ ಹೆಚ್ಚಿದೆ. ರಾತ್ರಿ ವೇಳೆ ಈ ಸೇತುವೆಯ ಮೇಲೆ ಸಂಚರಿಸುವುದು ಅಪಾಯ ಎನ್ನುತ್ತಾರೆ ಗ್ರಾಮಸ್ಥರು.
ಕುಸುಬೂರು ಕಾಲೊನಿ, ಕುಸುಬೂರು, ದೊಡ್ಡಿನತಲೆ, ಕೆ.ಕಣಬೂರು ಕಾಲೊನಿ, ಸಾತ್ಕೋಳಿಯ ಗ್ರಾಮಗಳಲ್ಲಿ ಸುಮಾರು 170 ಕುಟುಂಬಗಳಿವೆ. 60ಕ್ಕೂ ಹೆಚ್ಚು ಮಕ್ಕಳು ಪ್ರತಿನಿತ್ಯ ಶಾಲೆ, ಕಾಲೇಜಿಗೆ ಹೋಗುತ್ತಾರೆ. ಗ್ರಾಮಸ್ಥರು ಮುತ್ತಿನಕೊಪ್ಪಕ್ಕೆ ತಲುಪಲು ಈ ಸೇತುವೆಯ ಮೂಲಕವೇ ಸಂಚರಿಸಬೇಕಾಗಿದೆ ಎನ್ನುತ್ತಾರೆ ಗ್ರಾಮಸ್ಥರು.
ಕೆ.ಕಣಬೂರು ಕಾಲೊನಿ ಸೇತುವೆ ತುಂಬ ಹಳೆಯದು, ಯಾವಾಗ ಬೇಕಾದರೂ ಕುಸಿಯುವ ಸ್ಥಿತಿಯಿದೆ. ಹೊಸ ಸೇತುವೆ ನಿರ್ಮಿಸಬೇಕಾಗಿದೆ. ಒಂದು ವೇಳೆ ಸೇತುವೆ ಕುಸಿದರೆ ಗ್ರಾಮಸ್ಥರು ಉಂಬಳೆಬೈಲು ಅಥವಾ ಬಾಳೆಕೊಪ್ಪ ಮಾರ್ಗವಾಗಿ ಸುಮಾರು 25 ಕಿ.ಮೀ ಸುತ್ತುಬಳಸಿ ಬರಬೇಕಾದ ಸ್ಥಿತಿಯಿದೆ. ಸರ್ಕಾರ ಈ ಸೇತುವೆಯನ್ನು ಆದ್ಯತೆ ಮೇಲೆ ನಿರ್ಮಿಸಿ ಕೊಡಬೇಕು ಕುಸುಬೂರು ಗ್ರಾಮ ರೈತ ಎಚ್.ಎಸ್.ರವಿಕುಮಾರ್ ಒತ್ತಾಯಿಸಿದರು.
ಗಮನಹರಿಸಲು ಒತ್ತಾಯ
ಭದ್ರಾ ಮುಳುಗಡೆಯಾದಾಗ ನಂದಿಗಾವೆ ಪ್ರದೇಶದಿಂದ ಸದರಿ ಗ್ರಾಮಕ್ಕೆ ಬಂದಿದ್ದೇವೆ. ಮಳೆ ಇದೇ ರೀತಿ ಮುಂದುವರಿದರೆ ಕೆ.ಕಣಬೂರು ಕಾಲೊನಿ ಸೇತುವೆ ಕುಸಿಯುತ್ತದೆ. ಜೀವ ಭಯದಿಂದಲೇ ವಾಹನಗಳಲ್ಲಿ ಓಡಾಡುವ ಸ್ಥಿತಿಯಿದೆ. ಅನೇಕ ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಯಾವ ಸರ್ಕಾರ ಬಂದರೂ ಹೊಸ ಸೇತುವೆ ನಿರ್ಮಾಣವಾಗಿಲ್ಲ ಎಂದು ಕುಸುಬೂರು ಕಾಲೊನಿಯ ಕೆ.ಆರ್. ಆನಂದ್ ತಿಳಿಸಿದರು. ಹೊಸ ಸೇತುವೆ ನಿರ್ಮಿಸಿ ಕೊಡುವಂತೆ ಗ್ರಾಮಸ್ಥರು ಜನಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಸಮೀಕ್ಷೆ ಸಹ ಮಾಡಲಾಗಿತ್ತು ಆದರೂ ಸೇತುವೆ ನಿರ್ಮಾಣವಾಗಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ. ಜಿಲ್ಲಾಧಿಕಾರಿ ಜನಪ್ರತಿನಿಧಿಗಳು ಗಮನ ಹರಿಸಿ ಹೊಸ ಸೇತುವೆ ನಿರ್ಮಿಸಿಕೊಡಬೇಕು ಎಂದು ಗ್ರಾಮಸ್ಥರ ಒತ್ತಾಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.