ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಟ್ಟೂರಲ್ಲಿ ಯೋಧ ಶೇಷಪ್ಪ ಅಂತ್ಯಕ್ರಿಯೆ

ಸರ್ಕಾರಿ ಗೌರವದೊಂದಿಗೆ ಅಂತಿಮ ನಮನ– ಕಂಬನಿ ಮಿಡಿದ ಬಿಳವಾಲ ಗ್ರಾಮಸ್ಥರು
Last Updated 9 ನವೆಂಬರ್ 2021, 5:01 IST
ಅಕ್ಷರ ಗಾತ್ರ

ಕಡೂರು: ಜಮ್ಮುವಿನಲ್ಲಿ ಮೃತಪಟ್ಟ ಗಡಿ ಭದ್ರತಾ ಪಡೆಯ ಯೋಧ ಬಿ.ಕೆ.ಶೇಷಪ್ಪ ಅವರ ಅಂತ್ಯಕ್ರಿಯೆ ತಾಲ್ಲೂಕಿನ ಬಿಳವಾಲ ಗ್ರಾಮದ ಅವರ ತೋಟದಲ್ಲಿ ಸರ್ಕಾರಿ ಗೌರವದೊಂದಿಗೆ ಸೋಮವಾರ ನಡೆಯಿತು.

ಶೋಕಗೀತೆ ನುಡಿಸಿದ ನಂತರ ಮೂರು ಸುತ್ತು ಕುಶಾಲ ತೋಪು ಹಾರಿಸಲಾಯಿತು. ನಂತರ ಗಣ್ಯರು ಅಂತಿಮ ನಮನ ಸಲ್ಲಿಸಿದರು. ಬಳಿಕ ಶೇಷಪ್ಪ ಅವರ ಪಾರ್ಥಿವ ಶರೀರವನ್ನು ಚಿತೆಯ ಮೇಲಿರಿಸಿ ಸಾಂಪ್ರದಾಯಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಚಿತೆಗೆ ಶೇಷಪ್ಪ ಅವರ ಹಿರಿಯ ಮಗ ಧನುಷ್‌ ಅಗ್ನಿ ಸ್ಪರ್ಶ ಮಾಡಿದಾಗ ‘ಶೇಷಪ್ಪ ಚಿರಾಯುವಾಗಲಿ’ ಎಂಬ ಘೋಷಣೆ ಮೊಳಗಿತು.

ಯೋಧನ ಪಾರ್ಥಿವ ಶರೀರಕ್ಕೆ ಹೊದಿಸಿದ್ದ ರಾಷ್ಟ್ರಧ್ವಜವನ್ನು ಗಡಿ ಭದ್ರತಾ ಪಡೆಯ ಅಧಿಕಾರಿಯು ಶೇಷಪ್ಪ ಅವರ ಪತ್ನಿ ಛಾಯಾ ಅವರಿಗೆ ಹಸ್ತಾಂತರಿಸಿದರು. ಈ ಸಮಯ ಪತಿಯ ದೇಹಕ್ಕೆ ಸೆಲ್ಯೂಟ್ ಮಾಡಿದ ಛಾಯಾ ಅವರ ಮನೋಸ್ಥೈರ್ಯ ಸೇರಿದ್ದ ಜನರ ಕಣ್ಣಾಲಿಗಳನ್ನು ತುಂಬಿತು. ಶೇಷಪ್ಪ ಅವರ ಮಕ್ಕಳಾದ 11 ವರ್ಷದ ಧನುಷ್‌ ಮತ್ತು 6 ವರ್ಷದ ಸುಪ್ರಿತ್‌ ಶಿಸ್ತಿನಿಂದ ಸೆಲ್ಯೂಟ್ ಮಾಡಿದಾಗ ಕುಟುಂಬದ ಸದಸ್ಯರ, ಗ್ರಾಮಸ್ಥರ ದುಃಖದ ಕಟ್ಟೆಯೊಡೆಯಿತು.

ಶೇಷಪ್ಪ ಅವರ ತಂದೆ ಕೇಶವಪ್ಪ, ತಾಯಿ ಮಾಳಮ್ಮ, ಸಹೋದರ ಪ್ರಕಾಶ್ ಹಾಗೂ ಇಬ್ಬರು ಸಹೋದರಿಯರು ಶೇಷಪ್ಪನವರನ್ನು ನೆನೆದು ಕಣ್ಣೀರಿಡುತ್ತಿದ್ದರು.

ನಗರದಲ್ಲಿ ಮೆರವಣಿಗೆ: ಶೇಷಪ್ಪ ಅವರ ಪಾರ್ಥಿವ ಶರೀರ ಕಡೂರಿನ ವೆಂಕಟೇಶ್ವರ ದೇಗುಲದ ಬಳಿಗೆ ಸೋಮವಾರ ಬೆಳಿಗ್ಗೆ 11 ಗಂಟೆಗೆ ತರಲಾಯಿತು. ಬಿಎಸ್ಎಫ್ ವಾಹನದಿಂದ ತೆರೆದ ವಾಹನಕ್ಕೆ ಪಾರ್ಥಿವ ಶರೀರವನ್ನು ಸ್ಥಳಾಂತರಿಸಿದ ನಂತರ ಕೆ.ಎಲ್.ವಿ. ವೃತ್ತದಿಂದ ಅಂಬೇಡ್ಕರ್ ವೃತ್ತದ ತನಕ ಮೆರವಣಿಗೆ ನಡೆಯಿತು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಸ್ತೆಯ ಇಕ್ಕೆಲಗಳಲ್ಲಿ ಭಾರತದ ಧ್ವಜ ಹಿಡಿದು ನಿಂತು ಅಗಲಿದ ಯೋಧನಿಗೆ ನಮನ ಸಲ್ಲಿಸಿದರು. ಯಳನಡು ಮಠದ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ ಭಾಗವಹಿಸಿದ್ದರು. ಮೆರವಣಿಗೆ ಮಲ್ಲೇಶ್ವರ ಮಾರ್ಗವಾಗಿ ಮೆರವಣಿಗೆ ಬಿಳುವಾಲ ತಲುಪಿತು. ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಯಿತು. ಸಾವಿರಾರು ಜನರು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು.

ಯೋಧ ಶೇಷಪ್ಪ ಅವರ ಮೃತದೇಹವನ್ನು ಹೊತ್ತ ವಾಹನ ಕಡೂರು ಗಡಿ ಗ್ರಾಮ ಅಂಚೇಚೋಮನಹಳ್ಳಿ ಗೇಟ್ ಬಳಿ 10.15 ರ ಹೊತ್ತಿಗೆ ಬಂದಾಗ ತಾಲ್ಲೂಕು ಆಡಳಿತದ ಪರವಾಗಿ ತಹಶೀಲ್ದಾರ್ ಜೆ.ಉಮೇಶ್ ಬರಮಾಡಿಕೊಂಡರು. ಇದಕ್ಕೂ ಮುನ್ನ ತಾಲ್ಲೂಕು ಗಡಿಯಲ್ಲಿ ಶಾಸಕ ಬೆಳ್ಳಿಪ್ರಕಾಶ್ ಅವರು ಯೋಧನ ಶರೀರಿವಿದ್ದ ಪೆಟ್ಟಿಗೆ ಮೇಲೆ ಹೂಗುಚ್ಚವಿರಿಸಿ, ಗೌರವ ಸಮರ್ಪಿಸಿದರು‌.

ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಎಸ್.ಪಿ.ಅಕ್ಷಯ್ ಎಂ.ಹಾಕೆ, ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಮೃತ ಯೋಧನಿಗೆ ಗೌರವ ಸಮರ್ಪಿಸಿದರು. ಹೊಸದುರ್ಗದ ಬ್ರಹ್ಮವಿದ್ಯಾನಗರದ ಭಗೀರಥ ಉಪ್ಪಾರ ಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದಕೆ.ಆರ್. ಮಹೇಶ್ ಒಡೆಯರ್, ಕಾವೇರಿ ಲಕ್ಕಪ್ಪ, ಕೆಪಿಸಿಸಿ ಸದಸ್ಯ ಕೆ.ಎಸ್.ಆನಂದ್, ಬಿಜೆಪಿ ಮಂಡಲ ಅಧ್ಯಕ್ಷ ಬಿ.ಪಿ.ದೇವಾನಂದ್, ಜಿಗಣೇಹಳ್ಳಿ ನೀಲಕಂಠಪ್ಪ, ರಾಜ್ಯ ಯುವ ಜನತಾದಳ ಪ್ರಧಾನ ಕಾರ್ಯದರ್ಶಿ ಪ್ರೇಂ ಕುಮಾರ್, ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ವೈ.ಎಂ.ತಿಪ್ಪೇಶ್ ಅಂತಿಮ ದರ್ಶನ ಪಡೆದರು. ತಹಶೀಲ್ದಾರ್ ಜೆ.ಉಮೇಶ್ ಸ್ಥಳದಲ್ಲಿದ್ದು ಉಸ್ತುವಾರಿ ವಹಿಸಿದ್ದರು. ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಭಾನುವಾರ ರಾತ್ರಿ ಜಮ್ಮುವಿನಿಂದ ಶೇಷಪ್ಪ ಅವರ ಪಾರ್ಥಿವ ಶರೀರ ವಿಮಾನದ ಮೂಲಕ ಬೆಂಗಳೂರಿಗೆ ತಂದಾಗ ವಿಮಾನ ನಿಲ್ದಾಣದಲ್ಲಿ ಮಾಜಿ ಶಾಸಕ ವೈ.ಎಸ್.ವಿ.ದತ್ತ ಇದ್ದರು. ಪಾರ್ಥಿವ ಶರೀರದ ಜೊತೆ ಬಿಳವಾಲಕ್ಕೆ ಬಂದು ಅಂತಿಮ ಸಂಸ್ಕಾರ ನಡೆಯುವ ವರೆಗೂ ಕುಟುಂಬದ ಜೊತೆಯೇ ಇದ್ದರು. ಶೇಷಪ್ಪ ಅವರ ಕುಟುಂಬಕ್ಕೆ ಬಹುಆತ್ಮೀಯರಾದ ದತ್ತ ಪ್ರತಿಯೊಂದು ವ್ಯವಸ್ಥೆಯನ್ನೂ ಮಾಡಿ ಧೈರ್ಯ ತುಂಬುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT