ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಗುದಾಣ ಕೊರತೆ; ಪ್ರಯಾಣಿಕರಿಗೆ ಪಡಿಪಾಟಲು

Last Updated 23 ಮೇ 2022, 3:12 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ನಗರ ವ್ಯಾಪ್ತಿಯಲ್ಲಿ ಪ್ರಯಾಣಿಕರ ತಂಗುದಾಣಗಳು ಬೆರಳೆಣಿಕೆಯಷ್ಟೂ ಇಲ್ಲ. ಪ್ರಯಾಣಿಕರು ರಸ್ತೆ ಬದಿಯಲ್ಲಿ (ಬಸ್‌ ನಿಲ್ಲುವ ಜಾಗ) ನಿಂತು ಬಸ್‌ಗೆ ಕಾಯಬೇಕಾದ ಸ್ಥಿತಿ ಇದೆ.

ಪವಿತ್ರ ವನ, ಎಐಟಿ ವೃತ್ತ, ಎಪಿಎಂಸಿ ಪ್ರಾಂಗಣ ಎದುರು, ದಂಟರಮಕ್ಕಿ ವೃತ್ತ, ಶೃಂಗಾರ್‌ ವೃತ್ತ, ಟೌನ್‌ ಕ್ಯಾಂಟೀನ್‌ ಸಮೀಪ, ಬೋಳರಾಮೇಶ್ವರ ದೇಗುಲ ಮುಂಭಾಗ ಸಹಿತ ವಿವಿಧೆಡೆಗಳಲ್ಲಿ ತಂಗುದಾಣಗಳು ಇಲ್ಲ. ಈ ಸ್ಥಳಗಳಲ್ಲಿ ಬಸ್‌ ನಿಲುಗಡೆ ಇದೆ.
ಈ ಮಾರ್ಗಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸುತ್ತವೆ. ನಗರ ಸಾರಿಗೆ (ಮಲ್ಲಿಕಾರ್ಜುನ ಟ್ರಾನ್ಸ್‌ಪೋರ್ಟ್‌) ಬಸ್‌ಗಳು ಕೆ.ಎಂ ರಸ್ತೆಯಲ್ಲಿ (ಕುವೆಂಪು ಕಲಾಮಂದಿರ ಹಿಂಭಾಗದ ಖಾಸಗಿ ಬಸ್‌ ನಿಲ್ದಾಣ– ಪವಿತ್ರ ವನ) ಓಡಾಡುತ್ತವೆ.

ಕೆ.ಎಂ. ರಸ್ತೆ, ಐ.ಜಿ ರಸ್ತೆ, ರತ್ನಗಿರಿ ರಸ್ತೆ ಮೊದಲಾದವು ನಗರದ ಪ್ರಮುಖ ರಸ್ತೆಗಳು. ಕಡೂರು, ತರೀಕೆರೆ, ಮೂಡಿಗೆರೆ, ಬೇಲೂರು, ಹಾಸನ ಮೊದಲಾದ ಕಡೆಗಳಿಗೆ ಸಂಪರ್ಕ ರಸ್ತೆಗಳಿವು. ಅಷ್ಟೇ ಅಲ್ಲ ನಗರದ ವಿವಿಧ ಬಡಾವಣೆಗಳಿಗೆ ಸಂಪರ್ಕ ಕೊಂಡಿಗಳಾಗಿವೆ.
ರಾಮನಹಳ್ಳಿ, ಬೇಲೂರು ಮಾರ್ಗ (ಸರ್ಕಾರಿ ಪಿಯು ಕಾಲೇಜು ಬಳಿ) ಸಹಿತ ಎರಡ್ಮೂರು ಕಡೆ ಬಿಟ್ಟರೆ ಎಲ್ಲಿಯೂ ಪ್ರಯಾಣಿಕರ ತಂಗುದಾಣಗಳು ಇಲ್ಲ. ವಿವಿಧಡೆ ತಂಗುದಾಣಗಳನ್ನು ನಿರ್ಮಿಸಬೇಕು ಎಂಬ ಬೇಡಿಕೆ ಬೇಡಿಕೆಯಾಗಿಯೇ ಉಳಿದಿದೆ.
‘ಬಸ್‌ ನಿಲ್ಲಿಸುವಂತೆ ಕೈ ತೋರಿಸಬೇಕು. ರಸ್ತೆಯ ಅಂಚಿನಲ್ಲಿಯೇ ನಿಂತಿರಬೇಕು. ಮಕ್ಕಳ,ಲಗೇಜು ಹಿಡಿದುಕೊಂಡು ನಿಲ್ಲುವುದು ಹರಸಾಹಸ. ಸ್ವಲ್ಪ ದೂರದಲ್ಲಿ ಇದ್ದರೆ, ಬಸ್‌ ಹತ್ತುವ ಪ್ರಯಾಣಿಕರು ಇಲ್ಲ ಎಂದುಕೊಂಡು ಚಾಲಕರು ನಿಲ್ಲಿಸಲ್ಲ. ಬಸ್‌ ಹತ್ತಲು ಓಡುವಾಗ ಬಿದ್ದಿರುವ ನಿದರ್ಶನಗಳು ಇವೆ. ತಂಗುದಾಣ ಇದ್ದರೆ ಈ ಸಮಸ್ಯೆಗಳು ತಪ್ಪುತ್ತವೆ’ ಎಂದು ಖಾಸಗಿ ಕಂಪನಿ ಉದ್ಯೋಗಿ ನಿರ್ಮಲಾ ಹೇಳುತ್ತಾರೆ.

ಉದ್ಯೋಗ ನಿಮಿತ್ತ ಪರ ಊರಿಗೆ ಓಡಾಡುವವರು, ಐಡಿಎಸ್‌ಜಿ, ಎಐಟಿ ಮೊದಲಾದ ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳು, ವ್ಯಾಪಾರಿಗಳು, ರೈತರು, ಜಮೀನು–ತೋಟ–ಕಟ್ಟಡ ಕಾರ್ಮಿಕರು, ನಗರದ ವಿವಿಧ ಸಂಸ್ಥೆ–ಕಚೇರಿಗಳ ನೌಕರರು ಮೊದಲಾದವರು ಬಸ್‌ಗಳನ್ನು ಅವಲಂಬಿಸಿದ್ದಾರೆ. ಜನ–ವಾಹನ ಸಂದಣಿ ನಡುವೆ ಹಾದು ಬಸ್‌ ಏರುವ ಪಡಿಪಾಟಲಾಗಿದೆ.

‘ಎಐಟಿ ವೃತ್ತದ ಬಳಿ ನಿಂತು ಬಸ್‌ ಕಾಯಬೇಕು. ಗ್ರಾಮೀಣ ಭಾಗಗಳ ಸಹಸ್ರಾರು ವಿದ್ಯಾರ್ಥಿಗಳು ನಿತ್ಯ ಕಾಲೇಜಿಗೆ ಓಡಾಡುತ್ತಾರೆ. ತಂಗುದಾಣ ಇಲ್ಲದಿರುವುದರಿಂದ ಸಮಸ್ಯೆಯಾಗಿದೆ’ ಎಂದು ಐಡಿಎಸ್‌ಜಿ ಕಾಲೇಜಿನ ವಿದ್ಯಾರ್ಥಿನಿ ಸಿ.ಎಂ.ರಶ್ಮಿ ಗೋಳು ತೋಡಿಕೊಂಡರು.
ಬಿಸಿಲು – ಮಳೆ – ಚಳಿ: ಕಾಫಿನಾಡಿನಲ್ಲಿ ಮಳೆಗಾಲದಲ್ಲಿ ಧೋ ಮಳೆ, ಚಳಿಗಾಲದಲ್ಲಿ ಮೈಕೊರೆಯುವ ಥಂಡಿ, ಬೇಸಿಗೆಯಲ್ಲಿ ಬಿಸಿಲು ಮಾಮೂಲು. ತಂಗುದಾಣಗಳು ಇಲ್ಲದ ಕಡೆಗಳಲ್ಲಿ ಪ್ರಯಾಣಿಕರ ಪಾಡು ಹೇಳತೀರದು. ರಸ್ತೆ ಬದಿಯ ಅಂಗಡಿ– ಮಳಿಗೆಗಳ ಸೂರುಗಳನ್ನು ಆಶ್ರಯಿಸಬೇಕು.

ಮಳೆಗಾಲದಲ್ಲಿ ರಸ್ತೆ ಬದಿ ಕೆಸರು ದಾಟಿ, ಪಕ್ಕದಲ್ಲಿ ಸಾಗುವ ವಾಹನಗಳ ಚಕ್ರಗಳು ಚಿಮ್ಮಿಸುವ ನೀರು ತಡಾದು ಓಡಾಡಬೇಕು. ವೃದ್ಧರು, ಅಶಕ್ತರು, ಮಹಿಳೆಯರು, ರೋಗಿಗಳ, ಅಂಗವಿಕಲರು ತಾವು ನಿಂತಿದ್ದ ಅಂಗಡಿ–ಮಳಿಗೆಯಿಂದ ಬಸ್‌ ನಿಲುಗಡೆ ಸ್ಥಳಕ್ಕೆ ತಲುಪಲು ಪರದಾಡಬೇಕು.

‘ಎಐಟಿ ವೃತ್ತದ ಸನಿದಲ್ಲಿರುವ ಕಚೇರಿಗೆ ಪ್ರತಿನಿತ್ಯ ಓಡಾಡುತ್ತೇನೆ. ಪ್ರತಿದಿನ ಶೃಂಗಾರ್‌ ವೃತ್ತದಲ್ಲಿ ಬಸ್‌ ಹತ್ತುತ್ತೇನೆ. ಅಂಗಡಿ ಬಳಿ ನಿಂತು ಬಸ್‌ಗಾಗಿ ಕಾಯುತ್ತೇವೆ. ಮಳೆಗಾಲದಲ್ಲಿ ಬಹಳ ಸಮಸ್ಯೆಯಾಗುತ್ತದೆ. ಶೃಂಗಾರ್‌ ವೃತ್ತದ ರಸ್ತೆ ಬದಿ ಪ್ರಯಾಣಿಕರಿಗೆ ಶೆಡ್ ನಿರ್ಮಿಸಿದರೆ ಅನುಕೂಲವಾಗುತ್ತದೆ’ ಎಂದು ಅಂಗವಿಕಲ ಆರ್‌.ಡಿ.ಬಸವರಾಜು ಹೇಳುತ್ತಾರೆ.

ನಗರ ಸಾರಿಗೆ (ಮಲ್ಲಿಕಾರ್ಜುನ ಟ್ರಾನ್ಸ್‌ಪೋರ್ಟ್‌) ಎರಡು ಬಸ್‌ಗಳು ಇವೆ. ಕೆ.ಎಂ ರಸ್ತೆ ಮಾರ್ಗವಾಗಿ ಸಂಚರಿಸುತ್ತವೆ. ಪ್ರಯಾಣಿಕರು ನಗರದ ವಿವಿಧೆಡೆಗಳಿಗೆ ಈ ಬಸ್‌ಗಳಲ್ಲಿ ಓಡಾಡುತ್ತಾರೆ. ‘ಬೆಳಿಗ್ಗೆಯಿಂದ ಸಂಜೆವರೆಗೆ ಒಂದು ಬಸ್‌ 24 ಟ್ರಿಪ್‌ ಸಂಚರಿಸುತ್ತದೆ. ಎರಡು ಬಸ್‌ಗಳು ಒಟ್ಟ 48 ಟ್ರಿಪ್‌ ಓಡಾಡುತ್ತವೆ. ಪವಿತ್ರವನ, ಎಪಿಎಂಸಿ, ದಂಟರಮಕ್ಕಿ ಸಹಿತ ವಿವಿಧೆಡೆ ತಂಗುದಾಣ ಇಲ್ಲ. ತಂಗುದಾಣ ನಿರ್ಮಾಣಕ್ಕೆ ಸಂಬಂಧಪಟ್ಟವರು ಕ್ರಮ ವಹಿಸಬೇಕು’ ಎಂದು ಮಲ್ಲಿಕಾರ್ಜುನ ಟ್ರಾನ್ಸ್‌ಪೋರ್ಟ್‌ ಮಾಲೀಕರಾದ ಸಂದೇಶ್‌ ಒತ್ತಾಯಿಸುತ್ತಾರೆ.

ನಗರದ ಬೈಪಾಸ್‌ ಮಾರ್ಗ, ಹಿರೇಮಗಳೂರು ಸಹಿತ ವಿವಿಧೆಡೆಗಳಿಗೆ ನಗರ ಸಂಚಾರ ಬಸ್‌ ಸೌಕರ್ಯ ಇಲ್ಲ. ಸಾರಿಗೆ ನಿಗಮದ ವತಿಯಿಂದಲೇ ನಗರ ವಿವಿಧ ಬಡಾವಣೆಗಳಿಗೆ ಸಾರಿಗೆ ಸೌಕರ್ಯ ಕಲ್ಪಿಸಬೇಕು. ಶಾಲೆ–ಕಾಲೇಜು–ಕಚೇರಿ ಬೆಳಿಗ್ಗೆ ಆರಂಭ ಮತ್ತು ಸಂಜೆ ಮುಗಿಯುವ ಸಮಯ ಪರಿಗಣಿಸಿ ಬಸ್‌ ಸಂಚಾರ ಕಲ್ಪಿಸಬೇಕು. ಪ್ರಯಾಣಿಕರ ತಂಗುದಾಣಗಳಲ್ಲಿ ಬಸ್‌ ವೇಳಾಪಟ್ಟಿ ಅಳವಡಿಸಬೇಕು ಎಂಬ ಬೇಡಿಕೆಗಳು ಇವೆ.

‘ಪ್ರಯಾಣಕರ ತಂಗುದಾಣ; ಜಾಗು ಗುರುತಿಸಲು ಕ್ರಮ’

ಲಯನ್ಸ್‌ ನೆರವಿನಲ್ಲಿ (ದಂಟರಮಕ್ಕಿ ಕೆರೆ ಪಕ್ಕ) ಕತ್ರಿಮಾರಮ್ಮ ದೇಗುಲ ಬಳಿ ಪ್ರಯಾಣಿಕರ ತಂಗುದಾಣ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ನಗರದ ಕೆ.ಎಂ. ರಸ್ತೆ, ರಾಮನಹಳ್ಳಿ ಮುಖ್ಯರಸ್ತೆ, ಬೈಪಾಸ್‌ ರಸ್ತೆ ವಿಸ್ತರಣೆ ಕಾಮಗಾರಿಗಳು ನಡೆಯುತ್ತಿವೆ. ಸಮೀಕ್ಷೆ ನಡೆಸಿ ಎಲ್ಲೆಲ್ಲಿ ಪ್ರಯಾಣಿಕರ ತಂಗುದಾಣ ನಿರ್ಮಿಸಬೇಕು ಎಂದು ಜಾಗಗಳನ್ನು ಗುರುತಿಸಲಾಗುವುದು. ರಸ್ತೆ ವಿಸ್ತರಣೆ ಕಾಮಗಾರಿ ಮುಗಿದ ನಂತರ ತಂಗುದಾಣ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT