ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಸ್‌ಆರ್‌ಟಿಸಿ ಪ್ರಯಾಣಿಕರ ಸಮಸ್ಯೆ ಆಲಿಸಲು ‘ಕಾಲ್‌ ಸೆಂಟರ್‌’ ಶೀಘ್ರ ಆರಂಭ

ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿಕೆ
Last Updated 1 ಜುಲೈ 2018, 13:24 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿನ ಸಮಸ್ಯೆಗಳನ್ನು ಪ್ರಯಾಣಿಕರು ತಿಳಿಸಲು ಅನುಕೂಲವಾಗುವಂತೆ ಬೆಂಗಳೂರಿನಲ್ಲಿ ‘ಕಾಲ್‌ ಸೆಂಟರ್‌’ ಅನ್ನು ಶೀಘ್ರದಲ್ಲಿ ತೆರೆಯಲಾಗುವುದು ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು.

ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರಯಾಣದಲ್ಲಿ ಸಮಸ್ಯೆಯಾದರೆ, ಬಸ್ಸು ಕೆಟ್ಟು ನಿಂತರೆ ಪ್ರಯಾಣಿಕರು ‘ಕಾಲ್‌ ಸೆಂಟರ್‌’ಗೆ ತಕ್ಷಣವೇ ಕರೆ ಮಾಡಿ ತಿಳಿಸಬಹುದು. ಸಮಸ್ಯೆ ಪರಿಹರಿಸಲು ಅನುಕೂಲವಾಗುತ್ತದೆ’ ಎಂದರು.

‘ಬಸ್‌ ನಿಲ್ದಾಣ, ಡಿಪೋಗಳ ಸ್ಥಿತಿಗತಿ ಪರಿಶೀಲನೆ ನಿಟ್ಟಿನಲ್ಲಿ ಜಿಲ್ಲೆಗಳಿಗೆ ಪ್ರವಾಸ ಮಾಡುತ್ತಿದ್ದೇನೆ. ನಿಲ್ದಾಣದಲ್ಲಿನ ವ್ಯವಸ್ಥೆಗಳು, ನೈರ್ಮಲ್ಯ, ಬಸ್ಸುಗಳು ಸಮಯಕ್ಕೆ ಸರಿಯಾಗಿ ಸಂಚರಿಸುತ್ತಿವೆಯೇ ಎಂಬ ಬಗ್ಗೆ ನಿಲ್ದಾಣಗಳಲ್ಲಿ ಸಾರ್ವಜನಿಕರಿಂದ ಮಾಹಿತಿ ಪಡೆಯುತ್ತಿದ್ದೇನೆ. ಲೋಪಗಳನ್ನು ತಿಳಿದುಕೊಂಡು ಅವುಗಳನ್ನು ಸರಿಪಡಿಸಲು ಕ್ರಮ ವಹಿಸುತ್ತೇನೆ’ ಎಂದು ಹೇಳಿದರು.

‘ಕೆಎಸ್‌ಆರ್‌ಟಿಸಿ ಈಗ ನಷ್ಟದಲ್ಲಿ ಇದೆ. ಆದಾಯ ಮೂಲ ಹೆಚ್ಚಿಸಲು ಕ್ರಮ ವಹಿಸಬೇಕಿದೆ. ನಿಲ್ದಾಣದಲ್ಲಿ ಸಂಕೀರ್ಣ ನಿರ್ಮಾಣ, ಆದಾಯ ಕ್ರೋಡೀಕರಣ ಬಗ್ಗೆ ಸಂಬಂಧಪಟ್ಟವರೊಂದಿಗೆ ಚರ್ಚಿಸಿದ್ದೇನೆ. ಬಸ್‌ ನಿಲ್ದಾಣಗಳನ್ನು ರಾಷ್ಟ್ರೀಯ, ಅಂತರರಾಷ್ಟ್ರೀಯ ದರ್ಜೆಗೇರಿಸುವ ಚಿಂತನೆ ಇದೆ. ರಾಜಹಂಸ, ಐರಾವತ ಬಸ್ಸುಗಳಲ್ಲಿ ಸಮಸ್ಯೆಗಳಿದ್ದರೆ ಪರಿಹರಿಸಲಾಗುವುದು’ ಎಂದರು.

ಚಿಕ್ಕಮಗಳೂರು ನಗರ ಬೆಳೆಯುತ್ತಿದೆ. ಈಗಿನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣವನ್ನು ನಗರ ನಿಲ್ದಾಣವಾಗಿ ಬಳಸಿಕೊಂಡು, ಹೊರವಲಯದಲ್ಲಿ ಗ್ರಾಮಾಂತರ ಸಾರಿಗೆ ನಿಲ್ದಾಣವನ್ನು ನಿರ್ಮಿಸುವ ಉದ್ದೇಶ ಇದೆ. ಅದಕ್ಕೆ ಜಾಗ ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ. ಗ್ರಾಮಾಂತರ ನಿಲ್ದಾಣ, ಡಿಪೋವನ್ನು ಒಂದೇ ಕಡೆ ನಿರ್ಮಿಸುವ ಉದ್ದೇಶ ಇದೆ. ಕನಿಷ್ಠ 10 ಎಕರೆ ಜಾಗ ಬೇಕಾಗುತ್ತದೆ’ ಎಂದು ಉತ್ತರಿಸಿದರು.

ಮಹಿಳಾ ಶೌಚಾಲಯ ಪರಿಶೀಲನೆ

ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಮಹಿಳಾ ಶೌಚಾಲಯದ ವ್ಯವಸ್ಥೆಗಳನ್ನು ಪರಿಶೀಲಿಸಿದರು. ನೀರಿನ ವ್ಯವಸ್ಥೆ, ನೈರ್ಮಲ್ಯ ಸಮರ್ಪಕವಾಗಿ ನಿರ್ವಹಿಸುವಂತೆ ಸಂಬಂಧಪಟ್ಟವರಿಗೆ ಖಡಕ್‌ ಸೂಚನೆ ನೀಡಿದರು. ನಿರ್ವಹಣೆ ಬಗ್ಗೆ ಮಾಹಿತಿ ಪಡೆದರು.

ನಂತರ, ಪುರುಷರ ಶೌಚಾಲಯದಲ್ಲೂ ವ್ಯವಸ್ಥೆಗಳನ್ನು ಪರಿಶೀಲಿಸಿದರು.

ಬಸ್ಸುಗಳ ಸಂಚಾರ, ಸೌಲಭ್ಯಗಳು, ಸಿಬ್ಬಂದಿ ವರ್ತನೆಗಳ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆದುಕೊಂಡರು. ಬಸ್ಸಿನೊಳಗೆ ಪ್ರಯಾಣಿಕರ ಕುಂದುಕೊರತೆ ಆಲಿಸಿದರು. ನಿಲ್ದಾಣ ಆವರಣದಲ್ಲಿ ಸಂಚರಿಸಿ ಸ್ವಚ್ಛತೆ ಪರಿಶೀಲಿಸಿದರು.

ಚಿಕ್ಕಮಗಳೂರಿನಿಂದ ಶ್ರೀಗುರುದತ್ತಾತ್ರೇಯ ಬಾಬಾಬುಡನ್‌ಸ್ವಾಮಿ ದರ್ಗಾಕ್ಕೆ ತೆರಳಲು ಮಿನಿ ಬಸ್‌ ಸೌಲಭ್ಯ ಕಲ್ಪಿಸಬೇಕು ಎಂದು ಮುಳ್ಳಯ್ಯನಗಿರಿ ತಪ್ಪಲು ರಕ್ಷಣಾ ವೇದಿಕೆಯ ಕೆ.ಎಸ್‌.ಗುರುವೇಶ್್ ಅವರು ಸಚಿವರಿಗೆ ಮನವಿ ಸಲ್ಲಿಸಿದರು.

ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಅನಿಲ್‌ಕುಮಾರ್‌, ಇತರ ಅಧಿಕಾರಿಗಳು ಜತೆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT