ಗುರುವಾರ , ಮಾರ್ಚ್ 23, 2023
30 °C
ಚಿಕ್ಕಮಗಳೂರು ಜಿಲ್ಲಾ ಉತ್ಸವದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಪ್ರವಾಸೋದ್ಯಮ: ಮಾಸ್ಟರ್‌ ಪ್ಲಾನ್‌ಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಬೃಹತ್‌ ಪ್ರಮಾಣದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ನಿಟ್ಟಿನಲ್ಲಿ ಮಾಸ್ಟರ್‌ ಪ್ಲಾನ್‌ ಸಿದ್ಧಪಡಿಸಿ ಸಲ್ಲಿಸಿದರೆ ಅನುದಾನ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಜಿಲ್ಲಾಡಳಿತದ ವತಿಯಿಂದ ಜಿಲ್ಲಾ ಆಟದ ಮೈದಾನದಲ್ಲಿ ಬುಧವಾರ ಏರ್ಪಡಿಸಿದ್ದ ಜಿಲ್ಲಾ ಉತ್ಸವ ಚಿಕ್ಕಮಗಳೂರು ಹಬ್ಬದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ವಿಫುಲ ಅವಕಾಶಗಳು ಇವೆ. ಸಾಹಸ ಪ್ರವಾಸೋದ್ಯಮಕ್ಕೂ ಬಹಳಷ್ಟು ಅವಕಾಶಗಳೂ ಇವೆ. ಸ್ವಿಟ್ಜರ್‌ಲೆಂಡ್‌ ರೀತಿಯಲ್ಲಿ ಇಲ್ಲಿ ಪ್ರವಾಸೋದ್ಯಮ ಬೆಳೆಸಲು ಕ್ರಮ ವಹಿಸಬೇಕು’ ಎಂದು ಹೇಳಿದರು.

ಗಿರಿಶ್ರೇಣಿಯಲ್ಲಿ ರೋಪ್‌ ವೇ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದೆ. ಈ ಯೋಜನೆಗೆ ಅನುದಾನ ಒದಗಿಸುವುದಾಗಿ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರ್‌ ಭರವಸೆ ನೀಡಿದ್ದಾರೆ. ಮುಖ್ಯಮಂತ್ರಿ ಆರೋಗ್ಯವಾಹಿನಿ ಈ ಜಿಲ್ಲೆಗೆ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಮುಂದಿನ ತಿಂಗಳು ಅದನ್ನು ಉದ್ಘಾಟನೆ ಮಾಡಲಾಗುವುದು ಎಂದರು.

ಇನ್ನೊಬ್ಬರಿಗೆ ಅನ್ಯಾಯ ಆಗದಂತೆ ನ್ಯಾಯ ನೀಡುವುದು ಮುಖ್ಯ. ದತ್ತ ಪೀಠ ವಿಚಾರದಲ್ಲಿ ನ್ಯಾಯ ನೀಡುವ ಕೆಲಸ ಮಾಡಿದ್ದೇವೆ ಎಂದರು.

ಚಿಕ್ಕಮಗಳೂರು ನಿಸರ್ಗ ರಮಣೀಯ ತಾಣ. ಪಶ್ಚಿಮಘಟ್ಟ ಶ್ರೇಣಿಯಲ್ಲಿ ಈ ಜಿಲ್ಲೆ ಇದೆ. ಪಶ್ಚಿಮ ಘಟ್ಟವನ್ನು ಉಳಿಸಿ ಬೆಳೆಸುವುದು ಎಲ್ಲರ ಕರ್ತವ್ಯ ಎಂದರು.

ಹೊಯ್ಸಳ ಕಾಲದ ಕಲೆ, ವಾಸ್ತುಶಿಲ್ಪ ಜಗತ್ಪ್ರಸಿದ್ಧವಾಗಿದೆ. ಹೊಯ್ಸಳರ ಕಾಲದ ಕಲಾಕೃತಿಗಳು ಇರುವ ಹಳೆಬೀಡು, ಬೇಲೂರು ಯುನೆಸ್ಕೊ ಮಾನ್ಯತೆ ಶೀಘ್ರದಲ್ಲಿ ಸಿಗಲಿದೆ. ಯುನೆಸ್ಕೊ ಅಧಿಕಾರಿಗಳು ಈ ಸ್ಥಳಗಳನ್ನು ಪರಿಶೀಲಿಸಿದ್ದಾರೆ ಎಂದರು.

ಶಾಸಕ ಸಿ.ಟಿ.ರವಿ ಮಾತನಾಡಿ, ಜಿಲ್ಲೆಗೆ ಕೃಷಿ ವಿಶ್ವವಿದ್ಯಾಲಯಕ್ಕೆ ಬೇಡಿಕೆ ಇಡಲಾಗಿದೆ. ಪ್ರತ್ಯೇಕ ಹಾಲು ಒಕ್ಕೂಟ ಮಂಜೂರಾತಿ ಆಗಿದೆ, ಶೀಘ್ರದಲ್ಲಿ ಆದೇಶ ಹೊರಬೀಳಲಿದೆ. ‘ಏರ್‌ ಸ್ಟ್ರಿಪ್‌’ ಮತ್ತು ‘ಹೆಲಿ ಪೋರ್ಟ್‌’ ನಿರ್ಮಾಣಕ್ಕೆ ತಯಾರಿ ನಡೆದಿದೆ ಎಂದರು.

ಚಿಕ್ಕಮಗಳೂರು ಉತ್ಸವ ಏಕವ್ಯಕ್ತಿ ಉತ್ಸವ ವಾಗಿಲ್ಲ. ಹೊಟ್ಟೆಕಿಚ್ಚಿನಿಂದ ಕೆಲವರು ವೃಥಾ ಟೀಕೆ ಮಾಡಿದ್ದಾರೆ ಎಂದರು.

ಕುರಂಜಿ ಹೂವಿನ ಅಂಚೆ ಲಕೋಟೆ ಬಿಡುಗಡೆಗೊಳಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮೆರೆದ ಡಾ.ರೊನಾಲ್ಡ್‌ ಕಲಾಸೊ, ಕಿಶೋರ್‌ಕುಮಾರ್‌ ಹೆಗ್ಡೆ, ಅವೆಜ್‌ ಅಹಮದ್‌ (ಪರವಾಗಿ ಅವರ ತಂದೆ), ಮುಗುಳಿ ಲಕ್ಷ್ಮಿದೇವಮ್ಮ ಅವರನ್ನು ಸನ್ಮಾನಿಸಲಾಯಿತು. ಕರ್ತಿಕೆರೆಯ ಶಾರದಾದೇವಿ ಸ್ವಸಹಾಯ ಸಂಘಕ್ಕೆ 1.5 ಲಕ್ಷದ ನೆರವಿನ ಚೆಕ್‌ ವಿತರಿಸಲಾಯಿತು.

ಅಶ್ವಿನಿ ಪುನೀತ್‌ರಾಜಕುಮಾರ್‌, ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರಾ ಅನುರಾಧಾ, ಶಾಸಕ ಡಿ.ಎಸ್.ಸುರೇಶ್, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್, ಇಂಧನ ಸಚಿವ ವಿ.ಸುನೀಲ್ ಕುಮಾರ್, ಶಾಸಕ ಸಿ.ಟಿ.ರವಿ, ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ, ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್, ಶಾಸಕ ಎಂ.ಪಿ.ಕುಮಾರಸ್ವಾಮಿ,‌ ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ, ಕೆ.ಪಿ.ವೆಂಕಟೇಶ, ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಸಿಡಿಎ ಅಧ್ಯಕ್ಷ ಆನಂದ್ , ಹೆಚ್ವುವರಿ ಜಿಲ್ಲಾಧಿಕಾರಿ ಬಿ.ಆರ್.ರೂಪಾ, ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ‌ಉಮಾ ಪ್ರಶಾಂತ್, ಜಿಲ್ಲಾ ಪಂಚಾಯಿತಿ ಸಿಇಒ ಜಿ.ಪ್ರಭು ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು