ಶನಿವಾರ, ಆಗಸ್ಟ್ 20, 2022
21 °C

ಕಳಸ: ನಿಧಾನಕ್ಕೆ ಗರಿಕೆದರುತ್ತಿರುವ ಪ್ರವಾಸೋದ್ಯಮ

ರವಿ ಕೆಳಂಗಡಿ Updated:

ಅಕ್ಷರ ಗಾತ್ರ : | |

Prajavani

ಕಳಸ: ಕೋವಿಡ್ ಭೀತಿಯಿಂದ ಪಾತಾಳಕ್ಕೆ ಕುಸಿದಿದ್ದ ಧಾರ್ಮಿಕ ಮತ್ತು ಪರಿಸರ ಪ್ರವಾಸೋದ್ಯಮವು ಕಳೆದ ವಾರದಿಂದ ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದೆ.

ಸೆ. 1ರಿಂದ ಮತ್ತೆ ಪ್ರವಾಸಿಗರು ಜಿಲ್ಲೆಯಲ್ಲಿ ಸಂಚರಿಸಬಹುದು ಎಂಬ ಜಿಲ್ಲಾಧಿಕಾರಿಯ ಆದೇಶದ ನಂತರ ತಾಲ್ಲೂಕಿನಲ್ಲಿ ಪ್ರವಾಸೋದ್ಯಮದ ಚಟುವಟಿಕೆ ನಿಧಾನಕ್ಕೆ ಗರಿಗೆದರುತ್ತಿದೆ.

ಕಳಸ, ಹೊರನಾಡಿನಲ್ಲಿ ಕಳಸೇಸ್ವರ ಮತ್ತು ಅನ್ನಪೂರ್ಣೆಯ ಭಕ್ತರಿಂದ ಧಾರ್ಮಿಕ ಪ್ರವಾಸೋದ್ಯಮ ಚಿಗುರುತ್ತಿದೆ. ಈ ದೇವಸ್ಥಾನಗಳನ್ನು ನಂಬಿಕೊಂಡ ಅಂಗಡಿ, ಹೋಟೆಲ್, ವಸತಿಗೃಹಗಳಲ್ಲಿ ವ್ಯಾಪಾರ ಸಣ್ಣ ಮಟ್ಟದಲ್ಲಿ ಆರಂಭವಾಗಿದೆ.

‘ಹಿಂದಿನ ವ್ಯಾಪಾರ ವಹಿವಾಟಿಗೆ ಹೋಲಿಸಿದರೆ ಈಗಿನ ವಹಿವಾಟು ಶೇ 25 ಕೂಡ ಇಲ್ಲ. ಆದರೆ, ಮುಂಬರುವ ದಿನಗಳ ಬಗ್ಗೆ ಆಶಾದಾಯಕ ಭಾವನೆ ಇದೆ’ ಎಂದು ಹೊರನಾಡಿನ ವಸತಿಗೃಹದ ಮಾಲೀಕ ಅಶೋಕ್ ಜೈನ್ ಹೇಳುತ್ತಾರೆ.

‘ಪ್ರವಾಸಿಗರು ಇಲ್ಲಿನ ಜಲಪಾತಗಳು, ಹುಲ್ಲುಗಾವಲು, ರಮಣೀಯ ಪರಿಸರಕ್ಕೆ ಮನಸೋತು ಮತ್ತೆ ಮತ್ತೆ ಇಲ್ಲಿಗೆ ಬರುತ್ತಾರೆ. 5 ತಿಂಗಳಿಂದ ಮನೆಯಲ್ಲೇ ಉಳಿದಿರುವ ಜನರು ಹೊರಗಿನ ಪ್ರಪಂಚ ನೋಡಲು ಕಾತರದಿಂದ ಇದ್ದಾರೆ. ಅವರು ಇಲ್ಲಿಗೆ ಬಂದ ನಂತರ ಅವರ ಆರೋಗ್ಯದ ಬಗ್ಗೆಯೂ ಗಮನ
ಇರಿಸಿಕೊಂಡು ವಾಸ್ತವ್ಯಕ್ಕೆ ಅವಕಾಶ ನೀಡುತ್ತಿದ್ದೇವೆ’ ಎಂದು ಹೋಂಸ್ಟೇ ಮಾಲೀಕರಾದ ಬೆಳ್ಳದ ಚಂದನ್ ಹೇಳುತ್ತಾರೆ.

‘ಜನರು ಇಲ್ಲಿಗೆ ಬರಲು ಇಚ್ಛಿಸುತ್ತಿರುವುದು ಸತ್ಯ. ಆದರೆ, ಅತ್ಯಂತ ಕನಿಷ್ಠ ಬೆಲೆಗೆ ಆತಿಥ್ಯ ಬಯಸುತ್ತಿದ್ದಾರೆ. ನಾವು 5 ತಿಂಗಳಿನಿಂದ ಬಾಗಿಲು ಮುಚ್ಚಿ ಬಹಳಷ್ಟು ನಷ್ಟ ಅನುಭವಿಸಿದ್ದರೂ ಕಡಿಮೆ ಬೆಲೆಗೆ ಅತಿಥಿಗಳಿಗೆ ಸೇವೆ ನೀಡುವ ಸವಾಲು ಎದುರಾಗಿದೆ’ ಎಂಬುದು ಮರಸಣಿಗೆಯ ಹೋಂ ಸ್ಟೇ ಮಾಲೀಕ ಬ್ರಹ್ಮದೇವ ಅವರ ಅಭಿಪ್ರಾಯ.

ಪ್ರವಾಸೋದ್ಯಮ ನಂಬಿಕೊಂಡು ವ್ಯವಹಾರ ನಡೆಸುವ ಮಲೆನಾಡ ಉತ್ಪನ್ನಗಳ ಮಳಿಗೆಗಳು, ವೈನ್‌ಶಾಪ್, ಕಾಫಿ ಶಾಪ್, ಹೋಟೆಲ್, ಬೇಕರಿ, ಪೆಟ್ರೋಲ್ ಬಂಕ್‍ಗಳಲ್ಲೂ ವಾರಾಂತ್ಯದಲ್ಲಿ ಪ್ರವಾಸಿಗರಿಂದ ಆದಾಯ ಹೆಚ್ಚುತ್ತಿದೆ. ದುರ್ಗಮ ಪ್ರದೇಶದ ಪ್ರವಾಸಿ ತಾಣಗಳಿಗೆ ಪ್ರವಾಸಿಗರನ್ನು ಕೊಂಡೊಯ್ಯುವ ಜೀಪ್ ಮಾಲೀಕರು ಕೂಡ ದೀರ್ಘ ಕಾಲದ ನಂತರ ಅಷ್ಟಿಷ್ಟು ಆದಾಯ ನೋಡುವಂತಾಗಿದೆ.

ಒಟ್ಟಾರೆ 5 ತಿಂಗಳ ಕಾಲ ಸ್ತಬ್ಧವಾಗಿದ್ದ ಪ್ರವಾಸೋದ್ಯಮ ಇದೀಗ ತೆವಳಲು ಆರಂಭಿಸಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು