ಗುರುವಾರ , ಸೆಪ್ಟೆಂಬರ್ 23, 2021
22 °C

ಭಯದಲ್ಲೇ ಮನೆಯಿಂದ ಹೊರ ಬರುತ್ತಿರುವ ಕಾರ್ಮಿಕರು: ತೋಟಗಳಲ್ಲಿ ಚಿಗುರಿದ ಚಟುವಟಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೂಡಿಗೆರೆ: ಲಾಕ್‌ಡೌನ್ ಜಾರಿಯಾದ ಪ್ರಯುಕ್ತ ಒಂದು ತಿಂಗಳಿನಿಂದ ಮನೆಯಲ್ಲಿಯೇ ಕುಳಿತಿರುವ ಕಾಫಿ ತೋಟದ ಕೂಲಿ ಕಾರ್ಮಿಕರು ನಿಧಾನವಾಗಿ ಮನೆಯಿಂದ ಹೊರಬರತೊಡಗಿದ್ದು, ಕಾಫಿ ತೋಟಗಳಲ್ಲಿ ಚಟುವಟಿಕೆಗಳು ಚುರುಕುಗೊಳ್ಳುತ್ತಿವೆ.

ಎಂಟು ದಿನಗಳ ಹಿಂದೆ ಮಳೆ ಸುರಿದಿದ್ದರಿಂದ ಬಹುತೇಕ ಕಾಫಿ ತೋಟಗಳಲ್ಲಿ ಹೂವರಳಿದ್ದು, ಮುಂಬರುವ ವರ್ಷದಲ್ಲಿ ಬಂಪರ್ ಬೆಳೆ ನಿರೀಕ್ಷೆ ಮೂಡಿದೆ. ಅದರಲ್ಲೂ ಬಣಕಲ್, ಬಾಳೂರು, ಕಸಬಾ ಹೋಬಳಿಗಳಲ್ಲಿ ಉತ್ತಮವಾಗಿ ಮಳೆ ಸುರಿದಿದ್ದರಿಂದ ಕಾಫಿ ಬೆಳೆಗೆ ಮಳೆಯು ಹದವಾಗಿದೆ. ಮಳೆ ಬಿದ್ದ ಬೆನ್ನಲ್ಲೇ ರಸಗೊಬ್ಬರಕ್ಕೆ ಬೇಡಿಕೆ ಸೃಷ್ಟಿಯಾಗಿದ್ದು, ರಾತ್ರೋ ರಾತ್ರಿ ಲೋಡ್ ಗಟ್ಟಲೇ ಗೊಬ್ಬರ ಬಂದಿಳಿಯುತ್ತಿದೆ.

ಕೃಷಿ ಚಟುವಟಿಕೆಗೆ ಲಾಕ್‌ಡೌನ್‌ನಿಂದ ವಿನಾಯಿತಿ ನೀಡಿರುವುದರಿಂದ ಕಾಫಿ ತೋಟಗಳ ಮಾಲೀಕರು ದಿನವಿಡೀ ಕಾಫಿ ತೋಟಗಳಲ್ಲಿಯೇ ಬೀಡು ಬಿಡುತ್ತಿದ್ದಾರೆ. ಕಾಫಿ ತೋಟಗಳಲ್ಲಿ ಮೆಣಸು ಆಯುವುದು, ಕಸಿ, ಬಡ್ಡೆ ಬಿಡಿಸುವುದು, ಗೊಬ್ಬರ ಹಾಕುವುದು ಮುಂತಾದ ಚಟುವಟಿಕೆಗಳನ್ನು ನಡೆಸಬೇಕಾಗಿರುವುದರಿಂದ ಕಾರ್ಮಿಕರಿಗೂ ಉತ್ತಮ ಬೇಡಿಕೆ ಬಂದಿದೆ.

ಅಕ್ಕಪಕ್ಕದ ಹಳ್ಳಿಗಳಲ್ಲಿರುವ ಕಾರ್ಮಿಕರನ್ನು ಭಯದಲ್ಲಿಯೇ ಮಾಲೀಕರು ತಮ್ಮ ವಾಹನಗಳಲ್ಲಿ ಕರೆದೊಯ್ಯುತ್ತಿದ್ದಾರೆ. ಕಾರ್ಮಿಕರು ಕೂಡ ಮುಖದ ತುಂಬಾ ಬಟ್ಟೆ ಮುಚ್ಚಿಕೊಂಡು ಯುದ್ಧಕ್ಕೆ ಹೊರಟ ಸೈನಿಕರಂತೆ ವಾಹನಗಳಲ್ಲಿ ತೂರಿಕೊಂಡು ಕಾಫಿ ತೋಟಕ್ಕೆ ಬಂದಿಳಿಯುತ್ತಿದ್ದಾರೆ.

‘ಕಾಫಿ ತೋಟಗಳ ಕೃಷಿ ಚಟುವಟಿಕೆಯಲ್ಲಿ ಈಗ ಮಹತ್ತರ ಕಾಲಘಟ್ಟ. ಇಂದು ಕೈಗೊಳ್ಳುವ ಚಟುವಟಿಕೆಗಳು ವರ್ಷದ ಕೂಳಿಗೆ ನಾಂದಿಯಾಗುತ್ತದೆ. ಈಗ ಸರಿಯಾಗಿ ಗೊಬ್ಬರ ಕೊಡದಿದ್ದರೆ, ಗಿಡಗಳೇ ಸಾಯುತ್ತವೆ. ಅಲ್ಲದೆ, ಉದುರಿರುವ ಮೆಣಸನ್ನು ಆಯ್ದುಕೊಳ್ಳದಿದ್ದರೆ ಬೆಳೆಯಿಲ್ಲದೇ ಕಂಗೆಟ್ಟಿರುವ ರೈತರಿಗೆ ಇನ್ನಷ್ಟು ನಷ್ಟವಾಗುತ್ತದೆ. ಕೊರೊನಾ ಬರಬಾರದು ಎಂಬುದು ನಮಗೂ ಇದೆ. ಅದಕ್ಕಾಗಿಯೇ ಪ್ರತಿಯೊಬ್ಬ ಕಾರ್ಮಿಕರಿಗೂ ಪ್ರತ್ಯೇಕವಾಗಿ ನಿಗಾ ಇಟ್ಟಿದ್ದೇವೆ. ತೋಟಕ್ಕೆ ಬರುವಾಗ ಹಾಗೂ ತೋಟದಿಂದ ಹೋಗುವಾಗ ಸ್ವಚ್ಛತೆಗೆ ಆದ್ಯತೆ ನೀಡುತ್ತೇವೆ’ ಎನ್ನುತ್ತಾರೆ ಕಾಫಿ ಬೆಳೆಗಾರ ಸತ್ತಿಹಳ್ಳಿ ವಾಸು.

‘ಇಪ್ಪತ್ತು ದಿನಗಳಿಂದ ಕೂಲಿಯಿಲ್ಲದೇ ಮನೆಯಲ್ಲಿಯೇ ಇದ್ದೆವು. ಸೊಸೈಟಿಯಲ್ಲಿ ಅಕ್ಕಿಯೆನೋ ಕೊಟ್ಟಿದ್ದಾರೆ. ಆದರೆ, ಅಕ್ಕಿಯೊಂದರಿಂದಲೇ ಬದುಕುವುದಕ್ಕೆ ಆಗುವುದಿಲ್ಲವಲ್ಲ. ನಾವು ಕೂಲಿ ಮಾಡಿಯೇ ಮಕ್ಕಳು ಮರಿ ಸಾಕಬೇಕಲ್ವಾ? ಅದಕ್ಕಾಗಿಯೇ ನಾಲ್ಕು ದಿನದಿಂದ ಕೆಲಸಕ್ಕೆ ಹೋಗುತ್ತಿದ್ದೇವೆ. ಹದಿನೈದು ದಿನದಿಂದ ಸಾಲ ಮಾಡಿ ಸಾಮಾನು ತಂದಿದ್ದೇವು ಈ ವಾರ ನಾಲ್ಕು ಕೆಲಸ ಮಾಡಿರುವುದರಿಂದ ಸ್ವಲ್ಪ ಸಾಲನೂ ಕಟ್ಟಬೇಕು’ ಎಂದು ಕೆಲಸ ಮಾಡುತ್ತಿದ್ದ ಕಮಲಮ್ಮ ತಮ್ಮ ಅಳಲನ್ನು ಮುಂದಿಟ್ಟರು.

ಕೊರೊನಾ ಮಹಾಮಾರಿ ಕೂಲಿಕಾರ್ಮಿಕರ ಬದುಕಿಗೂ ಪೆಟ್ಟು ನೀಡಿದ್ದು, ಇದೀಗ ನಿಧಾನವಾಗಿ ಗರಿಗೆದರುತ್ತಿರುವ ಚಟುವಟಿಕೆಯಿಂದ ಹಲವರಿಗೆ ಹೊಟ್ಟೆ ತುಂಬಿಕೊಳ್ಳಲು ಅವಕಾಶ ಸಿಕ್ಕಂತಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು