ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಫಿಗೆ ಬೆಲೆ ಇದೆ: ಬೆಳೆ ಇಲ್ಲ

ಹವಾಮಾನ ವೈಪರಿತ್ಯ, ಕಾರ್ಮಿಕರ ಕೊರತೆಯಿಂದ ಬೆಳೆಗಾರರು ಹೈರಾಣು
Published 18 ಜೂನ್ 2023, 23:35 IST
Last Updated 18 ಜೂನ್ 2023, 23:35 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಹವಾಮಾನ ವೈಪರಿತ್ಯ ಮಲೆನಾಡಿನ ರೈತರನ್ನು ಬಿಟ್ಟು ಬಿಡದೆ ಕಾಡುತ್ತಿದೆ. ಅದಕ್ಕೆ ಇತ್ತೀಚಿನ ಉದಾಹರಣೆ ಎಂದರೆ ಕಾಫಿಗೆ ಹಿಂದೆಂದೂ ಕಂಡರಿಯದ ಬೆಲೆ ಬಂದಿದ್ದರೂ ಅದರ ಲಾಭ ಬೆಳೆಗಾರರಿಗೆ ಇಲ್ಲವಾಗಿದೆ.

ಕಾಫಿಗೆ ಅದರಲ್ಲೂ ರೊಬಸ್ಟಾ ಕಾಫಿಗೆ ಐತಿಹಾಸಿಕ ಬೆಲೆ ಬಂದಿದೆ. ಪ್ರತಿ ಕೆ.ಜಿಗೆ ₹250ಗೆ ಏರಿಕೆಯಾಗಿದ್ದು, 28 ಕೆ.ಜಿ ಓಟಿ ಇರುವ ರೊಬಸ್ಟಾ ಕಾಫಿ ಪ್ರತಿ ಮೂಟೆಗೆ ₹ 7 ಸಾವಿರಕ್ಕೆ ಬಿಕರಿಯಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೆಚ್ಚಿನಾಂಶ ರೊಬಸ್ಟಾ ಕಾಫಿಯನ್ನೇ ರೈತರು ಬೆಳೆಯುತ್ತಿದ್ದಾರೆ. ಮೂಡಿಗೆರೆ, ಕಳಸ, ಸ‌ಹ್ಯಾದ್ರಿ, ಆವತಿ, ವಸ್ತಾರೆ, ಖಾಂಡ್ಯ, ಜಾಗರ, ಬಾಳೆ ಹೊನ್ನೂರು ಭಾಗದಲ್ಲಿ ರೊಬಸ್ಟಾ ಕಾಫಿ ಬೆಳೆ ಜಾಸ್ತಿ ಇದೆ. ಆದ್ದರಿಂದ ಬೆಲೆ ಏರಿಕೆಯ ಲಾಭ ಬೆಳೆಗಾರರಿಗೆ ದೊರಕಬೇಕಿತ್ತು. ಆದರೆ, ಬೆಳೆಗಾರರ ಬಳಿ ಕಾಫಿ ದಾಸ್ತಾನಿಲ್ಲ, ಕಳೆದ ವರ್ಷ ಬಂದಿದ್ದ ಫಸಲನ್ನು ಬಹತೇಕ ಜನವರಿ ಮತ್ತು ಫೆಬ್ರುವರಿಯಲ್ಲೇ ಮಾರಾಟ ಮಾಡಿ ಕೈತೊಳದುಕೊಂಡಿದ್ದಾರೆ.

ಜನವರಿಯಲ್ಲೂ ಕಾಫಿ ಬೆಲೆ ಏರುಗತಿಯಲ್ಲೇ ಇತ್ತು. ಮುಂದಿನ ದಿನಗಳಲ್ಲಿ ದಿಢೀರ್ ಕುಸಿತ ಕಾಣಬಹುದು ಎಂದು ಆಲೋಚಿಸಿ ರೈತರು ಕಾಫಿ ಮಾರಾಟ ಮಾಡಿದ್ದರು. ಈಗ ದಿನದಿಂದ ದಿನಕ್ಕೆ ಬೆಲೆ ಏರಿಕೆಯಾಗುತ್ತಿದೆ. ಅತಿವೃಷ್ಟಿ, ಅನಾವೃಷ್ಟಿಯಿಂದ ಕಾಫಿ ಬೆಳೆಗಾರರು ನಲುಗಿ ಹೋಗಿದ್ದಾರೆ. ಸಮಯಕ್ಕೆ ತಕ್ಕಂತೆ ಮಳೆಯಾಗದಿರುವುದು ಕಾಫಿ ಬೆಳೆ ಮೇಲೆ ಹೆಚ್ಚಿನ ವ್ಯತಿರಿಕ್ತ ಪರಿಣಾಮ ಬೀರಿದೆ.

ಕಾಫಿ ಹೂ ಅರಳುವ ಸಂದರ್ಭದಲ್ಲಿ ಮಳೆಯಾದರೆ ಫಸಲು ಉತ್ತಮವಾಗಿ ಕಟ್ಟುತ್ತದೆ. ಹಿಂದಿನ ಮಳೆ ವಾಡಿಕೆ ಗಮನಿಸಿದರೆ ಕಾಫಿ ಹೂಬಿಡುವ ದಿನಗಳಲ್ಲಿ ಮಳೆಯಾಗಬೇಕು. ಆದರೆ, ಈ ಬಾರಿ ಮಳೆಯಾಗದೆ ಉಷ್ಣಾಂಶ ಹೆಚ್ಚಾಯಿತು. ಉಷ್ಣಾಂಶ ಹೆಚ್ಚಾದರೆ ಕಾಫಿ ಹೂವುಗಳು ಉದುರಿ ಹೋಗುತ್ತವೆ. ಹೀಗೆ ಹೂವು ಉದುರಿ ಹೋಗಿದ್ದರಿಂದಲೇ ಈ ವರ್ಷದ ಕಾಫಿ ಇಳುವರಿ ಕಡಿಮೆಯಾಯಿತು. ಮುಂದಿನ ವರ್ಷವೂ ಇಳುವರಿ ಕಡಿಮೆ ಇರಲಿದೆ ಎನ್ನುತ್ತಾರೆ ಬೆಳೆಗಾರರು.

ರೊಬಾಸ್ಟಾ ಕಾಫಿ ಬೆಳೆಯುವ ವಿಯಟ್ನಾಂ, ಬ್ರೆಜಿಲ್, ಇಂಡೋನೇಷ್ಯಾ ದೇಶಗಳಲ್ಲೂ ಹವಾಮಾನ ವೈಪರಿತ್ಯದಿಂದ ಕಾಫಿ ಫಸಲು ಕಡಿಮೆಯಾಗಿದೆ. ನಿರೀಕ್ಷೆಗೆ ತಕ್ಕಷ್ಟು ಇಳುವರಿ ಸಿಕ್ಕಿಲ್ಲ. ಆದ್ದರಿಂದ ಬೆಲೆ ಗಗನಕ್ಕೆ ಏರಿದೆ. ಕಾಫಿಗೆ ಇನ್ನಿಲ್ಲದ ಬೇಡಿಕೆ ಬಂದಿರುವುದರಿಂದ ರಾಜ್ಯದಿಂದ ಕಾಫಿ ವಿದೇಶಗಳಿಗೆ ರಫ್ತಾಗಿದೆ. ಕಾಫಿ ಮಂಡಳಿ ಅಧಿಕಾರಿಗಳ ಪ್ರಕಾರ ₹933 ಕೋಟಿ ಮೌಲ್ಯದ ಕಾಫಿ ರಫ್ತಾಗಿದೆ. ಇದು ಕೂಡ ಕಾಫಿ ಮಂಡಿಯ ಪಾಲಿಗೆ ದಾಖಲೆಯೇ ಆಗಿದೆ.

ಕಾಫಿ ಖರೀದಿ ಮಾಡಿ ದಾಸ್ತಾನಿಟ್ಟುಕೊಂಡಿರುವ ವರ್ತಕರಿಗೆ ಮಾತ್ರ ಬೆಲೆ ಏರಿಕೆ ಲಾಭ ದೊರಕುತ್ತಿದೆ. ಕಾಫಿ ದಾಸ್ತಾನಿಟ್ಟುಕೊಂಡು ಕಾಯುವಷ್ಟು ಆರ್ಥಿಕ ಸುಸ್ಥಿತಿ ರೈತರಿಗೆ ಇಲ್ಲ. ಹಾಗಾಗಿ ಸಿಕ್ಕಷ್ಟು ಬೆಲೆಗೆ ಮಾರಾಟ ಮಾಡಿ ಪರಿಸ್ಥಿತಿ ನಿಭಾಯಿಸುತ್ತಾರೆ. ಅದರಲ್ಲೂ ಸಣ್ಣ ಬೆಳೆಗಾರರು ಸಾಲ ಮಾಡಿಯೇ ಕಾಫಿ ಬೆಳೆ ಉಳಿಸಿಕೊಳ್ಳುತ್ತಾರೆ. ಕಾಫಿ ಫಸಲು ಬಂದ ಕೂಡಲೇ ಕಾಯದೆ ಮಾರಾಟ ಮಾಡಿ ಸಾಲ ತೀರಿಸುತ್ತಾರೆ.

ದೇಶ–ವಿದೇಶಗಳಲ್ಲಿ ಇರುವ ಬೇಡಿಕೆ, ಬೆಲೆಗಳನ್ನು ತಿಳಿದುಕೊಂಡು ಕಾಫಿ ದಾಸ್ತಾನಿಡುವಷ್ಟು ತಾಳ್ಮೆಯೂ ರೈತರಲ್ಲಿ ಉಳಿದುಕೊಂಡಿಲ್ಲ. ಈ ಎಲ್ಲಾ ಕಾರಣಗಳಿಂದ ಕಾಫಿಗೆ ಬೆಲೆ ಬಂದಿದ್ದರೂ, ಅದು ರೈತರಿಗೆ ದೊರಕುತ್ತಿಲ್ಲ ಎನ್ನುತ್ತಾರೆ ಕಾಫಿ ಬೆಳೆಗಾರರು.

‘ತೋಟ ಉಳಿಸಿಕೊಳ್ಳುವ ಖರ್ಚು ದುಬಾರಿ’

‘ಕಾರ್ಮಿಕರ ಕೊರತೆ ಮತ್ತು ಹವಮಾನ ವೈಪರಿತ್ಯದಿಂದ ಕಾಫಿ ಬೆಳೆಗೆ ಖರ್ಚು ಜಾಸ್ತಿಯಾಗುತ್ತಿದೆ. ಇದೆಲ್ಲವನ್ನೂ ಸಹಿಸಿಕೊಂಡು ಕಾಫಿ ಬೆಳೆ ಉಳಿಸಿಕೊಳ್ಳುವುದೇ ಕಷ್ಟ’ ಎಂದು ಕಾಫಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಮೋಹನ್‌ಕುಮಾರ್ ಹೇಳುತ್ತಾರೆ. ರೊಬಸ್ಟಾ ಕಾಫಿಗೆ ಬೆಲೆ ಬಂದಿರುವುದೇನೋ ನಿಜ. ಆದರೆ ಪಾರ್ಚುಮೆಂಟ್‌ ಮಾಡಿದವರಿಗೆ ಅಷ್ಟೇನು ಲಾಭ ಇಲ್ಲ. ಅರೇಬಿಕಾ ಕಾಫಿಯ ಬೆಲೆ ಕೂಡ ಏರಿಕೆಯಾಗಿಲ್ಲ. ಇತ್ತೀಚಿನ ದಿನಗಳಲ್ಲಿ ತೋಟ ಉಳಿಸಿಕೊಳ್ಳಲು ದಿನದಿಂದ ದಿನಕ್ಕೆ ಖರ್ಚು ಹೆಚ್ಚಾಗುತ್ತಿದೆ ಎಂದರು. ಕಾಲಕ್ಕೆ ತಕ್ಕಂತೆ ಮಳೆಯಾದರೆ ಖರ್ಚು ಕಡಿಮೆಯಾಗುತ್ತದೆ. ಮಳೆ ಸಮಯಕ್ಕೆ ತಕ್ಕಂತೆ ಬಾರದೆ ಖರ್ಚು ದುಬಾರಿಯಾಗುತ್ತಿದೆ. ಅದರ ಜತೆಗೆ ತೋಟ ಕಾರ್ಮಿಕರ ಕೊರತೆ ಕೂಡ ಬೆಳೆಗಾರರನ್ನು ಸಂಕಷ್ಟಕ್ಕೆ ದೂಡಿದೆ. ಬೇರೆ ಬೇರೆ ಊರುಗಳಿಂದ ಜನರನ್ನು ಕರೆತಂದು ಕೆಲಸ ಮಾಡಿಸುವುದು ಅತ್ಯಂತ ದುಬಾರಿ. ಸಮಯಕ್ಕೆ ಸರಿಯಾಗಿ ಕೆಲಸ ಆಗಬೇಕಿರುವುದರಿಂದ ದುಬಾರಿಯಾದರೂ ಕಾರ್ಮಿಕರನ್ನು ನಿಯೋಜಿಸಿ ತೋಟ ಉಳಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಹೇಳಿದರು.

ಮಳೆ ವಿಳಂಬ: ಕಾಳು ಮೆಣಸಿಗೂ ಕಂಟಕ

ಈ ವರ್ಷ ಮಳೆ ವಿಳಂಬವಾಗಿರುವುದು ಕಾಫಿ ಜತೆಗೆ ಕಾಳು ಮೆಣಸಿಗೂ ಕಂಟಕವಾಗಿದೆ. ಮುಂಗಾರು ಪೂರ್ವ ಮತ್ತು ಮುಂಗಾರು ಮಳೆ ಆಗದಿರುವುದು ಈ ಬೆಳೆಯ ಇಳುವರಿ ಮೇಲೆ ಪರಿಣಾಮ ಬೀರಲಿದೆ. ಮಳೆ ಇಲ್ಲದಿರುವುದರಿಂದ ಹೂವು ಬಿಡುವುದು ತಡವಾಗಿದೆ. ಜುಲೈನಲ್ಲಿ ಜೋರು ಮಳೆ ಹಿಡಿದರೆ ಹೂವು ಕೊಳೆತು ಮಣಸಿನ ಫಸಲು ಕಡಿಮೆಯಾಗಲಿದೆ. ಮೊದಲೇ ಮಳೆ ಬಂದು ಮೆಣಸು ಹೂವು ಬಿಡಲಾರಂಭಿಸಿದ್ದರೆ ಔಷಧಿ ಸಿಂಪಡಿಸಲು ಅವಕಾಶ ಇತ್ತು. ಈಗ ಅದು ಕೈ ಮೀರಿದ್ದು ಮೆಣಸು ಬೆಳೆ ಕೂಡ ಇಳುವರಿ ಕುಂಟಿತವಾಗಲಿದೆ ಎನ್ನುತ್ತಾರೆ ಬೆಳೆಗಾರರು. ಬೆಳೆಗಾರರು ಕಾಫಿಯೊಂದರ ಮೇಲೆ ಅವಲಂಭಿತರಾಗದೆ ಮೆಣಸು ಅಡಿಕೆ ರೀತಿಯ ಬೆಳೆಯನ್ನೂ ಉಪ ಬೆಳೆಯಾಗಿ ಬೆಳೆಯುತ್ತಾರೆ. ಮಳೆ ವಿಳಂಬ ಆಗಿರುವುದು ಎಲ್ಲಾ ಬೆಳೆಗಳಿಗೂ ತೊಂದರೆಯಾಗಿದೆ ಎಂದು ಮೋಹನ್‌ಕುಮಾರ್ ಅಭಿಪ್ರಾಯಟ್ಟರು.

ಕಾಫಿ ದಾಸ್ತಾನಿಲ್ಲದ ವರ್ತಕರಿಗೂ ಸಂಕಷ್ಟ

ಕಾಫಿ ಬೀಜ ಖರೀದಿಸಿ ದಾಸ್ತಾನಿಟ್ಟುಕೊಂಡಿರುವ ವರ್ತಕರನ್ನು ಬಿಟ್ಟರೆ ಕಾಫಿ ಬೀಜ ಪುಡಿ ಮಾಡಿ ಮಾರಾಟ ಮಾಡುವ ವ್ಯಾಪಾರಿಗಳೂ ಈಗ ಕಷ್ಟಕ್ಕೆ ಸಿಲುಕಿದ್ದಾರೆ.  ಕಾಫಿ ಮತ್ತು ಚಿಕೋರಿ ಎರಡೂ ಬೆಲೆಗಳೂ ಗಗನಕ್ಕೆ ಏರಿಕೆಯಾಗಿವೆ. ಎರಡನ್ನೂ ಖರೀದಿಸಿ ಪುಡಿ ಮಾಡಿ ಪ್ಯಾಕ್ ಮಾಡಿ ಮಾರಾಟ ಮಾಡಬೇಕು. ಆದರೆ ಕಾಫಿ ಪುಡಿ ಪೊಟ್ಟಣದ ಬೆಲೆ ಹೆಚ್ಚಳ ಮಾಡುವಂತಿಲ್ಲ.  ಕಾಫಿ ಬೀಜದ ಬೆಲೆ ಹೆಚ್ಚಾಗಿದ್ದರೂ ಹಿಂದಿನ ಬೆಲೆಗೇ ಕಾಫಿಪುಡಿ ಮಾರಾಟ ಮಾಡುತ್ತಿರುವುದರಿಂದ ನಿರ್ವಹಣೆ ಕಷ್ಟವಾಗಿದೆ ಎಂದು ಕಾಫಿ ವರ್ಕ್ಸ್‌ ಮಾಲೀಕರು ಹೇಳುತ್ತಾರೆ.

ಅಡಿಕೆ ಫಸಲಿಗೂ ಪೆಟ್ಟು

ಈ‌ ಬಾರಿ ಮುಂಗಾರು ವಿಳಂಬವಾಗಿರುವುದು ಅಡಿಕೆ ಬೆಳೆ ಮೇಲೂ ಪರಿಣಾಮ ಬೀರಿದೆ. ಎಂದಿನಂತೆ ಮುಂಗಾರು ಮತ್ತು ಮುಂಗಾರು ಪೂರ್ವ ಮಳೆಯಾಗಿದ್ದರೆ ಜೂನ್‌ ಮೊದಲ ವಾರದಲ್ಲೇ ಅಡಿಕೆ ತೋಟಕ್ಕೆ ಗೊಬ್ಬರ ಹಾಕಬೇಕಿತ್ತು. ಮಳೆ ಬಾರದಿರುವುದರಿಂದ ಗೊಬ್ಬರ ಹಾಕಲು ರೈತರು ಕಾಯುತ್ತಿದ್ದಾರೆ.’ ವಿಳಂಬವಾದರೆ ಅಡಿಕೆ ಫಸಲಿಗೆ ತೊಂದರೆಯಾಗಲಿದೆ. ಉಳುವರಿ ಕಡಿಮೆಯಾಗಿ ಸಂಕಷ್ಟಕ್ಕೆ ಸಿಲಬೇಕಾಗುತ್ತದೆ ಎಂದು ರೈತರು ಹೇಳುತ್ತಾರೆ.

ಪೂರಕ ಮಾಹಿತಿ: ರವಿ ಕೆಳಂಗಡಿ, ಎಚ್.ಎನ್.ಸತೀಶ್ ಜೈನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT