ಶುಕ್ರವಾರ, ಸೆಪ್ಟೆಂಬರ್ 20, 2019
21 °C
ಡಿ.ಕೆ.ಶಿವಕುಮಾರ್ ಬಂಧನ ವಿರೋಧಿಸಿ ಪ್ರತಿಭಟನೆ

ಪ್ರತಿಭಟನಾನಿರತರು ವಶ; ಬಿಡುಗಡೆ

Published:
Updated:
Prajavani

ಚಿಕ್ಕಮಗಳೂರು: ಕಾಂಗ್ರೆಸ್ ಪ್ರಭಾವಿ ಮುಖಂಡ, ಶಾಸಕ ಡಿ.ಕೆ.ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್, ಜೆಡಿಎಸ್, ಬಿಎಸ್‌ಪಿ, ಸಿಪಿಐ ಕಾರ್ಯಕರ್ತರು ತಲೆಗೆ ಕಪ್ಪು ಪಟ್ಟಿ ಧರಿಸಿ ಬುಧವಾರ ಪ್ರತಿಭಟನೆ ನಡೆಸಿದರು.

ನಗರದ ಹನುಮಂತಪ್ಪ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ರಸ್ತೆ ತಡೆ ಮಾಡಿದರು. ರಸ್ತೆ ತಡೆ 10 ನಿಮಿಷ ಮೀರಿದಾಗ ಪ್ರತಿಭಟನಾನಿರತರನ್ನು ಪೊಲೀಸರು ವಶಕ್ಕೆ ಪಡೆದು, ವಾಹನಗಳಲ್ಲಿ ಕರೆದೊಯ್ದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಡಿ.ಎಲ್.ವಿಜಯಕುಮಾರ್ ಮಾತನಾಡಿ, ‘ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯು ಜಾರಿ ನಿರ್ದೇಶನಾಲಯ (ಇಡಿ), ವಾಣಿಜ್ಯ ತೆರಿಗೆ ಇಲಾಖೆ, ಸಿಬಿಐಯಂಥ ಸಂಸ್ಥೆಗಳನ್ನು ಕೈಗೊಂಬೆಯಾಗಿಸಿಕೊಂಡಿದೆ. ರಾಜಕೀಯ ಎದುರಾಳಿಗಳನ್ನು ಹಣಿಯಲು ಅವುಗಳನ್ನು ಬಳಸುತ್ತಿದೆ. ಪ್ರಜಾಪ್ರಭುತ್ವದ ಕೊಲೆ ಮಾಡುತ್ತಿದೆ. ಇದೊಂದು ಕರಾಳ ದಿನ’ ಎಂದರು.

ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಮಾತನಾಡಿ, ‘ಶಿವಕುಮಾರ್ ಅವರಿಗೆ ಚೌತಿಯಂದು ಹಿರಿಯರ ಪೂಜೆಗೂ ಅವಕಾಶ ನೀಡದೆ, ಇ.ಡಿ ಅಧಿಕಾರಿಗಳು ಅವರನ್ನು ದೇಶದ್ರೋಹಿಯಂತೆ ನಡೆಸಿಕೊಂಡಿದ್ದಾರೆ, ಇದು ಖಂಡನೀಯ. ಶಿವಕುಮಾರ್‌ ದುಃಖಿಸಿದ್ದನ್ನು ಬಿಜೆಪಿ ನಾಯಕರು ಮೊಸಳೆ ಕಣ್ಣೀರಿಗೆ ಹೋಲಿಸಿರುವುದು ಅಮಾನವೀಯ’ ಎಂದು ದೂಷಿಸಿದರು.

ಬಿಎಸ್‌ಪಿ ಜಿಲ್ಲಾಘಟಕದ ಅಧ್ಯಕ್ಷ ಕೆ.ಟಿ.ರಾಧಕೃಷ್ಣ ಮಾತನಾಡಿ, ‘ಶಿವಕುಮಾರ್ ಅವರ ಬಂಧನ ದುರುದ್ದೇಶದಿಂದ ಕೂಡಿದೆ. ಅದನ್ನು ಪಕ್ಷಾತೀತವಾಗಿ ಖಂಡಿಸುವ ಅಗತ್ಯ ಇದೆ’ ಎಂದರು.

‘46 ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ರಾಮನಹಳ್ಳಿಯ ಪೊಲೀಸ್‌ ಮೈದಾನಕ್ಕೆ ಕರೆದೊಯ್ಯಲಾಗಿತ್ತು. ಮಧ್ಯಾಹ್ನ 1.30ರ ಹೊತ್ತಿಗೆ ಬಿಡುಗಡೆ ಮಾಡಲಾಯಿತು’ ಎಂದು ಬಸವಹನಳ್ಳಿ ಪೊಲೀಸ್ ಠಾಣೆ ಪಿಎಸ್‌ಐ ಗಿರೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಸಿಪಿಐ ಜಿಲ್ಲಾ ಸಂಚಾಲಕ ಎಚ್.ಎಂ.ರೇಣುಕಾರಾಧ್ಯ, ಮುಖಂಡರಾದ ಎಂ.ಎಲ್.ಮೂರ್ತಿ, ಎಚ್.ಪಿ.ಮಂಜೇಗೌಡ, ಎ.ವಿ.ಗಾಯತ್ರಿ ಶಾಂತೇಗೌಡ, ಕೆ.ಮಹಮದ್, ಶಿವಕುಮಾರ್, ಜಯರಾಜ್ ಅರಸ್, ಹೊಲದಗದ್ದೆ ಗಿರೀಶ್ ಪ್ರತಿಭಟನೆಯಲ್ಲಿದ್ದರು.

Post Comments (+)