ಅಜ್ಜಂಪುರ: ‘ಬಿಜೆಪಿ ಮತ್ತು ಜೆಡಿಎಸ್ ರಾಜ್ಯಪಾಲರ ಮೂಲಕ, ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿವೆ’ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಆರೋಪಿಸಿದರು.
ಬಿಜೆಪಿ-ಜೆಡಿಎಸ್ ಪಾದಯಾತ್ರೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು, ಅಹಿಂದ ಸಂಘಟನೆಗಳು, ಪಟ್ಟಣದಲ್ಲಿ ಗುರುವಾರ ನಡೆಸಿದ ಪಂಜಿನ ಮೆರವಣಿಗೆಯಲ್ಲಿ ಅವರು ಮಾತನಾಡಿದರು.
ಬಿಜೆಪಿ, ಜೆಡಿಎಸ್ ಮತ್ತು ಖಾಸಗಿ ವ್ಯಕ್ತಿಗಳು ಸಿದ್ದರಾಮಯ್ಯನವರ ಮೇಲೆ ಹೊರಿಸಿರುವ ಆರೋಪಗಳು ನಿರಾಧಾರ. ‘ಮೂಡಾ ಹಗರಣ’ ಸಿಎಂಗೆ ಮಸಿ ಬಳಿಯಲು ನಡೆಸಿರುವ ಹುನ್ನಾರ. ಪ್ರತಿಪಕ್ಷಗಳ ಆಶಯ ಕೈಗೂಡುವುದಿಲ್ಲ ಎಂದು ತಿರುಗೇಟು ನೀಡಿದರು.
ಕೆಪಿಸಿಸಿ ಸದಸ್ಯ ಜಿ. ನಟರಾಜ್ ಮಾತನಾಡಿ, ಸಿದ್ದರಾಮಯ್ಯ ತಮ್ಮ 40 ವರ್ಷಗಳ ರಾಜಕಾರಣದಲ್ಲಿ ಪ್ರಾಮಾಣಿಕತೆ ಉಳಿಸಿಕೊಂಡಿದ್ದಾರೆ. ಅವರ ವಿರುದ್ದ ಆರೋಪ ಮಾಡುತ್ತಿರುವ ಬಿಜೆಪಿಯವರು ಭ್ರಷ್ಟಾಚಾರ ಮಾಡಿ, ಜೈಲಿಗೆ ಹೋಗಿ ಬಂದಿದ್ದಾರೆ. ಅಂತಹವರಿಗೆ ಸಿದ್ದರಾಮಯ್ಯ ವಿರುದ್ದ ಮಾತನಾಡುವ ನೈತಿಕತೆ ಇಲ್ಲ ಎಂದರು.
ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ತಿಪ್ಪೇಶ್ ಮಡಿವಾಳ್, ‘ಸಿದ್ದರಾಮಯ್ಯ ಹಿಂದುಳಿದವರ ನಾಯಕ. ಬಡವರ ಪರ ಗ್ಯಾರಂಟಿ ಯೋಜನೆ ಜಾರಿಗೊಳಿಸಿ, ಮಾತು ಉಳಿಸಿಕೊಂಡಿದ್ದಾರೆ. ಇದನ್ನು ಸಹಿಸಲಾಗದೆ, ಅವರ ವಿರುದ್ಧ ಬಿಜೆಪಿ-ಜೆಡಿಎಸ್ ಸುಳ್ಳು ಆರೋಪ ಮಾಡುತ್ತಿವೆ’ ಎಂದರು.
ಕಾಂಗ್ರೆಸ್ ಜಿಲ್ಲಾ ಘಟಕದ ಉಪಾಧ್ಯಕ್ಷ ಗುರುಮೂರ್ತಿ, ಮುಖಂಡ ಗಡೀಹಳ್ಳಿ ಮಂಜುನಾಥ್, ಕೃಷ್ಣಪ್ಪ, ರಾಘವೇಂದ್ರ, ರಿಯಾಜ್ ಅಹಮದ್, ಜೋಗಿ ಪ್ರಕಾಶ್, ಬಂಗನಗಟ್ಟೆ ರಾಜಣ್ಣ ಇದ್ದರು.
ಗಾಂಧಿವೃತ್ತದಿಂದ ಪಂಜಿನ ಮೆರವಣಿಗೆಯಲ್ಲಿ ಸಾಗಿದ ಕಾಂಗ್ರೆಸ್ ಕಾರ್ಯಕರ್ತರು, ಬಿಜೆಪಿ ಮತ್ತು ಜೆಡಿಎಸ್ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತ ನೆಹರೂ ವೃತ್ತ, ಸಿದ್ದರಾಮೇಶ್ವರ ವೃತ್ತದ ಮೂಲಕ ಬಸ್ ನಿಲ್ದಾಣದವರೆಗೆ ಸಾಗಿದರು.