ಸೋಮವಾರ, ಆಗಸ್ಟ್ 2, 2021
25 °C
ಹೊಳೆಗದ್ದೆ, ಅಕ್ಸಾಲ್ ಕೊಡಿಗೆಯಲ್ಲಿ ಹೆಚ್ಚುತ್ತಿರುವ ಸೋಂಕು– ಆತಂಕ ಹುಟ್ಟಿಸಿದ ಪಾಸಿಟಿವ್ ದರ

ಶೃಂಗೇರಿ: ಪರೀಕ್ಷೆಗೊಳಗಾದ ಶೇ 65 ಮಂದಿಯಲ್ಲಿ ಕೋವಿಡ್‌ ದೃಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶೃಂಗೇರಿ: ತಾಲ್ಲೂಕಿನ ಬೇಗಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬ್ರಕೋಡು ಗ್ರಾಮದ ಹೊಳೆಗದ್ದೆ ಮತ್ತು ಅಕ್ಸಾಲ್‌ ಕೊಡಿಗೆ ಎಂಬ ಹಳ್ಳಿಗಳಲ್ಲಿ ಪರೀಕ್ಷೆಗೊಳಗಾದವರ ಪೈಕಿ ಶೇ 65ಕ್ಕೂ ಹೆಚ್ಚು ಮಂದಿಯಲ್ಲಿ ಕೋವಿಡ್‌ ದೃಢಪಟ್ಟಿದೆ. ಇಲ್ಲಿನ ನೂರಾರು ಮಂದಿ ಇನ್ನೂ ಪರೀಕ್ಷೆ ಮಾಡಿಸಿಕೊಳ್ಳದೆ, ಅಧಿಕಾರಿಗಳ ಕಣ್ತಪ್ಪಿಸಿ ಹೊರಬಂದು ತಿರುಗಾಡು ತ್ತಿರುವುದು ಸುತ್ತಲಿನ ಹಳ್ಳಿಗಳಲ್ಲಿ ಆತಂಕ ಸೃಷ್ಟಿಸಿದೆ.

ಅಕ್ಸಾಲ್‌ ಕೊಡಿಗೆಯ ಶ್ರೀನಿವಾಸ್‌ ಎಂಬುವರ ಮನೆಯಲ್ಲಿ 28 ದಿನಗಳ ಹಿಂದೆ ಮದುವೆ ಸಮಾರಂಭ ನಡೆದಿತ್ತು. ತಹಶೀಲ್ದಾರ್‌ ಮದುವೆಗೆ ನೀಡಿದ್ದ ಅನುಮತಿಯಲ್ಲಿ ನಿಗದಿಪಡಿಸಿದ್ದ ಮಿತಿಯನ್ನು ಮೀರಿ 400ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಮದುವೆಗೆ ಬಂದಿದ್ದ ಹಲವರಲ್ಲಿ ಕೋವಿಡ್‌ ಪತ್ತೆಯಾಗಿದೆ. ನಿತ್ಯವೂ ಹೊಸ ಪ್ರಕರಣಗಳು ವರದಿಯಾಗುತ್ತಲೇ ಇದ್ದು, ಎರಡೂ ಹಳ್ಳಿಗಳನ್ನು ‘ಮೈಕ್ರೋ ಕಂಟೈನ್ಮೆಂಟ್ ವಲಯ’ ಎಂದು ಘೋಷಿಸಲಾಗಿದೆ.

ಕೋವಿಡ್‌ ರೋಗ ಲಕ್ಷಣಗಳು ಕಂಡುಬಂದಿದ್ದ ಹಾಗೂ ಅವರ ಕುಟುಂಬದ ಸದಸ್ಯರು ಸೇರಿದಂತೆ 64 ಜನರ ಗಂಟಲು ಮತ್ತು ಮೂಗಿನ ದ್ರವದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಲಾಗಿದೆ. ಈ ಪೈಕಿ 42 ಜನರಲ್ಲಿ ಕೋವಿಡ್‌ ಪತ್ತೆಯಾಗಿದೆ. ಎರಡೂ ಹಳ್ಳಿಗಳಲ್ಲಿ ಪಾಸಿಟಿವಿಟಿ ದರ ಶೇ 65.62 ಇದ್ದು, ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.

‘ಎರಡೂ ಹಳ್ಳಿಗಳಲ್ಲಿ 81 ಕುಟುಂಬಗಳಿದ್ದು, 348 ಜನಸಂಖ್ಯೆ ಇದೆ. ಇನ್ನೂ 284 ಮಂದಿ ಕೋವಿಡ್‌ ಪರೀಕ್ಷೆಗೆ ಮಾದರಿ ನೀಡಿಲ್ಲ. ಕೆಲವರಲ್ಲಿ ಕೋವಿಡ್‌ ರೋಗ ಲಕ್ಷಣಗಳಿದ್ದರೂ ಪರೀಕ್ಷೆಗೆ ಮುಂದಾಗಿಲ್ಲ. ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿರುವವರು, ಕೋವಿಡ್‌ ರೋಗಿಗಳ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಂಪರ್ಕ ಹೊಂದಿರುವ ಹಲವರನ್ನೂ ಪರೀಕ್ಷೆಗೆ ಒಳಪಡಿಸಿಲ್ಲ. ಇದರಿಂದಾಗಿ ಸುತ್ತಲಿನ ಹಳ್ಳಿಗಳಿಗೂ ಸೋಂಕು ಹರಡುವ ಅಪಾಯವಿದೆ’ ಎಂದು ದೂರುತ್ತಾರೆ ಹೊಳೆಗದ್ದೆ ಮತ್ತು ಅಕ್ಸಾಲ್‌ ಕೊಡಿಗೆಯ ಪಕ್ಕದ ಹಳ್ಳಿಗಳ ಜನರು.

ನಿರ್ಬಂಧ ನೆಪಕ್ಕಷ್ಟೆ: ‘ಎರಡೂ ಹಳ್ಳಿಗಳಿಂದ ಜನರು ಹೊರ ಹೋಗದಂತೆ ನಿರ್ಬಂಧಿಸಿ ತಹಶೀಲ್ದಾರ್‌ ಆದೇಶ ಹೊರಡಿಸಿದ್ದಾರೆ. ಬೇಗಾರು ಗ್ರಾಮ ಪಂಚಾಯಿತಿಯ ಮೂಲಕ ಅಗತ್ಯ ವಸ್ತುಗಳ ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ. ಆದರೆ, ಎರಡೂ ಹಳ್ಳಿಗಳ ಹಲವರು ನಿತ್ಯವೂ ಹೊರ ಊರುಗಳಿಗೆ ಹೋಗಿ ಬರುತ್ತಿದ್ದಾರೆ. ಕೆಲವೇ ಕಿಲೋಮೀಟರ್‌ ದೂರದಲ್ಲಿರುವ ಬೇಗಾರು ಮತ್ತು ಬಿದರಗೋಡು ಪೇಟೆಗಳಿಗೂ ಆಗಾಗ ಬರುತ್ತಿದ್ದಾರೆ. ಇದು ಕೋವಿಡ್‌ ಪ್ರಸರಣಕ್ಕೆ ಕಾರಣವಾಗುವ ಸಾಧ್ಯತೆ ಇದೆ’ ಎಂಬುದು ಅಲ್ಲಿನವರ ಆತಂಕ.

‘ಪಾಸಿಟಿವಿಟಿ ದರ ಶೇ 65ಕ್ಕಿಂತ ಹೆಚ್ಚು ಇರುವುದರಿಂದ ಎರಡೂ ಹಳ್ಳಿಗಳ ಎಲ್ಲ ಜನರನ್ನೂ ಕೋವಿಡ್‌–19 ಪರೀಕ್ಷೆಗೆ ಒಳಪಡಿಸಬೇಕು. ನಿರ್ದಿಷ್ಟ ಅವಧಿಯವರೆಗೆ ಜನರು ವೈದ್ಯಕೀಯ ಮತ್ತಿತರ ಅನಿವಾರ್ಯ ಕಾರಣಗಳ ಹೊರತಾಗಿ ಹೊರ ಬರುವುದನ್ನು ಕಠಿಣವಾಗಿ ನಿರ್ಬಂಧಿಸಬೇಕು. ಸೋಂಕು ಹರಡುವ ಅಪಾಯದ ಕುರಿತು ಹಳ್ಳಿಗಳ ಜನರಲ್ಲಿ ಸರಿಯಾಗಿ ಜಾಗೃತಿ ಮೂಡಿಸಬೇಕು’ ಎಂಬ ಒತ್ತಾಯ ಸುತ್ತಲಿನ ಹಳ್ಳಿಗಳ ಜನರದ್ದು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು