ಚಿಕ್ಕಮಗಳೂರಿನ ದೇವೀರಮ್ಮ ಗುಡ್ಡದ ಮೇಲಿನ ಮಂಟಪದಲ್ಲಿ ಭಾನುವಾರ ದೇವಿಯನ್ನು ಪ್ರತಿಷ್ಠಾಪಿಸಿ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿತ್ತು
ರಕ್ಷಣಾ ತಂಡಕ್ಕೆ ಶ್ಲಾಘನೆ
ಜಾತ್ರಾ ಮಹೋತ್ಸವದ ಅಂಗವಾಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಮಳೆ ಚಳಿ ಗಾಳಿಯ ನಡುವೆ ರಕ್ಷಣಾ ತಂಡ ಕಾರ್ಯನಿರ್ವಹಿಸಿತು. ಕಡಿದಾದ ಜಾಗದಲ್ಲಿ ಬೆಟ್ಟ ಏರಲು ಆಗದವರಿಗೆ ರಕ್ಷಣಾ ತಂಡ ಹಗ್ಗದ ಸಹಾಯದಲ್ಲಿ ಮೇಲೆ ಎಳೆದುಕೊಂಡು ನೆರವಾಯಿತು. ಪೊಲೀಸರು ಅಗ್ನಿಶಾಮಕ ಸಿಬ್ಬಂದಿ ಸ್ವಯಂ ಸೇವಕರ ತಂಡದ ಈ ಕಾರ್ಯಕ್ಕೆ ಎಲ್ಲರಿಂದ ಶ್ಲಾಘನೆ ವ್ಯಕ್ತವಾಯಿತು. ಮಲ್ಲೇನಹಳ್ಳಿ ಬಳಿ ವಾಹನ ದಟ್ಟಣೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿತ್ತು. ಕೈಮರ ಚೆಕ್‌ಪೋಸ್ಟ್ ಬಳಿಯ ವಾಹನಗಳನ್ನು ತಡೆದು ಬೇರೆಡೆಗೆ ಕಳುಹಿಸಲಾಯಿತು.
ಸೋಮವಾರವೂ ಬೆಟ್ಟ ಏರುವ ಭಕ್ತರು
ಇದೇ ಮೊದಲ ಬಾರಿಗೆ ಬೆಟ್ಟ ಏರಿ ದೇವಿಯ ದರ್ಶನ ಪಡೆಯಲು ಎರಡು ದಿನ ಅವಕಾಶ ನೀಡಲಾಗಿದೆ. ಸಾಮಾನ್ಯವಾಗಿ ನರಕ ಚತುರ್ದಶಿಯ ದಿನ ಬೆಟ್ಟದ ಮೇಲೆ ದೇವಿಯ ದರ್ಶನಕ್ಕೆ ಅವಕಾಶ ಇತ್ತು. ಮಳೆ ಮುನ್ಸೂಚನೆ ಇರುವುದರಿಂದ ರಾತ್ರಿ ವೇಳೆ ಬೆಟ್ಟ ಏರಲು ಅವಕಾಶ ನೀಡದೆ ಮುನ್ನ ದಿನವೇ ದೇವಿಯ ಉತ್ಸವ ಮೂರ್ತಿಯನ್ನು ಬೆಟ್ಟದ ತುದಿಗೆ ಕೊಂಡೊಯ್ದು ಪೂಜೆ ಸಲ್ಲಿಸಲಾಯಿತು. ಭಾನುವಾರ ಇಡೀ ದಿನ ಬೆಟ್ಟ ಏರಿದ ಭಕ್ತರು ದೇವಿಯನ್ನು ಕಣ್ತುಂಬಿಕೊಂಡರು. ಸೋಮವಾರ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕ್ಷೆ ಇದೆ.