ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಫ್ರೂಟ್ಸ್‌’ ತಂತ್ರಾಂಶ; ರೈತರ ನೋಂದಣಿಗೆ ಸೂಚನೆ

ಜಿಲ್ಲಾಮಟ್ಟದ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ
Last Updated 3 ಮಾರ್ಚ್ 2021, 2:59 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಫಾರ್ಮರ್‌ ರಿಜಿಸ್ಟ್ರೆಷನ್‌ ಅಂಡ್‌ ಯೂನಿಫೈಡ್‌ ಬೆನಿಫಿಷಿಯರಿ ಇನ್ಫಾರ್ಮೆಷನ್‌ ಸಿಸ್ಟಂ’ (ಫ್ರೂಟ್ಸ್‌) ತಂತ್ರಾಂಶದಲ್ಲಿ ನೋಂದಣಿಯಾಗದಿರುವ ರೈತರನ್ನು ನೋಂದಣಿ ಮಾಡಿಸಲು ಕ್ರಮವಹಿಸಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯಲ್ಲಿ ಈ ಸೂಚನೆ ನೀಡಿದರು. ಫ್ರೂಟ್ಸ್‌ ತಂತ್ರಾಂಶದಲ್ಲಿ ನೋಂದಣಿಗೆ ಯಾವ್ಯಾವ ದಾಖಲೆ ಎಂಬುದನ್ನು ತಿಳಿಸಬೇಕು. ಎಲ್ಲ ರೈತರನ್ನು ನೋಂದಣಿ ಮಾಡಿಸಬೇಕು ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಈವರೆಗೆ ‘ಕೃಷಿ ಸಮ್ಮಾನ್‌’ ಯೋಜನೆಯಡಿ1.42 ಲಕ್ಷ ರೈತರ ಖಾತೆಗೆ 7 ಕಂತುಗಳಲ್ಲಿ ₹ 121 ಕೋಟಿ ಜಮೆಯಾಗಿದೆ. ಫ್ರೂಟ್ಸ್‌ ತಂತ್ರಾಂಶದಲ್ಲಿ ನೋಂದಣಿಯಾಗದ ರೈತರಿಗೆ ಸಹಾಯಧನ ಪಾವತಿಯಾಗಿಲ್ಲ’ ಎಂದು ಜಂಟಿ ಕೃಷಿ ನಿರ್ದೇಶಕ ತಿರುಮಲೇಶ್‌ ತಿಳಿಸಿದರು.

‘ಇನ್ನು ಒಂದು ಲಕ್ಷ ರೈತರು ಈ ತಂತ್ರಾಂಶದಲ್ಲಿ ನೋಂದಣಿಯಾಗಿಲ್ಲ. ಪೌತಿ ಖಾತೆ, ಜಂಟಿ ಖಾತೆ ಸಮಸ್ಯೆ, ಅನಿವಾಸಿ ಭೂಮಾಲೀಕರು(ಅಬ್ಸೆಂಟಿ ಲ್ಯಾಂಡ್‌ ಲಾರ್ಡ್‌) ಮೊದಲಾದ ಕಾರಣಗಳಿಂದ ನೋಂದಣಿ ಆಗಿಲ್ಲ’ ಎಂದರು.

‘ನೋಂದಣಿಗೆ ಆಧಾರ್‌, ಪಹಣಿ, ಬ್ಯಾಂಕ್‌ ಖಾತೆ ಸಂಖ್ಯೆ ದಾಖಲೆಗಳಿರಬೇಕು. ಎಲ್ಲ ರೈತರನ್ನು ನೋಂದಾಯಿಸಲು ಪ್ರಯತ್ನ ನಡೆದಿದೆ. ನೋಂದಣಿ ನಿಟ್ಟಿನಲ್ಲಿ ಸುತ್ತೋಲೆ ಹೊರಡಿಸಿ ಕ್ರಮವಹಿಸಬೇಕು. ಕೃಷಿ, ತೋಟಗಾರಿಕೆ, ರೇಷ್ಮೆ, ಕಂದಾಯ ಇಲಾಖೆಗಳ ಕಾರ್ಯಗತವಾಗಬೇಕು’ ಎಂದರು.

‘ಆತ್ಮನಿರ್ಭರ್‌’ ಕಾರ್ಯಕ್ರಮಕ್ಕೆ ಸಾಂಬಾರು ಪದಾರ್ಥಗಳನ್ನು ಆಯ್ಕೆ ಮಾಡಿದ್ದೇವೆ. 15 ಬೆಳೆಗಾರರು ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ನಾಲ್ವರಿಗೆ ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಸಿಎಫ್‌ಟಿಆರ್‌ಐ) ತರಬೇತಿ ಕೊಡಿಸಲಾಗಿದೆ ಎಂದು ಅವರು ತಿಳಿಸಿದರು.

ನೋಟಿಸ್‌ ನೀಡಿ, ವಿವರಣೆ ಪಡೆಯಲು ಸೂಚನೆ
ರಾಷ್ಟ್ರೀಯ ಹೆದ್ದಾರಿ–206 ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ರಸ್ತೆ ವಿಸ್ತರಣೆ ಕಾಮಗಾರಿ ಬಗ್ಗೆ ತಿಳಿದಿದ್ದರೂ ಬದಿಯಲ್ಲೇ ತರೀಕೆರೆ ಬಳಿ ವಿದ್ಯುತ್‌ ಲೇನ್‌ ಅಳವಡಿಸಿದ್ದಾರೆ ಎಂದು ಶಾಸಕ ಸುರೇಶ್‌ ಆಕ್ಷೇಪ ವ್ಯಕ್ತಪಡಿಸಿದರು.

ಸಂಬಂಧಪಟ್ಟ ಎಂಜಿನಿಯರ್‌ಗೆ ನೋಟಿಸ್‌ ನೀಡಿ ವಿವರಣೆ ಪಡೆಯಬೇಕು. ಅಲ್ಲದೇ ಮಾರ್ಗಸೂಚಿ ಪಾಲನೆ ಮಾಡಿದ್ದಾರೆಯೇ, ಇಲ್ಲವೇ ಎಂಬುದನ್ನು ಪರಿಶೀಲಿಸಬೇಕು ಎಂದು ಶೋಭಾ ಅವರು ಮೆಸ್ಕಾಂ ಸೂಪರಿಂಟೆಂಡೆಂಟ್‌ ಎಂಜಿನಿಯರ್‌ ಮಂಜುನಾಥ್‌ ಅವರಿಗೆ ಸೂಚನೆ ನೀಡಿದರು.

ಕಳಸ ಹೋಬಳಿಯಲ್ಲಿ ಅತಿವೃಷ್ಟಿಯಿಂದ ಮನೆ ಕಳೆದುಕೊಂಡವರಿಗೆ ಪರ್ಯಾಯವಾಗಿ ಎಲ್ಲಿ ನಿವೇಶನ–ವಸತಿ ಒದಗಿಸಲಾಗಿದೆ ಎಂದು ಶೋಭಾ ಪ್ರಶ್ನಿಸಿದರು.

ಕಳಸದಲ್ಲಿ ಸರ್ವೆ ನಂ 153 ಮತ್ತು 88ರಲ್ಲಿ ಒಟ್ಟು 20 ಎಕರೆ ಜಾಗ ಗುರುತಿಸಿ ನಿವೇಶನ ನಿರ್ಮಾಣ ಮಾಡಿಲಾಗಿದೆ. ಒಂದು ಕಡೆ 192, ಮತ್ತೊಂದು ಕಡೆ 162 ನಿವೇಶನ ನಿರ್ಮಿಸಲಾಗಿದೆ. ಸಂತ್ರಸ್ತರಿಗೆ ಹಕ್ಕುಪತ್ರಗಳನ್ನು ನೀಡಲಾಗಿದೆ. ಒಂದು ಲಕ್ಷ ಪರಿಹಾರವನ್ನು ನೀಡಲಾಗಿದೆ. ಅಲ್ಲಿ ವಸತಿ ನಿರ್ಮಿಸಿಕೊಳ್ಳಲು ಯಾರು ಮುಂದೆ ಬರುತ್ತಿಲ್ಲ ಎಂದು ಉಪವಿಭಾಗಾಧಿಕಾರಿ ಡಾ.ಎಚ್‌.ಎಲ್‌.ನಾಗರಾಜ್‌ ತಿಳಿಸಿದರು. ಕೆಎಂ ರಸ್ತೆ (ಎನ್‌ಎಚ್‌.–173 ) ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. ಮೇ ಅಂತ್ಯದೊಳಗೆ ಶೇ 90 ಕಾಮಗಾರಿ ಮುಗಿಯಲಿದೆ. ಮೂಗ್ತಿಹಳ್ಳಿ ಬಳಿ ಭೂಸ್ವಾಧೀನ ಬಾಕಿ ಇದೆ. ಅದನ್ನು ಪರಿಹರಿಸಿಕೊಂಡು ಕಾಮಗಾರಿ ಸಾಧ್ಯವಾದಷ್ಟು ಬೇಗ ಪೂರ್ಣಗೊಳಿಸಲು ಕ್ರಮ ವಹಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ವಿಭಾಗದ ಎಂಜಿನಿಯರ್‌ ತಿಳಿಸಿದರು.

ಕೋವಿಡ್‌–19ಗೆ ಸಂಬಂಧಿಸಿದಂತೆ ಪ್ರಾಥಮಿಕ ಸಂಪರ್ಕದವರನ್ನು ಈಗ ಪರೀಕ್ಷೆ ಮಾಡುತ್ತಿಲ್ಲ. ಲಕ್ಕವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈಚೆಗೆ ರೇಬಿಸ್‌ ಇಂಜೆಕ್ಷನ್‌ ದಾಸ್ತಾನು ಇರಲಿಲ್ಲ ಎಂದು ತರೀಕೆರೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಪದ್ಮಾವತಿ ಹೇಳಿದರು.

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೇಬಿಸ್‌, ಹಾವುಕಡಿತ ಮೊದಲಾದವುಗಳಿಗೆ ಚುಚ್ಚುಮದ್ದು ಕಡ್ಡಾಯವಾಗಿ ದಾಸ್ತಾನು ಇಟ್ಟುಕೊಳ್ಳಬೇಕು. ಲಕ್ಕವಳ್ಳಿ ಆಸ್ಪತ್ರೆ ಅಧಿಕಾರಿಯಿಂದ ವಿವರಣೆ ಪಡೆಯಬೇಕು ಎಂದು ಶೋಭಾ ತಿಳಿಸಿದರು.

‘ಉದ್ಯೋಗ ಖಾತ್ರಿ ಕಾಮಗಾರಿಗಳ ಬಗ್ಗೆ ಅಧಿಕಾರಿಗಳು ಶಾಸಕರಿಗೆ ಮಾಹಿತಿ ನೀಡುವಂತಿಲ್ಲ ಸಹಾಯ ನಿರ್ದೇಶಕರೊಬ್ಬರು ಹೇಳಿದ್ದಾರೆ’ ಎಂದು ಶಾಸಕ ಸುರೇಶ್ ದೂರಿದರು.

ಈ ಬಗ್ಗೆ ವಿಚಾರಿಸುವಂತೆ ಶೋಭಾ ಅವರು ಜಿಲ್ಲಾ ಪಂಚಾಯಿತಿ ಸಿಇಒಗೆ ತಿಳಿಸಿದರು.

ಸಹಾಯಕ ನಿರ್ದೇಶಕರಿಂದ ವಿವರಣೆ ಪಡೆದು ತಿಳಿಸುತ್ತೇನೆ ಎಂದು ಸಿಇಒ ಪೂವಿತಾ ಸಭೆಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT