ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಬಾಕು ಸೇವನೆಯಿಂದ ಸಾವು ಸಮೀಪ: ಬಸವರಾಜ್ ಚೇಂಗಟಿ

ವಿಶ್ವ ತಂಬಾಕು ರಹಿತ ದಿನಾಚರಣೆ
Last Updated 31 ಮೇ 2019, 13:12 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ತಂಬಾಕು ಸೇವನೆಯಿಂದ ಸಾವು ಸಂಭವಿಸುತ್ತದೆ ಹೊರತು, ಬದುಕು ಅಭಿವೃದ್ಧಿಯಾಗುವುದಿಲ್ಲ. ಅದನ್ನು ಯುವಪೀಳಿಗೆ ಅರ್ಥ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಸವರಾಜ್ ಚೇಂಗಟಿ ಸಲಹೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ಪೊಲೀಸ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ವಕೀಲರ ಸಂಘದ ಸಹಯೋಗದೊಂದಿಗೆ ನಗರದ ಟಿಎಂಎಸ್ ಕಾಲೇಜಿನ ರೋಟರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ‘ವಿಶ್ವ ತಂಬಾಕು ರಹಿತ ದಿನಾಚರಣೆ’ಯಲ್ಲಿ ಅವರು ಮಾತನಾಡಿದರು.

1988ರ ಏಪ್ರಿಲ್ 7ರಂದು ವಿಶ್ವ ಆರೋಗ್ಯ ಸಂಸ್ಥೆ ತಂಬಾಕು ರಹಿತ ದಿನ ಆಚರಿಸಿತು. ನಂತರ ಮೇ31ರಂದು ತಂಬಾಕು ರಹಿತ ದಿನಾಚರಣೆ ಆಚರಿಸಲು ನಿರ್ಣಯ ಕೈಗೊಂಡಿತು. ಅಂದಿನಿಂದ ಪ್ರಪಂಚದ ಎಲ್ಲ ದೇಶಗಳಲ್ಲಿ ತಂಬಾಕು ರಹಿತ ದಿನ ಆಚರಿಸಲಾಗುತ್ತಿದೆ ಎಂದರು.

ಪ್ರಪಂಚದಲ್ಲಿ ಹೆಚ್ಚು ತಂಬಾಕು ರಫ್ತು ಮಾಡುತ್ತಿರುವ ದೇಶಗಳ ಪಟ್ಟಿಯಲ್ಲಿ ಚೀನಾ ಪ್ರಥಮ ಹಾಗೂ ಭಾರತ ದ್ವಿತೀಯ ಸ್ಥಾನದಲ್ಲಿವೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿ 2008 ಅಕ್ಟೋಬರ್ 2ರಂದು ದೇಶದಲ್ಲಿ ಕಾನೂನು ಜಾರಿಗೊಳಿಸಲಾಯಿತು. ಆದರೆ ಅದು ಪೂರ್ಣವಾಗಿ ಅನುಷ್ಠಾನಗೊಂಡಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ಕಂಡು ಬಂದಲ್ಲಿ ಅದನ್ನು ಪ್ರತಿಭಟಿಸಬೇಕು ಎಂದರು.

ಹದಿನೆಂಟು ವರ್ಷದೊಳಗಿನವರಿಗೆ ತಂಬಾಕು ಉತ್ಪನ್ನ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಆದರೂ ದೇಶದಲ್ಲಿ ಹದಿಹರೆಯದವರು ತಂಬಾಕು ವ್ಯಸನಿಗಳಾಗುವುದು ಕಡಿಮೆಯಾಗಿಲ್ಲ ಎಂದು ವಿಷಾಧಿಸಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಚ್.ಕೆ.ಮಂಜುನಾಥ್ ಮಾತನಾಡಿ, ವಿಶ್ವದಲ್ಲಿ ತಂಬಾಕು ಸೇವನೆಯಿಂದ ಪ್ರತಿವರ್ಷ 60 ಲಕ್ಷ ಮಂದಿ ಹಾಗೂ ದೇಶದಲ್ಲಿ 10 ಲಕ್ಷ ಮಂದಿ ಮೃತಪಡುತ್ತಿದ್ದಾರೆ. ಅದು ಏಡ್ಸ್, ಕ್ಷಯ, ಮಲೇರಿಯಾದಿಂದ ಸಾಯುವವರ ಸಂಖ್ಯೆಗಿನ್ನ ಹೆಚ್ಚಾಗಿದೆ. ಪ್ರತಿ 100 ಕ್ಯಾನ್ಸರ್ ಪ್ರಕರಣಗಳಲ್ಲಿ 95 ಬಾಯಿ ಕ್ಯಾನ್ಸರ್ ಪ್ರಕರಣಗಳಿರುತ್ತವೆ ಎಂದರು.

ಸರ್ಕಾರಿ ಜಿಲ್ಲಾಸ್ಪತ್ರೆಯ ಮನೋರೋಗ ತಜ್ಞ ಡಾ.ಎಂ.ಚಂದ್ರಶೇಖರ್ ಮಾತನಾಡಿ, ಹದಿಹರೆಯದವರಲ್ಲಿ ಎಲ್ಲವನ್ನು ಪ್ರಯೋಗಿಸಿ ನೋಡುವ ಕುತುಹಲ ಇರುತ್ತದೆ. ಈ ವಯಸ್ಸಿನಲ್ಲಿ ದುಶ್ಚಟಗಳಿಗೆ ದಾಸನಾದರೆ ಅದು ಜೀವನ ಪರ್ಯಂತ ಮುಂದುವರೆಯುತ್ತದೆ. ತಂಬಾಕಿನಿಂದ ದೂರ ಉಳಿಯಬೇಕು ಎನ್ನುವ ಮನಸ್ಥಿತಿ ಬರುವಷ್ಟರಲ್ಲಿ ಅದರ ದುಷ್ಪರಿಣಾಮ ದೇಹದಲ್ಲಿ ಅನಾಹುತ ಉಂಟು ಮಾಡಿರುತ್ತದೆ ಎಂದರು.

ವಿಶ್ವತಂಬಾಕು ರಹಿತ ದಿನಾಚರಣೆ ನಿಮಿತ್ತ ನಗರದ ತಾಲ್ಲೂಕು ಕಚೇರಿ ಆವರಣದಿಂದ ಜಿಲ್ಲಾಸ್ಪತ್ರೆವರೆಗೆ ಜನಜಾಗೃತಿ ಜಾಥ ನಡೆಸಲಾಯಿತು.

ಜಿಲ್ಲಾಸ್ಪತ್ರೆ ದಂತ ವೈದ್ಯ ಡಾ.ಪ್ರೇಂ ಕುಮಾರ್, ಆರೋಗ್ಯ ಇಲಾಖೆಯ ಜಲಜಾಕ್ಷಿ, ವಕೀಲ ಚಂದ್ರಶೇಖರ್ , ಟಿಂಎಸ್ ಸಂಸ್ಥೆ ಅಧ್ಯಕ್ಷೆ ನಳಿನಾ ಡಿ.ಸಾ, ಪ್ರಾಚಾರ್ಯ ಇಂದ್ರೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT