ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರಸಿಂಹರಾಜಪುರ | ವಾಣಿಜ್ಯ ಬೆಳೆ ಇಳುವರಿಯೂ ಕುಂಠಿತ

Published 7 ಡಿಸೆಂಬರ್ 2023, 4:56 IST
Last Updated 7 ಡಿಸೆಂಬರ್ 2023, 4:56 IST
ಅಕ್ಷರ ಗಾತ್ರ

ನರಸಿಂಹರಾಜಪುರ: ತಾಲ್ಲೂಕಿನ ವ್ಯಾಪ್ತಿಯಲ್ಲಿ ಮುಂಗಾರು ಮಳೆ ಕೊರತೆ ಆಗಿರುವುದರಿಂದ ಪ್ರಮುಖ ಆಹಾರ ಬೆಳೆಯಾದ ಭತ್ತ ಹಾಗೂ ವಾಣಿಜ್ಯ ಬೆಳೆಗಳ ಇಳುವರಿ ಮೇಲೆ ಪರಿಣಾಮ ಬೀರಿದೆ.

ಮಳೆ ಕೊರತೆಯ ಕಾರಣದಿಂದ ತಾಲ್ಲೂಕು ಕೇಂದ್ರ ಸಾಧಾರಣ ಬರಪೀಡಿತ ತಾಲ್ಲೂಕು ಎಂದು ಸರ್ಕಾರ ಘೋಷಣೆ ಮಾಡಿದೆ. ತಾಲ್ಲೂಕಿನ ವ್ಯಾಪ್ತಿಯಲ್ಲಿ ಸುಮಾರು 2,700 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದ್ದು. ಮಳೆ ಕೊರತೆ ಆಗಿದ್ದರಿಂದ ಪ್ರಸಕ್ತ ಸಾಲಿನಲ್ಲಿ 2009 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಮಳೆಯ ಕೊರತೆಯ ಕಾರಣದಿಂದ ಭತ್ತದ ಇಳುವರಿ ಶೇ 33ರಷ್ಟು ಕಡಿಮೆಯಾಗಲಿದೆ ಎಂದು ಅಂದಾಜು ಮಾಡಲಾಗಿದೆ.

ತಾಲ್ಲೂಕಿನಲ್ಲಿ 1,602 ಮಿ.ಮೀ ಮಳೆಯಾಗಬೇಕಾಗಿತ್ತು. 1,126 ಮಿ.ಮೀ ಮಳೆಯಾಗಿದ್ದು, ಶೇ 30ರಷ್ಟು ಕೊರತೆಯಾಗಿದೆ. ಮುತ್ತಿನಕೊಪ್ಪ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಶೇ 43ರಷ್ಟು ಹಾಗೂ ಬಾಳೆಹೊನ್ನೂರು ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಶೇ 46ರಷ್ಟು ಮಳೆ ಕೊರತೆಯಾಗಿದೆ. ಕೊಳವೆಬಾವಿ ನೀರನ್ನು ಬಳಸಿಕೊಂಡು ಭತ್ತದ ನಾಟಿ ಮಾಡಿದ್ದ ರೈತರು, ಬೆಳೆ ಸಂರಕ್ಷಿಸುವ ಪ್ರಯತ್ನ ಮಾಡಿದ್ದಾರೆ. ಕೊಳವೆಬಾವಿ ನೀರಿಗಿಂತಲೂ ಪ್ರಕೃತಿ ದತ್ತವಾಗಿ ಮಳೆ ಸುರಿದಿದ್ದರೆ ಹೆಚ್ಚಿನ ನೀರು ಹಿಡಿದಿಡಲು ಸಾಧ್ಯವಾಗುತ್ತಿತ್ತು. ಈ ವರ್ಷ ಅದು ಸಾಧ್ಯವಾಗಲಿಲ್ಲ.

ಹಿಂದಿನ ಸಾಲಿಗೆ ಹೋಲಿಸಿದರೆ ಈ ವರ್ಷ ಭತ್ತದ ಇಳುವರಿ ಕಡಿಮೆಯಾಗಿದೆ. ಮೇವು ಉತ್ಪಾದನೆ ಪ್ರಮಾಣವೂ ಕಡಿಮೆಯಾಗಿದೆ ಎಂದು ಭತ್ತದ ಬೆಳೆಗಾರರಾದ ಹೊನ್ನೆಕೂಡಿಗೆ ಕೃಷ್ಣಯ್ಯ ತಿಳಿಸಿದರು.

ಮಳೆ ಕೊರತೆಯಿಂದ ಈಗಾಗಲೇ ತೋಟಗಳಿಗೆ ಕೊಳವೆ ಬಾವಿಯ ಮೂಲಕ ನೀರು ಹಾಯಿಸುತ್ತಿದ್ದಾರೆ. ಇದರಿಂದ ಬೇಸಿಗೆ ಸಂದರ್ಭದಲ್ಲಿ ಅಂತರ್ಜಲ ಮಟ್ಟ ಕಡಿಮೆಯಾಗಿ ಕೊಳವೆ ಬಾವಿಗಳಲ್ಲೂ ನೀರಿನ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದೆ. ತಾಲ್ಲೂಕಿನ ಕಸಬಾ ಹೋಬಳಿಯ ವ್ಯಾಪ್ತಿಯಲ್ಲಿ ಮಳೆಯಾಗದಿದ್ದರೆ 12 ಹಳ್ಳಿಗಳಲ್ಲಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗುವ ಸಾಧ್ಯತೆಯಿದೆ ಎಂದು ಅಂದಾಜು ಮಾಡಲಾಗಿದೆ.

ಭತ್ತದ ಬೆಳೆ ಕಟಾವು ಆರಂಭ ಆಗಿರುವುದರಿಂದ ಬೆಳೆಗಾರರಿಗೆ ಉತ್ತಮ ಬೆಲೆ ಲಭ್ಯವಾಗುವಂತೆ ಮಾಡಲು ತಾಲ್ಲೂಕು ಕೇಂದ್ರದಲ್ಲಿ ಭತ್ತ ಖರೀದಿ ಕೇಂದ್ರ ಆರಂಭಿಸಬೇಕೆಂದು ಬೆಳೆಗಾರರ ಆಗ್ರಹವಾಗಿದೆ.

ಅಡಿಕೆ ರಬ್ಬರ್ ಇಳುವರಿಯೂ ಕಡಿಮೆ

ಅಡಿಕೆ ಫಸಲು ಕಳೆದ ಬಾರಿಗೆ ಹೋಲಿಸಿದರೆ ಮಳೆ ಕೊರತೆ ಹಾಗೂ ಹವಾಮಾನ ವೈಪರಿತ್ಯದಿಂದ ಉಷ್ಣತೆ ಹೆಚ್ಚಾಗಿ ಶೇ 30ರಷ್ಟು ಫಲಸಲು ಕಡಿಮೆಯಾಗಿದೆ. ಉತ್ತಮ ಹಿಂಗಾರಿನಲ್ಲಿ ಕೊಂಚ ಮಳೆಯಾಗಿದ್ದರೂ ಹರಳು ಉದುರಿರುವುದರಿಂದ ಗೊನೆಯ ತೂಕ ಕಡಿಮೆಯಾಗಿದೆ ಎಂಬುದು ರೈತರ ಅಭಿಪ್ರಾಯ. ಮಳೆ ಕೊರತೆ ಹಾಗೂ ವಾತಾವರಣದ ವ್ಯತ್ಯಾಸದಿಂದ ಪ್ರತಿ ಬೆಳೆಯ ಮೇಲೂ ಪರಿಣಾಮ ಬೀರಿದೆ. ರಬ್ಬರ್ ಬೆಳೆಯನ್ನು ಹೆಚ್ಚಾಗಿ ಖುಷ್ಕಿ ಜಮೀನಿನಲ್ಲಿ ಬೆಳೆಯುವುದರಿಂದ ಮಳೆ ಕೊರತೆಯಿಂದ ನೀರಿನ ಪ್ರಮಾಣ ಕಡಿಮೆ ಆಗುವುದರಿಂದ ರಬ್ಬರ್ ಹಾಲು ಸಹ ಕಡಿಮೆಯಾಗಿದೆ.

ಭತ್ತದ ಬೆಳೆ ಕಟಾವಿಗೆ ಬಂದಿರುವುದರಿಂದ ಇಳುವರಿ ಪ್ರಮಾಣ ಲೆಕ್ಕ ಹಾಕಲಾಗುತ್ತಿದ್ದು ಶೇ 33ರಷ್ಟು ಇಳುವರಿ ಕಡಿಮೆಯಾಗಿರುವ ಅಂದಾಜಿದೆ.
ವೆಂಕಟೇಶ್ ಎಸ್. ಚವ್ಹಾಣ್, ಕೃಷಿ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT